
ಆಸ್ಟ್ರೇಲಿಯಾದ ಬೋಂಡಿ ಬೀಚ್(Bondi beach)ನಲ್ಲಿ ಭಾನುವಾರ, ಡಿಸೆಂಬರ್ 14 ರಂದು ಹಬ್ಬ ಆಚರಿಸುತ್ತಿದ್ದ ಯಹೂದಿಗಳ ಮೇಲೆ ಇಬ್ಬರು ದಾಳಿಕೋರರು ಗುಂಡಿನ ದಾಳಿ ನಡೆಸಿದ್ದು, ಇದರಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಾರ್ತ್ ಬೋಂಡಿ ಬೀಚ್‌ನಲ್ಲಿ ಹೆಚ್ಚಿನ ಸಂಖ್ಯೆಯ ಜನರು ಮರಳಿನ ಮೇಲೆ ಓಡುತ್ತಿರುವುದನ್ನು ನೋಡಬಹುದು. ಇದೇ ವೇಳೆ ದಿಢೀರ್ ಗುಂಡಿನ ಸದ್ದು ಕೇಳಿಸಿದೆ. ಇನ್ನೊಂದು ವಿಡಿಯೋದಲ್ಲಿ ಕಪ್ಪು ಬಟ್ಟೆ ಧರಿಸಿದ್ದ ಇಬ್ಬರು ರಸ್ತೆಯಲ್ಲಿ ನಿಂತು ಗುಂಡು ಹಾರಿಸುತ್ತಿರುವುದು ಕಂಡುಬಂದಿದೆ. ಪೊಲೀಸರು ಒಬ್ಬ ದಾಳಿಕೋರನನ್ನು ಗುಂಡಿಕ್ಕಿ ಕೊಂದಿದ್ದು, ಇನ್ನೊಬ್ಬನನ್ನು ಜೀವಂತವಾಗಿ ಹಿಡಿದಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಈ ಗುಂಡಿನ ದಾಳಿಯಲ್ಲಿ ಸುಮಾರು 50 ಸುತ್ತು ಗುಂಡು ಹಾರಿಸಲಾಗಿದೆ. ಪ್ರತಿದಾಳಿಯಲ್ಲಿ ಒಬ್ಬ ಬಂದೂಕುಧಾರಿ ಹತನಾಗಿದ್ದು, ಪೊಲೀಸರು ಸೇರಿದಂತೆ ಸುಮಾರು 11 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬೋಂಡಿ ಬೀಚ್‌ನ ದೃಶ್ಯಗಳು ಆತಂಕಕಾರಿಯಾಗಿವೆ ಎಂದು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಹೇಳಿದ್ದಾರೆ. ಪೊಲೀಸರು ಮತ್ತು ತುರ್ತು ಸ್ಪಂದನಾ ಸಿಬ್ಬಂದಿ ಜನರ ಪ್ರಾಣ ಉಳಿಸಲು ಸ್ಥಳದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂತ್ರಸ್ತರ ಜೊತೆ ನನ್ನ ಸಹಾನುಭೂತಿ ಇದೆ. ನಾವು NSW ಪೊಲೀಸರೊಂದಿಗೆ ಕೆಲಸ ಮಾಡುತ್ತಿದ್ದೇವೆ.
ಭಾರತೀಯ ಕಾಲಮಾನ ಮಧ್ಯಾಹ್ನ 2.17ಕ್ಕೆ (ಆಸ್ಟ್ರೇಲಿಯಾ ಕಾಲಮಾನ ಸಂಜೆ 7.47), ನ್ಯೂ ಸೌತ್ ವೇಲ್ಸ್ ಪೊಲೀಸರು X ನಲ್ಲಿ ಪೋಸ್ಟ್ ಮಾಡಿ, ಬೋಂಡಿ ಬೀಚ್‌ನಲ್ಲಿ ನಡೆಯುತ್ತಿರುವ ಸಾಮೂಹಿಕ ಗುಂಡಿನ ದಾಳಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. ಎಲ್ಲರೂ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಈ ದಾಳಿಯಲ್ಲಿ ಒಬ್ಬ ದಾಳಿಕೋರ ಸೇರಿದಂತೆ 10 ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ಇನ್ನೊಬ್ಬ ಶಂಕಿತ ದಾಳಿಕೋರನ ಸ್ಥಿತಿ ಗಂಭೀರವಾಗಿದೆ. ದೃಶ್ಯಗಳಲ್ಲಿ, ಕಪ್ಪು ಬಟ್ಟೆ ಧರಿಸಿದ ಇಬ್ಬರು ದಾಳಿಕೋರರು ಜನರ ಮೇಲೆ ಗುಂಡು ಹಾರಿಸುತ್ತಿರುವುದು ಕಾಣಿಸುತ್ತಿದೆ.
ಯಹೂದಿಗಳು 8 ದಿನಗಳ ಹನುಕ್ಕಾ ಹಬ್ಬ ಆಚರಿಸುತ್ತಿದ್ದರು
ಈ ಗುಂಡಿನ ದಾಳಿ 8 ದಿನಗಳ ಯಹೂದಿ ಹಬ್ಬವಾದ ಹನುಕ್ಕಾದ ಮೊದಲ ರಾತ್ರಿ ನಡೆದಿದೆ. ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಪ್ರಕಾರ, ಯಹೂದಿ ಹಬ್ಬದ ಆರಂಭದ ಅಂಗವಾಗಿ ನೂರಾರು ಜನರು ಸಮುದ್ರ ತೀರದಲ್ಲಿ ಸಮಾರಂಭಕ್ಕಾಗಿ ಸೇರಿದ್ದಾಗ, ಆಸ್ಟ್ರೇಲಿಯಾ ಕಾಲಮಾನ ಸಂಜೆ 6.30ಕ್ಕೆ ಬಂದೂಕುಧಾರಿಗಳು ಗುಂಡಿನ ದಾಳಿ ಆರಂಭಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