ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಜನಮತಗಣನೆ ನಡೆಸಲು ನಾನು ಬಯಸುವೆ. ಪಾಕಿಸ್ತಾನದ ಜತೆಗೆ ಇರಲು ಇಚ್ಛಿಸುತ್ತಾರಾ ಅಥವಾ ಸ್ವತಂತ್ರವಾಗಿ ಇರಲು ಬಯಸುತ್ತಾರಾ ಎಂಬುದನ್ನು ಅಲ್ಲಿನ ಜನರೇ ನಿರ್ಧರಿಸಲಿ’ ಎಂದಿದ್ದಾರೆ.
ಇಸ್ಲಾಮಾಬಾದ್ [ಜ.20]: ‘ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ನಮ್ಮದು. ಅದರ ವಶಕ್ಕೂ ಸಿದ್ಧ’ ಎಂದು ಭಾರತದ ಸಚಿವರು ಹಾಗೂ ಸೇನಾ ಮುಖ್ಯಸ್ಥರು ಗುಡುಗುತ್ತಿದ್ದಂತೆಯೇ ತಿರುಗೇಟು ನೀಡಲು ಯತ್ನಿಸಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಜನಮತಗಣನೆ ನಡೆಸಲು ನಾನು ಬಯಸುವೆ. ಪಾಕಿಸ್ತಾನದ ಜತೆಗೆ ಇರಲು ಇಚ್ಛಿಸುತ್ತಾರಾ ಅಥವಾ ಸ್ವತಂತ್ರವಾಗಿ ಇರಲು ಬಯಸುತ್ತಾರಾ ಎಂಬುದನ್ನು ಅಲ್ಲಿನ ಜನರೇ ನಿರ್ಧರಿಸಲಿ’ ಎಂದಿದ್ದಾರೆ.
‘ಇಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯುವುದಿಲ್ಲ. ಸೇನೆಯು ನಮ್ಮ ಮೇಲೆ ದೌರ್ಜನ್ಯ ನಡೆಸುತ್ತದೆ. ಹೀಗಾಗಿ ನಮಗೆ ಸ್ವಾತಂತ್ರ್ಯ ಬೇಕು’ ಎಂದು ಪಿಒಕೆ ಜನರು ಪ್ರತಿಭಟನೆ ನಡೆಸುತ್ತಿರುತ್ತಾರೆ. ಹೀಗಾಗಿ ಇಮ್ರಾನ್ ಹೇಳಿಕೆಗೆ ಮಹತ್ವ ಬಂದಿದೆ.
undefined
ಜರ್ಮನಿ ಚಾನೆಲ್‌ಗೆ ಸಂದರ್ಶನ ನೀಡಿದ ಇಮ್ರಾನ್ ಖಾನ್, ‘ಆಜಾದ್ ಕಾಶ್ಮೀರದಲ್ಲಿ (ಪಾಕ್ ಆಕ್ರಮಿತ ಕಾಶ್ಮೀರ) ಮುಕ್ತ ಚುನಾವಣೆ ನಡೆಯುತ್ತ ಅಲ್ಲಿ ಜನರು ತಮ್ಮದೇ ಆದ ಸರ್ಕಾರ ಚುನಾಯಿಸುತ್ತಾರೆ. ಅಲ್ಲಿ ಮುಕ್ತ ಚುನಾವಣೆ ನಡೆಯುತ್ತದೆ ಎಂದು ತೋರಿಸಲು ಅಂತಾರಾಷ್ಟ್ರೀಯ ವೀಕ್ಷಕರನ್ನೂ ಕರೆಸಲು ಸಿದ್ಧ. ಆದರೆ ಒಂದಂತೂ ಸತ್ಯ. ಆಜಾದ್ ಕಾಶ್ಮೀರದಲ್ಲಿ 1974 ರಲ್ಲಿ ರಚನೆಯಾದ ಪ್ರತ್ಯೇಕ ಸಂವಿಧಾನವಿದೆ.
ಆ ಸಂವಿಧಾನದ ಅನುಸಾರ, ಈ ಭಾಗದಲ್ಲಿ ಚುನಾವಣೆಗೆ ಸ್ಪರ್ಧಿಸಲು ಇಚ್ಛಿಸುವವರು ತಾವು ಪಾಕಿಸ್ತಾನಕ್ಕೆ ನಿಷ್ಠರಾಗಿದ್ದೇವೆ ಎಂಬ ಮುಚ್ಚಳಿಕೆಗೆ ಸಹಿ ಹಾಕಬೇಕು’ ಎಂದು ಹೇಳಿದರು. ಕಳೆದ ವರ್ಷ ಆಕ್ರಮಿತ ಕಾಶ್ಮೀರದ ಮುಜಫ್ಫ ರಾಬಾದ್‌ಗೆ ಇಮ್ರಾನ್ ಭೇಟಿ ನೀಡಿದ್ದಾಗ ಅಲ್ಲಿನ ಜನರು, ‘ಇಮ್ರಾನ್ ವಾಪಸ್ ಹೋಗಿ’ ಹಾಗೂ ‘ಕಾಶ್ಮೀರ್ ಬನೇಗಾ ಹಿಂದುಸ್ತಾನ್’ ಎಂದು ಘೋಷಣೆ ಕೂಗಿದ್ದರು. ಆದರೆ, ಸ್ವಾತಂತ್ರ್ಯ ಬಯಸುವ ಆಕ್ರಮಿತ ಕಾಶ್ಮೀರದ ಜನರಿಗೆ ಕಿರುಕುಳ ಸಾಮಾನ್ಯವಾಗಿದೆ.
ಜಮ್ಮು-ಕಾಶ್ಮೀರವನ್ನು ವಿಶ್ವಸಂಸ್ಥೆ ನಮಗೆ ಕೊಡಿಸಲಿ: ಈ ನಡುವೆ, ಟ್ವೀಟ್ ಕೂಡ ಮಾಡಿರುವ ಇಮ್ರಾನ್ ಖಾನ್, ‘ಭಾರತದ ಪಡೆಗಳು ಪಾಕಿಸ್ತಾನದ ಮೇಲೆ ದಾಳಿ ಮಾಡುತ್ತಿವೆ. ಈ ವಿಷಯದಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಮಧ್ಯಪ್ರವೇಶ ಮಾಡಿ, ಭಾರತಕ್ಕೆ ‘ಭಾರತ ಆಕ್ರಮಿತ ಜಮ್ಮು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಮರಳಿಸಿ’ ಎಂದು ಸೂಚಿಸಬೇಕು’ ಎಂದು ಆಗ್ರಹಿಸಿದ್ದಾರೆ.