ಇರಾನ್‌ನಲ್ಲೀಗ ಸರ್ಕಾರದ ಬೆಂಬಲಿಗರ ಬಲಪ್ರದರ್ಶನ!

Kannadaprabha News   | Kannada Prabha
Published : Jan 13, 2026, 04:23 AM IST
Iran

ಸಾರಾಂಶ

ಇರಾನ್‌ರ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ವಿರುದ್ಧ ಒಂದು ಕಡೆ 15 ದಿನದಿಂದ ಪ್ರತಿಭಟನೆಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ಸೋಮವಾರದಿಂದ ಖಮೇನಿ ಪರ ಸಾವಿರಾರು ಮಂದಿ ಬೀದಿಗಿಳಿದಿದ್ದಾರೆ. ಇದರಿಂದ ಹಿಂಸಾಚಾರ ಹೆಚ್ಚಿ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗುವ ಆತಂಕವಿದೆ.

ದುಬೈ: ಇರಾನ್‌ರ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ವಿರುದ್ಧ ಒಂದು ಕಡೆ 15 ದಿನದಿಂದ ಪ್ರತಿಭಟನೆಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ಸೋಮವಾರದಿಂದ ಖಮೇನಿ ಪರ ಸಾವಿರಾರು ಮಂದಿ ಬೀದಿಗಿಳಿದಿದ್ದಾರೆ. ಇದರಿಂದ ಹಿಂಸಾಚಾರ ಹೆಚ್ಚಿ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗುವ ಆತಂಕವಿದೆ.

ಇರಾನ್‌ನ ಸರ್ಕಾರಿ ಮಾದ್ಯಮ ವರದಿ ಮಾಡುತ್ತಿರುವ ಪ್ರಕಾರ, ಸಾವಿರಾರು ಸರ್ಕಾರ-ಪರ ಪ್ರತಿಭಟನಾಕಾರರು ಟೆಹ್ರಾನ್‌ನಲ್ಲಿರುವ ಎಂಘೆಲಾಬ್ (ಕ್ರಾಂತಿ) ಚೌಕದ ಕಡೆ ಹಿಂಡುಹಿಂಡಾಗಿ ಬಂದು ಬಲಪ್ರದರ್ಶನ ನಡೆಸಿದ್ದಾರೆ. ಇದನ್ನು, ‘ಅಮೆರಿಕನ್ನರು ಮತ್ತು ಯಹೂದಿಗಳು ನಡೆಸುತ್ತಿರುವ ಭಯೋತ್ಪಾದನೆಯ ವಿರುದ್ಧ ಇರಾನಿಗರ ದಂಗೆ’ ಎಂದೇ ಬಣ್ಣಿಸಲಾಗುತ್ತಿದೆ.

ಇಂತಹ ದೃಶ್ಯಗಳ ಪ್ರಸಾರ ಮಾಡುವ ಮೂಲಕ ಇರಾನ್‌ ಸರ್ಕಾರ, ದೇಶದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಶಾಂತಿ ಮರಳುತ್ತಿದೆ ಎಂದು ಬಿಂಬಿಸಲು ಯತ್ನಿಸುತ್ತಿದೆ. ಜತೆಗೇ, ಇದು ತನಗಿರುವ ಬೆಂಬಲದ ಪ್ರದರ್ಶನವನ್ನೂ ಮಾಡುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

‘ಕಿಲ್ ಸ್ವಿಚ್’ ಬಳಸಿ ಸ್ಟಾರ್‌ಲಿಂಕ್‌ಗೂ ಖಮೇನಿ ಕೊಕ್ಕೆ!!

