Russia Ukraine War: ರಷ್ಯಾ ಮತ್ತು ಉಕ್ರೇನ್ ನಡುವಿನ ಕಾಳಗ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದರೆ ಈಗ ರಷ್ಯಾ ಅಣ್ವಸ್ತ್ರ ಪ್ರಯೋಗದ ಬೆದರಿಕೆ ಹಾಕಿದ್ದು ಉಕ್ರೇನ್ ಡರ್ಟಿ ಬಾಂಬ್ ಪ್ರಯೋಗಿಸಲು ಯೋಜನೆ ರೂಪಿಸಿದೆ ಎಂಬ ಆರೋಪವನ್ನೂ ಮಾಡಿದೆ.
ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವಿನ ಕಾಳಗ ಕಳೆದ ಏಳು ತಿಂಗಳಿನಿಂದ ನಡೆಯುತ್ತಿದೆ. ನ್ಯಾಟೊ ಜೊತೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದ್ದ ಉಕ್ರೇನ್ ವಿರುದ್ಧ ರಷ್ಯಾ ಮುಗಿಬಿದ್ದಿತ್ತು. ದೈತ್ಯ ರಷ್ಯಾ ಮುಂದೆ ಉಕ್ರೇನ್ ವಾರಗಳೊಳಗೆ ನೆಲ ಕಚ್ಚುತ್ತದೆ ಎಂದು ಎಲ್ಲರೂ ಅಂದುಕೊಂಡಾಗ ಫೀನಿಕ್ಸ್ ಹಕ್ಕಿಯಂತೆ ಮತ್ತೆ ವಾಪಸಾಗಿತ್ತು ಉಕ್ರೇನ್. ಇದೀಗ ರಷ್ಯಾಗೆ ಮತ್ತು ಪುಟಿನ್‌ಗೆ ಯುದ್ಧ ನಿಲ್ಲಿಸಲು ಅಹಂ ಸಮಸ್ಯೆಯಾಗಿದೆ. ಉಕ್ರೇನ್ ಬಹುತೇಕ ಧೂಳಿಪಟವಾಗಿರುವುದು ನಿಜವಾದರೂ ರಷ್ಯಾ ಕೂಡ ಸರಿಯಾದ ಪೆಟ್ಟು ತಿಂದಿದೆ. ಅದಕ್ಕಾಗಿಯೇ ಈಗ ಅಣುಬಾಂಬ್‌ನ ಬೆದರಿಕೆ ಹಾಕಲಾಗುತ್ತಿದೆ. ಪಾಶ್ಚಿಮಾತ್ರ ದೇಶಗಳು ಉಕ್ರೇನ್ ಬೆಂಬಲ ಮುಂದುವರೆಸಿದರೆ ಪರಿಸ್ಥಿತಿ ಸರಿ ಇರುವುದಿಲ್ಲ ಎಂದು ಪುಟಿನ್ ಈಗಾಗಲೇ ಬೆದರಿಕೆ ಹಾಕಿದ್ದಾರೆ. ಜತೆಗೆ ರಷ್ಯಾದ ನ್ಯೂಕ್ಲಿಯಾರ್ ಡ್ರಿಲ್ ಕೂಡ ಈಗಾಗಲೇ ಆರಂಭವಾಗಿದೆ. ಇದರ ಬಗ್ಗೆ ರಷ್ಯಾ ಸೈನ್ಯವೇ ಪಾಶ್ಚಿಮಾತ್ಯ ದೇಶಗಳು ಮತ್ತು ನ್ಯಾಟೊಗೆ ಮಾಹಿತಿ ನೀಡಿದೆ.
