Russia Ukraine Crisis: ಯುದ್ಧಪೀಡಿತ ದೇಶದಿಂದ ಒಂದೇ ದಿನ 688 ಭಾರತೀಯರ ರಕ್ಷಣೆ

By Kannadaprabha News  |  First Published Feb 28, 2022, 4:44 AM IST

*‘ಆಪರೇಷನ್‌ ಗಂಗಾ’ ಅಡಿ 3 ವಿಮಾನಗಳು ಭಾರತಕ್ಕೆ
*ಶೀಘ್ರ ಇನ್ನೂ 13000 ಭಾರತೀಯರ ರಕ್ಷಣೆ: ಸಿಂಧಿಯಾ


ನವದೆಹಲಿ (ಫೆ. 28): ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ‘ಆಪರೇಷನ್‌ ಗಂಗಾ’ (Operation Ganga) ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸಿರುವ ಕೇಂದ್ರ ಸರ್ಕಾರ, ಭಾನುವಾರ ಒಂದೇ ದಿನ ಮೂರು ವಿಶೇಷ ವಿಮಾನಗಳಲ್ಲಿ 688 ಮಂದಿಯನ್ನು ತವರಿಗೆ ಕರೆತಂದಿದೆ. ಇದರೊಂದಿಗೆ ಎರಡು ದಿನಗಳಲ್ಲಿ ಉಕ್ರೇನ್‌ನಿಂದ ಭಾರತಕ್ಕೆ ಮರಳಿದವರ ಸಂಖ್ಯೆ 907ಕ್ಕೇರಿಕೆಯಾಗಿದೆ. ಉಕ್ರೇನ್‌ನಲ್ಲಿ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆ ದೇಶದ ಪಕ್ಕದಲ್ಲಿರುವ ರೊಮೇನಿಯಾ ಹಾಗೂ ಹಂಗೇರಿಗೆ ಭಾರತೀಯರನ್ನು ಸ್ಥಳಾಂತರಿಸಿ ಅಲ್ಲಿಂದ ಏರ್‌ಲಿಫ್ಟ್‌ ಮಾಡಲಾಗುತ್ತಿದೆ. ಅದರಂತೆ, ಶನಿವಾರ ಸಂಜೆ 219 ಮಂದಿಯನ್ನು ಹೊತ್ತ ಏರ್‌ ಇಂಡಿಯಾ ವಿಮಾನ ರೊಮೇನಿಯಾದ ರಾಜಧಾನಿ ಬುಕರೆಸ್ಟ್‌ನಿಂದ ಮುಂಬೈಗೆ ಬಂದಿಳಿದಿತ್ತು.

250 ಮಂದಿ ಇದ್ದ ಎರಡನೇ ವಿಮಾನ ಬುಕರೆಸ್ಟ್‌ನಿಂದ ನವದೆಹಲಿ ವಿಮಾನ ನಿಲ್ದಾಣಕ್ಕೆ ಭಾನುವಾರ ನಸುಕಿನ 2.45ಕ್ಕೆ ಆಗಮಿಸಿತು. ಮೂರನೇ ವಿಮಾನ ಹಂಗೇರಿ ರಾಜಧಾನಿ ಬುಡಾಪೆಸ್ಟ್‌ನಿಂದ 240 ಭಾರತೀಯರನ್ನು ಹೊತ್ತು ಭಾನುವಾರ ಬೆಳಗ್ಗೆ 9.20ಕ್ಕೆ ದೆಹಲಿಯಲ್ಲಿ ಲ್ಯಾಂಡ್‌ ಆಯಿತು. 198 ಭಾರತೀಯರಿದ್ದ 4ನೇ ವಿಮಾನ ಬುಕರೆಸ್ಟ್‌ನಿಂದ ಭಾನುವಾರ ಸಂಜೆ ದೆಹಲಿಗೆ ಆಗಮಿಸಿತು.

Tap to resize

Latest Videos

ಇದನ್ನೂ ಓದಿ: Russia Ukraine Crisis: ಉಕ್ರೇನ್‌ನ 2ನೇ ದೊಡ್ಡ ನಗರಕ್ಕೆ ರಷ್ಯಾ ಸೇನೆ ಲಗ್ಗೆ

ಈ ನಡುವೆ ಭಾನುವಾರ ನಸುಕಿನ ಜಾವ ಆಗಮಿಸಿದ ಭಾರತೀಯರಿಗೆ ವಿಮಾನ ನಿಲ್ದಾಣಕ್ಕೇ ಹೋಗಿ ಗುಲಾಬಿ ನೀಡಿ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸ್ವಾಗತ ಕೋರಿದರು. ಇನ್ನೂ ಸುಮಾರು 13 ಸಾವಿರ ಭಾರತೀಯರು ಉಕ್ರೇನ್‌ನಲ್ಲಿ ಉಳಿದಿದ್ದು, ಅವರನ್ನು ಕರೆತರುವ ಯತ್ನಗಳು ಮುಂದುವರಿಯಲಿವೆ ಎಂದು ಹೇಳಿದರು.

