
ನವದೆಹಲಿ: ಫ್ರಾನ್ಸ್‌ನ ಡಸಾಲ್ಟ್ ಕಂಪನಿಯಿಂದ ರಫೇಲ್ ಯುದ್ಧ ವಿಮಾನ ಖರೀದಿಸುವ ಭಾರತ ಸರ್ಕಾರದ ನಿರ್ಧಾರದ ಬಗ್ಗೆ ಭಾರತದ ವಿಪಕ್ಷಗಳ ವಿರೋಧದ ಬಗ್ಗೆ ಫ್ರಾನ್ಸ್ ಅಧ್ಯಕ್ಷ ಎಮ್ಯಾನುವಲ್ ಮ್ಯಾಕ್ರಾನ್ ಅಚ್ಚರಿ ವ್ಯಕ್ತಡಿಸಿದ್ದಾರೆ. ‘ಯುದ್ಧವಿಮಾನಗಳು ಭಾರತೀಯ ಸೇನೆಯ ಬಲವರ್ಧನೆ ಮಾಡುವುದರ ಜತೆಗೆ ಉಭಯ ದೇಶಗಳ ವ್ಯೂಹಾತ್ಮಕ ಸಂಬಂಧವನ್ನೂ ಬಲ ತುಂಬುತ್ತದೆ. ಆದಾರೂ ಅದನ್ಯಾಕೆ ಟೀಕಿಸಲಾಗುತ್ತಿದೆ?’ ಎಂದು ಪ್ರಶ್ನಿಸಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ಎಐ ಶೃಂಗದಲ್ಲಿ ಭಾಗಿಯಾಗಲು ಆಗಮಿಸಿರುವ ಮ್ಯಾಕ್ರಾನ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ‘ಭಾರತದೊಂದಿಗಿನ ರಫೇಲ್ ಒಪ್ಪಂದ ವಿಸ್ತರಿಸುತ್ತಿದೆ. ಈ ವ್ಯವಹಾರ ನಮ್ಮ ಡಸಾಲ್ಟ್ ಏವಿಯೇಷನ್ ಕಂಪನಿ ಹಾಗೂ ನಿಮ್ಮ ಸರ್ಕಾರದೊಂದಿಗೆ ಇರಬಹುದು. ಆದರೆ ಅದರಿಂದ ಸೇನಾ ಲಾಭವಾಗುವುದು ಭಾರತಕ್ಕೆ. ಜತೆಗೆ ಇದರಿಂದ ಅನೇಕ ಉದ್ಯೋಗ ಸೃಷ್ಟಿಯಾಗುತ್ತವೆ. ಎರಡೂ ದೇಶಗಳ ನಡುವಿನ ವಿಶೇಷ ಜಾಗತಿಕ ವ್ಯೂಹಾತ್ಮಕ ಪಾಲುದಾರಿಕೆಯನ್ನು ರಫೇಲ್ ಮುನ್ನಡೆಸುತ್ತಿವೆ’ ಎಂದರು.
ಇದೇ ವೇಳೆ ಟಾಟಾ ಜತೆಗೆ ಫ್ರಾನ್ಸ್‌ನ ಏರ್‌ಬಸ್ ಜಂಟಿಯಾಗಿ ಕೋಲಾರ ಸಮೀಪ ನಿರ್ಮಿಸಿರುವ ಹೆಲಿಕಾಪ್ಟರ್ ಘಟಕವನ್ನು ಉಲ್ಲೇಖಿಸುತ್ತಾ, ‘ಹೆಚ್ಚು ಭಾರತೀಯ ಭಾಗಗಳುಳ್ಳ ಶಸ್ತ್ರಾಸ್ತ್ರ ಉತ್ಪಾದಿಸುವುದರ ಜತೆಗೆ ಭಾರತದಲ್ಲೇ ಉತ್ಪಾದನೆ ಮಾಡಲು ಬದ್ಧರಾಗಿದ್ದೇವೆ’ ಎಂದು ಹೇಳಿದರು.
2016ರಲ್ಲಿ ಮೊದಲ ಬಾರಿಗೆ ಫ್ರಾನ್ಸ್‌ನಿಂದ 36 ರಫೇಲ್ ಯುದ್ಧ ವಿಮಾನ ಖರೀದಿಗೆ ಭಾರತ ಒಪ್ಪಂದ ಮಾಡಿಕೊಂಡಿತ್ತು. 60,000 ಕೋಟಿ ರು. ವೆಚ್ಚದ ಈ ಖರೀದಿ ಯೋಜನೆಯಡಿ ಮೊದಲ ವಿಮಾನ 2020ರಲ್ಲಿ ಭಾರತಕ್ಕೆ ಬಂದಿತ್ತು. ಆದರೆ ವಿಮಾನ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ವಿಪಕ್ಷ ಕಾಂಗ್ರೆಸ್ ಆರೋಪಿಸಿತ್ತು. ಆದರೆ ಸರ್ಕಾರ ಇದನ್ನು ಸ್ಪಷ್ಟವಾಗಿ ಅಲ್ಲಗಳೆದಿತ್ತು. ಇತ್ತೀಚಿನ ಪಾಕ್ ವಿರುದ್ಧದ ಆಪರೇಷನ್ ಸಿಂದೂರ ವೇಳೆ ರಫೇಲ್ ಯುದ್ಧ ವಿಮಾನಗಳು ಅದ್ಭುತ ಸಾಹಸ ಪ್ರದರ್ಶಿಸಿದ್ದವು. ಅದರ ಬೆನ್ನಲ್ಲೇ ಫ್ರಾನ್ಸ್‌ನಿಂದ 3.25 ಲಕ್ಷ ಕೋಟಿ ರು. ವೆಚ್ಚದಲ್ಲಿ ಇನ್ನೂ 114 ರಫೇಲ್ ಖರೀದಿಗೆ ಭಾರತ ನಿರ್ಧರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