ಬ್ರಿಟನ್ನಲ್ಲಿ ಆಸ್ಟ್ರಾಜೆನೆಕಾ ಲಸಿಕೆ ಪಡೆದ 7 ಮಂದಿ ಸಾವು

By Kannadaprabha NewsFirst Published Apr 4, 2021, 7:52 AM IST
Highlights

ಲಸಿಕೆ ಪಡೆದ 7 ಮಂದಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯಿಂದ ಮೃತರಾಗಿದ್ದಾರೆಂಬ ಸಂಗತಿ ಬೆಳಕಿಗೆ ಬಂದಿದೆ. ಇನ್ನೂ ಅನೇಕರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಕಾಣಿಸಿಕೊಂಡಿದೆ.

ಲಂಡನ್‌ (ಏ.04):  ಆಸ್ಟ್ರಾಜೆನೆಕಾ ಕೊರೋನಾವೈರಸ್‌ ಲಸಿಕೆ ಪಡೆದ ಕೆಲವರಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆಯೆಂದು ಅನೇಕ ದೇಶಗಳಲ್ಲಿ ಈ ಲಸಿಕೆ ನೀಡುವುದನ್ನು ನಿಲ್ಲಿಸಿರುವುದರ ಬೆನ್ನಲ್ಲೇ ಇಲ್ಲಿಯವರೆಗೆ ಬ್ರಿಟನ್ನಿನಲ್ಲಿ ಈ ಲಸಿಕೆ ಪಡೆದ 7 ಮಂದಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯಿಂದ ಮೃತರಾಗಿದ್ದಾರೆಂಬ ಸಂಗತಿ ಬೆಳಕಿಗೆ ಬಂದಿದೆ.

‘ಬ್ರಿಟನ್ನಿನಲ್ಲಿ ಆಸ್ಟ್ರಾಜೆನೆಕಾ ಲಸಿಕೆ ಪಡೆದ 30 ಮಂದಿಯಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆ ಕಾಣಿಸಿಕೊಂಡಿದ್ದು, ಅವರಲ್ಲಿ 7 ಮಂದಿ ಮೃತಪಟ್ಟಿದ್ದಾರೆ’ ಎಂದು ಬ್ರಿಟನ್ನಿನ ಔಷಧ ನಿಯಂತ್ರಣ ಪ್ರಾಧಿಕಾರ ತಿಳಿಸಿದೆ. ಈ ಕಾರಣಕ್ಕೆ ಈಗಾಗಲೇ ಕೆನಡಾ, ಫ್ರಾನ್ಸ್‌, ಜರ್ಮನಿ, ನೆದರ್‌ಲೆಂಡ್‌ ಮೊದಲಾದ ದೇಶಗಳಲ್ಲಿ ವಯಸ್ಸಾದವರಿಗೆ ಮಾತ್ರ ಈ ಲಸಿಕೆ ನೀಡಲಾಗುತ್ತಿದೆ. ಇನ್ನುಳಿದವರಿಗೆ ಈ ಲಸಿಕೆ ನೀಡುವುದನ್ನು ನಿಲ್ಲಿಸಲಾಗಿದೆ.

ಕೊರೋನಾ ಕಾಟ: ಬೆಂಗ್ಳೂರಲ್ಲಿ ಸತತ 2ನೇ ದಿನವೂ 3000+ ಕೇಸ್‌..! ...

ಆದರೆ, ಆಸ್ಟ್ರಾಜೆನೆಕಾ ಲಸಿಕೆ ಸುರಕ್ಷಿತವಾಗಿದ್ದು, ಇದರ ನೀಡಿಕೆ ಮುಂದುವರೆಸಬೇಕೆಂದು ಯುರೋಪಿಯನ್‌ ಮೆಡಿಕಲ್‌ ಏಜೆನ್ಸಿ (ಇಎಂಎ) ಕರೆ ನೀಡಿದೆ. ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ಇದನ್ನೇ ಹೇಳಿತ್ತು. ಬ್ರಿಟನ್ನಿನಲ್ಲಿ ಈವರೆಗೆ 3.1 ಕೋಟಿ ಜನರಿಗೆ ಆಸ್ಟ್ರಾಜೆನೆಕಾ ಮತ್ತು ಫೈಝರ್‌ ಲಸಿಕೆ ನೀಡಲಾಗಿದೆ. ಫೈಝರ್‌ ಲಸಿಕೆ ಪಡೆದವರಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ.

ಆಸ್ಟ್ರಾಜೆನೆಕಾ ಕೊರೋನಾ ಲಸಿಕೆಯನ್ನು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನೆಕಾ ಕಂಪನಿಗಳು ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಭಾರತದಲ್ಲಿ ಇದೇ ಲಸಿಕೆಯನ್ನು ಪುಣೆಯ ಸೀರಂ ಸಂಸ್ಥೆ ಕೋವಿಶೀಲ್ಡ್‌ ಹೆಸರಿನಲ್ಲಿ ತಯಾರಿಸುತ್ತಿದ್ದು, ದೇಶಾದ್ಯಂತ ಇದೇ ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಜನರಿಗೆ ನೀಡಲಾಗುತ್ತಿದೆ.

click me!