ಪ್ರಸಿದ್ಧ ತಬಲಾ ವಾದಕ ಉಸ್ತಾದ್ ಝಾಕಿರ್ ಹುಸೇನ್ (73) ಅವರು ಹೃದಯ ಸಂಬಂಧಿ ಸಮಸ್ಯೆಯಿಂದ ನಿಧನರಾಗಿದ್ದಾರೆ. ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಖ್ಯಾತ ತಬಲ ವಾದಕ ಝಾಕೀರ್ ಹುಸೇನ್ ನಿಧನ: ಸಂಗೀತ ಲೋಕದ ದಿಗ್ಗಜ್ಜರಿಂದ ಸಂತಾಪ
ನವದೆಹಲಿ: ಪ್ರಸಿದ್ದ ತಬಲಾ ಮಾಂತ್ರಿಕ ಉಸ್ತಾದ್ ಝಾಕಿರ್ ಹುಸೇನ್ (73) ಅವರು ನಿಧನರಾಗಿದ್ದಾರೆ. ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಅವರ ಕುಟುಂಬದವರು ಝಾಕೀರ್ ನಿಧನವನ್ನು ಖಚಿತಪಡಿಸಿದ್ದಾರೆ. 73 ವರ್ಷದ ಜಾಕಿರ್ ಹುಸೇನ್ ಅವರು ಇಡಿಯೋಪಥಿಕ್ ಪಲ್ಮನರಿ ಫೈಬ್ರೋಸಿಸ್‌ನಿಂದ ಉಂಟಾಗುವ ತೊಂದರೆಗಳಿಂದ ಸಾವನ್ನಪ್ಪಿದ್ದಾರೆ ಎಂದು ಅವರ ಕುಟುಂಬ ಹೇಳಿಕೆಯಲ್ಲಿ ತಿಳಿಸಿದೆ. ಕಳೆದ ಎರಡು ವಾರಗಳಿಂದ ಆಸ್ಪತ್ರೆಯಲ್ಲಿದ್ದ ಅವರ ಆರೋಗ್ಯ ತೀವ್ರ ಹದಗೆಟ್ಟ ನಂತರ ತೀವ್ರ ನಿಗಾ ಘಟಕಕ್ಕೆ (ಐಸಿಯು) ಸ್ಥಳಾಂತರಿಸಲಾಗಿತ್ತು.
ತಮ್ಮ ಕಾಲದ ಅತ್ಯಂತ ಶ್ರೇಷ್ಠ ತಬಲಾ ವಾದಕ ಎಂದು ಗುರುತಿಸಿಕೊಂಡಿದ್ದ ಝಾಕಿರ್ ಹುಸೇನ್ ಅವರು ಪತ್ನಿ ಆಂಟೋನಿಯಾ ಮಿನ್ನೆಕೋಲಾ ಮತ್ತು ಹೆಣ್ಣುಮಕ್ಕಳಾದ ಅನಿಸಾ ಖುರೇಷಿ ಮತ್ತು ಇಸಾಬೆಲ್ಲಾ ಖುರೇಷಿ ಅವರನ್ನು ಅಗಲಿದ್ದಾರೆ. ಮಾರ್ಚ್ 9, 1951 ರಂದು ಜನಿಸಿದ ಉಸ್ತಾದ್ ಝಾಕಿರ್ ಹುಸೇನ್ ಅವರು ಪ್ರಸಿದ್ಧ ತಬಲಾ ಮಾಸ್ಟರ್ ಉಸ್ತಾದ್ ಅಲ್ಲಾ ರಖಾ ಅವರ ಪುತ್ರರಾಗಿದ್ದರು. ಏಳನೇ ವಯಸ್ಸಿನಿಂದ ತಬಲ ವಾದನ ಶುರು ಮಾಡಿದ ಅವರು ತಮ್ಮ ವೃತ್ತಿಜೀವನದಲ್ಲಿ ಇತರ ಖ್ಯಾತ ತಬಲ ವಾದಕರಾದ ರವಿಶಂಕರ್, ಅಲಿ ಅಕ್ಬರ್ ಖಾನ್ ಮತ್ತು ಶಿವಕುಮಾರ್ ಶರ್ಮಾ ಸೇರಿದಂತೆ ಭಾರತದ ಎಲ್ಲಾ ಅಪ್ರತಿಮ ತಬಲ ವಾದಕರೊಂದಿಗೆ ಪ್ರದರ್ಶನ ನೀಡಿದ್ದಾರೆ.
ಸಂಗೀತಾ ಕ್ಷೇತ್ರದಲ್ಲಿನ ಸಾಧನೆಗಾಗಿ ಅವರಿಗೆ ಒಟ್ಟು ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ಲಭಿಸಿದೆ. ಈ ವರ್ಷದ ಆರಂಭದಲ್ಲಿ 66ನೇ ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ ಅವರಿಗೆ ಮೂರನೇ ಬಾರಿ ಗ್ರ್ಯಾಮಿ ಪ್ರಶಸ್ತಿ ಲಭಿಸಿತ್ತು. ಇದರ ಜೊತೆಗೆ 1988 ರಲ್ಲಿ ಪದ್ಮಶ್ರೀ, 2002 ರಲ್ಲಿ ಪದ್ಮಭೂಷಣ ಮತ್ತು 2023 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗೂ ಝಾಕಿರ್ ಹುಸೇನ್ ಪಾತ್ರರಾಗಿದ್ದಾರೆ. ಹುಸೇನ್ ನಿಧನದ ವಿಚಾರ ತಿಳಿಯುತ್ತಿದ್ದಂತೆ ಸಂಗೀತಾ ಲೋಕದ ಅನೇಕ ದಿಗ್ಗಜ್ಜರು ಸೇರಿದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.
ಭಾರತದ ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತಾ ನಿರ್ದೇಶಕ ರಿಕ್ಕಿ ಕೇಜ್ ಕೂಡ ಹುಸೇನ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಭಾರತ ಇದುವರೆಗೆ ಕಂಡ ಶ್ರೇಷ್ಠ ಸಂಗೀತಗಾರರಲ್ಲಿ ಮತ್ತು ವ್ಯಕ್ತಿಗಳಲ್ಲಿ ಝಾಕಿರ್ ಅವರು ಒಬ್ಬರು. ಸ್ವತಃ ಅತ್ಯುತ್ತಮ ಸಂಗೀತಗಾರರಾಗಿದ್ದರು. ಅನೇಕ ಸಂಗೀತಗಾರರ ವೃತ್ತಿ ಜೀವನಕ್ಕೆ ಬುನಾದಿ ಹಾಕಿದ್ದರು.. ಅವರು ಕೌಶಲ್ಯ ಮತ್ತು ಜ್ಞಾನದ ನಿಧಿಯಾಗಿದ್ದರು ಅವರು ತಮ್ಮ ಕಾರ್ಯಗಳ ಮೂಲಕ ಇಡೀ ಸಂಗೀತ ಲೋಕವನ್ನು ಪ್ರೋತ್ಸಾಹಿಸಿದರು. ಅವರ ಪರಂಪರೆ ಶಾಶ್ವತವಾಗಿ ಉಳಿಯುತ್ತದೆ ಮತ್ತು ಅವರ ಪ್ರಭಾವವು ಪೀಳಿಗೆಯವರೆಗೂ ಇರುತ್ತದೆ ಅವರು ಬೇಗನೆ ನಮ್ಮನ್ನು ತೊರೆದರು ಎಂದು ರಿಕಿ ಕೇಜ್ ಅವರು ಹುಸೇನ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.