ಟೆಹ್ರಾನ್‌: ಇರಾನ್‌ನಲ್ಲಿ ಇಸ್ಲಾಮಿಕ್ ಸರ್ವಾಧಿಕಾರಿ ಅಯತೋಲ್ಲಾ ಅಲಿ ಖಮೇನಿ ವಿರುದ್ಧದ ದಂಗೆ 15ನೇ ದಿನಕ್ಕೆ ಕಾಲಿಟ್ಟಿದ್ದು, ಈಗಾಗಲೇ ಪ್ರತಿಭಟನೆಗಳನ್ನು ಹತ್ತಿಕ್ಕಲು ಇಂಟರ್ನೆಟ್‌ ಸ್ಥಗಿತಗೊಳಿಸಲಾಗಿದೆ. ಇದಕ್ಕೆ ಪರ್ಯಾಯವಾಗಿ ಜನರು ಬಳಸುತ್ತಿದ್ದ ಅಮೆರಿಕದ ಎಲಾನ್‌ ಮಸ್ಕ್ ಅವರ ಉಪಗ್ರಹ ಆಧರಿತ ನೇರ ಇಂಟರ್ನೆಟ್‌ ಸೇವೆ ‘ಸ್ಟಾರ್‌ಲಿಂಕ್‌’ ಅನ್ನೂ ಇರಾನ್‌ ಬಹುತೇಕ ಸ್ತಬ್ಧಗೊಳಿಸಿದೆ.

ತಜ್ಞರ ಪ್ರಕಾರ, ಇರಾನ್‌ ಸರ್ಕಾರವು ಸ್ಟಾರ್‌ಲಿಂಕ್ ಉಪಗ್ರಹಗಳನ್ನು ಜಾಮ್ ಮಾಡಲು ‘ಕಿಲ್ ಸ್ವಿಚ್’ ಜಾಮಿಂಗ್‌ ತಂತ್ರಜ್ಞಾನ ಬಳಸಿದೆ. ಕಿಲ್‌ ಸ್ವಿಚ್‌ ಅನ್ನು ಸಕ್ರಿಯಗೊಳಿಸಿದರೆ ಉಪಗ್ರಹದ ಯಾವುದೇ ಸಂಕೇತ ಬರುವುದುಲ್ಲ. ಇದು ವಿಶ್ವದ ಅತ್ಯಂತ ದುಬಾರಿ ಮಿಲಿಟರಿ ದರ್ಜೆಯ ಜಾಮಿಂಗ್ ಉಪಕರಣವಾಗಿದೆ. ಇದು ಸ್ಥಳೀಯವಲ್ಲದಿದ್ದರೂ, ರಷ್ಯಾ ಅಥವಾ ಚೀನಾದಿಂದ ಇರಾನ್‌ ತರಿಸಿಕೊಂಡಿರಬಹುದು ಎನ್ನಲಾಗಿದೆ.4 ದಿನದ ಹಿಂದೆ ಇರಾನ್‌ನಲ್ಲಿ ಇಂಟರ್ನೆಟ್‌ ಸ್ತಬ್ಧವಾದಾಗ ಜನರು ಸ್ಟಾರ್‌ಲಿಂಕ್‌ ಮೊರೆ ಹೋಗಿದ್ದರು. ಆದರೆ ಕಿಲ್‌ ಸ್ವಿಚ್‌ ಮೂಲಕ ಸೋಮವಾರದಷ್ಟೊತ್ತಿಗೆ ಶೇ.80ರಷ್ಟು ಸ್ಟಾರ್‌ಲಿಂಕ್‌ ಸೇವೆಯನ್ನು ಸ್ತಬ್ಧಗೊಳಿಸಲಾಗಿದೆ ಎಂದು ಗೊತ್ತಾಗಿದೆ.

