
ರಿಯಾದ್/ತೆಲ್ ಅವೀವ್/ನವದೆಹಲಿ (ಸೆ.15): ಯೆಮೆನ್‌ನ ಕೆಂಪು ಸಮುದ್ರದ (Red Sea) ಕರಾವಳಿ ಪ್ರದೇಶದಲ್ಲಿ ಹೂತಿ ಬಂಡುಕೋರರು ನಡೆಸಿದ ದಿಢೀರ್ ಕ್ಷಿಪ್ರ ದಾಳಿಯು ಸೌದಿ ಅರೇಬಿಯಾವನ್ನು ತೀವ್ರ ಆತಂಕಕ್ಕೆ ತಳ್ಳಿದೆ. ಸೌದಿಯ ಆಪ್ತ ಹಾಗೂ 'ಮೆಕ್ಕಾ ಮೈತ್ರಿಕೂಟ'ದ (Mecca Alliance) ಪ್ರಮುಖ ಪಾಲುದಾರ ರಾಷ್ಟ್ರವಾದ ಪಾಕಿಸ್ತಾನವು ವಿದೇಶಿ ನೆಲದಲ್ಲಿ ತನ್ನ ಸೈನ್ಯವನ್ನು ಇಳಿಸಿ ಹೋರಾಟ ನಡೆಸಲು ಸ್ಪಷ್ಟವಾಗಿ ನಿರಾಕರಿಸಿದೆ. ಮತ್ತೊಂದೆಡೆ ಅಮೆರಿಕ ಮತ್ತು ಬ್ರಿಟನ್ ದೇಶಗಳು ಹೂತಿಗಳ ವಿರುದ್ಧ ನೇರ ಸೇನಾ ದಾಳಿ ನಡೆಸುವುದನ್ನು ತಳ್ಳಿಹಾಕಿವೆ. ಈ ಪರಿಣಾಮ, ತೀವ್ರ ಬಿಕ್ಕಟ್ಟಿಗೆ ಸಿಲುಕಿರುವ ರಿಯಾದ್, ತಾನು ಸ್ವತಂತ್ರ ದೇಶವೆಂದು ಅಧಿಕೃತವಾಗಿ ಗುರುತಿಸಿಯೇ ಇಲ್ಲದ 'ಇಸ್ರೇಲ್' ದೇಶದ ನೆರವು ಕೋರಲು ಮುಂದಾಗಿದೆ.
ಅರೇಬಿಯನ್ ಪರ್ಯಾಯ ದ್ವೀಪದ ತೈಲ ಸಮೃದ್ಧ ದೇಶವಾದ ಸೌದಿ ಅರೇಬಿಯಾ ಪ್ರಸ್ತುತ ಬೃಹತ್ ಭದ್ರತಾ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕಳೆದ ವಾರ ಯೆಮೆನ್‌ನ ಕೆಂಪು ಸಮುದ್ರದ ಕರಾವಳಿ ತೀರ ಹಾಗೂ ಅತ್ಯಂತ ಆಯಕಟ್ಟಿನ 'ಬಾಬ್ ಎಲ್-ಮಂಡೇಬ್' (Bab el-Mandeb) ಜಲಸಂಧಿಯ ಬಹುತೇಕ ಭಾಗವನ್ನು ಅನ್ಸಾರ್ ಅಲ್ಲಾಹ್ (ಹೂತಿ) ಬಂಡುಕೋರರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ತೆಲ್ ಅವೀವ್ ಆಧಾರಿತ 'ದಿ ಜೆರುಸಲೇಮ್ ಪೋಸ್ಟ್' (The Jerusalem Post) ವರದಿಯ ಪ್ರಕಾರ, ಹೂತಿ ಮಿಲಿಟರಿ ಬೆದರಿಕೆಯ ವಿರುದ್ಧ ಸೌದಿ ಅರೇಬಿಯಾವನ್ನು ರಕ್ಷಿಸಿಕೊಳ್ಳಲು ಮತ್ತು ಅಗತ್ಯ ಗುಪ್ತಚರ ನೆರವು (Intelligence assistance) ಪಡೆಯಲು ಅಮೆರಿಕದ ಸೆಂಟ್ರಲ್ ಕಮಾಂಡ್ (US Centcom) ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಮತ್ತು ಸೌದಿ ಅರೇಬಿಯಾ ಪ್ರತಿನಿಧಿಗಳು ಉನ್ನತ ಮಟ್ಟದ ಮಾತುಕತೆ ನಡೆಸಿವೆ. ಇನ್ನೊಂದೆಡೆ 'ಇಸ್ರೇಲ್ ಹಾಯೋಮ್' (Israel Hayom) ಪತ್ರಿಕೆಯು ಪ್ರತ್ಯೇಕ ವರದಿ ಪ್ರಕಟಿಸಿದ್ದು, ಸೌದಿ ಅರೇಬಿಯಾದ ಪ್ರಧಾನಿಯೂ ಆಗಿರುವ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ (MBS), ಹೂತಿಗಳ ಭಾರಿ ದಾಳಿಯ ವಿರುದ್ಧ ನೆರವು ನೀಡುವಂತೆ ಇತರ ಗಲ್ಫ್ ರಾಷ್ಟ್ರಗಳು ಮತ್ತು ಈಜಿಪ್ಟ್ ದೇಶಗಳಿಗೂ ಮನವಿ ಮಾಡಿದ್ದಾರೆ ಎಂದು ತಿಳಿಸಿದೆ.
ಯುಎಸ್ ಸೆಂಟಕಾಮ್ ಮೂಲಕ ಇಸ್ರೇಲ್ ಅನ್ನು ಪರೋಕ್ಷವಾಗಿ ಸಂಪರ್ಕಿಸಿರುವ ಮೊಹಮ್ಮದ್ ಬಿನ್ ಸಲ್ಮಾನ್, ಬಾಬ್ ಎಲ್-ಮಂಡೇಬ್ ಜಲಸಂಧಿಗೆ ಎದುರಾಗಿರುವ ಭದ್ರತಾ ಬೆದರಿಕೆಗಳಿಗೆ ಸಂಬಂಧಿಸಿದಂತೆ ತಕ್ಷಣದ ಇಂಟೆಲಿಜೆನ್ಸ್ ಮಾಹಿತಿ ಒದಗಿಸುವಂತೆ ವಿನಂತಿಸಿದ್ದಾರೆ. ಸೌದಿ ಅರೇಬಿಯಾವು ಇಸ್ರೇಲ್ ಅನ್ನು ಸ್ವತಂತ್ರ ರಾಷ್ಟ್ರವೆಂದು ಗುರುತಿಸಿಲ್ಲ ಹಾಗೂ ಜೆರುಸಲೇಮ್‌ನೊಂದಿಗೆ ಯಾವುದೇ ರಾಜತಾಂತ್ರಿಕ ಬಾಂಧವ್ಯವನ್ನು ಹೊಂದಿಲ್ಲ. ಹೀಗಿದ್ದರೂ, ಇಸ್ರೇಲ್ ಬಳಿ ಪರೋಕ್ಷವಾಗಿಯಾದರೂ ನೆರವು ಕೋರಿರುವುದು ಯೆಮೆನ್ ಗಡಿಯಲ್ಲಿ ಸೌದಿ ಎದುರಿಸುತ್ತಿರುವ ಬಿಕ್ಕಟ್ಟಿನ ತೀವ್ರತೆಗೆ ಕನ್ನಡಿ ಹಿಡಿದಿದೆ.
ಸೌದಿ ಅರೇಬಿಯಾದ ಈ ಮನವಿಗಳಿಗೆ ಪ್ರಮುಖ ಮಿತ್ರರಾಷ್ಟ್ರಗಳಿಂದ ಸೂಕ್ತ ಬೆಂಬಲ ಸಿಕ್ಕಿಲ್ಲ. ಅಮೆರಿಕ ಮತ್ತು ಬ್ರಿಟನ್ ದೇಶಗಳು ಯೆಮೆನ್‌ನ ಅನ್ಸಾರ್ ಅಲ್ಲಾಹ್ ಬಂಡುಕೋರರ ವಿರುದ್ಧ ನೇರ ಮಿಲಿಟರಿ ದಾಳಿ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಕೇವಲ ಗುಪ್ತಚರ ನೆರವು ಮತ್ತು ಮಿಲಿಟರಿ ಸಲಹೆಗಾರರನ್ನು ಕಳುಹಿಸುವುದಾಗಿ ಹೇಳಿವೆ.
