
ಮಾಸ್ಕೋ(ಮಾ. 18) ಉಕ್ರೇನ್ (ukraine) ವಶಕ್ಕೆ ಪಡೆಯಲು ಏನು ಬೇಕಾದರೂ ಮಾಡಲು ಸಿದ್ಧ ಎಂಬ ಹಟಕ್ಕೆ ಬಿದ್ದಿರುವ ರಷ್ಯಾ (Russia) ಸೇನೆ, ಮರಿಯುಪೋಲ್ ನಗರದಲ್ಲಿ ಸಾವಿರಾರು ಮಕ್ಕಳು, ಗರ್ಭಿಣಿಯರು, ಮಹಿಳೆಯರು ಆಶ್ರಯ ಪಡೆದುಕೊಂಡಿದ್ದ ಬಂಕರ್ ಮೇಲಿನ ಥಿಯೇಟರ್ ಮತ್ತು ಈಜುಕೊಳದ ಮೇಲೆ ಗುರುವಾರ ವಿಧ್ವಂಸಕ ಬಾಂಬ್ (Bomb) ದಾಳಿ ನಡೆದಿದೆ. ಈ ದಾಳಿಯಲ್ಲಿ ಎರಡೂ ಕಟ್ಟಡಗಳು ಧ್ವಂಸಗೊಂಡಿದ್ದು, ಕಟ್ಟಡಗಳ ಕೆಳಗೆ ಬಂಕರ್‌ನಲ್ಲಿ ಆಶ್ರಯ ಪಡೆದುಕೊಂಡಿದ್ದ ಸಾವಿರಾರು ಜನರ ಪರಿಸ್ಥಿತಿ ಏನಾಗಿದೆ ಎಂಬುದು ಅರಿವಿಗೆ ಬಂದಿಲ್ಲ. ಈ ನಡುವೆ, ಪೂರ್ವ ಉಕ್ರೇನ್ ನಗರವೊಂದರ ಮೇಲೆ ರಷ್ಯಾ ನಡೆಸಿದ ದಾಳಿಗೆ 21 ಜನ ಬಲಿಯಾಗಿದ್ದಾರೆ.
ಮಕ್ಕಳ ಕಟ್ಟಡಕ್ಕೆ ದಾಳಿ: ಮಕ್ಕಳು ಮತ್ತು ಗರ್ಭಿಣಿಯರು ಇರುವ ಕಟ್ಟಡದ ಮೇಲೆ ರಷ್ಯಾ ದಾಳಿ ನಡೆಸದೇ ಇರಲಿ ಎಂದು ಮುನ್ನೆಚ್ಚರಿಕಾ ಕ್ರಮವಾಗಿ, ಎರಡೂ ಕಟ್ಟಡಗಳ ಮೇಲೆ ರಷ್ಯಾ ಭಾಷೆಯಲ್ಲಿ ದೊಡ್ಡದಾಗಿ ಚಿಲ್ಡ್ರನ್ (ಮಕ್ಕಳು) ಎಂದು ಬರೆಯಲಾಗಿತ್ತಾದರೂ, ಅವುಗಳನ್ನೂ ಬಿಡದೇ ರಷ್ಯಾ ಸೇನೆ ವಿಕೃತ ದಾಳಿ ನಡೆಸಿದೆ. ದಾಳಿಯಲ್ಲಿ 3 ಅಂತಸ್ತಿನ ಥಿಯೇಟರ್ ಮತ್ತು ಈಜುಕೊಳದ ಬಂಕರ್‌ಗೆ ಪ್ರವೇಶಿಸುವ ದ್ವಾರ ಧ್ವಂಸಗೊಂಡು ಕುಸಿದುಬಿದ್ದಿವೆ. ಹೀಗಾಗಿ ಒಳಗಿದ್ದವರು ಹೊರಗೆ ಬರಲಾಗದ ಸ್ಥಿತಿ ನಿರ್ಮಾಣವಾಗಿದೆ. ಈ ದಾಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಕಳೆದ ಮೂರು ವಾರಗಳಿಂದ ಮರಿಯುಪೋಲ್ ನಗರದ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 2300 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಆಡಳಿತ ಹೇಳಿದೆ.
Russia-Ukraine War: ಉಕ್ರೇನ್ ಆಸ್ಪತ್ರೆ ವಶಕ್ಕೆ ಪಡೆದು 400 ಮಂದಿಯನ್ನು ಒತ್ತೆಯಾಳಾಗಿರಿಸಿಕೊಂಡ ರಷ್ಯಾ!
