
ನವದೆಹಲಿ: ಉದ್ಯೋಗ, ರಜೆ ಸೇರಿದಂತೆ ಯಾವುದೇ ಕಾರಣಕ್ಕೆ ದೇಶ ತೊರೆದಿರುವ ಎಚ್1 ಬಿ ವೀಸಾ ಹೊಂದಿರುವ ಉದ್ಯೋಗಿಗಳು ಸೆ.22ರೊಳಗೆ ಅಮೆರಿಕಕ್ಕೆ ಮರಳಬೇಕು ಎಂದು ಅಮೆರಿಕ ಮತ್ತು ಭಾರತೀಯ ಮೂಲದ ಟೆಕ್ ಹಾಗೂ ಇತರೆ ಕಂಪನಿಗಳು ತಮ್ಮ ಸಿಬ್ಬಂದಿಗೆ ಸೂಚಿಸಿವೆ. ಹೀಗಾಗಿ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ವಿವಿಧ ಕಾರಣಕ್ಕೆ ದೇಶ ತೊರೆದಿದ್ದ ಸಾವಿರಾರು ಜನ ಸಿಬ್ಬಂದಿಗಳು ಭಾರೀ ಸಮಸ್ಯೆ ಎದುರಿಸುವಂತಾಗಿತ್ತು.
ಸೆ.22ರಿಂದ ಅಮೆರಿಕ ಎಚ್1 ಬಿ ವೀಸಾ ಶುಲ್ಕವನ್ನು 1 ಲಕ್ಷ ಡಾಲರ್ (85 ಲಕ್ಷ ರು.)ಗೆ ಹೆಚ್ಚಿಸಿದೆ. ಇದು ಹಾಲಿ ಅಮೆರಿಕದಲ್ಲಿ ಇರುವ ಸಿಬ್ಬಂದಿಗೆ ಅನ್ವಯ ಆಗುತ್ತಾ, ನವೀಕರಣವಾಗುವ ವೀಸಾಗಳಿಗೆ, ರಜೆ ಮೇಲೆ ತವರಿಗೆ ತೆರಳಿದವರಿಗೂ ಅನ್ವಯ ಆಗುತ್ತಾ ಅಥವಾ ಕೇವಲ ಹೊಸ ವೀಸಾಕ್ಕೆ ಮಾತ್ರವೇ ಅನ್ವಯವೇ ಎಂಬ ಬಗ್ಗೆ ಅಮೆರಿಕದ ಅಧಿಕಾರಿಗಳು ಮೊದಲಿಗೆ ಸ್ಪಷ್ಟನೆ ನೀಡಿರಲಿಲ್ಲ. ಹೀಗಾಗಿ ಸಂಭವನೀಯ ತೊಂದರೆ ತಪ್ಪಿಸುವ ನಿಟ್ಟಿನಲ್ಲಿ ಬೇರೆ ದೇಶಗಳಿಗೆ ತೆರಳಿರುವ ಉದ್ಯೋಗಿಗಳು ಸೆ.22ಕ್ಕೆ ಮುನ್ನವೇ ಅಮೆರಿಕಕ್ಕೆ ಮರಳಬೇಕು ಎಂದು ಹಲವು ಕಂಪನಿಗಳು ಸೂಚಿಸಿದ್ದವು. ಜೊತೆಗೆ ‘ಎಚ್-1ಬಿ ಮತ್ತು ಎಚ್-4 ವೀಸಾ ಹೊಂದಿರುವವರು ಅಮೆರಿಕ ಬಿಟ್ಟು ತೆರಳಬಾರದು ಎಂದು ಸೂಚಿಸಿದ್ದವು.
ಆದರೆ ಬಳಿಕ ಇದು ಹೊಸ ವೀಸಾಕ್ಕೆ ಮಾತ್ರ ಅನ್ವಯ. ಹಾಲಿ ಎಚ್1 ಬಿ ವೀಸಾ ಪಡೆದವರು ಸೆ.22ರೊಳಗೆ ತುರ್ತಾಗಿ ಮರಳಬೇಕಿಲ್ಲ ಎಂದು ಅಮೆರಿಕದ ಅಧಿಕಾರಿಗಳು ಸ್ಪಷ್ಟನೆ ನೀಡಿದರು. ಹೀಗಾಗಿ ಸಾವಿರಾರು ಭಾರತೀಯರು ಮತ್ತು ಇತರೆ ದೇಶಗಳ ಉದ್ಯೋಗಿಗಳು ನಿರಾಳರಾದರು.
ಕಂಪನಿಗೆ ಚಿಂತೆಯೇಕೆ?:
ಪ್ರಸಕ್ತ ಒಬ್ಬ ಉದ್ಯೋಗಿಗೆ ಕಂಪನಿಗಳು ವಾರ್ಷಿಕ 1500- 2000 ಡಾಲರ್ ಶುಲ್ಕ ಪಾವತಿಸುತ್ತವೆ. ಅದು ಈಗ 1 ಲಕ್ಷ ಡಾಲರ್‌ಗೆ ಏರಿದೆ. ಒಂದು ವೇಳೆ ರಜೆಯಲ್ಲಿ ತೆರಳಿದವರಿಗೂ ಈ ನೀತಿ ಅನ್ವಯವಾಗಿದ್ದರೆ, ಅವು ನೂರಾರು ಕೋಟಿ ರು. ಹಣ ಕಟ್ಟಬೇಕಾಗುತ್ತೆ ಎಂಬ ಆತಂಕ ಉಂಟಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