ನಾನು ಪ್ರಧಾನಿಯಾದ ಮೊದಲ ದಿನದಿಂದಲೇ ಚೀನಾ ವಿರುದ್ಧ ಕಠಿಣ ಕ್ರಮ: ರಿಷಿ ಸುನಕ್‌

By BK AshwinFirst Published Jul 25, 2022, 5:21 PM IST
Highlights

ಚೀನಾದ ವಿರುದ್ಧ ಗುಡುಗಿದ ರಿಷಿ ಸುನಕ್‌, ತಾನು ಪ್ರಧಾನಿಯಾದ ಮೊದಲ ದಿನದಿಂದಲೇ ಕಮ್ಯೂನಿಸ್ಟ್‌ ಸರ್ಕಾರದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಗುಡುಗಿದ್ದಾರೆ.

ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್‌ ಬ್ರಿಟನ್‌ನ ನೂತನ ಪ್ರಧಾನಿಯಾಗಲಿದ್ದಾರೆ ಎಂಬ ಮಾತುಗಳು ಇತ್ತೀಚೆಗೆ ಕಂಡುಬರುತ್ತಿದೆ, ಬ್ರಿಟನ್‌ನ ಮುಂದಿನ ಪ್ರಧಾನಿಯಾಗಲು ನಾನಾ ಆಕಾಂಕ್ಷಿಗಳಿದ್ದರೂ, ಈ ಪೈಕಿ ರಿಷಿ ಸುನಕ್‌ ಇಂಗ್ಲೆಂಡ್‌ನ ನೂತನ ಪ್ರಧಾನಿಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು, ರಿಷಿ ಸುನಕ್‌ ಅಂತಾರಾಷ್ಟ್ರೀಯ ಮಾಧ್ಯಮವೊಂದರ ಜತೆ ಮಾತನಾಡಿದ್ದು, ಚೀನಾ ವಿರುದ್ಧ ಭಾನುವಾರ ಗುಡುಗಿದ್ದಾರೆ. 

ಬ್ರಿಟನ್‌ನ ಆಡಳಿತಾರೂಢ ಕನ್ಸರ್ವೇಟೀವ್‌ ಪಕ್ಷದಲ್ಲಿರುವ ರಿಷಿ ಸುನಕ್‌ ಬ್ರಿಟನ್‌ ಪ್ರಧಾನಿಯಾಗುವ ರೇಸ್‌ನಲ್ಲಿದ್ದು, ಲಿಜ್‌ ಟ್ರುಸ್‌ ವಿರುದ್ಧ ತುರುಸಿನ ಸ್ಪರ್ಧೆಯನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆ ಬ್ರಿಟನ್‌ನ ಮಾಜಿ ಹಣಕಾಸು ಸಚಿವ ರಿಷಿ ಸುನಕ್‌ ವಿರುದ್ಧ ಇತ್ತೀಚೆಗೆ ಲಿಜ್‌ ಟ್ರುಸ್‌ ಆರೋಪ ಮಾಡಿದ್ದಾರೆ. ರಿಷಿ ಚೀನಾ ಹಾಗೂ ರಷ್ಯಾದ ವಿರುದ್ಧ ದುರ್ಬಲರಾಗಿದ್ದಾರೆ ಎಂದು ಲಿಜ್‌ ಆರೋಪಿಸಿದ್ದರು.

ಬ್ರಿಟನ್ ಪ್ರಧಾನಿ ರೇಸ್‌ನಲ್ಲಿ ಯೂ ಟರ್ನ್, ರಿಶಿ ಹಿಂದಿಕ್ಕಿದ ಲಿಜ್ ಟ್ರಸ್ ಬುಕ್ಕಿಗಳ ಗೆಲುವಿನ ಫೇವರಿಟ್!

ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಿದ ರಿಷಿ ಸುನಕ್‌, ಚೀನಾದ ವಿರುದ್ಧ ಗುಡುಗಿದ್ದಾರೆ. ತಾನು ಪ್ರಧಾನಿಯಾದ ಮೊದಲ ದಿನದಿಂದಲೇ ಕಮ್ಯೂನಿಸ್ಟ್‌ ಸರ್ಕಾರದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದ್ದಾರೆ. ಚೀನಾದ ವಿರುದ್ಧ ರಿಷಿ ಸುನಕ್‌ ಕೈಗೊಳ್ಳುವ ಪ್ರಸ್ತಾವನೆಗಳು ಹೀಗಿವೆ ನೋಡಿ..

