*ಈಗ ತೆರವು ಕಾರ್ಯಾಚರಣೆ ಸುರಕ್ಷಿತವಲ್ಲ ಎಂದ ಸರ್ಕಾರ: ಚೀನಾ
*ನಿಮ್ಮ ರಕ್ಷಣೆ ನಿಮ್ಮ ಹೊಣೆ: ತನ್ನ ನಾಗರಿಕರಿಗೆ ಅಮೆರಿಕದ ಸಲಹೆ!
*ಉಕ್ರೇನ್‌ನಿಂದ ಪರಿಸ್ಥಿತಿ ನೋಡಿ ಹೊರಡುವ ವ್ಯವಸ್ಥೆ ಮಾಡಿಕೊಳ್ಳಿ
ಬೀಜಿಂಗ್ (ಮಾ. 01) : ರಷ್ಯಾದಿಂದ ದಾಳಿಗೆ ತುತ್ತಾಗಿರುವ ಉಕ್ರೇನ್‌ನಿಂದ ತಮ್ಮ ನಾಗರಿಕರ ರಕ್ಷಣೆಗೆ ಭಾರತ ಸೇರಿ ಹಲವು ದೇಶಗಳು ಮುಂದಾಗಿದ್ದರೆ, ಚೀನಾ ಮಾತ್ರ ಈ ವಿಷಯದಲ್ಲಿ ಅಸಡ್ಡೆ ತೋರಿದೆ ಎಂಬ ಟೀಕೆ ವ್ಯಕ್ತವಾಗಿದೆ. ತನ್ನ ನಾಗರಿಕರ ತೆರವು ಕಾರ್ಯಾಚರಣೆಗೆ ಈಗಿನ ಪರಿಸ್ಥಿತಿ ಸುರಕ್ಷಿವಲ್ಲ ಎಂದು ಚೀನಾ ಸರ್ಕಾರ ಕಾರಣ ನೀಡಿದೆ.ಈ ಕುರಿತು ಹೇಳಿಕೆ ನೀಡಿರುವ ಉಕ್ರೇನ್‌ನಲ್ಲಿನ ಚೀನಾ ರಾಯಭಾರಿ ಫ್ಯಾನ್ ಕ್ಸಿಯಾನ್‌ರಾಂಗ್, ‘ನಮ್ಮೆಲ್ಲಾ ನಾಗರಿಕರನ್ನು ಬಿಟ್ಟು ನಾನು ಉಕ್ರೇನ್‌ನಿಂದ ತೆರಳಿದ್ದೇನೆ ಎಂಬ ಸುದ್ದಿ ಸುಳ್ಳು. ನಾವು ಇಲ್ಲಿಂದ ತೆರವು ಕಾರ್ಯಾಚರಣೆ ಆರಂಭಿಸಲು, ಪರಿಸ್ಥಿತಿ ಸುಧಾರಣೆ ಆಗುವವರೆಗೂ ಕಾಯಬೇಕು. ಎಲ್ಲರಿಗೂ ಗರಿಷ್ಠ ಭದ್ರತೆ ಒದಗಿಸಲು ಸರ್ಕಾರ ಬದ್ಧವಾಗಿದೆ ಮತ್ತು ನಾವು ಎಲ್ಲರಿಗೂ ಸುರಕ್ಷತೆಯನ್ನು ಖಾತರಿಪಡಿಸುತ್ತೇವೆ. ನಾವು ಎಲ್ಲಾ ರೀತಿಯಲ್ಲಿ ಸೂಕ್ತ ವ್ಯವಸ್ಥೆ ಮಾಡುತ್ತೇವೆ’ ಎಂದು ಹೇಳಿದ್ದಾರೆ.
ಉಕ್ರೇನ್‌ನಲ್ಲಿ ತನ್ನ ಪ್ರಜೆಗಳ ತೆರವು ಮಾಡದ ಅಮೆರಿಕ!: ಭಾರತ ಸರ್ಕಾರ ತನ್ನ ನಾಗರಿಕರ ತೆರವು ಕಾರ್ಯಾಚರಣೆಗೆ ಸಾಕಷ್ಟುಕ್ರಮ ಕೈಗೊಂಡ ಹೊರತಾಗಿಯೂ ವಿಪಕ್ಷಗಳಿಂದ ಟೀಕೆಗೆ ತುತ್ತಾಗಿದ್ದರೆ, ಇತ್ತ ಅಮೆರಿಕ ಸರ್ಕಾರ ಉಕ್ರೇನ್‌ನಲ್ಲಿ ಸಿಕ್ಕಿಬಿದ್ದಿರುವ ತನ್ನ ನಾಗರಿಕರ ತೆರವು ಕಾರ್ಯಾಚರಣೆ ತನ್ನ ಹೊಣೆಯಲ್ಲ ಎಂದು ಪೂರ್ಣವಾಗಿ ಕೈತೊಳೆದುಕೊಂಡಿದೆ.
