ವಿಶ್ವದ ಹೊಸ ಬ್ರಹ್ಮಾಸ್ತ್ರ ರಷ್ಯಾ ಸೇನೆಗೆ ಸೇರ್ಪಡೆ ಮೈಲುಗಲ್ಲು| ಏವನ್‌ಗಾರ್ಡ್ ಹೈಪರ್‌ಸಾನಿಕ್ ಕ್ಷಿಪಣಿ ಸೇವೆಗೆ ಸಿದ್ಧ| ವಿಶ್ವದ ಯಾವುದೇ ಭಾಗದ ಮೇಲೆ ದಾಳಿಯ ಸಾಮರ್ಥ್ಯ| ಯಾವುದೇ ಕ್ಷಿಪಣಿ ತಡೆ ವ್ಯವಸ್ಥೆ ಬೇಧಿಸುವ ಹೆಗ್ಗಳಿಕೆ
ಮಾಸ್ಕೋ[ಡಿ.28]: ವಿಶ್ವದ ಹೊಸ ಬ್ರಹ್ಮಾಸ್ತ್ರವೆಂದೇ ಪರಿಗಣಿತ ಏವನ್‌ಗಾರ್ಡ್ ಹೈಪರ್‌ಸಾನಿಕ್ ಕ್ಷಿಪಣಿ ವ್ಯವಸ್ಥೆಯನ್ನು ಶುಕ್ರವಾರ ಅಧಿಕೃತವಾಗಿ ರಷ್ಯಾ ಸೇನೆಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಇದರೊಂದಿಗೆ ಅಮೆರಿಕದೊಂದಿಗೆ ಸದಾ ಹಲ್ಲು ಮಸೆಯುವ, ಯುದ್ದ ಸಾಮರ್ಥ್ಯದಲ್ಲಿ ಸದಾ ಪೈಪೋಟಿ ನಡೆಸುವ ರಷ್ಯಾ, ವೈರಿ ರಾಷ್ಟ್ರಕ್ಕಿಂತ ಒಂದು ಹೆಜ್ಜೆ ಮುಂದಿಟ್ಟಿದೆ.
ಏವನ್‌ಗಾರ್ಡ್ ಹೈಪರ್‌ಸಾನಿಕ್ ಕ್ಷಿಪಣಿ ಗಂಟೆಗೆ 33000 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಇಷ್ಟೊಂದು ವೇಗವಾಗಿ ಸಂಚರಿಸುವ ಕಾರಣ, ಕ್ಷಿಪಣಿಗೆ 2000 ಡಿ.ಸೆ. ತಾಪಮಾನವನ್ನು ತಡೆಗಟ್ಟಬಲ್ಲ ಹೊದಿಕೆಯನ್ನು ಅಳವಡಿಸಲಾಗಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ, ಇದು ಹಾಲಿ ಅಮೆರಿಕ ಸೇರಿದಂತೆ ವಿಶ್ವದ ಯಾವುದೇ ಅತ್ಯಾಧುನಿಕ ದೇಶ ಹೊಂದಿರುವ ಕ್ಷಿಪಣಿ ದಾಳಿ ತಡೆ ವ್ಯವಸ್ಥೆಯನ್ನು ಬೇಧಿಸುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ರಷ್ಯಾ, ಇದೀಗ ವಿಶ್ವದ ಯಾವುದೇ ದೇಶದ ಮೇಲೆ ಸಾಮರ್ಥ್ಯವನ್ನು ಪಡೆದುಕೊಂಡಂತೆ ಆಗಿದೆ. ರಷ್ಯಾ ಸೇನೆಗೆ ಕ್ಷಿಪಣಿ ಸೇರ್ಪಡೆಯನ್ನು ಹೊಸ ಮೈಲುಗಲ್ಲು ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬಣ್ಣಿಸಿದ್ದಾರೆ.
1957ರಲ್ಲಿ ಸೋವಿಯತ್ ಒಕ್ಕೂಟವು ಮೊದಲ ಬಾರಿಗೆ ಉಪಗ್ರಹ ಹಾರಿಬಿಟ್ಟಬಳಿಕದ ಅತ್ಯಂತ ಮಹತ್ವದ ರಕ್ಷಣಾ ಬೆಳವಣಿಗೆ ಇದು ರಕ್ಷಣಾ ತಂತ್ರಜ್ಞರು ಬಣ್ಣಿಸಿದ್ದಾರೆ. ಜೊತೆಗೆ ಹೊಸ ಕ್ಷಿಪಣಿ ವ್ಯವಸ್ಥೆಯು, ಬಾಹ್ಯಾಕಾಶ ದಾಳಿ ವ್ಯವಸ್ಥೆಯಲ್ಲಿ ರಷ್ಯಾವನ್ನು ಅಮೆರಿಕಕ್ಕಿಂತ ಒಂದು ಹೆಜ್ಜೆ ಮುಂದೆ ನಿಲ್ಲಿಸಿದೆ ಎಂದಿದ್ದಾರೆ.
3000 ಕೆಜಿ ತೂಕ ಹೊಂದಿರುವ ಈ ಕ್ಷಿಪಣಿ ಭಾರೀ ಪ್ರಮಾಣದ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲದಾಗಿದೆ. ಜೊತೆಗೆ ಗಂಟೆಗೆ 33000 ಕಿ.ಮೀ ವೇಗದಲ್ಲಿ ಚಲಿಸುವ ಹೊರತಾಗಿಯೂ ಯಾವುದೇ ಕ್ಷಣದಲ್ಲಿ ತನ್ನ ಪಥವನ್ನು ಬದಲಿಸಿ ಮುಂದಕ್ಕೆ ಸಂಚರಿಸುವ ಅತ್ಯಾಧುನಿಕ ಸಾಮರ್ಥ್ಯ ಹೊಂದಿದೆ. ಅಲ್ಲದೆ ಒಂದೇ ಬಾರಿಗೆ ಹಲವು ಸ್ಥಳಗಳ ಮೇಲೆ ದಾಳಿಯನ್ನು ನಡೆಸಬಲ್ಲದಾಗಿದೆ.
33000 ಕಿ.ಮೀ: ಗಂಟೆಗೆ ಇಷ್ಟುವೇಗದಲ್ಲಿ ಚಲಿಸಬಲ್ಲದು
20 ಪಟ್ಟು: ಶಬ್ಧಕ್ಕಿಂತ 20 ಪಟ್ಟು ವೇಗದಲ್ಲಿ ಚಲನೆ ಸಾಮರ್ಥ್ಯ
2000 ಡಿ.ಸೆ: ಇಷ್ಟುಉಷ್ಣತೆ ತಡೆದುಕೊಳ್ಳುವ ಶಕ್ತಿ ಇದಕ್ಕಿದೆ
15 ನಿಮಿಷ: ಇಷ್ಟುಸಮಯದಲ್ಲಿ ಅಮೆರಿಕದ ಮೇಲೆ ದಾಳಿ
1.5 ನಿಮಿಷ: ದಿಲ್ಲಿಯಿಂದ ಪಾಕ್ ಮೇಲೆ ದಾಳಿಗೆ ಹಿಡಿವ ಸಮಯ