
ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡಗಳು ಕವಿಯುತ್ತಿವೆ. ಇರಾನ್ ವಿರುದ್ಧ ಕೇವಲ ವೈಮಾನಿಕ ದಾಳಿ ಮಾತ್ರವಲ್ಲದೆ, ಅಮೆರಿಕ ಈಗ ಬೃಹತ್ ಭೂಯುದ್ಧಕ್ಕೆ (Ground War) ಸಜ್ಜಾಗುತ್ತಿದೆಯೇ ಎಂಬ ಅನುಮಾನ ಮೂಡಿದೆ. ಇಂತಹ ಅನುಮಾನಗಳಿಗೆ ಪುಷ್ಟಿ ನೀಡುವಂತೆ, ಅಮೆರಿಕದ ಸೇನಾ ನೆಲೆಗಳ ಬಳಿಯ ಬಾರ್ ಮತ್ತು ಸ್ಟ್ರಿಪ್ ಕ್ಲಬ್‌ಗಳಲ್ಲಿ ಸೈನಿಕರು ಯುದ್ಧದ ರಹಸ್ಯಗಳನ್ನು ಬಾಯಿಬಿಡುತ್ತಿರುವುದು ಈಗ ಜಾಗತಿಕವಾಗಿ ಚರ್ಚೆಗೆ ಕಾರಣವಾಗಿದೆ.
ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಮೂಲದ ಬಾರ್ ಡ್ಯಾನ್ಸರ್ ಚಾರ್ಮ್ ಡೇಝ್ (Charm Daze) ಈ ಆಘಾತಕಾರಿ ವಿಷಯವನ್ನು ಜಗತ್ತಿಗೆ ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿರುವ ಚಾರ್ಮ್, ತಮ್ಮ ಟಿಕ್‌ಟಾಕ್ ವಿಡಿಯೋದಲ್ಲಿ ಅಮೆರಿಕದ ಯುವ ಸೈನಿಕರ ಮಾನಸಿಕ ಸ್ಥಿತಿ ಮತ್ತು ಅವರ ಮುಂದಿನ ನಿಯೋಜನೆಯ ಬಗ್ಗೆ ಗಂಭೀರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. 'ನಮ್ಮ ಕ್ಲಬ್‌ಗೆ ಬರುತ್ತಿರುವ ಯುವ ಸೈನಿಕರು ತೀವ್ರ ಖಿನ್ನತೆಯಲ್ಲಿದ್ದಾರೆ. ಮುಂದಿನ ವಾರ ನಮ್ಮನ್ನು ಇರಾನ್ ವಿರುದ್ಧದ ಯುದ್ಧಕ್ಕೆ ಕಳುಹಿಸಲಾಗುತ್ತಿದೆ ಎಂದು ಅವರು ಅಳಲು ತೋಡಿಕೊಳ್ಳುತ್ತಿದ್ದಾರೆ' ಎಂದು ಚಾರ್ಮ್ ಹೇಳಿದ್ದಾರೆ.
ಸಾಮಾನ್ಯವಾಗಿ ಅಮೆರಿಕ ಯಾವುದೇ ದೇಶದ ಮೇಲೆ ದೊಡ್ಡ ಮಟ್ಟದ ದಾಳಿ ಮಾಡುವ ಮುನ್ನ, ಪೆಂಟಗನ್ ಸುತ್ತಮುತ್ತಲಿನ ಪಿಜ್ಜಾ ಹಟ್‌ಗಳಲ್ಲಿ ಆರ್ಡರ್‌ಗಳ ಸಂಖ್ಯೆ ದಿಢೀರ್ ಏರಿಕೆಯಾಗುತ್ತದೆ ಎಂಬುದು ಜಗತ್ತಿಗೆ ತಿಳಿದಿರುವ 'ಪಿಜ್ಜಾ ಮೀಟರ್' ರಹಸ್ಯ. ಆದರೆ ಈಗ ಸೈನಿಕರೇ ತಮ್ಮ ಕೊನೆಯ ದಿನಗಳನ್ನು ಕಳೆಯಲು ಎಂಬಂತೆ ಬಾರ್ ಮತ್ತು ಕ್ಲಬ್‌ಗಳಲ್ಲಿ ಹಣವನ್ನು ನೀರಿನಂತೆ ಖರ್ಚು ಮಾಡುತ್ತಿರುವುದು ಯುದ್ಧದ ಮುನ್ಸೂಚನೆ ಎನ್ನಲಾಗುತ್ತಿದೆ. ಚಾರ್ಮ್ ಕೆಲಸ ಮಾಡುವ ಕ್ಲಬ್ ಸ್ಯಾನ್ ಡಿಯಾಗೋ ನೇವಲ್ ಬೇಸ್ ಮತ್ತು ಕ್ಯಾಂಪ್ ಪೆಂಡಲ್‌ಟನ್‌ನಂತಹ ಪ್ರಮುಖ ಸೇನಾ ಕೇಂದ್ರಗಳ ಸಮೀಪದಲ್ಲಿದೆ.
