
ಕಾಬೂಲ್/ವಿಶ್ವಸಂಸ್ಥೆ(ಆ.21): ‘ನಾವು ಈ ಹಿಂದಿನ ಆಫ್ಘಾನಿಸ್ತಾನ ಸರ್ಕಾರದ ಆಡಳಿತದಲ್ಲಿ ಕೆಲಸ ನಿರ್ವಹಿಸಿದ ಯಾವ ಸರ್ಕಾರಿ ಸಿಬ್ಬಂದಿಗೂ ಅಪಾಯ ಮಾಡುವುದಿಲ್ಲ. ಅವರಿಗೆ ಕ್ಷಮಾದಾನ ನೀಡಿದ್ದೇವೆ’ ಎಂದು ಹೇಳಿದ್ದ ತಾಲಿಬಾನ್ ಉಗ್ರರು ಈಗ ಸೇನೆ, ಪೊಲೀಸ್, ಅಮೆರಿಕ ಹಾಗೂ ನ್ಯಾಟೋ ಪಡೆಗಳಿಗೆ ಸಹಾಯ ಮಾಡಿದ್ದ ಆಫ್ಘನ್ನರಿಗೆ ಶೋಧ ಆರಂಭಿಸಿದ್ದಾರೆ ಎಂದು ವಿಶ್ವಸಂಸ್ಥೆಯ ಗುಪ್ತಚರ ವರದಿಯೊಂದು ಹೇಳಿದೆ.
ಇದರ ಬೆನ್ನಲ್ಲೇ ಆಫ್ಘನ್ ಪತ್ರಕರ್ತರು ಕೂಡ ಟಾರ್ಗೆಟ್ ಆಗುತ್ತಿದ್ದು, ಅವರು ಹಾಗೂ ಅವರ ಕುಟುಂಬಸ್ಥರ ಮೇಲೆ ತಾಲಿಬಾನ್ ದಾಳಿ ನಡೆಸಲು ಆರಂಭಿಸಿದೆ. ಜರ್ಮನ್ ಮೂಲದ ‘ಡಿಡಬ್ಲು’ ಟೀವಿ ಚಾನೆಲ್‌ಗಾಗಿ ಕೆಲಸ ಮಾಡುತ್ತಿದ್ದ ಆಫ್ಘಾನಿ ಪತ್ರಕರ್ತನೊಬ್ಬನ ಬಂಧುವೊಬ್ಬನನ್ನು ಉಗ್ರರು ಗುಂಡಿಕ್ಕಿ ಸಾಯಿಸಿದ್ದಾರೆ. ಈ ಪತ್ರಕರ್ತ ಜರ್ಮನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಇವರಿಗಾಗಿ ತಾಲಿಬಾನಿಗಳು ಮನೆಮನೆಗೆ ತೆರಳಿ ಆಫ್ಘಾನಿಸ್ತಾನದಲ್ಲಿ ಶೋಧ ನಡೆಸಿದ್ದಾರೆ. ಕೊನೆಗೆ ಬಂಧುವೊಬ್ಬನನ್ನು ಗುಂಡಿಕ್ಕಿ ಸಾಯಿಸಿ ಇನ್ನೊಬ್ಬನನ್ನು ಗಾಯಗೊಳಿಸಿದ್ದಾರೆ.
ಪಟ್ಟಿಸಿದ್ಧಪಡಿಸುತ್ತಿರುವ ಉಗ್ರರು:
ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಆಫ್ಘನ್ ಸೇನೆ, ಪೊಲೀಸರು, ಗುಪ್ತಚರ ದಳ ಹಾಗೂ ವಿದೇಶೀ ಪಡೆಗಳಿಗೆ ಕೆಲಸ ಮಾಡಿದ್ದ ಸಿಬ್ಬಂದಿಗಳ ಪಟ್ಟಿಸಿದ್ಧಪಡಿಸಿ ಇಟ್ಟುಕೊಳ್ಳಲು ಆರಂಭಿಸಿದ್ದಾರೆ. ಮೇಲಾಗಿ ಮನೆಮನೆಗೆ ತೆರಳಿ ಇವರಿಗೆ ತಲಾಶೆ ಕೂಡ ಆರಂಭಿಸಲಾಗಿದೆ. ಈ ಸಿಬ್ಬಂದಿ ಹಾಗೂ ಕುಟುಂಬಸ್ಥರನ್ನು ಬಂಧಿಸುವುದು ಉಗ್ರರ ಉದ್ದೇಶ ಎಂದು ವಿಶ್ವಸಂಸ್ಥೆಯ ಪರ ಗೂಢಚರ್ಯೆ ನಡೆಸುತ್ತಿರುವ ನಾರ್ವೆಯ ಸಂಸ್ಥೆಯೊಂದು ವಿಶ್ವಸಂಸ್ಥೆಗೆ ವರದಿ ಸಲ್ಲಿಸಿದೆ.
ಒಂದು ವೇಳೆ ಶರಣಾಗದೇ ಹೋದರೆ ಅಂಥ ಸಿಬ್ಬಂದಿಯನ್ನು ಶರಿಯಾ ಕಾನೂನಿನ ಪರ ವಿಚಾರಣೆಗೆ ಒಳಪಡಿಸಿ ಬಂಧಿಸುವುದು ಕೂಡ ಉಗ್ರರ ಇರಾದೆಯಾಗಿದೆ. ಕಾಬೂಲ್‌ನ ವಿಮಾನ ನಿಲ್ದಾಣ ರಸ್ತೆಯಲ್ಲಿ ತಾಲಿಬಾನಿಗಳು ನಾಕಾಬಂದಿ ಆರಂಭಿಸಿದ್ದು, ನಿಲ್ದಾಣಕ್ಕೆ ಹೋಗುವವರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ತಾಲಿಬಾನಿಗಳ ಈ ಕ್ರಮವು ಉಗ್ರರ ಕಾರಾರಯಚರಣೆಗೆ ಸವಾಲು ಹಾಕುವ ಪಾಶ್ಚಿಮಾತ್ಯ ಗುಪ್ತಚರ ಜಾಲಕ್ಕೆ ಹೊಡೆತ ನೀಡಲಿದೆ ಎಂದು ವರದಿ ಕಳವಳ ವ್ಯಕ್ತಪಡಿಸಿದೆ.
ಇದೇ ವೇಳೆ, ಅಮೆರಿಕ ಪರ ಕೆಲಸ ಮಾಡಿದ್ದ ಸಿಬ್ಬಂದಿಯ ಮಾಹಿತಿ ಸಂಗ್ರಹಿಸಲು ತಾಲಿಬಾನಿಗಳು, ತಮ್ಮದೇ ಆದ ‘ಮಾಹಿತಿದಾರರನ್ನು’ ನೇಮಿಸಿಕೊಳ್ಳುತ್ತಿದ್ದಾರೆ. ಮುಂದೊಂದು ದಿನ ಆಫ್ಘನ್‌ನಲ್ಲಿರುವ ವಿದೇಶಿ ಸರ್ಕಾರಿ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿ, ನಾಗರಿಕರು ಉಗ್ರರ ಟಾರ್ಗೆಟ್ ಆಗಬಹುದು ಎಂದೂ ವರದಿ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