UK PM Race: ಜಾನ್ಸನ್‌ಗೆ ಕಂಟಕವಾದ ಗುಂಡು ಪಾರ್ಟಿ, ಬ್ರಿಟನ್‌ ಪ್ರಧಾನಿ ರೇಸಲ್ಲಿ ಇನ್ಫಿ ಮೂರ್ತಿ ಅಳಿಯ ರಿಷಿ!

Published : Jan 15, 2022, 03:40 AM ISTUpdated : Jan 15, 2022, 03:43 AM IST
UK PM Race: ಜಾನ್ಸನ್‌ಗೆ ಕಂಟಕವಾದ ಗುಂಡು ಪಾರ್ಟಿ,  ಬ್ರಿಟನ್‌ ಪ್ರಧಾನಿ ರೇಸಲ್ಲಿ ಇನ್ಫಿ ಮೂರ್ತಿ ಅಳಿಯ ರಿಷಿ!

ಸಾರಾಂಶ

* ಬ್ರಿಟನ್‌ ಪ್ರಧಾನಿ ರೇಸಲ್ಲಿ ಇನ್ಫಿ ಮೂರ್ತಿ ಅಳಿಯ ರಿಷಿ! * ಲಾಕ್ಡೌನ್‌ ವೇಳೆ ಗುಂಡು ಪಾರ್ಟಿ ವಿವಾದದಲ್ಲಿ ಪ್ರಧಾನಿ ಬೋರಿಸ್‌ ಜಾನ್ಸನ್‌ *  ರಾಜೀನಾಮೆ ನೀಡಲು ಪಕ್ಷದಲ್ಲೇ ಒತ್ತಡ: ಬ್ರಿಟನ್‌ಗೆ ಭಾರತೀಯ ಹೊಸ ಪಿಎಂ?

ಲಂಡನ್‌ (ಜ. 15) ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ (Boris Johnson) ಕೊರೋನಾ ವೈರಸ್‌ ಲಾಕ್‌ಡೌನ್‌ (Lockdown)  ವೇಳೆ ನಿಯಮ ಉಲ್ಲಂಘಿಸಿ ಮದ್ಯದ ಪಾರ್ಟಿ ನಡೆಸಿದ ವಿವಾದದಲ್ಲಿ ಸಿಲುಕಿದ್ದು, ಅವರ ರಾಜೀನಾಮೆಗೆ ಸ್ವಪಕ್ಷದಲ್ಲೇ ತೀವ್ರ ಒತ್ತಡ ನಿರ್ಮಾಣವಾಗಿದೆ. ಕುತೂಹಲಕರ ಸಂಗತಿಯೆಂದರೆ, ಬೋರಿಸ್‌ ರಾಜೀನಾಮೆ ನೀಡಿದರೆ ಭಾರತೀಯ ಮೂಲದ ಹಾಲಿ ಬ್ರಿಟನ್‌ನ ಹಣಕಾಸು ಸಚಿವ ರಿಷಿ ಸುನಾಕ್‌ (Rishi Sunak ) ಪ್ರಧಾನಿಯಾಗುವ ಸಾಧ್ಯತೆಯಿದೆ.

41 ವರ್ಷದ ಯುವಕ ರಿಷಿ ಸುನಾಕ್‌ ಇಸ್ಫೋಸಿಸ್‌ (Infosys )ಸಂಸ್ಥಾಪಕ ಎನ್‌.ಆರ್‌.ನಾರಾಯಣಮೂರ್ತಿ (Narayana Murthy)ಮತ್ತು ಸುಧಾಮೂರ್ತಿ (Sudha Murty)ದಂಪತಿಯ ಅಳಿಯನಾಗಿದ್ದಾರೆ. ಎನ್‌ಆರ್‌ಎನ್‌ ಅವರ ಪತ್ರಿ ಅಕ್ಷತಾ ಮೂರ್ತಿಯನ್ನು ರಿಷಿ ವಿವಾಹವಾಗಿದ್ದಾರೆ. ಸದ್ಯ ಇವರು ಬ್ರಿಟನ್‌ನ ಆಡಳಿತಾರೂಢ ಕನ್ಸರ್ವೇಟಿವ್‌ ಪಕ್ಷದ ಪ್ರಭಾವಿ ಮುಖಂಡನಾಗಿದ್ದು, ಸರ್ಕಾರದಲ್ಲೂ ಪ್ರಧಾನಿಯನ್ನು ಬಿಟ್ಟರೆ ಅತ್ಯಂತ ಪ್ರಭಾವಿ ನಾಯಕ ಎಂದೇ ಹೇಳಲಾಗುತ್ತದೆ.