ಬ್ರಿಟನ್‌ನಲ್ಲಿರುವ ಎಲ್ಲ 30 ಕನ್ಫ್ಯೂಶಿಯಸ್‌ ಸಂಸ್ಥೆಗಳನ್ನು ಮುಚ್ಚುವ ಒಲವನ್ನು ರಿಷಿ ಹೊಂದಿದ್ದು, ಸಂಸ್ಕೃತಿ ಮತ್ತು ಭಾಷಾ ಕಾರ್ಯಕ್ರಮಗಳ ಮೂಲಕ ಚೀನೀ ಪ್ರಭಾವದ ಮೃದು ಶಕ್ತಿಯ ಹರಡುವಿಕೆಯನ್ನು ತಡೆಯುವುದು ಇದರ ಉದ್ದೇಶ ಎಂದು ತಿಳಿದುಬಂದಿದೆ. ಅಲ್ಲದೆ, ನಮ್ಮ ವಿಶ್ವವಿದ್ಯಾಲಯಗಳಿಂದ ಚೀನಾದ ಕಮ್ಯೂನಿಸ್ಟ್‌ ಪಕ್ಷ (ಸಿಸಿಪಿ) ವನ್ನು ಕಿತ್ತುಹಾಕುವುದಾಗಿಯೂ ರಿಷಿ ಸುನಕ್‌ ಭರವಸೆ ನೀಡಿದ್ದಾರೆ.

ನಮ್ಮ ತಂತ್ರಜ್ಞಾನವನ್ನು ಕದಿಯಲಾಗುತ್ತಿದೆ 
ಚೀನೀ ಬೇಹುಗಾರಿಕೆಯನ್ನು ಎದುರಿಸಲು ಬ್ರಿಟನ್‌ನ ದೇಶೀಯ ಬೇಹುಗಾರಿಕೆ ಸಂಸ್ಥೆ MI5 ಸಹಾಯ ಮಾಡುತ್ತದೆ ಮತ್ತು ಸೈಬರ್‌ಸ್ಪೇಸ್‌ನಲ್ಲಿ ಚೀನಾ ವಿರುದ್ಧದ ಆತಂಕಗಳನ್ನು ನಿಭಾಯಿಸಲು "NATO-ಶೈಲಿಯ" ಅಂತಾರಾಷ್ಟ್ರೀಯ ಸಹಕಾರವನ್ನು ನಿರ್ಮಿಸುವುದಾಗಿಯೂ ಬ್ರಿಟನ್‌ನ ಭಾವಿ ಪ್ರಧಾನಿ ಎಂದೇ ಬಿಂಬಿತವಾಗಿರುವ ರಿಷಿ ಸುನಕ್ ಹೇಳಿದ್ದಾರೆ. ಅಲ್ಲದೆ, ಆಯಕಟ್ಟಿನ ಸೂಕ್ಷ್ಮ ತಂತ್ರಜ್ಞಾನ ಸಂಸ್ಥೆಗಳು ಸೇರಿದಂತೆ ಪ್ರಮುಖ ಬ್ರಿಟಿಷ್ ಸ್ವತ್ತುಗಳ ಚೀನೀ ಸ್ವಾಧೀನವನ್ನು ನಿಷೇಧಿಸುವ ಪ್ರಕರಣವನ್ನು ಅಧ್ಯಯನ ಮಾಡುವುದಾಗಿಯೂ ಹೇಳಿದ್ದಾರೆ.
ಇನ್ನು, ಚೀನಾ "ನಮ್ಮ ತಂತ್ರಜ್ಞಾನವನ್ನು ಕದಿಯುತ್ತಿದೆ ಮತ್ತು ನಮ್ಮ ವಿಶ್ವವಿದ್ಯಾನಿಲಯಗಳಿಗೆ ನುಸುಳುತ್ತಿದೆ" ಹಾಗೂ ರಷ್ಯಾದ ತೈಲವನ್ನು ಖರೀದಿಸುವ ಮೂಲಕ ವಿದೇಶದಲ್ಲಿ ವ್ಲಾಡಿಮಿರ್ ಪುಟಿನ್‌ಗೆ ನೆರವಾಗುತ್ತಿದೆ. ತೈವಾನ್ ಸೇರಿದಂತೆ ನೆರೆಹೊರೆಯವರನ್ನು ಬೆದರಿಸಲು ಪ್ರಯತ್ನಿಸುತ್ತಿದೆ ಎಂದೂ ರಿಷಿ ಸುನಕ್‌ ಚೀನಾ ವಿರುದ್ಧ ಗುಡುಗಿದ್ದಾರೆ.

