ಉಕ್ರೇನ್‌ನಲ್ಲಿ ಸಿಲುಕಿದ್ದ ವಿದ್ಯಾರ್ಥಿಯ ಅಮ್ಮ ಸಾವು: ವಿಡಿಯೋ ಕಾಲ್‌ನಲ್ಲಿ ಅಂತಿಮ ದರ್ಶನ ಪಡೆದ ಮಗ

By Suvarna News  |  First Published Feb 28, 2022, 5:35 PM IST
  • ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದ ಪುತ್ರ
  • ಮಗನ ಬಗ್ಗೆ ಚಿಂತಿಸಿಯೇ ಸಾವನ್ನಪ್ಪಿದ ತಾಯಿ
  • ತಮಿಳುನಾಡಿನ ತಿರುಪತ್ತೂರ್‌ನಲ್ಲಿ ಘಟನೆ

ಚೆನ್ನೈ(ಫೆ.28): ಉಕ್ರೇನ್‌ನಲ್ಲಿ ಸಿಲುಕಿದ್ದ ಮಗನ ಬಗ್ಗೆ ಕೊರಗಿ ಕೊರಗಿ ತಾಯಿ ಕುಸಿದು ಬಿದ್ದು ಮೃತಪಟ್ಟ ಘಟನೆ ತಮಿಳುನಾಡಿನ ತಿರುಪತ್ತೂರ್‌ನಲ್ಲಿ ನಡೆದಿದೆ. ತಮಿಳುನಾಡಿನ 25 ವರ್ಷದ ವಿದ್ಯಾರ್ಥಿ ಶಕ್ತಿವೇಲು ಎಂಬವರು ಉಕ್ರೇನ್‌ನ ಮುಜೈಲ್‌ ಪ್ರದೇಶದಲ್ಲಿ ಕಳೆದ ನಾಲ್ಕು ವರ್ಷಗಳಿಂದ ವೈದ್ಯಕೀಯ ಶಿಕ್ಷಣವನ್ನು ಅಧ್ಯಯನ ಮಾಡುತ್ತಿದ್ದರು. 

ಈ ಮಧ್ಯೆ ಉಕ್ರೇನ್‌ ಹಾಗೂ ರಷ್ಯಾ ಮಧ್ಯೆ ಬಿಕ್ಕಟ್ಟು ಉಲ್ಬಣಿಸಿ ಯುದ್ಧ ಆರಂಭವಾಗಿತ್ತು. ಪರಿಣಾಮ ಅಲ್ಲಿ ಶಿಕ್ಷಣ ಪಡೆಯಲು ಹೋದ ದೇಶದ ಅನೇಕ ವಿದ್ಯಾರ್ಥಿಗಳಂತೆ ಶಕ್ತಿವೇಲು ಕೂಡ ಭಾರತಕ್ಕೆ ಬರಲಾಗದೇ ಅಲ್ಲೇ ಸಿಲುಕಿಕೊಂಡಿದ್ದರು. ಇದರಿಂದ ತಮಿಳುನಾಡಿನ ತಿರುಪತ್ತೂರು ಜಿಲ್ಲೆಯ ಪುದೂರಿನಲ್ಲಿದ್ದ ಅವರ ಕುಟುಂಬ ಮಗನ ರಕ್ಷಣೆಯ ಕುರಿತು ಚಿಂತೆಗೊಳಗಾಗಿತ್ತು. ಶಕ್ತಿವೇಲು ಅವರ ತಾಯಿ ಶಶಿಕಲಾ ಈ ಮೊದಲೇ ಸಕ್ಕರೆ ಕಾಯಿಲೆ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಅದರೊಂದಿಗೆ ಮಗನ ಚಿಂತೆ ಅವರನ್ನು ಮತ್ತಷ್ಟು ಕುಗ್ಗಿಸಿತ್ತು. ಶನಿವಾರ ಸಂಜೆ ಅವರು ತಮ್ಮ ಮನೆಯಲ್ಲಿ ದಿಢೀರನೇ ಕುಸಿದು ಬಿದ್ದಿದ್ದು, ನಂತರ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಗೆ ತಲುಪಿದಾಗ ವೈದ್ಯರು ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

Tap to resize

Latest Videos

ಹೈದ್ರಾಬಾದ್‌ ಹುಡುಗನ ಮದ್ವೆಯಾದ ಉಕ್ರೇನ್‌ ವಧು : ವಿವಾಹದಲ್ಲಿ ಯುದ್ಧ ಕೊನೆಗೊಳ್ಳಲಿ ಎಂದು ಪ್ರಾರ್ಥನೆ


