ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ಪ್ರವೆಶಿಸಿದ ತಾಲಿಬಾನಿಯರು!

By Suvarna NewsFirst Published Aug 15, 2021, 4:56 PM IST
Highlights

* ಅಫ್ಘಾನಿಸ್ತಾನದಲ್ಲಿ ತಾಲಿಬಾನಿಯರ ಅಟ್ಟಹಾಸ

* ಅಪ್ಘಾನ್ ರಾಜಧಾನಿ ಕಾಬೂಲ್‌ಗೂ ಪ್ರವೇಶಿಸಿದ ಉಗ್ರರು

* ಬಲವಂತದಿಂದ ಹಿಡಿತ ಸಾಧಿಸಲ್ಲ ಎಂದ ತಾಲಿಬಾನ್

ಕಬೂಲ್(ಆ.15): ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ ಮತ್ತಷ್ಟು ಹೆಚ್ಚಿದೆ. ಭಾನುವಾರ ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ಗೆ ತಾಲಿಬಾಣಿಯರು ಪ್ರವೇಶಿಸಿದ್ದು ಭಾರೀ ಆತಂಕ ಹುಟ್ಟು ಹಾಕಿದೆ. ಟೊಲೋ ನ್ಯೂಸ್ ವರದಿಯ ಪ್ರಕಾರ, ತಾಲಿಬಾನಿಯರು ಎಲ್ಲಾ ದಿಕ್ಕಿನಿಂದ ಅಫ್ಘಾನ್ ರಾಜಧಾನಿ ಕಾಬೂಲ್ ಪ್ರವೇಶಿಸಲು ಆರಂಭಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದೇ ಸಂದರ್ಭದಲ್ಲಿ ಅತ್ತ ತಾಲಿಬಾನ್ ಕಾಬೂಲ್ ಪ್ರವೇಶಿಸಿದ ಬೆನ್ನಲ್ಲೇ ಸರ್ಕಾರ ಮತ್ತು ಭಯೋತ್ಪಾದಕ ಸಂಘಟನೆಯ ನಡುವೆ ಮಾತುಕತೆ ಆರಂಭವಾಗಿದೆ ಹಾಗೂ ತಾಲಿಬಾನ್ ತಮ್ಮ ಸದಸ್ಯರಿಗೆ ಕಾಬೂಲ್ ಗೇಟ್ ಬಳಿ ಕಾಯುವಂತೆ ಮತ್ತು ನಗರ ಪ್ರವೇಶಿಸಲು ಪ್ರಯತ್ನಿಸದಂತೆ ಆದೇಶಿಸಿದೆ ಎಂಬ ಮಾಹಿತಿಯೂ ಸದ್ದು ಮಾಡಿದೆ.

ಇದಕ್ಕೂ ಮುನ್ನ ಭಾನುವಾರ ಮುಂಜಾನೆ, ತಾಲಿಬಾನ್ ಕಾಬೂಲ್‌ ಪಶ್ಚಿಮ ಭಾಗದಿಂದ 40 ಕಿಲೋಮೀಟರ್ ದೂರದಲ್ಲಿರುವ ಮಧ್ಯ ಅಫ್ಘಾನ್ ಪ್ರಾಂತ್ಯದ ಮೈದಾನ್ ವಾರ್ಡಕ್‌ನ ಪ್ರಾಂತೀಯ ರಾಜಧಾನಿ ಮೈದಾನ್ ನಗರದ ಮೇಲೆ ಹಿಡಿತ ಸಾಧಿಸಿತ್ತು. ತಾಲಿಬಾನ್ ಹಲವಾರು ಸಾರ್ವಜನಿಕ ಕಚೇರಿ ಕಟ್ಟಡಗಳ ಮೇಲೆ ನಿಯಂತ್ರಣ ಸಾಧಿಸಿದೆ ಎಂದು ಹೇಳಿಕೊಂಡಿದೆ. ಅಲ್ಲದೇ ತಾವು ಬಲವಂತದಿಂದ ಕಾಬೂಲ್ ಪ್ರವೇಶಿಸುವುದಿಲ್ಲ ಎಂದು ತಾಲಿಬಾನ್ ಹೇಳಿದರು. ಕಾಬೂಲ್‌ನಲ್ಲಿ ಸುರಕ್ಷಿತ ವಾತಾವರಣದೊಂದಿಗೆ ಪ್ರವೇಶಿಸಲು ಮತ್ತೊಂದೆಡೆ ಮಾತುಕತೆ ನಡೆಯುತ್ತಿದೆ ಎಂದೂ ವರದಿಗಳು ಉಲ್ಲೇಖಿಸಿವೆ.

ಕಾಬೂಲ್ ಮೇಲೆ ದಾಳಿ ಮಾಡದಿರಲು ತಾಲಿಬಾನ್ ಒಪ್ಪಿಕೊಂಡಿರುವುದಾಗಿ ಅಫ್ಘಾನ್ ಗೃಹ ಸಚಿವ ಅಬ್ದುಲ್ ಸತ್ತಾರ್ ಮಿರ್ಜಕ್ವಾಲ್ ಹೇಳಿದ್ದಾರೆ. ಅವರು ಶಾಂತಿಯುತವಾಗಿ ಅಧಿಕಾರದ ವರ್ಗಾವಣೆಯನ್ನು ಬಯಸುತ್ತಾರೆ, ಹಾಘೇ ಆಗಲಿದೆ. ನಾಗರಿಕರು ತಮ್ಮ ಸುರಕ್ಷತೆಯ ಬಗ್ಗೆ ಭರವಸೆ ಹೊಂದಿರಬೇಕು. ತಾಲಿಬಾನ್ ಕೂಡ ನಾಗರಿಕರ ಸುರಕ್ಷತೆಯನ್ನು ಖಾತರಿಪಡಿಸುತ್ತದೆ ಎಂದು ಹೇಳಿಕೆಯನ್ನು ನೀಡಿದ್ದಾರೆ. ಹೀಗಿದ್ದರೂ ಅನೇಕ ಮಾಧ್ಯಮಗಳು ತಾಲಿಬಾನಿಯರು ಈಗಾಗಲೇ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ಗೆ ಎಲ್ಲಾ ಕಡೆಯಿಂದ ಪ್ರವೇಶಿಸಿದ್ದಾರೆ  ಎಂದು ವರದಿ ಮಾಡಿವೆ.

ತಾಲಿಬಾನ್‌ಗಳು ಜಲಾಲಾಬಾದ್‌ನ್ನೂ ವಶಪಡಿಸಿಕೊಂಡಿವೆ. ತಾಲಿಬಾನ್ ಕಳೆದ ವಾರದಲ್ಲಿ ಅಫ್ಘಾನಿಸ್ತಾನದ ದೊಡ್ಡ ಪಗ್ರದೇಶಗಳ ಮೇಲೆ ಹಿಡಿತ ಸಾಧಿಸಿತ್ತು. ಇದರಿಂದ ಅಫ್ಘಾನಿಸ್ತಾನದ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೆಚ್ಚಾಯಿತು. ಮತ್ತೊಂದೆಡೆ, ಅಮೆರಿಕ, ಬ್ರಿಟನ್ ಮತ್ತು ಕೆನಡಾ ಅರ್ಪಘಾನಿಸ್ತಾನದಲ್ಲಿರುವ ತಮ್ಮ ರಾಜತಾಂತ್ರಿಕ ಸಿಬ್ಬಂದಿಗೆ ಸಹಾಯ ಮಾಡಲು ಸೈನ್ಯವನ್ನು ಕಳುಹಿಸಿವೆ.

click me!