ಪರಿಸ್ಥಿತಿ ನಿಯಂತ್ರಣದಲ್ಲಿದೆ: ಇರಾನ್‌ ವಿದೇಶಾಂಗ ಸಚಿವ

ದುಬೈ: ಕಳೆದ 15 ದಿನಗಳಿಂದ ಸರ್ಕಾರ ವಿರೋಧಿ ಪ್ರತಿಭಟನೆಯಿಂದ ಇರಾನ್‌ ಹೊತ್ತಿ ಉರಿಯುತ್ತಿರುವ ಹೊರತಾಗಿಯೂ ಅಲ್ಲಿನ ವಿದೇಶಾಂಗ ಸಚಿವ ಅಬ್ಬಾಸ್‌ ಅರಾಗ್ಚಿ, ‘ದೇಶದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ’ ಎಂದು ಘೋಷಿಸಿದ್ದಾರೆ. ಆದರೆ ಇದಕ್ಕೆ ಸೂಕ್ತ ಸಾಕ್ಷಿಗಳನ್ನು ಅವರು ನೀಡಿಲ್ಲ.ರಾಜಧಾನಿ ಟೆಹ್ರಾನ್‌ನಲ್ಲಿ ವಿದೇಶಿ ರಾಜತಾಂತ್ರಿಕರೊಂದಿಗೆ ಸಂವಾದ ನಡೆಸಿದ ಅರಾಗ್ಚಿ, ‘ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಆದರೆ ಪ್ರತಿಭಟನಾಕಾರರು ಹಿಂಸೆಯಲ್ಲಿ ತೊಡಗಿ, ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರು ಮಧ್ಯಪ್ರವೇಶಿಸಲು, ಆ ಮೂಲಕ ಇರಾನ್‌ ಮೇಲೆ ದಾಳಿ ಮಾಡಲು ಕುಮ್ಮಕ್ಕು ನೀಡುತ್ತಿದ್ದಾರೆ’ ಎಂದು ಆರೋಪಿದರು. ಈ ಬಗ್ಗೆ, ಇರಾನ್‌ನಿಂದ ನೇರವಾಗಿ ವರದಿ ಮಾಡುತ್ತಿರುವ ಏಕೈಕ ಟೀವಿ ಅಲ್‌-ಜಜೀರಾ ಮಾಹಿತಿ ನೀಡಿದೆ.‘ಪ್ರತಿಭಟನಾಕಾರರನ್ನು ಮುಟ್ಟಿದರೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಟ್ರಂಪ್‌ ಇರಾನ್‌ಗೆ ಎಚ್ಚರಿಸಿದ್ದರು. ಇರಾನ್‌ನಲ್ಲಿ ಈ ವರೆಗೆ 2000ಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೆಲವು ವರದಿಗಳು ಹೇಳಿದರೆ, ಮಾನವ ಹಕ್ಕು ಸಂಸ್ಥೆಯೊಂದು 544 ಜನರು ಸಾವನ್ನಪ್ಪಿದ್ದಾರೆ ಎಂದಿದೆ.

ಭಾರತೀಯರ ಬಂಧಿಸಿಲ್ಲ: ಇರಾನ್‌ನಿಂದ ಸ್ಪಷ್ಟನೆ

ನವದೆಹಲಿ: ಇರಾನ್‌ನಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕುತ್ತಿರುವ ಪೊಲೀಸರು ಇದರ ಭಾಗವಾಗಿ 6 ಭಾರತೀಯರು ಮತ್ತು ಆಫ್ಘನಿಗಳನ್ನು ಬಂಧಿಸಿದ್ದಾರೆ ಎಂದು ವರದಿಯಾಗಿತ್ತು. ಇದನ್ನು ಭಾರತದಲ್ಲಿರುವ ಇರಾನ್‌ ರಾಯಭಾರಿ ಮೊಹಮ್ಮದ್ ಫತಾಲಿ ತಳ್ಳಿಹಾಕಿದ್ದಾರೆ.‘ಇರಾನ್‌ ಪೊಲೀಸರು 6 ಭಾರತೀಯ ಮತ್ತು 10 ಆಫ್ಘನ್‌ ಪ್ರಜೆಗಳನ್ನು ಬಂಧಿಸಿದ್ದಾರೆ’ ಎಂದು ಎಕ್ಸ್‌ನಲ್ಲಿ ಮಾಡಲಾಗಿದ್ದ ಪೋಸ್ಟ್‌ ಒಂದನ್ನು ಹಂಚಿಕೊಂಡಿರುವ ಫತಾಲಿ, ‘ಇರಾನ್‌ನಲ್ಲಾಗುತ್ತಿರುವ ಬೆಳಗಣಿಗೆಗಳ ಬಗ್ಗೆ ಕೆಲ ವಿದೇಶಿ ಎಕ್ಸ್‌ ಖಾತೆಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಮಾಹಿತಿ ಸುಳ್ಳು. ಸುದ್ದಿ ತಿಳಿಯಲು ಆಸಕ್ತಿ ಇರುವವರು ವಿಶ್ವಾಸಾರ್ಹ ಮೂಲಗಳನ್ನು ಅವಲಂಬಿಸಿ’ ಎಂದು ಬರೆದಿದ್ದಾರೆ.

