
ನವದೆಹಲಿ(ಮೇ.02): ಪ್ರಧಾನಿ ನರೇಂದ್ರ ಮೋದಿ ಸೋಮವಾರದಿಂದ ಮೂರು ದಿನಗಳ ಕಾಲ 3 ವಿದೇಶಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಜರ್ಮನಿಯ ಚಾನ್ಸಲರ್ ಓಲಾಫ್ ಸ್ಕೋಲ್‌್ಜ ಅವರ ಆಮಂತ್ರಣದ ಮೇರೆಗೆ ಮೋದಿ ಮೇ. 2 ರಂದು ಬರ್ಲಿನ್‌ಗೆ ಭೇಟಿ ನೀಡಲಿದ್ದಾರೆ. ಅಲ್ಲಿ 6 ನೇ ಭಾರತ-ಜರ್ಮನಿ ಅಂತರ್ ಸರ್ಕಾರಿ ಸಮಾಲೋಚನೆಯಲ್ಲಿ ಮೋದಿ ಸಹ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಅಲ್ಲದೇ
ವಾಣಿಜ್ಯ ದುಂಡುಮೇಜಿನ ಸಭೆಯಲ್ಲಿ ಕೈಗಾರಿಕಾ ಸಹಕಾರದ ಮೂಲಕ ಕೋವಿಡ್ ನಂತರದ ಸಮಯದಲ್ಲಿ ಉಭಯ ದೇಶಗಳ ಆರ್ಥಿಕತೆಯ ಪುನಶ್ಚೇತನದ ಹಿನ್ನೆಲೆಯಲ್ಲಿ ಮಾತುಕತೆ ನಡೆಸಲಿದ್ದಾರೆ.
ಮೇ. 3 ಹಾಗೂ 4 ರಂದು ಡೆನ್ಮಾರ್ಕ್ನ ಕೋಪನ್‌ಹೇಗನ್‌ಗೆ ಪ್ರಧಾನಿ ಭೇಟಿಕೊಡಲಿದ್ದು, ಡ್ಯಾನಿಶ್ ಪ್ರಧಾನಿ ಮಾಟ್ ಫ್ರೆಡ್ರಿಕ್‌ಸನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಅಲ್ಲದೇ 2ನೇ ಭಾರತ-ನಾರ್ಡಿಕ್ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಡೆನ್ಮಾರ್ಕ್ನಲ್ಲಿ ಭಾರತೀಯ ಮೂಲದ ಉದ್ಯಮಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಭಾರತಕ್ಕೆ ಮರಳುವಾಗ ಮಾರ್ಗ ಮಧ್ಯದಲ್ಲಿ ಮೋದಿ ಪ್ಯಾರಿಸ್‌ಗೆ ಭೇಟಿ ನೀಡಿ, ಮರು ಆಯ್ಕೆಯಾದ ಫ್ರಾನ್ಸಿನ ರಾಷ್ಟಾ್ರಧ್ಯಕ್ಷ ಇಮ್ಯಾನುಯೆಲ್ ಮಾಕ್ರೋನ್ ಅವರಿಗೆ ಅಭಿನಂದನೆ ಸಲ್ಲಿಸಲಿದ್ದಾರೆ.
ಪ್ರವಾಸದ ಉದ್ದೇಶವೇನು?
ಪ್ರಧಾನಿ ನರೇಂದ್ರ ಮೋದಿಯವರ ವಿದೇಶಿ ಪ್ರವಾಸದ ಪ್ರಮುಖ ಉದ್ದೇಶ ಇಂಧನ ಭದ್ರತೆಯಾಗಿದೆ. ಉಕ್ರೇನ್-ರಷ್ಯಾ ಯುದ್ಧದಿಂದಾಗಿ ಜಗತ್ತಿನಲ್ಲಿ ಶಕ್ತಿ ಸಂಪನ್ಮೂಲಗಳ ಕೊರತೆಯಿಂದಾಗಿ ಸಮಸ್ಯೆಯಾಗುತ್ತಿದ್ದು, ಇದನ್ನು ಬಗೆಹರಿಸಲು ಮೋದಿ ವಿದೇಶಿ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಇದರೊಂದಿಗೆ ವಿದೇಶಗಳೊಂದಿಗಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕೋವಿಡ್ ನಂತರ ಆರ್ಥಿಕ ಪುನಶ್ಚೇತನ, ಹವಾಮಾನ ಬದಲಾವಣೆ, ಅನ್ವೇಷಣೆ ಹಾಗೂ ತಂತ್ರಜ್ಞಾನ, ನವೀಕರಿಸಬಹುದಾದ ಶಕ್ತಿ ಬಳಕೆ ಹಾಗೂ ಜಾಗತಿಕ ಭದ್ರತೆ ಮೊದಲಾದ ಮಹತ್ವಪೂರ್ಣ ವಿಷಯಗಳ ಕುರಿತು ಮೋದಿ ಚರ್ಚೆ ನಡೆಸಲಿದ್ದಾರೆ.
ಸವಾಲಿನ ಸಮಯದಲ್ಲಿ ಪ್ರವಾಸ: ಮೋದಿ
ಪ್ರವಾಸ ಕೈಗೊಳ್ಳುವ ಮುನ್ನ ಮಾತನಾಡಿದ ಪ್ರಧಾನಿ, ‘ಜಗತ್ತು ಹಲವಾರು ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ವಿದೇಶಿ ಪ್ರವಾಸವನ್ನು ಕೈಗೊಳ್ಳುತ್ತಿದ್ದೇನೆ. ಶಾಂತಿ ಹಾಗೂ ಸಮೃದ್ಧಿಗಾಗಿ ಭಾರತದ ಅನ್ವೇಷಣೆಯಲ್ಲಿ ಪ್ರಮುಖ ಸಹಚಚರರಾಗಿರುವ ಯುರೋಪಿನ ನಾಯಕರೊಂದೊಗಿನ ಸಹಕಾರ ಸಂಬಂಧವನ್ನು ಇನ್ನಷ್ಟುಬಲಪಡಿಸುವ ನಿಟ್ಟಿನಲ್ಲಿ ಮಾತುಕತೆಗಳು ನಡೆಸಲಿದ್ದೇನೆ’ ಎಂದಿದ್ದಾರೆ.
ಯುರೋಪಿಯನ್ ರಾಷ್ಟ್ರಗಳು ಮಿಲಿಯನ್‌ಗಟ್ಟಲೇ ಭಾರತೀಯರಿಗೆ ನೆಲೆ ನೀಡಿದೆ. ಇದು ಭಾರತ ಮತ್ತು ಯುರೋಪಿಯನ್ ರಾಷ್ಟ್ರಗಳ ಸಂಬಂಧವನ್ನು ಇನ್ನಷ್ಟುಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪ್ರವಾಸದ ವೇಳೆಗೆ ವಿದೇಶದಲ್ಲಿ ನೆಲೆಸಿರುವ ಭಾರತೀಯ ಸಹೋದರ ಸಹೋದರಿಯರೊಂದಿಗೂ ಮಾತುಕತೆ ನಡೆಸಲಿದ್ದೇನೆ’ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