
ಕೆಲವು ದುರಂತ ಪ್ರಕರಣಗಳಲ್ಲಿ ವರದಿಗಾರರು ಅಪಾಯಕಾರಿ ಸ್ಥಳಗಳಿಗೆ ಇಳಿದು ಪ್ರತ್ಯಕ್ಷ ವರದಿ ಮಾಡುವುದನ್ನು ನೀವು ನೋಡಿರಬಹುದು. ಅದೇ ರೀತಿ ಇಲ್ಲೊಬ್ಬ ನದಿಗೆ ಇಳಿದು ವರದಿ ಮಾಡುತ್ತಿದ್ದ ವೇಳೆ ಆಘಾತಕಾರಿ ಘಟನೆ ನಡೆದಿದೆ.
13 ವರ್ಷದ ಬಾಲಕಿಯೊಬ್ಬಳು ನದಿಯಲ್ಲಿ ಈಜುತ್ತಿದ್ದ ವೇಳೆ ನಾಪತ್ತೆಯಾಗಿದ್ದಳು. ಈ ಘಟನೆಯ ಬಗ್ಗೆ ವರದಿಗಾರನೋರ್ವ ನದಿಗೆ ಇಳಿದು ವರದಿ ಮಾಡುತ್ತಿದ್ದ. ಈ ನದಿ ಎಷ್ಟು ವಿಶಾಲವಾಗಿದೆ. ಆಳವಾಗಿದೆ ಎಂಬುದನ್ನು ಆತ ಲೈವ್ ರಿಪೋರ್ಟಿಂಗ್ ಮೂಲಕ ತಿಳಿಸುತ್ತಿದ್ದ ಅಷ್ಟರಲ್ಲೇ ನಾಪತ್ತೆಯಾಗಿದ್ದ ಬಾಲಕಿಯ ಶವ ನೀರಿನಲ್ಲಿ ತೇಲುತ್ತಾ ಆತನ ಕಾಲಿನ ಕೆಳಗೆ ಬಂದಿದ್ದು, ಅಕ್ಷರಶಃ ವರದಿಗಾರ ಭಯ ಬಿದ್ದಿದ್ದಾನೆ. ಇಂತಹ ಭಯಾನಕ ಘಟನೆ ನಡೆದಿರುವುದು ಬ್ರೆಜಿಲ್‌ನಲ್ಲಿ.
ಬ್ರೆಜಿಲ್‌ನಲ್ಲಿ ಈಜಲು ಹೋಗಿದ್ದ 13 ವರ್ಷದ ಬಾಲಕಿಯೊಬ್ಬಳು ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದಳು, ಆಕೆಯ ಶವವಿನ್ನು ಸಿಕ್ಕಿರಲಿಲ್ಲ. ಈಶಾನ್ಯ ಬ್ರೆಜಿಲ್‌ನ ಬಕಾಬಲ್‌ನಲ್ಲಿರುವ ಮೀರಿಮ್ ನದಿಯಲ್ಲಿ ಈ ಘಟನೆ ನಡೆದಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ವರದಿಗಾರ ಲೆನಿಲ್ಡೊ ಫ್ರಾಜಾವೊ ನದಿಯ ನೀರಿಗೆ ಇಳಿದು ವರದಿ ಮಾಡುತ್ತಿದ್ದ, ಈ ನದಿ ಎಷ್ಟು ಆಳವಿದೆ ವಿಸ್ತಾರವಾಗಿದೆ ಎಂದು ಕ್ಯಾಮರಾಗೆ ವಿವರಿಸುತ್ತಿದ್ದ. ಆದರೆ ಅಷ್ಟರಲ್ಲಾಗಲೇ ಆತನಿಗೆ ಕಾಲಿನ ಕೆಳಗೆ ಏನೋ ಬಂದಂತೆ ಆಗಿದ್ದು, ಆತ ತಕ್ಷಣವೇ ನದಿಯಲ್ಲೇ ಅತ್ತಿತ್ತ ಸರಿದಿದ್ದಾನೆ. ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನೀರು ವರದಿಗಾರನ ಕತ್ತಿಗೆ ಬರುತ್ತಿದ್ದಂತೆ ಆತ ನೀರಿನಲ್ಲೇ ಜಂಪ್ ಮಾಡ್ತಾನೆ. ಅಲ್ಲದೇ ತನ್ನನ್ನು ಶೂಟ್ ಮಾಡುತ್ತಿರುವ ಕ್ಯಾಮರಾ ಸಿಬ್ಬಂದಿಗೆ ತನಗೇನೋ ಕಾಲಿನ ಸಮೀಪ ಸುಳಿದಾಡಿದಂತೆ ಭಾಸವಾಗುತ್ತಿದೆ ಎಂದು ಆತ ಹೇಳುತ್ತಾನೆ. ಜೊತೆಗೆ ಆತ ನಡುಗುತ್ತಲೇ ನೀರು ಹೆಚ್ಚಿಲ್ಲದ ಕಡೆ ಬರುವುದನ್ನು ಕಾಣಬಹುದಾಗಿದೆ.
