Sri Lankan President Gotabaya Rajapaksa ದೇಶ ತೊರೆದು ಮಾಲ್ಡಿವ್ಸ್‌ಗೆ ಪರಾರಿಯಾಗಿದ್ದಾರೆ. ಜನರ ಸಾವಿರಾರು ಕೋಟಿ ದುಡ್ಡನ್ನೂ ಅವರು ಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗುತ್ತದೆ. ಶ್ರೀಲಂಕಾದ ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆ ದಿವಾಳಿಯಾಗಿರುವ ಈ ಸಂದರ್ಭದಲ್ಲಿ ಸಿಟ್ಟಿಗೆದ್ದಿರುವ ಪ್ರತಿಭಟನಾಕಾರರು ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸರ ರಾಜೀನಾಮೆಗೆ ಇಂದು ಸಂಜೆಯವರೆಗೆ ಗಡುವು ನೀಡಿದ್ದಾರೆ.
ಕೊಲಂಬೋ: ಶ್ರೀಲಂಕಾ ಆರ್ಥಿಕ ಪರಿಸ್ಥಿತಿ ಅಧಃಪತನ ಕಂಡ ಬೆನ್ನಲ್ಲೇ ರಾಜಕೀಯ ಅಸ್ಥಿರತೆಯೂ ಆರಂಭವಾಗಿದೆ. ಮಹಿಂದಾ ರಾಜಪಕ್ಸ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ ರಾನಿಲ್ ವಿಕ್ರಮಸಿಂಘೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸ ಮಾತ್ರ ರಾಜೀನಾಮೆ ನೀಡಲು ನಿರಾಕರಿಸಿ ಅಧಿಕಾರದಲ್ಲೇ ಮುಂದುವರೆದರು. ಪ್ರಪಂಚದ ಯಾವ ದೇಶಗಳೂ ಶ್ರೀಲಂಕಾಗೆ ಸಹಾಯ ಮಾಡಲು ಮುಂದೆ ಬಂದಿಲ್ಲ ಮತ್ತು ಅದು ಅಸಾಧ್ಯ ಎಂಬ ಮಟ್ಟಿಗೆ ದೇಶ ದಿವಾಳಿಯಾಗಿದೆ. ಇದರ ಬೆನ್ನಲ್ಲೇ ಆರಂಭವಾದ ಉಗ್ರ ಸ್ವರೂಪಿ ಪ್ರತಿಭಟನೆಗಳಿಂದ ರಾಜಪಕ್ಸ ಕುಟುಂಬ ಸೈನ್ಯದ ರಕ್ಷಣೆಯೊಂದಿಗೆ ಗುಪ್ತ ಸ್ಥಳದಲ್ಲಿ ಅಡಗುವಂತಾಯ್ತು. ಇದೀಗ ಶ್ರೀಲಂಕಾ ಅಧ್ಯಕ್ಷ ಮಾಲ್ಡೀವ್ಸ್‌ಗೆ ಪರಾರಿಯಾಗಿದ್ದಾರೆ. ಪ್ರಧಾನಿ ಮತ್ತು ಅಧ್ಯಕ್ಷರ ನಿವಾಸವನ್ನು ಈಗಾಗಲೇ ಪ್ರತಿಭಟನಾಕಾರರು ವಶಕ್ಕೆ ಪಡೆದಿದ್ದಾರೆ. ಗೋಟಬಯ ರಾಜಪಕ್ಸ ರಾಜೀನಾಮೆ ನೀಡದೇ ವಿದೇಶಕ್ಕೆ ಪರಾರಿಯಾಗಿರುವುದರಿಂದ ಪ್ರತಿಭಟನಾಕಾರರು ಮತ್ತಷ್ಟು ಕೆರಳಿದ್ದಾರೆ. ಗೋಟಬಯ ರಾಜಪಕ್ಸ ರಾಜೀನಾಮೆ ನೀಡದಿದ್ದರೆ ಸಂಸತ್ತನ್ನು ಸಹ ವಶಪಡಿಸಿಕೊಳ್ಳುತ್ತೇವೆಂದು ಬೆದರಿಕೆ ಹಾಕಿದ್ದಾರೆ.
