
ಕೊಲಂಬೊ(ಮೇ.16): ನಾಗರಿಕ ದಂಗೆ ಹಾಗೂ ತೀವ್ರ ಆರ್ಥಿಕ ಕುಸಿತದಿಂದ ಕಂಗೆಟ್ಟಿರುವ ಶ್ರೀಲಂಕಾದಲ್ಲಿ ಎಲ್‌ಟಿಟಿಇ ಭಯೋತ್ಪಾದಕ ಸಂಘಟನೆ ಸದ್ಯದಲ್ಲೇ ದಾಳಿ ನಡೆಸುವ ಸಾಧ್ಯತೆಯಿದೆ ಎಂಬ ಗುಪ್ತಚರ ಮಾಹಿತಿ ಇನ್ನಷ್ಟುಆತಂಕ ಮೂಡಿಸಿದೆ. ಹೀಗಾಗಿ ಶ್ರೀಲಂಕಾದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಭಾರತದ ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ‘ದ ಹಿಂದೂ’ ಪತ್ರಿಕೆ ಈ ಕುರಿತು ವರದಿ ಮಾಡಿದೆ. ಮೂರು ದಶಕಗಳ ಕಾಲ ಲಂಕಾದಲ್ಲಿ ನಾಗರಿಕ ಯುದ್ಧ ನಡೆಸಿ, 2009ರಲ್ಲಿ ನಿಷ್ಕಿ್ರಯಗೊಂಡ ಎಲ್‌ಟಿಟಿಇ ಮೇ 18ರಂದು ನಡೆಯುವ ಮುಲ್ಲಿವೈಕಲ್ ದಿನಾಚರಣೆ (ಎಲ್‌ಟಿಟಿಇ ನಿರ್ಮೂಲನೆಯ ವಾರ್ಷಿಕೋತ್ಸವ) ವೇಳೆ ದಾಳಿ ನಡೆಸುವ ಸಾಧ್ಯತೆಯಿದೆ. ಶ್ರೀಲಂಕಾ ಅಧ್ಯಕ್ಷ ಗೋಟಬಾಯ ರಾಜಪಕ್ಸೆ ಈ ಹಿಂದೆ ರಕ್ಷಣಾ ಸಚಿವರಾಗಿದ್ದಾಗ ಎಲ್‌ಟಿಟಿಇಯನ್ನು ನಿರ್ಮೂಲನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ಎಲ್‌ಟಿಟಿಇ ಮುಂದಾಗಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.
ಇದನ್ನು ಗಂಭೀರವಾಗಿ ತೆಗೆದುಕೊಂಡ ಶ್ರೀಲಂಕಾ ಸರ್ಕಾರ, ಭಾರತದ ಗುಪ್ತಚರ ಸಂಸ್ಥೆಗಳ ಬಳಿ ಹೆಚ್ಚಿನ ಮಾಹಿತಿ ಕೇಳಿದೆ. ಜೊತೆಗೆ ಭದ್ರತೆ ಬಿಗಿಗೊಳಿಸಿ ಎಲ್‌ಟಿಟಿಇ ಚಟುವಟಿಕೆಗಳು ಪುನಾರಂಭಗೊಂಡಿವೆಯೇ ಎಂದು ತನಿಖೆ ಆರಂಭಿಸಿದೆ.
ಗ್ಯಾಸ್ ಇಲ್ಲ, ಆಹಾರವಿಲ್ಲ: ಲಂಕಾದಲ್ಲಿ ಮತ್ತೊಂದು ಪ್ರತಿಭಟನೆ
ಶ್ರೀಲಂಕಾದಲ್ಲಿ ನಡೆಯುತ್ತಿರುವ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟಿನ ನಡುವೆಯೇ ಜನರು ಸರ್ಕಾರದ ವಿರುದ್ಧ ಮತ್ತೊಮ್ಮೆ ಹೊಸ ಪ್ರತಿಭಟನೆಯನ್ನು ಆರಂಭಿಸಿದ್ದಾರೆ. ರಾಜಧಾನಿ ಕೊಲೊಂಬೊದಲ್ಲಿ ಕಫä್ರ್ಯ ಹಿಂಪಡೆದ ಬೆನ್ನಲ್ಲೇ, ಕೈಯಲ್ಲಿ ಖಾಲಿ ಗ್ಯಾಸ್ ಸಿಲಿಂಡರ್ ಹಿಡಿದು ಜನರು ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗುತ್ತ ಬೀದಿಗಿಳಿದಿದ್ದಾರೆ.
‘ಮನೆಯಲ್ಲಿ ಗ್ಯಾಸ್ ಇಲ್ಲ, ತಿನ್ನಲು ಏನೂ ಇಲ್ಲ. ಕಳೆದ 2 ತಿಂಗಳಿನಿಂದ ನಮಗೆ ಗ್ಯಾಸ್ ಪೂರೈಕೆಯನ್ನು ಮಾಡಲಾಗುತ್ತಿಲ್ಲ’ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಪ್ರಧಾನಿ ಮಹಿಂದಾ ರಾಜಪಕ್ಸೆಯವರ ರಾಜೀನಾಮೆ ಬೆನ್ನಲ್ಲೇ ದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ಸುಮಾರು 9 ಜನರು ಬಲಿಯಾಗಿದ್ದರು. ಹೊಸ ಪ್ರಧಾನಿ ರನಿಲ್ ವಿಕ್ರಮಸಿಂಘೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ ಹೊಸ ಸರ್ಕಾರ ರಚನೆ ಮಾಡಲಿದ್ದು, ಈ ನಡುವೆ ಅಗತ್ಯ ವಸ್ತುಗಳ ಖರೀದಿಗೆ ಅನುಮತಿಸಲು ದೇಶಾದ್ಯಂತ ಕಫä್ರ್ಯವನ್ನು 12 ಗಂಟೆಗಳ ಕಾಲ ಹಿಂಪಡೆಯಲಾಗಿತ್ತು. ಈ ವೇಳೆ ಪ್ರತಿಭಟನಾಕಾರರು ಖಾಲಿ ಸಿಲಿಂಡರ್ ಹಿಡಿದು ಪ್ರತಿಭಟನೆ ನಡೆಸಿದ್ದು, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