* ಕೋವಿಡ್ ಎಷ್ಟುಗಂಭೀರವಾಗಿದೆ ಎಂದು ತಿಳಿಸುವ ಜೀನ್ ಆವಿಷ್ಕಾರ
* ಶೇ. 27% ಭಾರತೀಯರಲ್ಲಿದೆ ಈ ವಂಶವಾಹಿ
* ದೇಶದಲ್ಲಿ ಒಂದೇ ದಿನ 2.64 ಲಕ್ಷ ಸೋಂಕು: 8 ತಿಂಗಳ ಗರಿಷ್ಠ
* ಸಕ್ರಿಯ ಕೇಸು 12.72 ಲಕ್ಷಕ್ಕೆ ಏರಿಕೆ, ಪಾಸಿಟಿವಿಟಿ ದರ ಶೇ.14.78ಕ್ಕೆ
ವಾರ್ಸಾ(ಜ. 15) ಕೋವಿಡ್(Covid 19) ಸೋಂಕಿತರು ಎಷ್ಟುಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ನಿಖರವಾಗಿ ಪತ್ತೆಹಚ್ಚುವ ವಂಶವಾಹಿಯೊಂದನ್ನು(gene) ಪೋಲೆಂಡ್ ವಿಜ್ಞಾನಿಗಳು (Polish scientists) ಕಂಡುಹಿಡಿದಿದ್ದಾರೆ. ಇದರಿಂದ ವೈದ್ಯರು ಹೆಚ್ಚು ಅಪಾಯದಲ್ಲಿರುವ ಸೋಂಕಿತರನ್ನು ಗುರುತಿಸಲು ನೆರವಾಗುತ್ತದೆ ಎಂದು ತಿಳಿಸಿದ್ದಾರೆ.
ಕೇಂದ್ರ ಮತ್ತು ಪೂರ್ವ ಯುರೋಪಿನಲ್ಲಿ ಲಸಿಕೆ ಕುರಿತ ಹಿಂಜರಿಕೆಯಿಂದಾಗಿ ಸಾವಿನ ದರ ಹೆಚ್ಚಿದೆ. ಈ ವಂಶವಾಹಿಯ ನೆರವಿನಿಂದ ಅತಿ ಹೆಚ್ಚು ಅಪಾಯದಲ್ಲಿರುವವರನ್ನು ಗುರುತಿಸಿ ಅವರಿಗೆ ಲಸಿಕೆ ಪಡೆಯುವಂತೆ ಪ್ರೋತ್ಸಾಹಿಸಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಕೊರೋನಾ ಆರ್ಭಟ, ಮೂವತ್ತು ಸಾವಿರ ಸನಿಹ
ಒಂದೂವರೆ ವರ್ಷದ ಸಂಶೋಧನೆ ನಂತರ, ಗಂಭೀರವಾದ ಅನಾರೋಗ್ಯಕ್ಕೆ ಕಾರಣವಾಗುವ ವಂಶವಾಹಿಯನ್ನು ಗುರುತಿಸಲು ಸಾಧ್ಯವಾಗಿದೆ. ಪೋಲೆಂಡ್‌ನ ಒಟ್ಟು ಜನಸಂಖ್ಯೆಯ ಶೇ.14ರಷ್ಟುಜನರಲ್ಲಿ ಈ ವಂಶವಾಹಿ ಇದೆ. ಒಟ್ಟಾರೆಯಾಗಿ ಯುರೋಪ್‌ನಲ್ಲಿ ಶೇ. 8-9ರಷ್ಟುಮತ್ತು ಭಾರತದಲ್ಲಿ ಶೇ.27ರಷ್ಟುಮಂದಿಯಲ್ಲಿ ಈ ವಂಶವಾಹಿ ಇದೆ ಎಂದು ಇಲ್ಲಿನ ಆರೋಗ್ಯ ಸಚಿವರು ತಿಳಿಸಿದ್ದಾರೆ.
ದೇಶದಲ್ಲಿ ಗರಿಷ್ಠ ಕೇಸು: ನವದೆಹಲಿ: ಶುಕ್ರವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 2,64,202 ಕೋವಿಡ್ ಪ್ರಕರಣಗಳು ದಾಖಲಾಗಿದೆ. ಇದು ಕಳೆದ 239 ದಿನಗಳಲ್ಲೇ (8 ತಿಂಗಳಲ್ಲಿ) ದಾಖಲಾದ ಅತಿ ಹೆಚ್ಚಿನ ದೈನಂದಿನ ಪ್ರಕರಣವಾಗಿದೆ. ಇದೇ ಅವಧಿಯಲ್ಲಿ 315 ಸೋಂಕಿತರು ಸಾವಿಗೀಡಾಗಿದ್ದು, ಒಟ್ಟು ಪ್ರಕರಣ 3.65 ಕೋಟಿಗೆ ಹಾಗೂ ಒಟ್ಟು ಸಾವು 4.85 ಲಕ್ಷಕ್ಕೆ ಏರಿಕೆಯಾಗಿದೆ.