ಬ್ರಿಟನ್‌ ಪ್ರಧಾನಿ ರೇಸ್‌: 5ನೇ ಸುತ್ತಲ್ಲೂ ರಿಷಿ ಸುನಕ್‌ಗೆ ಮುನ್ನಡೆ: ಗೆಲುವಿಗೆ ಇನ್ನೊಂದೇ ಹೆಜ್ಜೆ

ಚೀನಾದ ಬೆಲ್ಟ್‌ ಅಂಡ್‌ ರೋಡ್‌ ಯೋಜನೆಗೆ ಟೀಕೆ
ಚೀನಾದ ಒಆರ್‌ಒಪಿ ಯೋಜನೆ ಅಥವಾ ಬೆಲ್ಟ್‌ ಅಂಡ್‌ ರೋಡ್‌ ಯೋಜನೆ ವಿರುದ್ಧ ಟೀಕೆ ಮಾಡಿದ ರಿಷಿ ಸುನಕ್, ಈ ಮೂಲಕ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ತೀರಿಸಲಾಗದ ರೀತಿ ಸಾಲವನ್ನು ನೀಡಿ ದುಸ್ತರವನ್ನಾಗಿಸುತ್ತಿದೆ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕ್ಸಿನ್‌ಜಿಯಾಂಗ್‌ ಹಾಗೂ ಹಾಂಗ್‌ಕಾಂಗ್‌ನಲ್ಲಿ ತಮ್ಮ ಜನರಿಗೆ ಕಿರುಕುಳ ನೀಡುತ್ತಿದ್ದು, ಇದು ಅವರ ಮಾನವ ಹಕ್ಕುಗಳ ನಿಯಮಗಳಿಗೆ ವಿರುದ್ಧವಾಗಿದೆ. ಹಾಗೂ, ತಮ್ಮ ಕರೆನ್ಸಿಯನ್ನು ನಿಗ್ರಹಿಸುವ ಮೂಲಕ ಜಾಗತಿಕ ಆರ್ಥಿಕತೆಯನ್ನು ತಮ್ಮ ಪರವಾಗಿ ನಿರಂತರವಾಗಿ ಸಜ್ಜುಗೊಳಿಸುತ್ತಿದ್ದಾರೆ ಎಂದೂ ಮಾಜಿ ಹಣಕಾಸು ಸಚಿವರು ಹೇಳಿದ್ದಾರೆ.

ಇದನ್ನು ಇಲ್ಲಿದೆ ನಿಲ್ಲಿಸಬೇಕಾಗಿದೆ. ಬ್ರಿಟನ್ ಮತ್ತು ಪಶ್ಚಿಮದಾದ್ಯಂತ ರಾಜಕಾರಣಿಗಳು ಬಹಳ ಸಮಯದಿಂದ ಚೀನಾದ ಮಹತ್ವಾಕಾಂಕ್ಷೆಗಳಿಗೆ ರೆಡ್‌ ಕಾರ್ಪೆಟ್‌ ಹಾಸಿ ಸ್ವಾಗತ ಕೋರಿದ್ದು, ಅವರ ಕೆಟ್ಟ ಚಟುವಟಿಕೆಗಳ ವಿರುದ್ಧ ಕಣ್ಣು ಮುಚ್ಚಿಕೊಂಡಿದ್ದಾರೆ. ನಾನು ಇದನ್ನು ಬ್ರಿಟನ್‌ ಪ್ರಧಾನಿಯಾದ ಮೊದಲನೇ ದಿನದಂದೇ ಬದಲಾಯಿಸುತ್ತೇನೆ ಎಂದೂ ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿಯವರ ಅಳಿಯ ಹಾಗೂ ಬ್ರಿಟನ್‌ ಮುಂದಿನ ಪ್ರಧಾನಿಯಾಗುವ ರೇಸ್‌ನಲ್ಲಿರುವ ರಿಷಿ ಸುನಕ್‌ ಹೇಳಿದ್ದಾರೆ. 

click me!