ನೀರಿನ ತಳದಲ್ಲಿ ಏನೋ ಇದೆ ಅಂತ ನನಗೆ ಅನಿಸುತ್ತಿದೆ ಎಂದು ಆತ ತನ್ನ ತಂಡಕ್ಕೆ ಹೇಳುತ್ತಾನೆ. ಅಲ್ಲದೇ ಮುಂದೆ ಹೋಗುವುದಕ್ಕೆ ಹಿಂಜರಿಯುವ ಆತ ಇಲ್ಲ, ನಾನು ಆ ಕಡೆ ಹೋಗಲಾರೆ ನನಗೆ ಭಯವಾಗುತ್ತಿದೆ. ಅದು ತೋಳಿನಂತೆ ಅನಿಸುತ್ತಿತ್ತು.ಅದು ಅವಳಾಗಿರಬಹುದೇ? ಆದರೆ ಅದು ಮೀನೂ ಆದರೂ ಆಗಿರಬಹುದು. ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಫ್ರಾಜೋ ಅವರ ವರದಿಯ ನಂತರ ಅಗ್ನಿ ಶಾಮಕ ಸಿಬ್ಬಂದಿಯವರು ಹಾಗೂ ಈಜುಪಟುಗಳು, ಮುಳುಗುತಜ್ಞರು ಅಲ್ಲಿಗೆ ಬಂದಿದ್ದು, ನಾಪತ್ತೆಯಾಗ ಬಾಲಕಿ ರೈಸಾಗಾಗಿ ಅಲ್ಲಿ ಹುಡುಕಾಟ ನಡೆಸಿದ್ದಾರೆ. ಅಲ್ಲದೇ ಈ ವರದಿಗಾರ ವರದಿ ಮಾಡಿದ ಅದೇ ಸ್ಥಳದಲ್ಲೇ ಆಕೆಯ ಮೃತದೇಹವನ್ನು ಪತ್ತೆ ಮಾಡಿ ನೀರಿನಿಂದ ಹೊರ ತೆಗೆದಿದ್ದಾರೆ.
13 ವರ್ಷದ ಬಾಲಕಿ ರೈಸಾ ತನ್ನ ಸ್ನೇಹಿತರೊಂದಿಗೆ ನದಿಯಲ್ಲಿ ಈಜುತ್ತಿದ್ದಾಗ ಮುಳುಗಿ ಸಾವನ್ನಪ್ಪಿದ್ದಳು. ಆಕೆಯ ಶವವನ್ನು ನಂತರ ನದಿಯಿಂದ ಹೊರತೆಗೆಯಲಾಗಿತ್ತು. ನಂತರ ಮರಣೋತ್ತರ ಪರೀಕ್ಷೆ ನಡೆಸಿದಾಗ ಆಕೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದು ಧೃಢಪಟ್ಟಿತ್ತು. ಆಕೆಯ ದೇಹದಲ್ಲಿ ಯಾವುದೇ ದೈಹಿಕ ಆಘಾತದ ಲಕ್ಷಣಗಳಿರಲಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