ಪ್ರತಿವರ್ಷವೂ ನ್ಯೂಕ್ಲಿಯಾರ್ ಡ್ರಿಲ್ ನಡೆಸುವುದು ಸಾಮಾನ್ಯ. ಆದರೆ ಈ ಬಾರಿ ತಾವಾಗಿಯೇ ಡ್ರಿಲ್ ನಡೆಸುತ್ತಿರುವ ಬಗ್ಗೆ ಯುರೋಪ್, ಪಾಶ್ಚಿಮಾತ್ಯ ದೇಶಗಳು ಮತ್ತು ನ್ಯಾಟೊಗೆ ರಷ್ಯಾ ಮಾಹಿತಿ ನೀಡಿರುವುದು ಹೊಸ ಅವಲೋಕನಕ್ಕೆ ಕಾರಣವಾಗಿದೆ. ಈ ಮೂಲಕ ರಷ್ಯಾ ಅಣುಬಾಂಬ್ ಪ್ರಯೋಗದ ಎಚ್ಚರಿಕೆಯನ್ನು ನೀಡುತ್ತಿದೆ. ಆದರೆ ಅಣುಬಾಂಬ್ ಹಾಕುವ ಇಚ್ಚೆ ರಷ್ಯಾಗೂ ಇದ್ದಂತ್ತಿಲ್ಲ. ಬೆದರಿಕೆ ಹಾಕುವ ಮೂಲಕ ರಷ್ಯಾ ಜೊತೆ ಶಾಂತಿ ಮಾತುಕತೆಗೆ ಮುಂದಾಗುವಂತೆ ಉಕ್ರೇನ್‌ಗೆ ಪಾಶ್ಚಿಮಾತ್ಯ ದೇಶಗಳು ಪ್ರೇರೇಪಿಸಲಿ ಎಂಬ ಕಾರಣಕ್ಕೆ ರಷ್ಯಾ ಈ ರೀತಿ ಮಾಡಿರುವ ಸಾಧ್ಯತೆಯಿದೆ.
ಯುದ್ಧ ತೀವ್ರತೆ ಹೆಚ್ಚಿಸಿರುವುದು ನಿಜ, ಆದರೆ ಕಾರಣವೇ ಬೇರೆ:
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯುದ್ಧದ ತೀವ್ರತೆಯನ್ನು ಇಮ್ಮಡಿ ಮಾಡಿರುವುದು ಸತ್ಯವೇ. ಆದರೆ ಸಂಪೂರ್ಣ ಉಕ್ರೇನ್ ನಾಶ ಮಾಡುವ ಉದ್ದೇಶ ಅವರಿಗಿಲ್ಲದೇ ಇರಬಹುದು. ವಾರ್ ಎಸ್ಕಲೇಟ್ ಮಾಡುವ ಮೂಲಕ ಉಕ್ರೇನ್ ಮಾತುಕತೆಗೆ ಮನವಿ ಮಾಡಲಿ ಎಂಬ ಇಂಗಿತ ಅವರಿಗಿರಬಹುದು. ಅವರಾಗಿಯೇ ಶಾಂತಿ ಮಾತುಕತೆಗೆ ಕರೆದರೆ ಯುದ್ಧದಲ್ಲಿ ಹಿನ್ನಡೆ ಒಪ್ಪಿಕೊಂಡಂತಾಗುತ್ತದೆ. ಅದಕ್ಕೆ ಪುಟಿನ್‌ರ ಅಹಂ ಅಡ್ಡವಾಗುತ್ತದೆ. ಈ ಕಾರಣಕ್ಕೆ ಉಕ್ರೇನ್ ದೇಶವೇ ತಲೆತಗ್ಗಿಸಿ ಬರಲಿ ಎಂಬ ಇಂಗಿತ ಪುಟಿನ್ ಅವರದ್ದಾಗಿರಬಹುದು ಎನ್ನಲಾಗಿದೆ. ಅದೇ ಕಾರಣಕ್ಕೆ ಪ್ರತಿವರ್ಷ ಸಾಮಾನ್ಯವಾಗಿ ನಡೆಸುವ ನ್ಯೂಕ್ಲಿಯಾರ್ ಡ್ರಿಲ್ಲನ್ನು ದೊಡ್ಡ ವಿಷಯ ಎಂಬಂತೆ ಪ್ರಪಂಚಕ್ಕೆ ರಷ್ಯಾ ತಿಳಿಸಿದೆ.
ಇದನ್ನೂ ಓದಿ: Russia-Ukraine War: ಉಕ್ರೇನ್‌ಗೆ ಸಹಾಯ ಮಾಡಿದ್ರೆ, ಪರಿಣಾಮ ಖಂಡಿತ..! ಇಸ್ರೇಲ್‌ಗೆ ಖಡಕ್ ಎಚ್ಚರಿಕೆ ನೀಡಿದ ರಷ್ಯಾ!