ಎಲ್ಲಕ್ಕಿಂತ ಮುಖ್ಯವಾಗಿ, ಸೌದಿ ಅರೇಬಿಯಾ ಮತ್ತು ಟರ್ಕಿ ದೇಶಗಳೊಂದಿಗೆ 'ಮೆಕ್ಕಾ ರಕ್ಷಣಾ ಮೈತ್ರಿಕೂಟ'ದ ಭಾಗವಾಗಿರುವ ಪಾಕಿಸ್ತಾನವು ಯೆಮೆನ್‌ನಲ್ಲಿ ಹೂತಿಗಳ ವಿರುದ್ಧ ಹೋರಾಡಲು ತನ್ನ ಸೈನಿಕರನ್ನಾಗಲಿ ಅಥವಾ ಯುದ್ಧೋಪಕರಣಗಳನ್ನಾಗಲಿ ನಿಯೋಜಿಸಲು ಸಾಧ್ಯವೇ ಇಲ್ಲ ಎಂದು \ ಹೇಳಿದೆ. ಸೌದಿ ಅರೇಬಿಯಾದ ಸ್ವಂತ ಭೂಪ್ರದೇಶಕ್ಕೆ ಬೆದರಿಕೆ ಬಂದರೆ ಮಾತ್ರ ತನ್ನ ಪಡೆಗಳನ್ನು ರಕ್ಷಣೆಗೆ ಕಳುಹಿಸುವುದಾಗಿ ಹೇಳಿರುವ ಇಸ್ಲಾಮಾಬಾದ್, ವಿದೇಶಿ ನೆಲದಲ್ಲಿ ನಡೆಯುವ ಯಾವುದೇ ಯುದ್ಧ ಕಾರ್ಯಾಚರಣೆಯಲ್ಲಿ ಭಾಗವಹಿಸುವುದಿಲ್ಲ ಎಂದು 'ರೆಡ್ ಲೈನ್' ಎಳೆದಿದೆ.
ಕಳೆದ ಕೆಲವು ವಾರಗಳಿಂದ ಸೌದಿ ಅರೇಬಿಯಾದ ಇಂಧನ ಮೂಲಸೌಕರ್ಯಗಳ ಮೇಲೆ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸುತ್ತಿದ್ದ ಅನ್ಸಾರ್ ಅಲ್ಲಾಹ್ (ಹೂತಿ) ಬಂಡುಕೋರರು, ಕಳೆದ ವಾರ ಯೆಮೆನ್‌ನಲ್ಲಿ ದಿಢೀರ್ ಭಾರಿ ಪ್ರಮಾಣದ ಸೇನಾ ಕಾರ್ಯಾಚರಣೆ ಆರಂಭಿಸಿದರು. ಈ ಮಿಂಚಿನ ದಾಳಿಗೆ ಸೌದಿ ಬೆಂಬಲಿತ 'ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್'ನ ಎಲ್ಲಾ ಪ್ರತಿರೋಧಗಳು ಕೊಚ್ಚಿಹೋದವು.
