ಬುರ್ಖಾ ಧರಿಸುವುದು ನಿಷಿದ್ಧ ಎಂದ ನೆರೆ ರಾಷ್ಟ್ರದ ಭದ್ರತಾ ಸಚಿವ| ಹಲವು ಇಸ್ಲಾಂ ಶಾಲೆಗಳ ಸ್ಥಗಿತ| ರಾಷ್ಟ್ರೀಯ ಭದ್ರತೆ ಉದ್ದೇಶಿದಿಂದ ಮುಸ್ಲಿಂ ಮಹಿಳೆಯರು ಮುಖವನ್ನು ಪೂರ್ತಿ ಮುಚ್ಚುವಂತೆ ಬುರ್ಖಾ ಧರಿಸುವುದನ್ನು ನಿಷೇಧ
ಕೊಲಂಬೋ(ಮಾ.14): ಶ್ರೀಲಂಕಾದಲ್ಲಿ ಬುರ್ಖಾ ಧರಿಸುವುದು ನಿಷಿದ್ಧ ಎಂದು ದೇಶದ ಸಾರ್ವಜನಿಕ ಭದ್ರತಾ ಸಚಿವ ಶರತ್ ವೀರಶೇಖರ ಅವರು ತಿಳಿಸಿದ್ದಾರೆ. ಇದೇ ವೇಳೆ ದೇಶದಲ್ಲಿರುವ ಸಾವಿರಾರು ಇಸ್ಲಾಮಿಕ್ ಶಾಲೆಗಳನ್ನು ರದ್ದು ಮಾಡುವುದಾಗಿ ಘೋಷಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಶರತ್ ಅವರು, ‘ರಾಷ್ಟ್ರೀಯ ಭದ್ರತೆ ಉದ್ದೇಶಿದಿಂದ ಮುಸ್ಲಿಂ ಮಹಿಳೆಯರು ಮುಖವನ್ನು ಪೂರ್ತಿ ಮುಚ್ಚುವಂತೆ ಬುರ್ಖಾ ಧರಿಸುವುದನ್ನು ನಿಷೇಧಿಸಲಾಗಿದೆ. ಈ ಕುರಿತ ನಿರ್ಧಾರವನ್ನು ಸಚಿವ ಸಂಪುಟ ಅನುಮೋದಿಸಿದೆ’ ಎಂದಿದ್ದಾರೆ. ಇದೇ ವೇಳೆ ರಾಷ್ಟ್ರೀಯ ಶಿಕ್ಷಣ ನೀತಿಗೆ ಮದರಸಾಗಳು ವಿರುದ್ಧವಾಗಿರುವುದರಿಂದ ಇಸ್ಲಾಮಿಕ್ ಶಾಲೆಗಳನ್ನೂ ರದ್ದು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರವನ್ನು ಮುಸ್ಲಿಂ ಸಂಪ್ರದಾಯಕ್ಕೆ ವಿರುದ್ಧವಾಗಿ ನಡೆಸಲು ಶ್ರೀಲಂಕಾ ಮಾರ್ಗಸೂಚಿ ಹೊರಡಿಸಿತ್ತು. ಅದಕ್ಕೆ ಅಮೆರಿಕ ಮತ್ತು ಅಂತಾರಾಷ್ಟ್ರೀಯ ಹಕ್ಕುಗಳ ಸಂಘಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.