Brain Drain : ಪ್ರತಿಭಾ ಪಲಾಯನದ ಬಗ್ಗೆ ಇನ್ಫೋಸಿಸ್ ನಾರಾಯಣಮೂರ್ತಿ ಹೇಳಿದ್ದೇನು?

ಇವರು ಪ್ರಧಾನಿಯಾದರೆ, ಭಾರತವನ್ನು 200 ವರ್ಷಗಳ ಕಾಲ ಆಳಿದ ಬ್ರಿಟಿಷ್‌ ದೇಶವನ್ನು ಆಳುವ ಭಾರತೀಯ ಮೂಲದ ಪ್ರಥಮ ವ್ಯಕ್ತಿ ಎಂಬ ಹೆಗ್ಗಳಿಕೆ ಪಡೆಯಲಿದ್ದಾರೆ.

ರಿಷಿ ಪರ ಭರ್ಜರಿ ಬೆಟ್ಟಿಂಗ್‌: ಮದ್ಯದ ಪಾರ್ಟಿ ವಿವಾದದಲ್ಲಿ ಬೋರಿಸ್‌ ಜಾನ್ಸನ್‌ ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಿದೆ ಎಂದು ಬ್ರಿಟನ್ನಿನ ಬುಕಿಗಳ ವಲಯದಲ್ಲಿ ತೀವ್ರ ಬೆಟ್ಟಿಂಗ್‌ ನಡೆಯುತ್ತಿದೆ. ಬೋರಿಸ್‌ ರಾಜೀನಾಮೆ ನೀಡಿದರೆ ಮುಂದೆ ಪ್ರಧಾನಿಯಾಗುವವರ ಪಟ್ಟಿಯಲ್ಲಿ ಬುಕಿಗಳ ನಂ.1 ಫೇವರಿಟ್‌ ರಿಷಿ ಸುನಾಕ್‌ ಆಗಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿವೆ. ‘ರಿಷಿ ಪ್ರಧಾನಿಯಾಗಲಿದ್ದಾರೆ’ ಎಂದು 15/8 ಆಡ್ಸ್‌ನಲ್ಲಿ ಬೆಟ್ಟಿಂಗ್‌ ನಡೆಯುತ್ತಿದೆ.

ಇವರ ನಂತರ ಪ್ರಧಾನಿ ರೇಸ್‌ನಲ್ಲಿ ಹಾಲಿ ಸಚಿವರಾಗಿರುವ ಲಿಸ್‌ ಟ್ರಸ್‌, ಮೈಕಲ್‌ ಗವ್‌ ಇದ್ದಾರೆ. ನಾಲ್ಕನೇ ಸ್ಥಾನದಲ್ಲಿ ಮಾಜಿ ಸಚಿವ ಜೆರೆಮಿ ಹಂಟ್‌, ಐದನೇ ಸ್ಥಾನದಲ್ಲಿ ಭಾರತೀಯ ಮೂಲದ ಬ್ರಿಟನ್‌ ಗೃಹ ಸಚಿವೆ ಪ್ರೀತಿ ಪಟೇಲ್‌, ನಂತರದ ಸ್ಥಾನದಲ್ಲಿ ಸಾಜಿದ್‌ ಜಾವಿದ್‌ ಇದ್ದಾರೆ.