ಈ ದಾಳಿಯ ಮೂಲಕ ಕೆಂಪು ಸಮುದ್ರದ ಕರಾವಳಿ ಮತ್ತು ಬಾಬ್ ಎಲ್-ಮಂಡೇಬ್ ಜಲಸಂಧಿಯ ದ್ವೀಪಗಳನ್ನು ಹೂತಿಗಳು ಸಂಪೂರ್ಣವಾಗಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಜುಲೈ ತಿಂಗಳಿನಿಂದ ಸೌದಿಯ ಹಡಗುಗಳ ಸಂಚಾರದ ಮೇಲಿದ್ದ ದಿಗ್ಬಂಧನ ಮುಂದುವರಿಯಲಿದೆ ಹಾಗೂ ಅಮೆರಿಕ ಸೇರಿದಂತೆ ಇತರ ದೇಶಗಳ ಹಡಗುಗಳ ಉಚಿತ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ಹೂತಿ ನಾಯಕರು ಘೋಷಿಸಿದ್ದಾರೆ. ಹೋರ್ಮುಜ್ ಜಲಸಂಧಿಗೆ ಇರಾನ್ ದಿಗ್ಬಂಧನ ಹೇರಿದರೆ ಪರ್ಯಾಯ ಮಾರ್ಗವಾಗಿದ್ದ 'ಗೇಟ್ ಆಫ್ ಟೀರ್ಸ್' (ಬಾಬ್ ಎಲ್-ಮಂಡೇಬ್) ಈಗ ಬಂದ್ ಆಗಿರುವುದು ಮತ್ತು ಸೌದಿಯ ಬೃಹತ್ ತೈಲ ಪೈಪ್‌ಲೈನ್ ಜಾಲದ ಮೇಲಿನ ದಾಳಿಗಳಿಂದಾಗಿ, ಸೌದಿ ಅರೇಬಿಯಾದ ಕಚ್ಚಾ ತೈಲ ರಫ್ತು ಸಾಮರ್ಥ್ಯ ಸಂಪೂರ್ಣವಾಗಿ ಕುಸಿಯುವ ಅಥವಾ ಸ್ತಬ್ಧಗೊಳ್ಳುವ ಆತಂಕ ಎದುರಾಗಿದೆ.
ಇಸ್ರೇಲ್ ಕೂಡ ಹಿಂದೆ ಇಂತಹದ್ದೇ ಬೆದರಿಕೆಯನ್ನು ಎದುರಿಸಿತ್ತು. 2023 ರ ಕೊನೆಯಲ್ಲಿ ಗಾಜಾ ಯುದ್ಧ ಪ್ರಾರಂಭವಾದ ನಂತರ, ಹೂತಿಗಳು ಕೆಂಪು ಸಮುದ್ರದಲ್ಲಿ ಇಸ್ರೇಲ್ ಸಂಬಂಧಿತ ಹಡಗುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು.
ಆದರೆ, ಸೌದಿಗೆ ಇಸ್ರೇಲ್ ನೀಡಬಹುದಾದ ಯಾವುದೇ ನೆರವು ಕೇವಲ ಗುಪ್ತಚರ ಮಾಹಿತಿ ವಿನಿಮಯಕ್ಕೆ (Intelligence sharing) ಮಾತ್ರ ಸೀಮಿತವಾಗಿರಲಿದೆ ಎಂದು ವರದಿಯಾಗಿದೆ. ಹೂತಿಗಳಿಂದ ಇಸ್ರೇಲಿ ನಗರಗಳ ಮೇಲೆ ಪಟ್ಟು ಬಿಡದೆ ನಡೆಯಬಹುದಾದ ರಾಕೆಟ್ ದಾಳಿಗಳು ಮತ್ತು ಕೆಂಪು ಸಮುದ್ರದ ದಿಗ್ಬಂಧನದಿಂದ ಎದುರಾಗಬಹುದಾದ ಆರ್ಥಿಕ ಹೊಡೆತದ ಬಗ್ಗೆ ಇಸ್ರೇಲ್ ಕಳವಳ ಹೊಂದಿದೆ ಎಂದು 'ಹಾಯೋಮ್' ಪತ್ರಿಕೆ ಉಲ್ಲೇಖಿಸಿದೆ.
ಇನ್ನೊಂದೆಡೆ, 'ಹಾಆರೆಟ್ಜ್' (Haaretz) ವರದಿಯ ಪ್ರಕಾರ, ಹೂತಿ ಬಂಡುಕೋರರ ವಿರುದ್ಧ ಇಸ್ರೇಲ್ ಏಕಾಂಗಿಯಾಗಿ ಯಾವುದೇ ಮಿಲಿಟರಿ ಕ್ರಮ ಕೈಗೊಳ್ಳುವ ಬದಲು, "ವ್ಯಾಪಕ ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ಒಕ್ಕೂಟದ" ಭಾಗವಾಗಿ ಮಾತ್ರ ಪ್ರತಿಕ್ರಿಯಿಸಬೇಕು ಎಂದು ಇಸ್ರೇಲ್ ರಕ್ಷಣಾ ಪಡೆಗಳ (IDF) ಹಿರಿಯ ಅಧಿಕಾರಿಗಳು ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