ವಿಡಿಯೋದಲ್ಲಿ ಸೈನಿಕರ ಬಗ್ಗೆ ಭಾವುಕರಾಗಿ ಮಾತನಾಡಿರುವ ಚಾರ್ಮ್, 'ಅವರೆಲ್ಲಾ ತುಂಬಾ ಸಣ್ಣ ವಯಸ್ಸಿನವರು. ನೋಡಲು ಹಸುಗೂಸುಗಳಂತೆ ಕಾಣುತ್ತಾರೆ. ಅವರು ತಮ್ಮ ಬಳಿಯಿರುವ ಹಣವನ್ನೆಲ್ಲಾ ಕ್ಲಬ್‌ನಲ್ಲಿ ಖರ್ಚು ಮಾಡಿ, ತಮ್ಮನ್ನು ಯುದ್ಧಕ್ಕೆ ಕಳುಹಿಸುತ್ತಿರುವ ಬಗ್ಗೆ ಹೇಳುತ್ತಿದ್ದಾರೆ. ಅವರನ್ನು ನೋಡಿ 'ಬೈ' ಹೇಳುವುದು ನನಗೆ ನೋವು ನೀಡುತ್ತಿದೆ' ಎಂದು ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ಅಮೆರಿಕದ ಮಿಲಿಟರಿ ರಹಸ್ಯಗಳು ಇಷ್ಟು ಸುಲಭವಾಗಿ ಕ್ಲಬ್‌ಗಳಲ್ಲಿ ಸೋರಿಕೆಯಾಗುತ್ತಿರುವುದು ಭದ್ರತಾ ಸಂಸ್ಥೆಗಳ ಆತಂಕಕ್ಕೆ ಕಾರಣವಾಗಿದೆ.
ವರದಿಗಳ ಪ್ರಕಾರ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮರೈನ್ ಎಕ್ಸ್‌ಪೆಡಿಷನರಿ ಯೂನಿಟ್‌ಗಳು ಮತ್ತು 82ನೇ ಏರ್‌ಬೋರ್ನ್‌ನ ಸಾವಿರಾರು ಸೈನಿಕರನ್ನು ಇರಾನ್‌ಗೆ ಕಳುಹಿಸಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಸುಮಾರು 3,500ಕ್ಕೂ ಹೆಚ್ಚು ಸೈನಿಕರು ಪಶ್ಚಿಮ ಏಷ್ಯಾ ತಲುಪಿದ್ದಾರೆ ಎನ್ನಲಾಗಿದೆ. ಆದರೆ, ಅಮೆರಿಕದ ಒಳಗೆ ಈ ಯುದ್ಧಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಇತ್ತೀಚಿನ ಸಮೀಕ್ಷೆಯೊಂದರಲ್ಲಿ ಶೇ. 60ಕ್ಕೂ ಹೆಚ್ಚು ಅಮೆರಿಕನ್ನರು ಇರಾನ್ ವಿರುದ್ಧದ ಯುದ್ಧವನ್ನು ಬಯಸುತ್ತಿಲ್ಲ ಎಂದು ತಿಳಿದುಬಂದಿದೆ. ಈ ನಡುವೆ ಸೈನಿಕರ ಈ ರಹಸ್ಯ ಸಂಭಾಷಣೆಗಳು ಯುದ್ಧದ ಭೀತಿಯನ್ನು ಮತ್ತಷ್ಟು ಹೆಚ್ಚಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