ಈ ದಾಳಿಯ ಕುರಿತು ಪ್ರತಿಕ್ರಿಯಿಸಿರುವ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್‌ಸ್ಕಿ, ನಮ್ಮ ಜನರ ಮೇಲೆ ರಷ್ಯಾ ಎಸಗುತ್ತಿರುವ ದೌರ್ಜನ್ಯ ನೋಡಿ ನನ್ನ ಹೃದಯ ಛಿದ್ರವಾಗಿದೆ ಎಂದಿದ್ದಾರೆ. ಆದರೆ ರಷ್ಯಾದ ರಕ್ಷಣಾ ಸಚಿವಾಲಯ ಮಾತ್ರ ಮರಿಯುಪೋಲ್‌ನಲ್ಲಿ ಯಾವುದೇ ಥಿಯೇಟರ ಮೇಲೆ ತಾನು ದಾಳಿಯೇ ನಡೆಸಿಲ್ಲ ಎಂದು ಹೇಳಿದೆ.
ಈ ನಡುವೆ ರಷ್ಯಾ ನಡೆಸಿದ ದಾಳಿಯಲ್ಲಿ ಖಾರ್ಕೀವ್ ಸಮೀಪದ ಮೆರೆಫಾ ನಗರದಲ್ಲಿ ಶಾಲೆ ಮತ್ತು ಸಮುದಾಯ ಭವನ ಧ್ವಂಸವಾಗಿದೆ. ಮತ್ತೊಂದೆಡೆ ರಾಜಧಾನಿ ಕೀವ್‌ನ ಅಪಾರ್ಟ್‌ಮೆಂಟ್ ಮೇಲೆ ನಡೆದ ರಾಕೆಟ್ ದಾಳಿಯ ಪರಿಣಾಮ ಅದಕ್ಕೆ ಬೆಂಕಿ ಹತ್ತಿಕೊಂಡಿದೆ. ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿ, ಮೂವರು ಗಾಯಗೊಂಡಿದ್ದಾರೆ. ಇನ್ನು ಕೀವ್ ಮತ್ತು ಅದರ ಸುತ್ತಮುತ್ತಲ ನಗರಗಳ ಮೇಲೂ ಗುರುವಾರ ದಾಳಿ ಮುಂದುವರೆದಿದೆ. ಚೆರ್ನಿಹೈವ್ ನಗರದಲ್ಲಿ ಬ್ರೆಡ್ ಖರೀದಿಗೆ ನಿಂತಿದ್ದ ಜನರ ಮೇಲೆ ನಡೆದ ದಾಳಿಯಲ್ಲಿ 10 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ಆರೋಪಿಸಿದೆ.
ಪುಟಿನ್ ಆಕ್ರೋಶ: ಈ ನಡುವೆ ಸ್ವತಃ ತಮ್ಮ ದೇಶದಲ್ಲೇ ಉಕ್ರೇನ್ ದಾಳಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ‘ನಿಜವಾದ ದೇಶಪ್ರೇಮಿಗಳು ಮತ್ತು ದೇಶದ್ರೋಹಿಗಳನ್ನು ನಾವು ಸ್ಪಷ್ಟವಾಗಿ ಗುರುತಿಸಬಲ್ಲೆವು. ಇಂಥ ದೇಶದ್ರೋಹಿಗಳನ್ನು ಆಕಸ್ಮಿಕವಾಗಿ ನಮ್ಮ ಬಾಯಿಯೊಳಗೆ ತೂರಿಕೊಂಡ ಹುಳಗಳನ್ನು ಉಗಿದುಬಿಡುತ್ತೇವೆ. ಸಮಾಜದಲ್ಲಿ ಇಂಥ ನೈಸರ್ಗಿಕ ಮತ್ತು ಅಗತ್ಯವಾದ ಆತ್ಮಶುದ್ಧಿಯಿಂದ ನಮ್ಮ ಸಮಾಜ ಇನ್ನಷ್ಟುಬಲಿಷ್ಠವಾಗುತ್ತದೆ. ಪಾಶ್ಚಿಮಾತ್ಯ ದೇಶಗಳು ಇಂಥವರನ್ನು ಬಳಸಿಕೊಂಡು ದೇಶದಲ್ಲಿ ಅಸ್ಥಿರತೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಅವರ ಒಂದೇ ಗುರಿ ರಷ್ಯಾ ನಿರ್ನಾಮ’ ಎಂದು ಕಿಡಿಕಾರಿದ್ದಾರೆ.
ಯುದ್ಧ 22 ನೇ ದಿನ ಮುಗಿಸಿದೆ.ಆಹಾರಕ್ಕಾಗಿ ಅಂಗಡಿ ಮುಂದೆ ನಿಂತವರ ಮೇಲೆ ರಷ್ಯಾ ಶೆಲ್ ದಾಳಿ ಮಾಡಿದೆ. ಎರಡು ಕಡೆ ಸಾವು ನೋವು ಸಂಭವಿಸುತ್ತಲೇ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