ರಷ್ಯಾ ಮೇಲೆ ಡರ್ಟಿ ಬಾಂಬ್ ಹಾಕಲು ನಿರ್ಧರಿಸಿದೆಯಾ ಉಕ್ರೇನ್?:
ರಷ್ಯಾ ಮೇಲೆ ಉಕ್ರೇನ್ ಡರ್ಟಿ ಬಾಂಬ್ ಹಾಕಲು ಯೋಜನೆ ರೂಪಿಸಿದೆ ಎಂದು ರಷ್ಯಾ ಆರೋಪಿಸಿದೆ. ಇಷ್ಟಕ್ಕೂ ಉಕ್ರೇನ್ ಅಖಂಡ ರಷ್ಯಾ (ಸೋವಿಯತ್ ಯೂನಿಯನ್) ದಿಂದ ಸ್ವತಂತ್ರವಾದ ದಿನವೇ ಅಣ್ವಸ್ತ್ರವನ್ನು ತ್ಯಜಿಸಿತ್ತು. ಉಕ್ರೇನ್‌ನ ರಕ್ಷಣೆ ರಷ್ಯಾದ ಹೊಣೆ ಎಂಬ ಷರತ್ತಿನ ಮೇಲೆ ಉಕ್ರೇನ್ ಅಣ್ವಸ್ತ್ರ ತ್ಯಜಿಸಿತ್ತು. ಆದರೆ ಈಗ ರಷ್ಯಾ ಹೇಳುತ್ತಿರುವ ಡರ್ಟಿ ಬಾಂಬ್ ಅಣ್ವಸ್ತ್ರವಲ್ಲ. ಆದರೆ ಅಣ್ವಸ್ತ್ರದ ರೀತಿಯಲ್ಲೇ ವಿಧ್ವಂಸ ಮಾಡುವ ಶಕ್ತಿಯನ್ನು ಹೊಂದಿದೆ. ರಷ್ಯಾ ವಿರುದ್ಧ ಈ ಬಾಂಬನ್ನು ಹಾಕಲು ಉಕ್ರೇನ್ ಯೋಚಿಸುತ್ತಿದೆ ಎಂದು ರಷ್ಯಾ ಆರೋಪಿಸಿದೆ. ಆದರೆ ಈ ಆರೋಪವನ್ನು ಉಕ್ರೇನ್ ಮತ್ತು ಪಾಶ್ಚಿಮಾತ್ಯ ದೇಶಗಳು ಒಪ್ಪಿಕೊಳ್ಳುತ್ತಿಲ್ಲ. ಉಕ್ರೇನ್ ಬಳಿ ಆ ರೀತಿಯ ವಿಧ್ವಂಸಕಾರಿ ಬಾಂಬ್ ಯಾವುದೂ ಇಲ್ಲ. ರಷ್ಯಾ ಯುದ್ಧವನ್ನು ತೀವ್ರಗೊಳಿಸಲು ಈ ರೀತಿಯ ಸುಳ್ಳು ಹೇಳುತ್ತಿದೆ ಎಂದು ಪಾಶ್ಚಿಮಾತ್ಯ ದೇಶಗಳು ನಂಬಿವೆ.
ಇದನ್ನೂ ಓದಿ: Ukraine ಮೇಲೆ ಆತ್ಮಾಹುತಿ ಡ್ರೋನ್ ದಾಳಿ ಮಾಡಿದ ರಷ್ಯಾ: 8 ಮಂದಿ ಬಲಿ
ರಷ್ಯಾ ಉಕ್ರೇನ್ ಮೇಲೆ ಅಣ್ವಸ್ತ್ರ ಪ್ರಯೋಗ ಮಾಡುವ ಸಲುವಾಗಿ ಡರ್ಟಿ ಬಾಂಬ್‌ನ ಸುಳ್ಳು ಮಾಹಿತಿ ನೀಡುತ್ತಿದೆ ಎಂದು ನಂಬಲಾಗಿದೆ. ಆದರೆ ರಷ್ಯಾ ನಿಜವಾಗಿಯೂ ಅಣ್ವಸ್ತ್ರ ಪ್ರಯೋಗಿಸಿ ಮೂರನೇ ಮಹಾಯುದ್ಧಕ್ಕೆ ಪಂತಾಹ್ವಾನ ಮಾಡುವ ಸ್ಥಿತಿಯಲ್ಲಿದೆಯಾ ಎಂಬುದು ನಿಜವಾದ ಪ್ರಶ್ನೆ.