* ಗೋಟಬಾಯ ರಾಜಪಕ್ಸೆ ಬಲ 109ಕ್ಕೆ ಕುಸಿತ
* ಬಹುಮತಕ್ಕೆ 113 ಸದಸ್ಯರ ಬಲ ಅಗತ್ಯ
* ನೂತನ ಸಚಿವ ಅಲಿ ಕೂಡ ರಾಜೀನಾಮೆ
ಕೊಲಂಬೋ(ಏ.06): ಈಗಾಗಲೇ ಹದಗೆಟ್ಟಆರ್ಥಿಕ ಸ್ಥಿತಿಯಿಂದ ಕಂಗೆಟ್ಟಿರುವ ಶ್ರೀಲಂಕಾದಲ್ಲಿ ರಾಜಕೀಯ ಅಸ್ಥಿರತೆ ಕೂಡ ಕಾಡಲಾರಂಭಿಸಿದೆ. ಅಧ್ಯಕ್ಷ ಗೋಟಬಾಯ ರಾಜಪಕ್ಸೆ ಅವರ ನೇತೃತ್ವದ ಮೈತ್ರಿ ಸರ್ಕಾರವು ಸಂಸತ್ತಿನಲ್ಲಿ ಬಹುಮತ ಕಳೆದುಕೊಳ್ಳುವ ಹಂತ ತಲುಪಿದ್ದು, ಪತನದ ಭೀತಿ ಎದುರಿಸುತ್ತಿದೆ. ಇದರ ನಡುವೆ ನೂತನ ವಿತ್ತ ಸಚಿವ ಅಲಿ ಸಬ್ರಿ ಕೂಡ, ನೇಮಕವಾದ ಒಂದೇ ದಿನದಲ್ಲಿ ರಾಜೀನಾಮೆ ನಿಡಿದ್ದು, ಬಿಕ್ಕಟ್ಟು ಇನ್ನಷ್ಟು ಬಿಗಡಾಯಿಸಿದೆ.
225 ಸದಸ್ಯಬಲದ ಸಂಸತ್ತಿನಲ್ಲಿ, ರಾಜಪಕ್ಸೆ ನೇತೃತ್ವದ ಮೈತ್ರಿಕೂಟ 2020ರ ಚುನಾವಣೆಯಲ್ಲಿ 150 ಸ್ಥಾನ ಗೆದ್ದಿತ್ತು. ಆ ಪಕ್ಷದ 41 ಶಾಸಕರು ಮಂಗಳವಾರ ಬಂಡಾಯ ಎದ್ದಿದ್ದು, ಬೆಂಬಲ ಹಿಂಪಡೆಯುವ ಘೋಷಣೆ ಮಾಡಿದ್ದಾರೆ. ಇವರು ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಅವರ ಬೆಂಬಲಿಗರು. ಇದರಿಂದಾಗಿ ಸರ್ಕಾರದ ಬಲ 109 ಸ್ಥಾನಕ್ಕೆ ಕುಸಿದಿದೆ. ಬಹುಮತಕ್ಕೆ 113 ಸದಸ್ಯರ ಅವಶ್ಯಕತೆ ಇದ್ದು, 4 ಸ್ಥಾನದ ಕೊರತೆ ಎದುರಿಸುತ್ತಿದೆ. ಆದಾಗ್ಯೂ ತನಗೆ ಸರಳ ಬಹುಮತ ಇದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ.
ಇದರ ನಡುವೆ, ಲಂಕಾ ಸರ್ಕಾರದ ಎಲ್ಲ 26 ಸಚಿವರು ಆರ್ಥಿಕ ಬಿಕ್ಕಟ್ಟಿನ ಕಾರಣ ರಾಜೀನಾಮೆ ನೀಡಿದ ನಂತರ ಸೋಮವಾರವಷ್ಟೇ ವಿತ್ತ ಸಚಿವರಾಗಿ ನೇಮಕವಾಗಿದ್ದ ಅಲಿ ಸಬ್ರಿ ಕೂಡ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಸರ್ಕಾರದ ಜತೆ ಸೇರಿಕೊಳ್ಳಬೇಕು ಎಂದು ರಾಜಪಕ್ಸೆ ಅವರು ವಿಪಕ್ಷಗಳಿಗೆ ಮನವಿ ಮಾಡಿದ್ದರೂ, ಆ ಆಫರ್ ಅನ್ನು ಅವು ತಿರಸ್ಕರಿಸಿವೆ. ಇದು ಸರ್ಕಾರದಲ್ಲಿನ ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸಿದೆ.