ಇಂಡಿಗೋದಿಂದ 2 ವಿಮಾನ: ಈ ನಡುವೆ ಹಂಗೇರಿಯ ಬುಡಾಪೆಸ್ಟ್‌ಗೆ 2 ಇಂಡಿಯೋ ವಿಮಾನಗಳು ಸೋಮವಾರ ಹಾಗೂ ಮಂಗಳವಾರ ತೆರಳಿ ಅಲ್ಲಿರುವ ಭಾರತೀಯರನ್ನು ಕರೆತರಲಿವೆ ಎಂದು ಇಂಡಿಗೋ ಕಂಪನಿ ಘೋಷಿಸಿದೆ.

ಪ್ರತಿಯೊಬ್ಬರ ಜೀವ ರಕ್ಷಣೆಗೆ ಆದ್ಯತೆ: ಪ್ರತಿಯೊಂದು ಸಂಕಷ್ಟದ ಸನ್ನಿವೇಶದಲ್ಲಿ ಭಾರತೀಯರ ಜೀವಗಳಿಗೆ ಸರ್ಕಾರ ಹೆಚ್ಚು ಆದ್ಯತೆ ನೀಡಿದೆ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಎಲ್ಲಾ ಮಾರ್ಗಗಳನ್ನು ನಾವು ಬಳಸಿಕೊಂಡಿದ್ದು, ‘ಆಪರೇಷನ್‌ ಗಂಗಾ’ ಕಾರಾರ‍ಯಚರಣೆ ಹೆಸರಿನಲ್ಲಿ ಅವರನ್ನು ಸ್ವದೇಶಕ್ಕೆ ಕರೆತರುವ ಕಾರ್ಯ ನಡೆಯುತ್ತಿದೆ - ನರೇಂದ್ರ ಮೋದಿ, ಪ್ರಧಾನಿ

ಇದನ್ನೂ ಓದಿ: Russia Ukraine Crisis: ರಷ್ಯಾ ಮೇಲೆ ಮತ್ತಷ್ಟು ಆರ್ಥಿಕ ನಿರ್ಬಂಧಕ್ಕೆ ಸಿದ್ಧತೆ

30 ಕನ್ನಡಿಗರೂ ವಾಪಸ್‌:  ಕೇಂದ್ರ ಸರ್ಕಾರ ನಡೆಸಿದ ಕಾರ್ಯಾಚರಣೆಯಲ್ಲಿ ಶನಿವಾರ ಉಕ್ರೇನ್‌ನಿಂದ ಮುಂಬೈಗೆ ಬಂದಿದ್ದ 12 ವಿದ್ಯಾರ್ಥಿಗಳು, ದೆಹಲಿಗೆ ಬಂದಿದ್ದ 5 ವಿದ್ಯಾರ್ಥಿಗಳು ಹಾಗೂ ಭಾನುವಾರ 13 ವಿದ್ಯಾರ್ಥಿಗಳು ಸೇರಿ ಒಟ್ಟು 30 ಕನ್ನಡಿಗರು ಬೆಂಗಳೂರಿಗೆ ಬಂದು ತಲುಪಿದ್ದಾರೆ.

ರಾಜ್ಯದ ವಿದ್ಯಾರ್ಥಿಗಳಿಗೆ ತೇಜಸ್ವಿ ಸೂರ್ಯ ಸ್ವಾಗತ: ರೊಮೇನಿಯಾ ಗಡಿಯ ಮೂಲಕ ಉಕ್ರೇನ್‌ನಿಂದ ಹೊರ ಬಂದು ದೆಹಲಿ ತಲುಪಿದ ಕರ್ನಾಟಕ ಮೂಲದ ವಿದ್ಯಾರ್ಥಿಗಳನ್ನು ಕರ್ನಾಟಕ ಭವನದಲ್ಲಿ ಭೇಟಿ ಮಾಡಿದ ಸಂಸದ ತೇಜಸ್ವಿ ಸೂರ್ಯ ಅವರು ಸೋಮವಾರ ಸಿಹಿ ಹಂಚಿ ಸ್ವಾಗತ ಕೋರಿದರು. ಈ ವೇಳೆ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಮಾಹಿತಿ ಪಡೆದು ಯೋಗಕ್ಷೇಮ ವಿಚಾರಿಸಿದರು. ಭಾರತದ ಕೊನೆಯ ವ್ಯಕ್ತಿಯನ್ನು ಪ್ರಧಾನಿ ಕರೆತರೋವರೆಗೂ ಬಿಡುವುದಿಲ್ಲ. ಉಕ್ರೇನ್‌ನಲ್ಲಿರುವ ನಿಮ್ಮ ಗೆಳೆಯರಿಗೂ ಕರೆ ಮಾಡಿ ಧೈರ್ಯತುಂಬಿ ಎಂದು ಭರವಸೆ ನೀಡಿದರು.

