Russia Ukraine Crisis: ಜೀವ ಉಳಿಸಿಕೊಳ್ಳಿ ಮತ್ತು ಜಾಗ ಖಾಲಿ ಮಾಡಿ: ರಷ್ಯಾ ಯೋಧರಿಗೆ ಉಕ್ರೇನ್‌ ಅಧ್ಯಕ್ಷ ಆಫರ್‌!

By Kannadaprabha News  |  First Published Mar 1, 2022, 11:38 AM IST

*ಜೀವ ಉಳಿಸಿಕೊಳ್ಳಿ ಮತ್ತು ಜಾಗ ಖಾಲಿ ಮಾಡಿ
*ರಷ್ಯಾ ಯೋಧರಿಗೆ ಉಕ್ರೇನ್‌ ಅಧ್ಯಕ್ಷ ಜೆಲೆನ್‌ಸ್ಕಿ ಆಫರ್‌
*ರಷ್ಯಾ ಮೇಲಿನ ಅಮೆರಿಕ ನಿರ್ಬಂಧಕ್ಕೆ ಚೀನಾ ವಿರೋಧ
*ಮಾಸ್ಕೋ ಜೊತೆ ವ್ಯಾಪಾರ ಮುಂದುವರೆಸುವುದಾಗಿ ಹೇಳಿದ ಚೀನಾ
*36 ದೇಶಗಳ ವಿಮಾನಗಳಿಗೆ ರಷ್ಯಾ ನಿಷೇಧ 


ಮಾಸ್ಕೋ  (ಮಾ. 01): ರಷ್ಯಾ ಸೇನೆಗೆ ತೀವ್ರ ಪ್ರತಿರೋಧ ತೋರಿಸುತ್ತಿರುವ ಉಕ್ರೇನ್‌ ಅಧ್ಯಕ್ಷ ವೊಲೊಡಿಮೀರ್‌ ಜೆಲೆನ್‌ಸ್ಕಿ, ರಷ್ಯಾ ಯೋಧರಿಗೆ ಜೀವ ಉಳಿಸಿಕೊಳ್ಳುವ ಆಫರ್‌ ನೀಡಿದ್ದಾರೆ. ಈ ಕುರಿತು ಸೋಮವಾರ ಹೇಳಿಕೆ ಬಿಡುಗಡೆ ಮಾಡಿರುವ ಜೆಲೆನ್‌ಸ್ಕಿ, ‘ನಿಮ್ಮ ಜೀವ ಉಳಿಸಿಕೊಳ್ಳಿ ಮತ್ತು ಜಾಗ ಖಾಲಿ ಮಾಡಿ’ ಎಂದು ಮನವಿ ಮಾಡಿದ್ದಾರೆ. ಇದುವರೆಗೆ ನಡೆದ 5 ದಿನಗಳ ಯುದ್ಧದಲ್ಲಿ ರಷ್ಯಾದ 4000ಕ್ಕೂ ಹೆಚ್ಚು ಯೋಧರು ಸಾವನ್ನಪ್ಪಿದ್ದಾರೆ ಎಂಬ ವರದಿ ಮತ್ತು ರಷ್ಯಾದ ಜೊತೆಗೆ ಸಂಧಾನ ಮಾತುಕತೆ ಆರಂಭವಾದ ನಡುವೆಯೇ ಆವರು ಈ ಆಫರ್‌ ನೀಡಿದ್ದಾರೆ.

ಇ.ಯು. ಸದಸ್ಯತ್ವ ನೀಡಿ: ಇದೇ ವೇಳೆ ತಕ್ಷಣವೇ ನಮಗೆ ಯುರೋಪಿಯನ್‌ ಒಕ್ಕೂಟದ ಸದಸ್ಯತ್ವ ನೀಡಬೇಕು. ವಿಶೇಷ ಅವಕಾಶ ಬಳಸಿಕೊಂಡು ಒಕ್ಕೂಟವು ನಮಗೆ ಸದಸ್ಯತ್ವ ನೀಡಬೇಕೆಂದು ಜೆಲೆನ್‌ಸ್ಕಿ ಮನವಿ ಮಾಡಿದ್ದಾರೆ.

Tap to resize

Latest Videos

ಕೈದಿಗಳಿಗೂ ಅವಕಾಶ: ರಷ್ಯಾ ವಿರುದ್ಧದ ಯುದ್ಧದಲ್ಲಿ ಭಾಗಿಯಾಗಲು ಜನಸಾಮಾನ್ಯರಿಗೂ ಅವಕಾಶ ಕಲ್ಪಿಸಿರುವ ಉಕ್ರೇನ್‌ ಸರ್ಕಾರ, ಇದೀಗ ಯುದ್ಧದಲ್ಲಿ ಭಾಗಿಯಾದ ಅನುಭವ ಇರುವ ಕೈದಿಗಳು, ರಷ್ಯಾದ ವಿರುದ್ಧ ಹೋರಾಡುವ ಭರವಸೆ ನೀಡಿದರೆ ಅವರನ್ನು ಜೈಲಿಂದ ಬಿಡುಗಡೆ ಮಾಡುವ ಆಫರ್‌ ಮುಂದಿಟ್ಟಿದೆ.