undefined
ಇದನ್ನೂ ಓದಿ: Russia Ukraine Crisis: ಸಂಧಾನ ಸಭೆ ಅಪೂರ್ಣ: ಎರಡು ದೇಶಗಳ ನಡುವೆ 6ನೇ ದಿನವೂ ಘೋರಯುದ್ಧ
ಈ ಕುರಿತು ಉಕ್ರೇನ್‌ನಲ್ಲಿರುವ ತನ್ನ ನಾಗರಿಕರಿಗೆ ಸಲಹೆ ನೀಡಿರುವ ಅಮೆರಿಕ ಸರ್ಕಾರ, ‘ಪರಿಸ್ಥಿತಿ ಸುರಕ್ಷಿತ ಎನ್ನಿಸಿದರೆ ಖಾಸಗಿ ಅವಕಾಶಗಳನ್ನು ಬಳಸಿಕೊಂಡು ಉಕ್ರೇನ್ ದೇಶದಿಂದ ಹೊರಬನ್ನಿ ಎಂದು ನಾವು ಅಮೆರಿಕದ ಎಲ್ಲಾ ಪ್ರಜೆಗಳಿಗೂ ಸಲಹೆ ನೀಡುತ್ತಿದ್ದೇವೆ. ಜೊತೆಗೆ ಹೀಗೆ ಹೊರಡುವ ಮುನ್ನ ಸುರಕ್ಷಿತ ಎನ್ನಿಸುವ ಮಾರ್ಗ ಮತ್ತು ಅಪಾಯದ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಳ್ಳಿ. ]
ಪೋಲೆಂಡ್ ಮತ್ತು ಮಾಲ್ಡೋವಾದ ಬಹುತೇಕ ಗಡಿಗಳಲ್ಲಿ ನಾಗರಿಕರ ಬಹುದೊಡ್ಡ ಸರದಿ ಇದೆ. ಪರಿಣಾಮ ನೀವು ಅಲ್ಲಿ ಸಾಕಷ್ಟುಸಮಯ ಕಾಯಬೇಕಾಗಿ ಬರಬಹುದು. ಹೀಗಾಗಿ ಹಂಗೇರಿ, ಸ್ಲೊವಾಕಿಯಾ, ರೊಮೇನಿಯಾ ಗಡಿಗಳ ಮೂಲಕ ತೆರವಾಗುವ ಯತ್ನ ಮಾಡಿ. ಆದರೆ ಅಲ್ಲಿಯೂ ಹಲವು ಗಂಟೆ ಕಾಯಬೇಕಾಗಿ ಬರಬಹುದು’ ಎಂಬ ಸಂದೇಶ ರವಾನಿಸಿದೆ.ಈ ಮೂಲಕ ಉಕ್ರೇನ್‌ನಲ್ಲಿ ಸಿಕ್ಕಿಬಿದ್ದ ನಿಮ್ಮ ರಕ್ಷಣೆ ನಿಮ್ಮ ಹೊಣೆ. ಪರಿಸ್ಥಿತಿ ನೋಡಿಕೊಂಡು ನಿಮ್ಮ ಅಪಾಯದಲ್ಲೇ ನೀವು ಅಲ್ಲಿಂದ ಜಾಗ ಖಾಲಿ ಮಾಡಿ ಎಂದು ಪರೋಕ್ಷವಾಗಿ ಸಂದೇಶ ರವಾನಿಸಿದೆ.
ಇದನ್ನೂ ಓದಿ: Russia Ukraine Crisis: ಉಕ್ರೇನ್ ಪರ ದೇಣಿಗೆ ಸಂಗ್ರಹ ಶುರು: ಬಹುಮಾನ ಮೊತ್ತ ದೇಶಕ್ಕೆ ಎಂದ ಟೆನಿಸ್ ತಾರೆ!
ಮತ್ತೆ 489 ಜನ ಉಕ್ರೇನ್‌ನಿಂದ ತವರಿಗೆ: ನವದೆಹಲಿ: ಉಕ್ರೇನ್‌ನಿಂದ ಭಾರತೀಯರ ಕರೆ ತರುವ ‘ಆಪರೇಷನ್ ಗಂಗಾ’ಕ್ಕೆ ಸೋಮವಾರ ಮತ್ತಷ್ಟುತೇಜಿ ಸಿಕ್ಕಿದ್ದು, ಸೋಮವಾರ ಒಟ್ಟು 489 ಜನರನ್ನು ತವರಿಗೆ ಕರೆ ತರಲಾಗಿದೆ. ಇದರೊಂದಿಗೆ ಕಳೆದ 3 ದಿನಗಳಲ್ಲಿ ಏರ್ ಇಂಡಿಯಾ ವಿಮಾನವು ಒಟ್ಟು 6 ವಿಮಾನಗಳ ಮೂಲಕ 1396 ಜನರನ್ನು ತವರಿಗೆ ಕರೆತಂದಂತೆ ಆಗಿದೆ.
ಸೋಮವಾರ ಬೆಳಗ್ಗೆ ಏರ್ ಇಂಡಿಯಾ ವಿಮಾನವು ರೊಮೇನಿಯಾದ ರಾಜಧಾನಿ ಬುಕಾರೆಸ್ಟ್‌ನಿಂದ 249 ಜನರನ್ನು ತಂದರೆ, ಸಂಜೆ ಆಗಮಿಸಿದ ವಿಮಾನದಲ್ಲಿ 240 ಜನರು ದೆಹಲಿಗೆ ಬಂದಿಳಿದರು.
ಈವರೆಗೆ 8000 ಜನರು ವಾಪಸ್: ಭಾರತವು ಯುದ್ಧ ಆರಂಭದ ನಂತರ 1396 ಜನರನ್ನು ಉಕ್ರೇನ್‌ನಿಂದ ಕರೆತಂದಿದೆ. ಇದಕ್ಕೂ ಮೊದಲು ಯುದ್ಧದ ಕಾರಣ ತೆರವು ಸಲಹಾವಳಿ ಹೊರಡಿಸಿದ ನಂತರ ಸುಮಾರು 6500 ಜನರು ಬಂದಿದ್ದರು. ಈ ಮೂಲಕ 8000 ಜನರು ಉಕ್ರೇನ್‌ನಿಂದ ಭಾರತಕ್ಕೆ ಮರಳಿದಂತಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.