ಎಚ್ಚರದಿಂದ ಇರಿ: ಇರಾನ್‌ನಲ್ಲಿನ ಭಾರತೀಯರಿಗೆ ಕೇಂದ್ರ ಎಚ್ಚರಿಕೆ

ನವದೆಹಲಿ: ಇರಾನ್‌ನಲ್ಲಿ ಪರಿಸ್ಥಿತಿ ದಿನೇದಿನೇ ಹದಗೆಡುತ್ತಿರುವ ನಡುವೆ ಅಲ್ಲಿರುವ ಭಾರತೀಯರಿಗೆ ಹಿಂಸಾಚಾರ ನಡೆಯುತ್ತಿರುವ ಸ್ಥಳಗಳಿಗೆ ಹೋಗದಂತೆ ಭಾರತ ಸರ್ಕಾರ ಸೋಮವಾರ ಎಚ್ಚರಿಸಿದೆ.

ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಮಾತನಾಡಿ, ‘ಪ್ರತಿಭಟನೆಗೆ ಸಂಬಂಧಿಸಿದಂತೆ ಇರಾನ್‌ನಲ್ಲಾಗುತ್ತಿರುವ ಬೆಳವಣಿಗೆಗಳನ್ನು ಭಾರತ ಹತ್ತಿರದಿಂದ ಗಮನಿಸುತ್ತಿದೆ. ಇರಾನ್‌ನಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಭಾರತದಿಂದ ಹೋದವರು ಹಲವರಿದ್ದಾರೆ. ನಿರ್ಬಂಧದ ನಡುವೆಯೂ ಅಲ್ಲಿರುವ ನಮ್ಮ ರಾಯಭಾರ ಕಚೇರಿ ವಿದ್ಯಾರ್ಥಿಗಳನ್ನು ಸಂಪರ್ಕಿಸಿ, ಅವರ ಯೋಗಕ್ಷೇಮವನ್ನು ವಿಚಾರಿಸುತ್ತಿದೆ. ಯಾರೂ ಪ್ರತಿಭಟನೆಗಳು ನಡೆಯುತ್ತಿರುವಲ್ಲಿಗೆ ಹೋಗಬೇಡಿ’ ಎಂದಿದ್ದಾರೆ.

