
ವಾಷಿಂಗ್ಟನ್: ವಿದೇಶಿಗರ ಪಾಲಿಗೆ ಅಮೆರಿಕ ವಾಸ ಉಸಿರುಗಟ್ಟಿಸುವಂತಹ ಬೆಳವಣಿಗೆಗಳು ಆಗುತ್ತಿವೆ. ಇದೀಗ ಅಮೆರಿಕದಲ್ಲಿ 30 ದಿನಕ್ಕಿಂತ ಹೆಚ್ಚು ವಾಸಿಸುವವ ವಿದೇಶಿ ಪ್ರಜೆಗಳು ಸರ್ಕಾರದೊಂದಿಗೆ ನೋಂದಾಯಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ತಪ್ಪಿದಲ್ಲಿ ದಂಡ, ಸೆರೆವಾಸದಂತಹ ಶಿಕ್ಷೆಯಾಗುವ ಸಂಭವವಿದೆ.
ಈ ಬಗ್ಗೆ ‘ಅಕ್ರಮ ಏಲಿಯನ್‌ಗಳಿಗೆ ಸಂದೇಶ’ ಎಂಬ ತಲೆಬರಹದೊಂದಿಗೆ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಅಮೆರಿಕದ ಆಂತರಿಕ ಭದ್ರತಾ ವಿಭಾಗ, ‘30 ದಿನಗಳಿಗಿಂತ ಹೆಚ್ಚು ಕಾಲ ಅಮೆರಿಕದಲ್ಲಿ ವಾಸಿಸುತ್ತಿರುವವರು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ತಪ್ಪಿದರೆ ಅದನ್ನು ಅಪರಾಧವೆಂದು ಪರಿಗಣಿಸಲಾಗುವುದು ಮತ್ತು ಶಿಕ್ಷಿಸಲಾಗುವುದು. ಈ ಬಗ್ಗೆ ಸ್ಪಷ್ಟ ಸಂದೇಶ ನೀಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ವಿಭಾಗದ ಕಾರ್ಯದರ್ಶಿ ಕ್ರಿಸ್ಟಿ ನೋಮ್ ಅವರು, ದೇಶ ತೊರೆದು ಸ್ವಯಂ ಗಡೀಪಾರಾಗಿ ಎಂದಿದ್ದಾರೆ’ ಎಂದು ಪೋಸ್ಟ್ ಮಾಡಿದೆ.
ಅಂತೆಯೇ, ‘ಸ್ವಯಂ ಗಡೀಪಾರಾದವರು ಮುಂದೆ ಮತ್ತೆ ಸಕ್ರಮವಾಗಿ ಅಮೆರಿಕಕ್ಕೆ ವಲಸೆ ಬರಬಹುದು. ದೇಶ ಬಿಡಲು ಹಣವಿಲ್ಲದಿದ್ದರೆ ಸಬ್ಸಿಡಿಯನ್ನೂ ನೀಡಲಾಗುವುದು’ ಎನ್ನಲಾಗಿದೆ. ಈ ನಿಯಮದಿಂದ ಎಚ್-1ಬಿ ಅಥವಾ ವಿದ್ಯಾರ್ಥಿ ವೀಸಾ ಹೊಂದಿರುವವರಿಗೆ ನೇರವಾಗಿ ತೊಂದರೆಯಾಗದು. ಆದರೆ, ಎಚ್-1ಬಿ ವೀಸಾ ಹೊಂದಿರುವವರು ಕೆಲಸ ಕಳೆದುಕೊಂಡಮೇಲೂ, ನಿಗದಿತ ಅವಧಿಯ ಬಳಿಕ ದೇಶ ತೊರೆಯದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್ಸ್ ಮೇಲೆ ಮತ್ತೆ ಟ್ರಂಪ್ ತೆರಿಗೆ?
