
ಕೊಲೊಂಬೊ (ಜು.15): ಭೀಕರ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲೀಗ ಔಷಧಿಗಳ ಬಿಕ್ಕಟ್ಟು ಎದುರಾಗಿದೆ. ದೇಶದಲ್ಲಿ ಜನ ಕಾಯಿಲೆ ಬಿದ್ದರೂ, ಅಪಘಾತ ಮಾಡಿಕೊಂಡರೂ ಚಿಕಿತ್ಸೆ ನೀಡಲು ಅಗತ್ಯ ಪ್ರಮಾಣದ ಔಷಧಗಳಿಲ್ಲ. ಈ ಹಿನ್ನೆಲೆಯಲ್ಲಿ ಸ್ವತಃ ವೈದ್ಯರು ಜನರಿಗೆ ಕಾಯಿಲೆ ಬೀಳಬೇಡಿ, ಅಪಘಾತ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಲಂಕಾ ಇನ್ನೂ ಕೊರೋನಾ ಆಘಾತದಿಂದ ಚೇತರಿಸಿಕೊಂಡಿಲ್ಲ. ಈ ನಡುವೆ ಕಿಡ್ನಿ ಕಸಿ, ಕಾನ್ಸರ್ ಆಸ್ಪತ್ರೆಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಔಷಧಿಗಳು ಲಭ್ಯವಾಗುತ್ತಿಲ್ಲ. ರೇಬಿಸ್, ಮೂರ್ಛೆ ರೋಗಕ್ಕೆ ನೀಡುವ ಔಷಧಿಗಳಿಗೆ ಭಾರೀ ಕೊರತೆಯಿದೆ. ಯಾವಾಗ ಔಷಧಿಗಳು ಲಭ್ಯವಾಗಬಹುದು ಎನ್ನುವುದು ಕೂಡಾ ಖಚಿತವಾಗಿ ತಿಳಿದಿಲ್ಲ. ಇಂತಹ ಭೀಕರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಶ್ರೀಲಂಕಾ ವೈದ್ಯಕೀಯ ಸಂಸ್ಥೆಯ ಮುಖ್ಯಸ್ಥ ಸಮಥ್ ಧರ್ಮಾರಂಟೆ ‘ಕಾಯಿಲೆ ಬೀಳಬೇಡಿ, ಅಪಘಾತಕ್ಕೊಳಗಾಗಬೇಡಿ. ನಿಮ್ಮನ್ನು ಆಸ್ಪತ್ರೆಗಳಿಗೆ ದಾಖಲಾಗಿಸುವಂತೆ ಮಾಡುವ ಯಾವುದೇ ಕೆಲಸವನ್ನು ಮಾಡಬೇಡಿ’ ಮನವಿ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ವೈದ್ಯರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮಾಡಿ ಅಗತ್ಯ ಔಷಧಿಗಳನ್ನು ದಾನ ಮಾಡುವಂತೆ ಅಥವಾ ಅದಕ್ಕಾಗಿ ದೇಣಿಗೆ ನೀಡುವಂತೆ ಇತರೆ ದೇಶಗಳಿಗೆ ವಿನಂತಿಸಿಕೊಂಡಿದ್ದಾರೆ.
ಮಾಲ್ಡೀವ್ಸ್ ನಿಂದ ಸಿಂಗಾಪುರಕ್ಕೆ ಹಾರಿದ ಲಂಕಾ ನಾಯಕ!
ಅಧ್ಯಕ್ಷ ಪರಾರಿ ವದಂತಿ ಬೆನ್ನಲ್ಲೇ ಜನರ ಆಕ್ರೋಶ: ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾದಲ್ಲಿ ಮತ್ತೆ ಜನಾಕ್ರೋಶ ಭುಗಿಲೆದ್ದಿದೆ. ಅಧ್ಯಕ್ಷ ಗೊಟಬಯ ಅವರು ವಿದೇಶಕ್ಕೆ ಪರಾರಿಯಾಗಿದ್ದಾರೆ ಎಂಬ ವದಂತಿಯ ಬೆನ್ನಲ್ಲೇ ಸಾವಿರಾರು ಪ್ರತಿಭಟನಾಕಾರರು ಮತ್ತೆ ರಸ್ತೆಗಳಿದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಆಶ್ರುವಾಯು ಮತ್ತು ಜಲಫಿರಂಗಿಗಳನ್ನು ಬಳಕೆ ಮಾಡಿದ್ದಾರೆ. ಈ ವೇಳೆ ಓರ್ವ ಪ್ರತಿಭಟನಾಕಾರ ಮೃತಪಟ್ಟಿದ್ದಾನೆ.