ಇರಾನ್‌ ಪತನ ಆಗಬಾರದು: ಕಾಂಗ್ರೆಸ್ಸಿಗ ಅಭಿಷೇಕ್‌ ಸಿಂಘ್ವಿ

ನವದೆಹಲಿ: ಇರಾನ್‌ ಪತನ ಭಾರತದ ಪಾಲಿಗೆ ಅಪಾಯಕರ ಎಂದು ಕಾಂಗ್ರೆಸ್‌ ನಾಯಕ ಅಭಿಷೇಕ್‌ ಸಿಂಘ್ವಿ ಆತಂಕ ವ್ಯಕ್ತಪಡಿಸಿದ್ದಾರೆ.‘ಇರಾಕ್ ಪತನಗೊಂಡಿದೆ. ಇರಾನ್ ಪತನಗೊಳ್ಳಬಾರದು. ಇಬ್ಬರೂ ಭಾರತದ ದೀರ್ಘಕಾಲದ ಸ್ನೇಹಿತರಾಗಿದ್ದರು, ಕಾಶ್ಮೀರದ ವಿಷಯದಲ್ಲಿ ನಮ್ಮೊಂದಿಗೆ ನಿರಂತರವಾಗಿ ನಿಂತಿದ್ದರು. ಬಲವಾದ ಇರಾನ್ ಪಾಕಿಸ್ತಾನವನ್ನು ನಿರ್ಬಂಧಿಸಿದೆ ಮತ್ತು ಪಾಶ್ಚಿಮಾತ್ಯ ಅತಿಕ್ರಮಣವನ್ನು ತಡೆದಿದೆ. ಅದರ ಪತನವನ್ನು ಪ್ರೋತ್ಸಾಹಿಸುವ ಭಾರತೀಯರ ನಡೆ ಸರಿಯಲ್ಲ’ ಎಂದು ಟ್ವೀಟ್‌ ಮಾಡಿದ್ದಾರೆ.

ಇರಾನ್‌ ಪ್ರತಿಭಟನಾಕಾರರ ಸಾವಿನ ಸಂಖ್ಯೆ 572: ಮಾನವ ಹಕ್ಕು ಸಂಸ್ಥೆ

ದುಬೈ: ಇರಾನ್‌ ಸರ್ವೋಚ್ಚ ನಾಯಕ ಅಲಿ ಖಮೇನಿ ವಿರುದ್ಧದ ಪ್ರತಿಭಟನೆಯಲ್ಲಿ ಸಾವಿನ ಸಂಖ್ಯೆ 2000 ಮೀರಿದೆ ಎಂದು ಕೆಲವು ಮಾಧ್ಯ,ಮಗಳು ವರದಿ ಮಾಡಿದ್ದರೂ ಮಾನವ ಹಕ್ಕು ಸಂಸ್ಥೆಯೊಂದು ಸಾವಿನ ಸಂಖ್ಯೆ 572 ಮಾತ್ರ ಎಂದು ಹೇಳಿದೆ.‘ಪ್ರತಿಭಟನೆಯಲ್ಲಿ 554 ಜನರು ಸೇನಾ ಬಲಪ್ರಯೋಗಕ್ಕೆ ಬಲಿಯಾಗಿದ್ದಾರೆ. ಪೈಕಿ 503 ಪ್ರತಿಭಟನಾಕಾರರಿದ್ದರೆ, ಇನ್ನುಳಿದ 69 ಜನ ಭದ್ರತಾ ಪಡೆ ಸಿಬ್ಬಂದಿ. 10,600ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ’ ಎಂದು ಅಮೆರಿಕ ಮೂಲದ ಮಾನವ ಹಕ್ಕು ಸಂಸ್ಥೆ ಹೇಳಿದೆ. ಆದರೆ ಇರಾನ್‌ ಸರ್ಕಾರ ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಂಗ್ಲಾದಲ್ಲಿ ಮುಂದುವರಿದ ಹಿಂದೂಗಳ ಮಾರಣಹೋಮ; ಆಟೋ ಚಾಲಕ ಸಮೀರ್ ದಾಸ್ ಬರ್ಬರ ಹತ್ಯೆ!
ಪುಟ್ಟ ಮಕ್ಕಳಂತೆ ವೆಡ್ಡಿಂಗ್ ಕೇಕ್ ರುಚಿ ನೋಡಿದ ವರ: ಆಕ್ಷೇಪಿಸಿದ ವಧು: ಆಮೇಲಾಗಿದ್ದು ದುರಂತ: ವೀಡಿಯೋ