ಏಷಿಯಾನೆಟ್ ನ್ಯೂಸ್ ಶ್ರೀಲಂಕಾದಲ್ಲಿ ಕಳೆದ 96 ದಿನಗಳಿಂದ ಸರ್ಕಾರದ ವಿರುದ್ಧ ಮತ್ತು ರಾಜಪಕ್ಸ ಕುಟುಂಬದ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಜನರನ್ನು ಸಂಪರ್ಕಿಸಿದಾಗ, ಗೋಟಬಯ ರಾಜಪಕ್ಸ ರಾಜೀನಾಮೆ ನೀಡದಿದ್ದರೆ, ಸಂಸತ್ತನ್ನು ಮುತ್ತಿಗೆ ಹಾಕುವುದಾಗಿ ತಿಳಿಸಿದ್ದಾರೆ. ಈಗಾಗಲೇ ಪ್ರಧಾನಿ ಮತ್ತು ಅಧ್ಯಕ್ಷರ ನಿವಾಸಗಳನ್ನು ವಶಕ್ಕೆ ಪಡೆದಿರುವ ಪ್ರತಿಭಟನಾಕಾರರನ್ನು ತಡೆಯುವುದು ಅಸಾಧ್ಯದ ಮಾತು. ಮೂಲಗಳ ಪ್ರಕಾರ ಗೋಟಬಯ ರಾಜಪಕ್ಸ ಅಧ್ಯಕ್ಷ ಸ್ಥಾನಕ್ಕೆ ದಿನಾಂತ್ಯಗೊಳಗೆ ರಾಜೀನಾಮೆ ನೀಡಲಿದ್ದಾರೆ. ಪ್ರತಿಭಟನಾಕಾರರ ಏಕೈಕ ಕೂಗು, ಗೋಟಬಯ ರಾಜೀನಾಮೆ.
ಇದನ್ನೂ ಓದಿ: ಅಧ್ಯಕ್ಷ ಪರಾರಿಯಾದ ಬೆನ್ನಲ್ಲೇ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ!
ಶ್ರೀಲಂಕಾ ಅಧ್ಯಕ್ಷರ ಅಧಿಕೃತ ನಿವಾಸವನ್ನು ವಶಪಡಿಸಿಕೊಂಡಿರುವ ಜನ, ಸ್ವಿಮ್ಮಿಂಗ್ ಪೂಲ್‌ನಲ್ಲಿ ಆಟ ಆಡುವುದು, ಅಲ್ಲೇ ಅಡುಗೆ ಮಾಡಿಕೊಳ್ಳುತ್ತಿರುವುದು ಮತ್ತಿತರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪ್ರತಿಭಟನಾ ಮುಖಂಡರು ಅಧ್ಯಕ್ಷರ ನಿವಾಸದಲ್ಲೇ ಸಭೆಗಳನ್ನು ಕೂಡ ನಡೆಸುತ್ತಿದ್ದಾರೆ. ಆರ್ಥಿಕ ದಿವಾಳಿಯಿಂದ ಇಡೀ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು, ಬಹುತೇಕ ಶ್ರೀಲಂಕನ್ನರು ದಿನಕ್ಕೆ ಎರಡು ಬಾರಿ ಊಟ ಕೂಡ ಮಾಡಲು ಸಾಧ್ಯವಾಗುತ್ತಿಲ್ಲ. ಕೊರೋನಾ ವೈರಸ್‌ನ ಲಾಕ್‌ಡೌನ್, ತಲೆ ಬುಡವಿಲ್ಲದ ಆರ್ಥಿಕ ನೀತಿಗಳು, ಇಡೀ ದೇಶವನ್ನು ಒತ್ತೆ ಇಟ್ಟು ಪಡೆದ ಸಾಲಗಳು, ಈಸ್ಟರ್ ಬಾಂಬಿಂಗ್ಸ್ ಮತ್ತು ಅತಿಯಾದ ರಾಷ್ಟ್ರೀಯತೆ ಶ್ರೀಲಂಕಾದ ಅರಾಜಕತೆಗೆ ನೇರ ಹೊಣೆ. ಜತೆಗೆ ರಾಜಪಕ್ಸ ಕುಟುಂಬ ರಾಜಕೀಯ ಇವಕ್ಕೆಲ್ಲಾ ಮೂಲ.
ಇದನ್ನೂ ಓದಿ: ಲಂಕೆಯಿಂದ ಓಡಿ ಹೋದ ಗೊಟಬಯಗೆ ನೋ ಎಂಟ್ರಿ ಎಂದ ಮಾಲ್ಡೀವ್ಸ್, ಒಂದು ಕರೆಯಿಂದ ಎಲ್ಲವೂ ಬದಲಾಯ್ತು!
