ಎಫ್-16 ದುರ್ಬಳಕೆ: ತಡವಾಗಿ ಬೆಳಕಿಗೆ ಬಂದ ಪಾಕ್’ಗೆ ಅಮೆರಿಕದ ತಪರಾಕಿ!

By Suvarna NewsFirst Published Dec 12, 2019, 5:03 PM IST
Highlights

ಭಾರತದ ವಾದಕ್ಕೆ ಜಾಗತಿಕ ವೇದಿಕೆಯಲ್ಲಿ ಸದಾ ಮನ್ನಣೆ| ಪಾಕಿಸ್ತಾನದ ಕುತಂತ್ರಗಳಿಗೆ ಜಾಗತಿಕ ವೇದಿಕೆ ತಪರಾಕಿ| ಎಫ್ -16 ಯುದ್ಧ ವಿಮಾನ ದುರ್ಬಳಕೆಗೆ ಅಸಮಾಧಾನ ವ್ಯಕ್ತಪಡಿಸಿದ ಅಮೆರಿಕ| ‘ಭಯೋತ್ಪಾದನೆ ವಿರೋಧಿ ಕಾರ್ಯಾಚರಣೆಗಳಿಗೆ ಮಾತ್ರ ಎಫ್-16 ಯುದ್ಧ ವಿಮಾನದ ಬಳಕೆ’| ಪಾಕ್ ವಾಯುಸೇನಾ ಮುಖ್ಯಸ್ಥರಿಗೆ ಪತ್ರ ಬರೆದಿದ್ದ ಶಸ್ತ್ರಾಸ್ತ್ರ ನಿಯಂತ್ರಣ ಮತ್ತು ಅಂತರರಾಷ್ಟ್ರೀಯ ಭದ್ರತಾ ವ್ಯವಹಾರಗಳ ಕಾರ್ಯದರ್ಶಿ| ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಪಾಕ್ ವಿದೇಶಾಂಗ ಇಲಾಖೆ|

ವಾಷಿಂಗ್ಟನ್(ಡಿ.12): ಭಾರತದ ವಾದಕ್ಕೆ ಜಾಗತಿಕ ವೇದಿಕೆಯಲ್ಲಿ ಸದಾ ಮನ್ನಣೆ ಸಿಗುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಪಾಕಿಸ್ತಾನದ ಕುತಂತ್ರಗಳಿಗೆ ಜಾಗತಿಕ ವೇದಿಕೆ ತಪರಾಕಿ ನೀಡುತ್ತದೆ ಎಂಬುದೂ ಮತ್ತೊಮ್ಮೆ ಸಾಬೀತಾಗಿದೆ.

ಪಾಕಿಸ್ತಾನದ ಎಫ್ -16 ಯುದ್ಧ ವಿಮಾನವನ್ನು ಭಾರತೀಯ ವಾಯುಪಡೆ ಹೊಡೆದುರುಳಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಅಮೆರಿಕ, ಪಾಕಿಸ್ತಾನ ಸೈನ್ಯಕ್ಕೆ ತಾನು ನೀಡಿರುವ ಎಫ್ -16 ಯುದ್ಧ ವಿಮಾನದ ದುರುಪಯೋಗ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಪಾಕಿಸ್ತಾನದ F-16 ವಿಮಾನ ಹೊಡೆದುರುಳಿಸಿದ ಭಾರತೀಯ ವಾಯುಸೇನೆ

ಈ ಕುರಿತು ಪಾಕಿಸ್ತಾನ ವಾಯುಪಡೆಯ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡಿರುವ ಅಮೆರಿಕ, ಒಪ್ಪಂದಂತೆ ಈ ಯುದ್ಧ ವಿಮಾನಗಳನ್ನು ಕೇವಲ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳಿಗೆ ಮಾತ್ರ ಬಳಸಬೇಕು ಎಂದು ತಾಕೀತು ಮಾಡಿದೆ.

ಬಾಲಾಕೋಟ್ ವೈಮಾನಿಕ ದಾಳಿಯ ಸಮಯದಲ್ಲಿ ಅಮೆರಿಕದ ಶಸ್ತ್ರಾಸ್ತ್ರ ನಿಯಂತ್ರಣ ಮತ್ತು ಅಂತರರಾಷ್ಟ್ರೀಯ ಭದ್ರತಾ ವ್ಯವಹಾರಗಳ ಕಾರ್ಯದರ್ಶಿ ಆಂಡ್ರಿಯಾ ಥಾಂಪ್ಸನ್, ಪಾಕಿಸ್ತಾನದ ವಾಯುಪಡೆಯ ಮುಖ್ಯಸ್ಥ ಏರ್ ಮಾರ್ಷಲ್ ಮುಜಾಹಿದ್ ಅನ್ವರ್ ಖಾನ್ ಅವರಿಗೆ ಕಳೆದ ಆಗಸ್ಟ್ ತಿಂಗಳಲ್ಲಿ ಪತ್ರ ಬರೆದು ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.

ಭಾರತ F-16 ವಿಮಾನ ಹೊಡೆದಿಲ್ಲ ಎಂದ ಅಮೆರಿಕದ ಮ್ಯಾಗಜಿನ್: ನಿರ್ಮಲಾ ತಿರುಗೇಟು!

ಫೆಬ್ರವರಿ 26ರ ಬಾಲಾಕೋಟ್ ವೈಮಾನಿಕ ದಾಳಿಯ ನಂತರದ ಘಟನೆಗಳನ್ನು ಅಮೆರಿಕ ನೇರವಾಗಿ ಉಲ್ಲೇಖಿಸಿಲ್ಲವಾದರೂ, ಈ ವಿಮಾನದ ದುರ್ಬಳಕೆ ಸಲ್ಲ ಎಂದು ಪಾಕಿಸ್ತಾನಕ್ಕೆ ತಾಕೀತು ಮಾಡಿದೆ ಎಂದು ಅಮೆರಿಕದ ಮಾಧ್ಯಮವೊಂದು ವರದಿ ಮಾಡಿದೆ. 

ಬಾಲಾಕೋಟ್ ವಾಯುದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ಎಫ್-16 ಯುದ್ಧ ವಿಮಾನ ಭಾರತದ ಮೇಲೆ ದಾಳಿ ಮಡಲು ಮುಂದಾದಾಗ, ಭಾರತೀಯ ವಾಯುಪಡೆ ವಿಮಾನವನ್ನು ಹೊಡೆದುರುಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಫೆಬ್ರವರಿ 27 ರಂದು ವೈಮಾನಿಕ ಕಾದಾಟದ ವೇಳೆ ಮಿಗ್ -21 ಯುದ್ಧ ವಿಮಾನ, ಪಾಕಿಸ್ತಾನದ ಎಫ್ -16 ಅನ್ನು ಹೊಡೆದುರುಳಿಸಿದೆ ಎಂದು ಭಾರತೀಯ ವಾಯುಸೇನೆ ಹೇಳಿತ್ತು.

ಇನ್ನೊಂದೆಡೆ ಅಮೆರಿಕದ ಈ ಪತ್ರದ ಕುರಿತು ಪ್ರತಿಕ್ರಿಯಿಸಲು ಪಾಕಿಸ್ತಾನದ ವಿದೇಶಾಂಗ ಇಲಾಖೆ ಮತ್ತು ಪಾಕಿಸ್ತಾನದ ರಾಯಭಾರ ಕಚೇರಿ ನಿರಾಕರಿಸಿವೆ.

click me!