ಇಡೀ ದೇಶವನ್ನೇ ಚೀನಾಕ್ಕೆ ಮಾರಿದ್ದೀರಿ, ಶ್ರೀಲಂಕಾ ಪ್ರಧಾನಿ ವಿರುದ್ಧ ವ್ಯಾಪಾರಿಗಳ ಆಕ್ರೋಶ!
ಪ್ರಧಾನಿ ರಾಜಪಕ್ಷೆ (Rajapaksa government ) ಸರ್ಕಾರವು ದೇಶದ ಎಲ್ಲವನ್ನೂ ಚೀನಾ (China) ಸರ್ಕಾರಕ್ಕೆ ಮಾರಾಟ ಮಾಡಿದೆ. ಪ್ರಸ್ತುತ ನಮ್ಮ ದೇಶದಲ್ಲಿ ಏನೂ ಇಲ್ಲ. ವಿದೇಶಗಳಿಂದ ಎಲ್ಲವನ್ನೂ ಸಾಲದ ಮೇಲೆಯೇ ಎಲ್ಲವನ್ನೂ ಖರೀದಿಸಲಾಗಿದೆ ಎಂದು ಶ್ರೀಲಂಕಾದ ಆಹಾರ ವ್ಯಾಪಾರಿಗಳು ( Food vendors ) ಪ್ರಧಾನಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನ (economic and political crises) ನಡುವೆ ಶ್ರೀಲಂಕಾದಲ್ಲಿ ಹಣ್ಣುಗಳು ಮತ್ತು ತರಕಾರಿಗಳ ಬೆಲೆಗಳು ಗಗನಕ್ಕೇರುತ್ತಿವೆ. 3 ರಿಂದ 4 ತಿಂಗಳ ಹಿಂದೆ ಸೇಬು ಕೆ.ಜಿಗೆ ₹ 500ಕ್ಕೆ ಮಾರಾಟವಾಗುತ್ತಿತ್ತು, ಈಗ ₹ 1000ಕ್ಕೆ ಮಾರಾಟವಾಗುತ್ತಿದೆ. ಈ ಹಿಂದೆ ₹ 700ಕ್ಕೆ ಮಾರಾಟವಾಗುತ್ತಿದ್ದ ಪೇರಳೆ ಕಾಯಿ ಕೆಜಿಗೆ ₹ 1500ಕ್ಕೆ ಮಾರಾಟವಾಗುತ್ತಿದೆ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಫಾರೂಖ್. ಎಷ್ಟೇ ಆದರೂ ಜನರಲ್ಲಿ ಕೊಳ್ಳಲು ಮಾತ್ರ ಹಣವಿಲ್ಲ ಎನ್ನುತ್ತಾರೆ.
"ಶ್ರೀಲಂಕಾ ಸರ್ಕಾರ ಎಲ್ಲವನ್ನೂ ಚೀನಾಕ್ಕೆ ಮಾರಿದೆ. ಅದು ದೊಡ್ಡ ಸಮಸ್ಯೆಯಾಗಿದೆ. ಶ್ರೀಲಂಕಾದಲ್ಲಿ ಹಣವಿಲ್ಲ, ಏಕೆಂದರೆ ಅದು ಚೀನಾಕ್ಕೆ ಎಲ್ಲವನ್ನೂ ಮಾರಾಟ ಮಾಡಿದೆ. ಅದು ಇತರ ದೇಶಗಳಿಂದ ಸಾಲದ ಮೇಲೆ ಎಲ್ಲವನ್ನೂ ಖರೀದಿಸುತ್ತಿದೆ. ದಿನದಿಂದ ದಿನಕ್ಕೆ ಬೆಲೆ ಏರಿಕೆಯಾಗುತ್ತಿದ್ದು, ತಮ್ಮ ಬಳಿ ಹಣವಿಲ್ಲ ಎಂದು ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿದರು. ಮತ್ತೊಬ್ಬ ಆಹಾರ ಮಾರಾಟಗಾರ ರಾಜಾ, "ಯಾವುದೇ ವ್ಯಾಪಾರವಿಲ್ಲ, ಗೋಟಾಬಯ್ಯ (Gotabaya) ಒಳ್ಳೆಯವನಲ್ಲ ಮತ್ತು ಅವನನ್ನು ಹೊರಹಾಕಬೇಕಾಗಿದೆ' ಎಂದು ಹೇಳಿದ್ದಾರೆ.