ಇದನ್ನೂ ಓದಿ: Russia Ukraine Crisis: ತನ್ನ ಪ್ರಜೆಗಳನ್ನು ರಕ್ಷಿಸಿ ಮಾದರಿಯಾದ ಭಾರತ: ತನ್ನವರ ರಕ್ಷಣೆಗೆ ಮುಂದಾಗದ ಚೀನಾ!

36 ದೇಶಗಳ ವಿಮಾನಗಳಿಗೆ ರಷ್ಯಾ ನಿಷೇಧ: ತನ್ನ ವಿಮಾನಗಳಿಗೆ ನ್ಯಾಟೋ ಸೇರಿದಂತೆ ಹಲವು ದೇಶಗಳ ವಾಯುಸೀಮೆ ಬಳಸಲು ನಿಷೇಧ ಹೇರಿದ್ದಕ್ಕೆ ತಿರುಗೇಟು ನೀಡಿರುವ ರಷ್ಯಾ ಸರ್ಕಾರ, ಬ್ರಿಟನ್‌, ಜರ್ಮನಿ ಸೇರಿದಂತೆ ನ್ಯಾಟೋ, ಯುರೋಪಿಯನ್‌ ಒಕ್ಕೂಟದ 36 ದೇಶಗಳ ವಿಮಾನಗಳಿಗೆ ತನ್ನ ವಾಯುಸೀಮೆ ಬಳಸಲು ನಿಷೇಧ ಹೇರಿದೆ.

ಈ ಕುರಿತು ರಷ್ಯಾದ ವಿಮಾನಯಾನ ಸಚಿವಾಲಯ ಪ್ರಕಟಣೆ ಹೊರಡಿಸಿದ್ದು, ಪಾಶ್ಚಾತ್ಯ ದೇಶಗಳ ಕ್ರಮಕ್ಕೆ ಪ್ರತೀಕಾರವಾಗಿ ಈ ಕ್ರಮ ಕೈಗೊಂಡಿದ್ದಾಗಿ ತಿಳಿಸಿದೆ.ಆದರೆ, ವಿಶೇಷ ಅನುಮತಿ ಮೇರೆಗೆ ಈ ದೇಶಗಳ ವಿಮಾನಗಳು ತಮ್ಮ ವಾಯುವಲಯ ಪ್ರವೇಶಿಸಬಹುದು ಎಂದು ರಷ್ಯಾ ಸ್ಪಷ್ಟಪಡಿಸಿದೆ.

ರಷ್ಯಾ ಮೇಲಿನ ಅಮೆರಿಕ ನಿರ್ಬಂಧಕ್ಕೆ ಚೀನಾ ವಿರೋಧ:  ರಷ್ಯಾದ ಮೇಲೆ ಅಮೆರಿಕ ಸೇರಿದಂತೆ ಹಲವು ಪಾಶ್ಚಿಮಾತ್ಯ ರಾಷ್ಟ್ರಗಳು ವಿಧಿಸಿರುವ ನಿರ್ಬಂಧವನ್ನು ಚೀನಾ ವಿರೋಧಿಸಿದೆ. ಮಾಸ್ಕೋ ಜೊತೆಗೆ ಹಿಂದಿನ ರೀತಿಯಲ್ಲೇ ಚೀನಾ ವ್ಯಾಪಾರ ಸಂಬಂಧವನ್ನು ಮುಂದುವರೆಸುವುದಾಗಿ ಹೇಳಿದೆ.

ಇದನ್ನೂ ಓದಿRussia Ukraine Crisis: ಉಕ್ರೇನ್‌ ಪರ ದೇಣಿಗೆ ಸಂಗ್ರಹ ಶುರು: ಬಹುಮಾನ ಮೊತ್ತ ದೇಶಕ್ಕೆ ಎಂದ ಟೆನಿಸ್‌ ತಾರೆ!

‘ರಷ್ಯಾದ ಬ್ಯಾಂಕುಗಳ ವ್ಯವಹಾರವನ್ನು ಅಮೆರಿಕ ಸೇರಿ ಹಲವು ಪಾಶ್ಚಿಮಾತ್ಯ ರಾಷ್ಟ್ರಗಳು ನಿರ್ಬಂಧಿಸಿವೆ. ಈ ನಡೆಯನ್ನು ಚೀನಾ ವಿರೋಧಿಸುತ್ತದೆ. ಇದರೊಂದಿಗೆ ಮಾಸ್ಕೋ ಜೊತೆ ಚೀನಾ ಹೊಂದಿರುವ ವ್ಯಾಪಾರ ಸಂಬಂಧವನ್ನು ಮುಂದುವರೆಸುತ್ತದೆ. ರಷ್ಯಾಗೆ ಹಣಕಾಸಿನ ನೆರವು ಒದಗಿಸುತ್ತದೆ. ಉಕ್ರೇನ್‌ ಬಿಕ್ಕಟ್ಟಿನ ನಂತರ ಇತರ ದೇಶಗಳು ರಷ್ಯಾದೊಂದಿಗೆ ಹೊಂದಿರುವ ಸಂಬಂಧದ ಕುರಿತು ಅಮೆರಿಕ ಮೂಗುತೂರಿಸಬಾರದು ಎಂದು ನಾವು ಮನವಿ ಮಾಡುತ್ತೇವೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್‌ ವೆನ್‌ಬಿನ್‌ ಹೇಳಿದ್ದಾರೆ.