ಬಳಿಕ ಸುದ್ದಿಗಾರರರೊಂದಿಗೆ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಕನ್ನಡಿಗರು ಒಳಗೊಂಡಂತೆ ಭಾರತದ ಪ್ರತಿಯೊಬ್ಬ ವಿದ್ಯಾರ್ಥಿ ಹಾಗು ನಾಗರಿಕರನ್ನು ದೇಶಕ್ಕೆ ವಾಪಸ್‌ ಕರೆತರಲು ಮೋದಿ ಸರ್ಕಾರ ಬದ್ಧವಾಗಿದೆ. ಭಾರತ ಸರ್ಕಾರ ಕನ್ನಡಿಗರನ್ನು ಉಕ್ರೇನ್‌ನಿಂದ ದೆಹಲಿ, ಮುಂಬಯಿಗೆ ಕರೆತರಲು ಶ್ರಮಿಸಿದರೆ, ಮುಂಬೈ ಮತ್ತು ದೆಹಲಿಯಿಂದ ಪುನಃ ಕರ್ನಾಟಕ ತಲುಪಲು ಉಚಿತ ವ್ಯವಸ್ಥೆ ಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಮಾಡಿದೆ. ದೆಹಲಿಗೆ ಬಂದಿಳಿದ ವಿದ್ಯಾರ್ಥಿಗಳಿಗೆ ಕರ್ನಾಟಕ ಭವನದಲ್ಲಿ ವಿಶ್ರಾಂತಿ ಪಡೆಯಲು ಕೂಡ ವ್ಯವಸ್ಥೆ ಮಾಡಲಾಗಿದೆ ಎಂದು ತೇಜಸ್ವಿ ವಿವರಿಸಿದರು.

ಉಕ್ರೇನ್‌ನಲ್ಲಿ ಸಿಕ್ಕಿಕೊಂಡಿರುವ ಉಳಿದ ವಿದ್ಯಾರ್ಥಿಗಳು ಮತ್ತು ನಾಗರೀಕರನ್ನು ಕರೆತರುವ ಕೆಲಸ ಪ್ರಗತಿಯಲ್ಲಿದೆ. ಒಬ್ಬನೇ ಒಬ್ಬ ಭಾರತೀಯನನ್ನೂ ಅಲ್ಲಿ ಬಿಡುವುದಿಲ್ಲ. ಹಾಗಾಗಿ ಪೋಷಕರು ಆತಂಕ, ಗಾಬರಿಗೊಳ್ಳುವುದು ಬೇಡ ಎಂದರು. ನಮ್ಮ ರಾಯಭಾರಿ ಕಚೇರಿಯ ಅಧಿಕಾರಿಗಳು ರೊಮೇನಿಯಾ ಗಡಿಯಲ್ಲಿ ಹಾಜರಿದ್ದು ಭಾರತೀಯರಿಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಡುತ್ತಿದ್ದಾರೆ. ಅಲ್ಲಿ ಸಿಲುಕಿರುವ ಎಲ್ಲ ಭಾರತೀಯರನ್ನು ಕರೆತರಲು ನರೇಂದ್ರ ಮೋದಿ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ಕಾರ್ಯಾಚರಣೆ ಹೇಗೆ?

*ಉಕ್ರೇನ್‌ನಿಂದ ಭಾರತೀಯರನ್ನು ರೊಮೇನಿಯಾ, ಹಂಗೇರಿಗೆ ಸ್ಥಳಾಂತರಿಸಿ ಏರ್‌ಲಿಫ್ಟ್‌

*ಶನಿವಾರ 219, ಭಾನುವಾರ 688 ಜನರನ್ನು ಹೊತ್ತ ಒಟ್ಟು 4 ವಿಮಾನಗಳು ಆಗಮನ

*ಉಕ್ರೇನ್‌ನಲ್ಲಿ ಸಿಲುಕಿರುವ 20000 ಭಾರತೀಯರ ಪೈಕಿ ಈವರೆಗೆ 907 ಜನರ ರಕ್ಷಣೆ

click me!