ಕೊಲ್ಲಿ ರಾಷ್ಟ್ರದ ಇತಿಹಾಸದಲ್ಲೇ ಅತಿದೊಡ್ಡ ಮಳೆಗೆ ತತ್ತರಿಸಿರುವ ದುಬೈ ನಗರದಲ್ಲಿ ಪರಿಹಾರ ಕಾರ್ಯ ಭರದಿಂದ ಸಾಗಿದ್ದರೂ ನಗರ ಇನ್ನೂ ಜಲಾವೃತವಾಗಿಯೇ ಇದೆ.
ದುಬೈ (ಏ.19): ಕೊಲ್ಲಿ ರಾಷ್ಟ್ರದ ಇತಿಹಾಸದಲ್ಲೇ ಅತಿದೊಡ್ಡ ಮಳೆಗೆ ತತ್ತರಿಸಿರುವ ದುಬೈ ನಗರದಲ್ಲಿ ಪರಿಹಾರ ಕಾರ್ಯ ಭರದಿಂದ ಸಾಗಿದ್ದರೂ ನಗರ ಇನ್ನೂ ಜಲಾವೃತವಾಗಿಯೇ ಇದೆ. 4 ದಿನಗಳ ಹಿಂದೆ ಸುರಿದ ಮಳೆಗೆ ದುಬೈ ಸೇರಿ ಯುಎಇನ ಹಲವು ನಗರಗಳು ಅಕ್ಷರಶಃ ತತ್ತರಿಸಿ ಹೋಗಿವೆ. ಅತ್ಯಂತ ಜನನಿಬಿಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದೇ ಖ್ಯಾತಿ ಗಳಿಸಿರುವ ದುಬೈ ವಿಮಾನ ನಿಲ್ದಾಣದಲ್ಲಿ ಕೊಂಚ ಮಳೆ ತಗ್ಗಿದ ಹಿನ್ನೆಲೆಯಲ್ಲಿ ಸಣ್ಣ ಪ್ರಮಾಣದಲ್ಲಿ ಸಂಚಾರ ಆರಂಭಿಸಲಾಗಿದೆ.
ಮೊದಲ ಆದ್ಯತೆ ಯಾಗಿ ದುಬೈ ಮೂಲಕ ತೆರಳುವವರನ್ನು ಎ ಮಿರೇಟ್ಸ್ ವಿಮಾನಗಳು ಅವರ ಗಮ್ಯ ಸ್ಥಾನಕ್ಕೆ ತಲುಪಲು ಸಿದ್ಧತೆ ಕೈಗೊಂಡಿವೆ. ಆದರೆ ನಗರದ ರಸ್ತೆಗಳು ಇನ್ನೂ ಜಲಾವೃತವಾಗಿರುವ ಕಾರಣ ವಿಮಾನ ಸಿಬ್ಬಂದಿ ಸಕಾಲದಲ್ಲಿ ವಿಮಾನ ನಿಲ್ದಾಣಕ್ಕೆ ತಲುಪಲು ಸಾಧ್ಯವಾಗದೆ ವಿಮಾನಗಳು ವಿಳಂಬವಾಗಿ ಸಂಚರಿಸುತ್ತಿವೆ. ಇದರ ನಡುವೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಎಲ್ಲ ಶಾಲಾ ಕಾಲೇಜುಗಳಿಗೆ ಒಂದು ವಾರಗಳ ಕಾಲ ರಜೆ ಘೋಷಿಸಲಾಗಿದೆ.
ಮರುಭೂಮಿ ದೇಶಗಳಲ್ಲಿ ಪ್ರವಾಹ: ಭಾರಿ ಮಳೆಗೆ ಒಮಾನ್‌ನಲ್ಲಿ 18 ಸಾವು!
ದುಬೈನಲ್ಲಿ ಸೋಮವಾರ- ಮಂಗಳವಾರ 25 ಸೆಂ.ಮೀನಷ್ಟು ಮಳೆ ಸುರಿದಿತ್ತು. ಇದು ದೇಶದಲ್ಲಿ ಒಂದಿಡೀ ವರ್ಷಕ್ಕೆ ಸುರಿಯುವ ಮಳೆಗೆ ಸಮ. ಹೀಗಾಗಿ ಪರಿಸ್ಥಿತಿ ನಿರ್ವಹಿಸಲಾಗದೇ ಅಧಿಕಾರಿಗಳು ಕಂಗಾಲಾಗಿದ್ದಾರೆ. ಸಹಾಯವಾಣಿ: ಈ ನಡುವೆ ಮಳೆ ಸಂಬಂಧಿ ಸಮಸ್ಯೆಗೆ ಸಿಕ್ಕಿಹಾಕಿಕೊಂಡಿರುವ ಭಾರತೀಯ ರಿಗಾಗಿ ದುಬೈನಲ್ಲಿನ ಭಾರತೀಯ ದೂತಾವಾಸ ಕಚೇರಿ ಸಹಾಯವಾಣಿ ತೆರೆದಿದೆ. ಅವುಗಳ ಸಂಖ್ಯೆ ಹೀಗಿದೆ +971501205172, +971569950590, +971507347676, +971585754213.