ಅಂತರ ಕಾಯ್ದುಕೊಂಡ ರಿಷಿ: 2020ರ ಮೇ ತಿಂಗಳಲ್ಲಿ ಲಾಕ್‌ಡೌನ್‌ ವೇಳೆ ನಿಯಮ ಉಲ್ಲಂಘಿಸಿ ಪ್ರಧಾನಿ ನಿವಾಸ 10 ಡೌನಿಂಗ್‌ ಸ್ಟ್ರೀಟ್‌ನಲ್ಲಿ ಪಾರ್ಟಿ ನಡೆಸಿದ್ದಕ್ಕೆ ಬುಧವಾರ ಪ್ರಧಾನಿ ಬೋರಿಸ್‌ ಜಾನ್ಸನ್‌ ಬಹಿರಂಗ ಕ್ಷಮೆ ಕೇಳಿದ್ದರು. ಆ ವೇಳೆ ಅವರ ಸಂಪುಟದ ಅನೇಕ ಸಚಿವರು ಪಕ್ಕದಲ್ಲೇ ಹಾಜರಿದ್ದರೂ, ಪ್ರಭಾವಿ ಸಚಿವ ರಿಷಿ ಸುನಾಕ್‌ ಮಾತ್ರ ಗೈರಾಗಿದ್ದರು. ಇದು ಈ ವಿವಾದದಿಂದ ರಿಷಿ ಅಂತರ ಕಾಯ್ದುಕೊಳ್ಳುತ್ತಿರುವುದಕ್ಕೆ ಹಾಗೂ ಪ್ರಧಾನಿ ಹುದ್ದೆ ಆಕಾಂಕ್ಷಿಗಳ ಪಟ್ಟಿಯಲ್ಲಿ ಅವರು ಮುಂದಿರುವುದಕ್ಕೆ ಸಾಕ್ಷಿ ಎಂದು ಹೇಳಲಾಗುತ್ತಿದೆ.

ರಾಜಕುಮಾರನ ಅಂತ್ಯಕ್ರಿಯೆಗೂ ಮುನ್ನ ಮತ್ತೆ ಪಾರ್ಟಿ:ಮೊದಲೇ ರಾಜೀನಾಮೆ ನೀಡುವಂತೆ ಒತ್ತಡ ಎದುರಿಸುತ್ತಿರುವ ಬೋರಿಸ್‌ ಜಾನ್ಸನ್‌ಗೆ ಇದೀಗ ಇನ್ನೊಂದು ವಿವಾದ ತಗಲಿಕೊಂಡಿದ್ದು, 2021ರಲ್ಲಿ ಬ್ರಿಟನ್‌ ರಾಜಕುಮಾರ ಫಿಲಿಪ್‌ (ರಾಣಿ ಎಲಿಜಬೆತ್‌ರ ಪತಿ) ಅವರ ಅಂತ್ಯಕ್ರಿಯೆಗೆ ಕೆಲವೇ ಗಂಟೆಗಳ ಮುನ್ನ ‘ಬ್ರಿಂಗ್‌ ಯುವರ್‌ ಓನ್‌ ಬೂಜ್‌’ ಹೆಸರಿನ ಮದ್ಯದ ಪಾರ್ಟಿಯಲ್ಲಿ ಖುಷಿಯಿಂದ ಕುಡಿದು, ಕುಣಿದ ಆರೋಪ ಕೇಳಿಬಂದಿದೆ. ಕನ್ಸರ್ವೇಟಿವ್‌ ಪಕ್ಷದ ಪರ ಒಲವಿರುವ ಡೈಲಿ ಟೆಲಿಗ್ರಾಫ್‌ ಪತ್ರಿಕೆಯಲ್ಲಿ ಬೋರಿಸ್‌ರ ಸಿಬ್ಬಂದಿಯೊಬ್ಬ ಈ ಸಂಗತಿ ಬಹಿರಂಗಪಡಿಸಿರುವ ಸಂದರ್ಶನ ಶುಕ್ರವಾರ ಪ್ರಕಟವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್‌ ತೆರಿಗೆ ಶಾಕ್‌ಗೆ ಚೀನಾ ದಾಖಲೆಯ ತಿರುಗೇಟು
ಮೋದಿ ರೀತಿ ರೈತರಿಗೆ ಟ್ರಂಪ್‌ ಹಣ ವರ್ಗಾವಣೆ