ರಷ್ಯಾ ಜನಸಾಮಾನ್ಯರ ಜೀವನ ಅತಂತ್ರದತ್ತ: ಉಕ್ರೇನ್‌ ಮೇಲೆ ಏಕಪಕ್ಷೀಯವಾಗಿ ಯುದ್ಧ ಸಾರಿದ್ದರ ವಿರುದ್ಧವಾಗಿ ರಷ್ಯಾದ ಮೇಲೆ ಜಾಗತಿಕ ಸಮುದಾಯ ಹೇರಿರುವ ನಾನಾ ನಿರ್ಬಂಧದ ಕ್ರಮಗಳು, ನಿಧಾನವಾಗಿ ತನ್ನ ಪರಿಣಾಮವನ್ನು ತೋರಿಸಲು ಆರಂಭಿಸಿದೆ. ಮೊದಲ ಹಂತದಲ್ಲಿ ಜನಸಾಮಾನ್ಯರ ಮೇಲೆ ಕಾಣಿಸಿಕೊಳ್ಳುತ್ತಿರುವ ಈ ಪರಿಣಾಮಗಳು ಶೀಘ್ರವೇ ಸಣ್ಣ, ಮಧ್ಯಮ, ದೊಡ್ಡ ಕೈಗಾರಿಕೆಗಳು, ಆರ್ಥಿಕತೆ ಮೇಲೂ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಒಂದು ವೇಳೆ ಉಕ್ರೇನ್‌ ಜೊತೆಗಿನ ಸಂಧಾನ ಮಾತುಕತೆ ಸಫಲವಾಗದೇ, ರಷ್ಯಾದ ಮೇಲಿನ ನಿರ್ಬಂಧಗಳು ಮುಂದುವರೆದರೆ 23 ವರ್ಷಗಳಿಂದ ರಷ್ಯಾವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುವ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ದೊಡ್ಡ ಸಂಕಷ್ಟಎದುರಿಸಬೇಕಾಗಿ ಬರಲಿದೆ ಎನ್ನಲಾಗಿದೆ.

ರೂಬಲ್‌ ಕುಸಿತ: ಕಳೆದ 5 ದಿನಗಳ ಅವಧಿಯಲ್ಲಿ ಡಾಲರ್‌ ಎದುರು ರಷ್ಯಾದ ಕರೆನ್ಸಿಯಾದ ರೂಬಲ್‌ ಶೆ.30ರಷ್ಟುಭಾರೀ ಕುಸಿತ ಕಂಡಿದೆ. ಪರಿಣಾಮ 1 ಡಾಲರ್‌ಗೆ ಮೌಲ್ಯವು 117 ರೂಬಲ್‌ಗೆ ಕುಸಿದಿದೆ. 1997ರಲ್ಲಿ ಸೋವಿಯತ್‌ ಒಕ್ಕೂಟ ಪತನ ಬಳಿಕ ಮೊದಲ ಬಾರಿ ರೂಬಲ್‌ ಮೌಲ್ಯ ಭಾರೀ ಕುಸಿತವಾಗಿತ್ತು. ಬಳಿಕ 1998ರಲ್ಲಿ ಒಮ್ಮೆ ಮತ್ತು 2014ರಲ್ಲಿ ತೈಲ ಬೆಲೆ ಭಾರೀ ಕುಸಿತ ಕಂಡಾಗಲೂ ರೂಬಲ್‌ಗೆ ಭಾರೀ ಹೊಡೆತ ಬಿದ್ದಿತ್ತು. 

ಇದೀಗ ರಷ್ಯಾದ ಆಯ್ದ ಬ್ಯಾಂಕ್‌ಗಳನ್ನು ಸ್ವಿಫ್ಟ್‌ ವ್ಯವಸ್ಥೆಯಿಂದ ಹೊರಗಿಡುವ ಮತ್ತು ರಷ್ಯಾದ ಕೇಂದ್ರೀಯ ಬ್ಯಾಂಕ್‌ ಹೊಂದಿರುವ ವಿದೇಶಿ ಕರೆನ್ಸಿ ಮೀಸಲು ಬಳಕೆಗೆ ನಿರ್ಬಂಧ ವಿಧಿಸುವ ಅಮೆರಿಕ, ನ್ಯಾಟೋ ಸೇರಿ ಹಲವು ದೇಶಗಳ ನಿರ್ಧಾರದ ಪರಿಣಾಮ ರೂಬಲ್‌ ಬೆಲೆ ಮತ್ತೆ ಕುಸಿತ ಕಂಡಿದೆ.

click me!