ತುರ್ತು ಪರಿಸ್ಥಿತಿ ಘೋಷಣೆ: ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಸ್ಪೀಕರ್ ಮಹಿಂದಾ ಅಪಾ ಅಭಯವರ್ಧನಾ ಅವರು ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ. ಕೊಲಂಬೋ ಸೇರಿದಂತೆ ಹಲವು ನಗರಗಳಲ್ಲಿ ನಿಷೇದಾಜ್ಞೆ ವಿಧಿಸಲಾಗಿದೆ. ಗೊಟಬಯ ಅವರು ಈ ಮೊದಲು ಹೇಳಿದಂತೆ ರಾಜೀನಾಮೆ ನೀಡುತ್ತಾರೆ ಎಂದು ಸ್ಪೀಕರ್ ಜನರಿಗೆ ಭರವಸೆ ನೀಡಿದ್ದಾರೆ.
ಸರ್ಕಾರಿ ಟೀವಿ ವಾಹಿನಿ ಮೇಲೂ ದಾಳಿ: ಸರ್ಕಾರಿ ಸ್ವಾಮ್ಯದ ಟೀವಿ ಮತ್ತು ರೇಡಿಯೋ ಕಟ್ಟಡಗಳ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಸುದ್ದಿ ವಾಹಿನಿ ರುಪಾವಾಹಿನಿ ತನ್ನ ಪ್ರಸಾರ ಸ್ಥಗಿತಗೊಳಿಸಿದೆ. ಪ್ರತಿಭಟನಾಕಾರರು ಕಚೇರಿಯ ಆವರಣವನ್ನು ವಶಪಡಿಸಿಕೊಂಡಿರುವುದರಿಂದ ನೇರ ಪ್ರಸಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಶ್ರೀಲಂಕಾ ರುಪಾವಾಹಿನಿ ಕಾರ್ಪೋರೇಶನ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ರಾಜೀನಾಮೆ
ಸರ್ವಪಕ್ಷ ಸರ್ಕಾರ: ದೇಶದಲ್ಲಿ ಜು.20ರ ಒಳಗೆ ಹೊಸ ಸರ್ವಪಕ್ಷಗಳ ಸರ್ಕಾರ ರಚಿಸುವ ಗುರಿ ಇರಿಸಿಕೊಳ್ಳಲಾಗಿದೆ. ಸರ್ವಪಕ್ಷಗಳ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ತಾವು ರಾಜೀನಾಮೆ ನೀಡುವುದಾಗಿ ಇತ್ತೀಚೆಗೆ ಪ್ರಧಾನಿ ರನಿಲ್ ವಿಕ್ರಮಸಿಂಘೆ ಘೋಷಿಸಿದ್ದರು. ಪ್ರತಿಪಕ್ಷಗಳ ಒಕ್ಕೂಟದ ನಾಯಕ ಸಜಿತ್ ಪ್ರೇಮದಾಸ ಮಧ್ಯಂತರ ಅಧ್ಯಕ್ಷ ಪದವಿಗೆ ಮುಂಚೂಣಿಯಲ್ಲಿದ್ದಾರೆ. ಮಧ್ಯಂತರ ಅಧ್ಯಕ್ಷ ಬಂದ 30 ದಿನದೊಳಗೆ ಕಾಯಂ ಅಧ್ಯಕ್ಷರ ಆಯ್ಕೆ ಆಗಬೇಕು.
ಸಹಾಯ ಮಾಡಿಲ್ಲ- ಭಾರತ ನಕಾರ: ಈ ನಡುವೆ, ರಾಜಪಕ್ಸೆ ಪರಾರಿಗೆ ಭಾರತ ನೆರವು ನೀಡಿದೆ ಎಂಬ ಆರೋಪವನ್ನು ಕೊಲಂಬೋದಲ್ಲಿನ ಭಾರತೀಯ ದೂತಾವಾಸ ನಿರಾಕರಿಸಿದೆ. ‘ರಾಜಪಕ್ಸೆ ಶ್ರೀಲಂಕಾದಿಂದ ಹೊರಹೋಗಲು ಭಾರತ ಸರ್ಕಾರ ನೆರವು ನೀಡಿದೆ ಎಂಬ ಆರೋಪಗಳು ನಿರಾಧಾರ ಹಾಗೂ ಊಹಾಪೋಹದಿಂದ ಕೂಡಿವೆ. ಶಾಂತಿಯುತ ಹಾಗೂ ಪ್ರಜಾಸತ್ತಾತ್ಮಕ ಹೋರಾಟ ನಡೆಸುತ್ತಿರುವ ಶ್ರೀಲಂಕಾ ಜನರ ಜತೆ ನಾವು ಇದ್ದೇವೆ ಎಂದು ಇತ್ತೀಚೆಗೆ ನೀಡಿದ ಹೇಳಿಕೆಗೆ ಬದ್ಧರಾಗಿದ್ದೇವೆ’ ಎಂದು ಕೊಲಂಬೋದಲ್ಲಿನ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