ಇತ್ತ ತಾಯಿ ತೀರಿದ ವಿಷಯ ಶಕ್ತಿವೇಲು ಅವರಿಗೆ ತಿಳಿಯುತ್ತಿದ್ದಂತೆ ಅವರು ಅಲ್ಲಿಂದಲೇ ದುಃಖದಿಂದ ಅತ್ತಿದ್ದಾರೆ. ಅಲ್ಲದೇ ಯುದ್ಧಪೀಡಿತ ದೇಶದಿಂದ ಸ್ವದೇಶಕ್ಕೆ ಬರಲು ಸಾಧ್ಯವಾಗದ ಅವರ ಪುತ್ರ ಶಕ್ತಿವೇಲು ವಿಡಿಯೋ ಕರೆಯಲ್ಲೇ ಅಮ್ಮನ ಪಾರ್ಥಿವ ಶರೀರದ ದರ್ಶನ ಪಡೆದಿದ್ದು ಮನಕಲಕುವಂತಿತ್ತು. ಈಗ ಶಕ್ತಿವೇಲು ಅವರ ಕುಟುಂಬದವರು ತಮ್ಮ ಕುಟುಂಬದ ಹುಡುಗನನ್ನು ಹೇಗಾದರು ಮಾಡಿ ಅಲ್ಲಿಂದ ಆದಷ್ಟು ಬೇಗ ಕರೆ ತರುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇತ್ತ ಯುದ್ಧ ಭೂಮಿ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯ ಮುಂದುವರೆದಿದೆ. ವಿಮಾನಗಳ ಮೂಲಕ  ಇನ್ನು ಸಾವಿರಾರು ಜನರನ್ನು ಕರೆದು ತರಬೇಕಿದ್ದು ಎಲ್ಲ ವ್ಯವಸ್ಥೆ (Operation Ganga) ಮಾಡಿಕೊಳ್ಳಲಾಗಿದೆ. ಯುದ್ಧಭೂಮಿಯಿಂದ ಈವರೆಗೆ 1158 ಜನ ವಾಪಸ್ಸಾಗಿದ್ದಾರೆ. ಇನ್ನೂ ಸಾವಿರಾರು ಜನರನ್ನು  ಏರ್‌ ಇಂಡಿಯಾ ಕರೆತರಲಿದೆ. ಕೇಂದ್ರದ ಜೊತೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ. ಇನ್ನೆರಡು ದಿನಗಳಲ್ಲಿ ಎಲ್ಲಾ ಸಮಸ್ಯೆ ಬಗೆಹರಿಯಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಇನ್ನು 406 ಮಂದಿ ಭಾರತಕ್ಕೆ ವಾಪಸ್ಸಾಗಲು ನೋಂದಣಿ ಮಾಡಿಸಿದ್ದಾರೆ.

ಈ ಮಧ್ಯೆ ರಷ್ಯಾ ಉಕ್ರೇನ್‌ ಮೇಲೆ ಸಾರಿರುವ ಯುದ್ಧ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ತಲೆತಗ್ಗಿಸಿ ಶರಣಾಗಲು ಉಕ್ರೇನ್ ಮಾತ್ರ ಒಪ್ಪುತ್ತಿಲ್ಲ. ಕೊನೆಯ ರಕ್ತದ ಹನಿ ಇರೋವರೆಗೂ ಹೋರಾಡುತ್ತೇವೆಂದು ಹೇಳುತ್ತಾ, ರಷ್ಯಾವನ್ನು ಎದುರಿಸಲು ಮುಂದಾಗಿದೆ. ಉಕ್ರೇನ್ ನಾಗರಿಕರೂ ಇದಕ್ಕೆ ಸಾಥ್‌ ನೀಡಿ, ತಾಯಿ ನೆಲದ ರಕ್ಷಣೆಗೆ ಮುಂದಾಗಿದ್ದಾರೆ. ಜಾಗತಿಕ ತಲ್ಲಣಕ್ಕೆ ಕಾರಣವಾಗಿರುವ ರಷ್ಯಾ ಉಕ್ರೇನ್ ಯುದ್ಧದಲ್ಲಿ 3500 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.  ಇನ್ನು ರಷ್ಯಾ-ಉಕ್ರೇನ್‌ ನಡುವಿನ ಸಂಘರ್ಷ ಮಹತ್ವದ ತಿರುವು ಪಡೆದುಕೊಂಡಿದೆ. ಸಂಧಾನಕ್ಕಾಗಿ ಬೆಲಾರಸ್‌ಗೆ ಬಂದಿರುವ ರಷ್ಯಾ ನಿಯೋಗದ ಜತೆ ಉಕ್ರೇನ್‌ ನಿಯೋಗ ಶಾಂತಿ ಮಾತುಕತೆ ನಡೆಸಲಿದೆ ಎಂದು ಉಕ್ರೇನ್‌ ಅಧ್ಯಕ್ಷರ ಕಾರ್ಯಾಲಯ ಘೋಷಿಸಿದೆ.

Russia Ukraine Crisis: ತಾಯಿ ನೆಲದ ರಕ್ಷಣೆಗಾಗಿ ಸೈನಿಕರಾದ ನಾಗರಿಕರು!
 

ಇನ್ನೂ ನಿಶ್ಚಯವಾಗದ ಬೆಲಾರಸ್‌ ಗಡಿಯ ಪ್ರದೇಶವೊಂದರಲ್ಲಿ ರಷ್ಯಾ ಮತ್ತು ಉಕ್ರೇನ್‌ ನಿಯೋಗಗಳು ಭೇಟಿಯಾಗಲಿವೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್‌ಸ್ಕಿ ಅವರ ಕಚೇರಿ ತಿಳಿಸಿದೆ. ಆದರೆ ಈ ಸಂಧಾನ ಸಭೆ ಯಾವಾಗ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಈ ನಡುವೆ, ಉಕ್ರೇನ್‌ ನಿಯೋಗದ ಭೇಟಿ ವೇಳೆ ಈ ಭಾಗದಲ್ಲಿ ಯಾವುದೇ ಯುದ್ಧವಿಮಾನಗಳ ಹಾರಾಟ ನಡೆಯುವುದಿಲ್ಲ ಹಾಗೂ ಯುದ್ಧ ಸಲಕರಣೆಗಳ ಬಳಕೆ ನಡೆಯುವುದಿಲ್ಲ ಎಂದು ಉಕ್ರೇನ್‌ಗೆ ಬೆಲಾರಸ್‌ ಭರವಸೆ ನೀಡಿದೆ.

click me!