ಪುಟಿನ್‌ ಪದಚ್ಯುತಿಗೆ ರಹಸ್ಯ ಸಂಚು, ರಷ್ಯಾಧಿಪತಿಗೆ ಗುಣಪಡಿಸಲಾಗದ ಕ್ಯಾನ್ಸರ್?

By Suvarna News  |  First Published May 16, 2022, 5:54 AM IST

* ಪುಟಿನ್‌ಗೆ ಗುಣಪಡಿಸಲಾಗದ ರಕ್ತದ ಕ್ಯಾನ್ಸರ್‌?

* ರಷ್ಯಾದ ಆಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರ ಪದಚ್ಯುತಿ


ಕೀವ್‌(ಮೇ.18): ರಷ್ಯಾದ ಆಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರ ಪದಚ್ಯುತಿಗೆ ರಷ್ಯಾದಲ್ಲಿ ರಹಸ್ಯ ಸಂಚನ್ನು ರೂಪಿಸಲಾಗುತ್ತಿದೆ ಎಂದು ಉಕ್ರೇನಿನ ಸೇನಾ ಜನರಲ್‌ ಹೇಳಿದ್ದಾರೆ.

ಉಕ್ರೇನಿನ ಜ. ಕೈರಿಲೊ ಬುದಾನೊವ್‌ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ‘ರಷ್ಯಾ ಹಾಗೂ ಉಕ್ರೇನ್‌ ಯುದ್ಧ ವರ್ಷಾಂತ್ಯದ ಒಳಗಾಗಿ ಸಮಾಪ್ತಿಯಾಗುತ್ತದೆ. ಉಕ್ರೇನ್‌ ವಿರುದ್ಧ ರಷ್ಯಾ ಸೋತಲ್ಲಿ ಪುಟಿನ್‌ ಅವರನ್ನು ಅಧ್ಯಕ್ಷರ ಸ್ಥಾನದಿಂದ ತೆಗೆದುಹಾಕುವುದು ನಿಶ್ಚಿತವಾಗಿದೆ. ಈ ಹಿನ್ನೆಲೆಯಲ್ಲಿ ಪುಟಿನ್‌ ಅವರ ಪದಚ್ಯುತಿಗಾಗಿ ಈಗಾಗಲೇ ರಷ್ಯಾದಲ್ಲಿ ಸಂಚು ನಡೆಯುತ್ತಿದೆ. ಪುಟಿನ್‌ ಪದಚ್ಯುತಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದಿದ್ದಾರೆ.

Tap to resize

Latest Videos

ಈ ನಡುವೆ ಪುಟಿನ್‌ ಅವರ ಅನಾರೋಗ್ಯದ ಕುರಿತು ಸಾಕಷ್ಟುವರದಿಗಳು ಕಂಡು ಬಂದ ಹಿನ್ನೆಲೆಯಲ್ಲಿ ಮಾತನಾಡಿದ ಬುದಾನೊವ್‌, ‘ಪುಟಿನ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಹದಗೆಟ್ಟಿದೆ’ ಎಂದಿದ್ದಾರೆ. ಮಾಜಿ ಬ್ರಿಟಿಷ್‌ ಗೂಡಚಾರನಾದ ಕ್ರಿಸ್ಟೋಫರ್‌ ಸ್ಟೀಲೆ ಕೂಡಾ ಪುಟಿನ್‌ ಗುಣಪಡಿಸಲಾಗದ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ.

ವಿಜಯೋತ್ಸವ ದಿನದ ವೇಳೆ ಪುಟಿನ್‌ ಕಾಲ ಮೇಲೆ ಬ್ಲಾಂಕೆಟ್‌!

 

 

ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಪಾರ್ಕಿನ್ಸನ್‌ ಅಥವಾ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ, ಸೋಮವಾರ ಇಲ್ಲಿ ನಡೆದ ವಿಜಯೋತ್ಸವ ದಿನ ಕಾರ್ಯಕ್ರಮದ ವೇಳೆ ಪುಟಿನ್‌ ಕಾಲ ಮೇಲೆ ದಪ್ಪನಾದ ಬ್ಲಾಂಕೆಟ್‌ ಹಾಕಿಕೊಂಡು ಕುಳಿತಿರುವ ಫೋಟೋಗಳು ಬಹಿರಂಗವಾಗಿದೆ. ಇದು ಪುಟಿನ್‌ ಆರೋಗ್ಯದ ಕುರಿತು ಮತ್ತಷ್ಟುಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವಿಜಯೋತ್ಸವದ ದಿನ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪರೇಡ್‌ ವೇಳೆ ಎರಡನೇ ಮಹಾಯುದ್ಧದಲ್ಲಿ ಭಾಗಿಯಾಗಿದ್ದ ಹಿರಿಯ ಸೇನಾನಿಗಳೊಂದಿಗೆ ಕಾರ್ಯಕ್ರಮ ವೀಕ್ಷಿಸಿದ ಪುಟಿನ್‌, ಈ ವೇಳೆ ತಮ್ಮ ಕಾಲ ಮೇಲೆ ದಪ್ಪನಾದ ಬ್ಲಾಂಕೆಂಟ್‌ ಅನ್ನು ಇಡೀ ಕಾರ್ಯಕ್ರಮದುದ್ದಕ್ಕೂ ಹಾಕಿಕೊಂಡು ಕುಳಿತಿದ್ದು ನಾನಾ ಅನುಮಾನಗಳಿಗೆ ಕಾರಣವಾಗಿದೆ. ಜೊತೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹಿರಿಯರಿಂದ ಪುಟಿನ್‌ ಹೆಚ್ಚು ಬಳಲಿದಂತೆ ಕಂಡುಬಂದಿತ್ತು ಎಂದು ವರದಿಗಳು ಹೇಳಿವೆ.

ಕೆಲ ದಿನಗಳ ಹಿಂದೆ ತಮ್ಮ ದೇಶದ ರಕ್ಷಣಾ ಸಚಿವ ಸೆರ್ಗೇಯ್‌ ಜೊತೆ ಮಾತುಕತೆ ನಡೆಸುವ ವೇಳೆ ಪುಟಿನ್‌ ಟೇಬಲ್‌ ಅನ್ನು ಬಲವಾಗಿ ಹಿಡಿದುಕೊಂಡು ದೃಶ್ಯಗಳು ಕೂಡಾ ವೈರಲ್‌ ಆಗಿದ್ದವು. ಅದರ ಬೆನ್ನಲ್ಲೇ, ಪುಟಿನ್‌ ಕ್ಯಾನ್ಸರ್‌ಗೆ ಶೀಘ್ರವೇ ಚಿಕಿತ್ಸೆ ಪಡೆಯಲು ಸಜ್ಜಾಗಿದ್ದಾರೆ. ಹೀಗಾಗಿ ಕೆಲ ದಿನಗಳವರೆಗೆ ಅಧಿಕಾರವನ್ನು ತಮ್ಮ ಆಪ್ತರಿಗೆ ವರ್ಗಾಯಿಸಲು ನಿರ್ಧರಿಸಿದ್ದಾರೆ ಎಂದು ವರದಿಗಳು ಹೇಳಿದ್ದವು. ಅದರ ಬೆನ್ನಲ್ಲೇ ಪುಟಿನ್‌ ಆರೋಗ್ಯದ ಕುರಿತು ಸಾಕಷ್ಟುಅನುಮಾನಗಳನ್ನು ಹುಟ್ಟುಹಾಕುವ ಮತ್ತಷ್ಟುಫೋಟೋಗಳು ಹೊರಬಿದ್ದಿವೆ.

 

click me!