ಇನ್ನು ಸಕ್ರಿಯ ಪ್ರಕರಣಗಳು 12.72 ಲಕ್ಷಕ್ಕೆ ಏರಿಕೆಯಾಗಿದ್ದು, ಇದು 220 ದಿನಗಳ (7.5 ತಿಂಗಳ) ಗರಿಷ್ಠವಾಗಿದೆ. ಕಳೆದ 24 ಗಂಟೆಗಳಲ್ಲಿ 1.54 ಲಕ್ಷ ಸಕ್ರಿಯ ಪ್ರಕರಣಗಳು ಏರಿಕೆಯಾಗಿದೆ. ದೈನಂದಿನ ಪಾಸಿಟಿವಿಟಿ ದರ ಶೇ.14.78ರಷ್ಟುದಾಖಲಾಗಿದೆ. ಈವರೆಗೆ ದೇಶದಲ್ಲಿ 155.39 ಕೊಟಿ ಡೋಸ್ ಲಸಿಕೆ ವಿತರಿಸಲಾಗಿದೆ.
ಒಮಿಕ್ರೋನ್ ಕೇಸು 5753ಕ್ಕೆ: ಈ ನಡುವೆ, 265 ಹೊಸ ಒಮಿಕ್ರೋನ್ ಪ್ರಕರಣಗಳು ಶುಕ್ರವಾರ ವರದಿಯಾಗಿವೆ. ಇದರೊಂದಿಗೆ ಒಮಿಕ್ರೋನ್ ಸೋಂಕಿತರ ಸಂಖ್ಯೆ 5,753ಕ್ಕೇರಿದೆ. ಗುರುವಾರಕ್ಕೆ ಹೋಲಿಸಿದರೆ ಒಮಿಕ್ರೋನ್ ಪ್ರಕರಣಗಳಲ್ಲಿ ಶೇ.4.83ರಷ್ಟುಹೆಚ್ಚಳವಾಗಿದೆ.
ಲಸಿಕೆ ಪಡೆಯದಿದ್ದರೆ ಎಚ್ಚರ: ಇದುವರೆಗೆ ಕೊರೊನಾ ಲಸಿಕೆ ಪಡೆಯದ ಮಂದಿಗೆ ಒಮಿಕ್ರಾನ್ ರೂಪಾಂತರಿ ಅಪಾಯಕಾರಿಯಾಗಿ ಪರಿಣಮಿಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಒಮಿಕ್ರಾನ್ ರೂಪಾಂತರಿ ಕೊರೊನಾ ವೈರಸ್‌ನಿಂದಾಗಿ ಜಾಗತಿಕವಾಗಿ ಕೋವಿಡ್ ಸೋಂಕಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಡೆಲ್ಟಾಗಿಂತಲೂ ಒಮಿಕ್ರಾನ್ ಬಹಳ ವೇಗವಾಗಿ ಹರಡುತ್ತಿದ್ದು, ಇದನ್ನು ಎಂಡೆಮಿಕ್ ಅಂತಾ ಪರಿಗಣಿಸಲು ಸಾಧ್ಯವಿಲ್ಲ ಎಂದೂ ಡಬ್ಲ್ಯೂಎಚ್‌ಒ ಹೇಳಿದೆ.
ಕೊರೊನಾ ವೈರಸ್ ಸೋಂಕಿನ ಪ್ರಮಾಣ ಜಾಗತಿಕವಾಗಿ ತೀವ್ರ ಸ್ವರೂಪದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಒಮಿಕ್ರಾನ್ ವೈರಸ್ ಅನ್ನು ಸೋಂಕು ಕೊನೆಯಾಗುವ ಲಕ್ಷಣ ಎಂದು ಈಗಲೇ ಪರಿಗಣಿಸಲು ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ. ಕಳೆದ ಒಂದು ವಾರದಲ್ಲಿ ಈಗಾಗಲೇ 15 ದಶಲಕ್ಷ ಕೊರೊನಾ ಪ್ರಕರಣಗಳು ಜಾಗತಿಕವಾಗಿ ದೃಢಪಟ್ಟಿದ್ದು, ಲೆಕ್ಕಕ್ಕೇ ಸಿಗದ ಕೋಟ್ಯಂತರ ಪ್ರಕರಣಗಳು ಇರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಡೆಲ್ಟಾಗಿಂತಲೂ ಒಮಿಕ್ರಾನ್ ಅಷ್ಟೇನೂ ಅಪಾಯಕಾರಿ ಅಲ್ಲವಾದರೂ ಈ ರೂಪಾಂತರಿಯ ಅಪಾಯ ಇದ್ದೇ ಇದೆ. ಕೊರೊನಾ ಲಸಿಕೆ ಪಡೆದವರು ಆಸ್ಪತ್ರೆಗೆ ದಾಖಲಾಗುವಷ್ಟು ಗಂಭೀರ ಸ್ವರೂಪದ ರೋಗ ಲಕ್ಷಣ ಹೊಂದಿರುವುದಿಲ್ಲ, ಇನ್ನು ಸಾವಿನ ಪ್ರಮಾಣ ಕೂಡಾ ಡೆಲ್ಟಾಗೆ ಹೋಲಿಸಿದರೆ ಕಡಿಮೆ ಎಂದು ಹೇಳಬಹುದಾಗಿದೆ. ಆದರೆ, ಲಸಿಕೆ ಪಡೆಯದವರು ಸೋಂಕನ್ನು ಹರಡುವ ಸಾಧ್ಯತೆ ಇದ್ದೇ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.