ಪ್ರಜಾಪ್ರಭುತ್ವ ಹೆಸರಿಗಷ್ಟೇ ಇದ್ದು, ಒಂದು ಕುಟುಂಬ ಇಡೀ ದೇಶವನ್ನು ನಡೆಸಿದರೆ ಏನಾಗಬಹುದು ಎಂಬುದಕ್ಕೆ ಶ್ರೀಲಂಕಾದ ಇಂದಿನ ಪರಿಸ್ಥಿತಿ ಜೀವಂದ ನಿದರ್ಶನ. ರಾಜಪಕ್ಸ ಹಾಸಿಗೆಗಿಂತ ಉದ್ದ ಕಾಲು ಚಾಚಿದ ಪರಿಣಾಮ ಶ್ರೀಲಂಕಾದ ಜನಸಾಮಾನ್ಯರು ಅನುಭವಿಸುವಂತಾಗಿದೆ.
ಏಷ್ಯಾನೆಟ್ ಜತೆ ಮಾತನಾಡಿದ ಪ್ರತಿಭಟನಾಕಾರರೊಬ್ಬರು, "ಗೋಟಬಯ ರಾಜಪಕ್ಸ ಇಂದು ರಾಜೀನಾಮೆ ನೀಡಲೇಬೇಕು. ರಾಜಪಕ್ಸರಿಂದ ಅನುಭವಿಸಿದ್ದು ಸಾಕಾಗಿದೆ. ಪ್ರತಭಟನೆ ಇಂದಿಗೆ 96ನೇ ದಿನ ಮುಟ್ಟಿದೆ. ನಾವೆಲ್ಲಾ ಅಧ್ಯಕ್ಷರ ನಿವಾಸದಲ್ಲೇ ಊಟ ಮಾಡುತ್ತಿದ್ದೇವೆ. ಯಾಕೆಂದರೆ ನಮಗೆ ನಮ್ಮ ಮನೆಗಳಿಗೆ ಹೋಗಲು ಇಂಧನವಿಲ್ಲ. ಮೂರು ತಿಂಗಳಿಂದ ನಮ್ಮ ಮನೆಯವರನ್ನು ನಾವು ನೋಡಿಲ್ಲ. ನಮಗೆ ನಮ್ಮ ದೇಶ ವಾಪಸ್ ಬೇಕು. ಅದಕ್ಕಾಗಿ ಗೋಟಬಯ ರಾಜಪಕ್ಸ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಸಂಸತ್ತನ್ನು ವಶಪಡಿಸಿಕೊಳ್ಳುತ್ತೇವೆ," ಎಂದರು.
ಇದನ್ನೂ ಓದಿ: ಶ್ರೀಲಂಕಾ ಅಧ್ಯಕ್ಷನ ದೇಶ ಬಿಡುವ ಸ್ಥಿತಿಗೆ ತಂದಿಟ್ಟ ಬೌದ್ಧ ಭಿಕ್ಷು, ಓಮಲ್ಪೆ ಸೋಬಿತಾ ಥೇರ ಯಾರು?
ಮುಂದೆ ಬರಲಿರುವ ಸರ್ಕಾರದ ಮೇಲೆ ಜನರ ನಿರೀಕ್ಷೆ ದೊಡ್ಡ ಮಟ್ಟದಲ್ಲಿರಲಿದೆ. "ರಾಜಪಕ್ಸ ಕುಟುಂಬ ನಮ್ಮ ದುಡ್ಡನ್ನು ಕೊಳ್ಳೆ ಹೊಡೆದು ಓಡಿಹೋಗಿದೆ. ಅವರು ದೇಶಕ್ಕಾಗಿ ಎನನ್ನೂ ಮಾಡಿಲ್ಲ. ಬಹುತೇಕ ಶ್ರೀಲಂಕನರಲ್ಲಿ ಇದೇ ಅಭಿಪ್ರಾಯವಿದೆ. ನೂತನ ಅಧ್ಯಕ್ಷ ಯಾರಾಗುತ್ತಾರೋ ಅವರ ಮೇಲೆ ಹೆಚ್ಚು ನಿರೀಕ್ಷೆಯಿದೆ. ದೇಶವನ್ನು ಮತ್ತೆ ಕಟ್ಟುವ ಕೆಲಸವನ್ನು ಮುಂಬರುವವರು ಮಾಡುತ್ತಾರೆ ಎಂಬ ನಿರೀಕ್ಷೆಯಿದೆ. ಮತ್ತೆ ದೇಶ ಸುರಕ್ಷಿತ ವ್ಯಕ್ತಿಯ ಕೈಯಲ್ಲಿ ನೋಡುವ ಸಲುವಾಗಿ ನಾವೆಲ್ಲರೂ ಕಾಯುತ್ತಿದ್ದೇವೆ," ಎನ್ನುತ್ತಾರೆ ಇನ್ನಬ್ಬ ಪ್ರತಿಭಟನಾಕಾರರು.