ವಾಷಿಂಗ್ಟನ್: ತನ್ನೊಂದಿಗೆ ವ್ಯಾಪಾರ ಸಂಬಂಧ ಹೊಂದಿರುವ ದೇಶಗಳನ್ನು ತೆರಿಗೆಯ ಸೂತ್ರದಿಂದ ಕುಣಿಸುವುದನ್ನು ಅಮೆರಿಕ ಮುಂದುವರೆಸಿದೆ. ಸ್ಮಾರ್ಟ್‌ಫೋನ್, ಕಂಪ್ಯೂಟರ್‌ಗಳಂತಹ ಎಲೆಕ್ಟ್ರಾನಿಕ್ ಸಾಧನಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡುವುದಾಗಿ ಶನಿವಾರ ಘೋಷಿಸಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಅವುಗಳ ಮೇಲೆ ಮತ್ತೆ ತೆರಿಗೆ ಹೇರುವ ಸೂಚನೆ ನೀಡಿದ್ದಾರೆ
ಈ ಬಗ್ಗೆ ಮಾತನಾಡಿರುವ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ, ‘ಮುಂದಿನ ದಿನಗಳಲ್ಲಿ ವಲಯಾಧರಿತ ಸುಂಕ ವಿಧಿಸಲಾಗುವುದು. ಆಗ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸೆಮಿಕಂಡಕ್ಟರ್ ವಿಭಾಗದಡಿ ಪರಿಗಣಿಸಿ, ವಿಶೇಷ ತೆರಿಗೆ ವಿಧಿಸಲಾಗುವುದು’ ಎಂದರು.ಅತ್ತ ಈ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಂಪ್, ‘ಸೆಮಿಕಂಡಕ್ಟರ್ ಮೇಲೆ ವಿಧಿಸಲಾಗುವ ತೆರಿಗೆಯ ಬಗ್ಗೆ ಸೋಮವಾರ ಘೋಷಿಸಲಾಗುವುದು’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗ್ಯಾರಂಟಿ ಹೊಡೆತ: ಮಹಾರಾಷ್ಟ್ರದಲ್ಲಿ ಬಸ್ ನೌಕರರ ವೇತನಕ್ಕೂ ದುಡ್ಡಿಲ್ಲ
ಚೀನಾ 125% ಸುಂಕ ಯುದ್ಧ
ಚೀನಾ ಮತ್ತು ಅಮೆರಿಕದ ನಡುವಿನ ತೆರಿಗೆ ಯುದ್ಧ ಇದೀಗ ಮತ್ತಷ್ಟು ಬಿಗಡಾಯಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾದ ಮೇಲಿನ ಪ್ರತಿ ತೆರಿಗೆಯನ್ನು ಶೇ.145ಕ್ಕೇರಿಸಿದ ಬೆನ್ನಲ್ಲೇ ಚೀನಾ ಕೂಡ ಅಮೆರಿಕದ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಶೇ.125ಕ್ಕೆ ಹೆಚ್ಚಿಸಿದೆ.
ಅಮೆರಿಕದಿಂದ ಆಮದಾಗುವ ವಸ್ತುಗಳ ಮೇಲೆ ಚೀನಾ ಶೇ.84 ತೆರಿಗೆ ಹೇರಿತ್ತು. ಆದರೆ ಟ್ರಂಪ್ ತಾವು ಚೀನಾ ಮೇಲೆ ಹೇರಿದ್ದ ತೆರಿಗೆಯನ್ನು ಶೇ.125ರಿಂದ 146ಕ್ಕೆ ಹೆಚ್ಚಿಸಿದ ಬೆನ್ನಲ್ಲೇ ಚೀನಾ ತನ್ನ ತೆರಿಗೆಯನ್ನು ಶೇ.125ಕ್ಕೆ ಏರಿಸಿದೆ. ಈ ನಡುವೆ, ಅಮೆರಿಕದ ಏಕಪಕ್ಷೀಯ ಬೆದರಿಕೆ ತಂತ್ರವನ್ನು ಎದುರಿಸಲು ತಮ್ಮ ಜತೆ ಕೈಜೋಡಿಸುವಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಯುರೋಪ್ ಒಕ್ಕೂಟಕ್ಕೆ (ಇಯು) ಆಗ್ರಹಿಸಿದ್ದಾರೆ. ಒಂದು ವೇಳೆ ಅಮೆರಿಕವು ತೆರಿಗೆ ಆಟವನ್ನು ಇನ್ನೂ ಮುಂದುವರಿಸಿದರೆ ಚೀನಾ ಅದನ್ನು ಕಡೆಗಣಿಸಲಿದೆ ಎಂದಿರುವ ಚೀನಾ ಹಣಕಾಸು ಸಚಿವಾಲಯ, ವಿಶ್ವಾದ್ಯಂತ ಸೃಷ್ಟಿಯಾಗಿರುವ ಆರ್ಥಿಕ ತಲ್ಲಣಕ್ಕೆ ಅಮೆರಿಕ ಸಂಪೂರ್ಣ ಹೊಣೆ ಹೊರಬೇಕು ಎಂದೂ ಹೇಳಿದೆ.
ಇದನ್ನೂ ಓದಿ: ಭಾರತೀಯರಿಗೆ ಸಂಕಷ್ಟ ತಂದಿಟ್ಟ ಟ್ರಂಪ್ ಸರ್ಕಾರದ ಹೊಸ ವೀಸಾ ನೀತಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