2 ದಿನ, 2000 ಬಲಿ? ಇರಾನ್‌ನಲ್ಲಿ ತುಂಬಿದ ಶವಾಗರಗಳು, ಶವವಿಡಲು ಜಾಗವೇ ಇಲ್ಲ; ಸೂಕ್ತ ವೈದ್ಯರೂ ಇಲ್ಲ

Published : Jan 12, 2026, 07:37 AM IST
iran internet kill switch cold war protests blackout explained

ಸಾರಾಂಶ

ಇರಾನ್‌ನಲ್ಲಿ ಖಮೇನಿ ಸರ್ಕಾರದ ವಿರುದ್ಧದ ಪ್ರತಿಭಟನೆಗಳು ತೀವ್ರಗೊಂಡಿದ್ದು, ಸೇನಾ ಪಡೆಗಳು ಪ್ರತಿಭಟನಾಕಾರರನ್ನು ನಿರ್ದಯವಾಗಿ ಹತ್ತಿಕ್ಕುತ್ತಿವೆ. ಇದರ ಪರಿಣಾಮವಾಗಿ, ಆಸ್ಪತ್ರೆಗಳು ಗಾಯಾಳುಗಳು ಮತ್ತು ಶವಗಳಿಂದ ತುಂಬಿ ತುಳುಕುತ್ತಿದ್ದು, ಸಾವಿನ ಸಂಖ್ಯೆಯ ಬಗ್ಗೆ ಗೊಂದಲಮಯ ವರದಿಗಳು ಬರುತ್ತಿವೆ.

ಟೆಹ್ರಾನ್:  ಇರಾನ್‌ನಾದ್ಯಂತ ದೊಡ್ಡ ಪ್ರಮಾಣದ ಸರ್ವಾಧಿಕಾರಿ ಖಮೇನಿ ವಿರೋಧಿ ಪ್ರತಿಭಟನೆಗಳು ತಾರಕಕ್ಕೇರಿರುವ ಬೆನ್ನಲ್ಲೇ, ಪ್ರತಿಭಟನಾಕಾರರನ್ನು ಸೇನಾ ಪಡೆಗಳು ನಿರ್ದಯವಾಗಿ ಸಾಯಿಸುತ್ತಿವೆ ಎಂಬ ವರದಿಗಳು ಲಭಿಸಿವೆ. ಹೀಗಾಗಿ ಇರಾನ್‌ನಾದ್ಯಂತದ ಆಸ್ಪತ್ರೆಗಳು ಸ್ಥಿತಿ ನಿಭಾಯಿಸಲು ಹೆಣಗಾಡುತ್ತಿವೆ. ಹೆಣಗಳ ರಾಶಿಯಿಂದ ಆಸ್ಪತ್ರೆಗಳು ತುಂಬಿ ಹೋಗುತ್ತಿವೆ ಎಂದು ವೈದ್ಯಕೀಯ ಸಿಬ್ಬಂದಿ ತಿಳಿಸಿದ್ದಾರೆ.

ಇರಾನ್‌ ಸರ್ಕಾರ ಜನರ ಸಾವಿನ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಮಾನವ ಹಕ್ಕು ಸಂಸ್ಥೆಯೊಂದರ ಪ್ರಕಾರ 116 ಜನ 14 ದಿನಗಳ ಹಿಂಸೆಯಲ್ಲಿ ಸಾವನ್ನಪ್ಪಿದ್ದಾರೆ. ಆದರೆ ಕೆಲವು ವರದಿಗಳ ಪ್ರಕಾರ ಕಳೆದ 2 ದಿನದಲ್ಲಿ 2000 ಜನರು ಬಲಿಯಾಗಿದ್ದಾರೆ ಎಂದು ಇಸ್ರೇಲ್‌ನ ‘ಜೆರುಸಲೇಂ ಪೋಸ್ಟ್‌’ ವರದಿ ಮಾಡಿದೆ.

ಶವಗಳಿಂದ ಆಸ್ಪತ್ರೆಗಳು ಭರ್ತಿ

ಭದ್ರತಾ ಪಡೆಗಳ ಹಿಂಸಾತ್ಮಕ ಕಾರ್ಯಾಚರಣೆ ಕಾರಣ ಟೆಹ್ರಾನ್ ಸೇರಿದಂತೆ ಹಲವಾರು ನಗರಗಳ ಆಸ್ಪತ್ರೆಗಳ ತುರ್ತು ವಾರ್ಡ್‌ಗಳಲ್ಲೇ ಒಂದರ ಮೇಲೊಂದು ದೇಹಗಳನ್ನು ರಾಶಿ ಹಾಕಲಾಗಿದೆ ಎಂದು ವರದಿಗಳು ಹೇಳಿವೆ.

‘ಉತ್ತರ ಇರಾನ್‌ನ ರಾಶ್ಟ್‌ನಲ್ಲಿರುವ ಪೌರ್ಸಿನಾ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ಮಾತ್ರ 70 ಶವಗಳನ್ನು ತರಲಾಗಿದೆ. ಶವಾಗಾರವು ಪೂರ್ಣ ಸಾಮರ್ಥ್ಯವನ್ನು ತಲುಪಿದೆ. ಸ್ಥಳಾವಕಾಶ ಕಲ್ಪಿಸಲು ಸಿಬ್ಬಂದಿ ಶವಗಳನ್ನು ತೆಗೆದುಹಾಕಬೇಕಾಯಿತು. ಶವಗಳನ್ನು ಒಂದರ ಮೇಲೊಂದು ಇರಿಸಲಾಯಿತು. ಅದರಿಂದಲೂ ಶವಾಗಾರವು ತುಂಬಿದ ನಂತರ, ಶವಗಳನ್ನು ಆಸ್ಪತ್ರೆಯ ಪ್ರಾರ್ಥನಾ ಕೋಣೆಯಲ್ಲಿ ಜೋಡಿಸಲಾಯಿತು.’ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಟೆಹ್ರಾನ್ ಆಸ್ಪತ್ರೆಯ ವೈದ್ಯರೊಬ್ಬರು ಮಾತನಾಡಿ, ‘ಅನೇಕರು ಗುಂಡೇಟಿನಿಂದ ಆಸ್ಪತ್ರೆಗೆ ಬಂದರು. ಯುವಕರ ತಲೆಗೆ, ಅವರ ಹೃದಯಕ್ಕೂ ನೇರ ಗುಂಡುಗಳು ಬಿದ್ದವು. ಗಾಯಾಳುಗಳ ಸಂಖ್ಯೆ ಹೆಚ್ಚಿದ್ದ ಕಾರಣ ಲಭ್ಯ ಇರುವ ಕೆಲವೇ ವೈದ್ಯರಿಗೆ ಸಿಪಿಆರ್ (ಹೃದಯ ಶ್ವಾಸಕೋಶದ ಪುನರುಜ್ಜೀವನ) ಮಾಡಲು ಸಹ ಸಾಧ್ಯವಾಗಲಿಲ್ಲ ಎಂದರು.

ಆಸ್ಪತ್ರೆಯ ಕೆಲಸಗಾರನೊಬ್ಬ ಮಾತನಾಡಿ, ಮೃತರಯ ಹಾಗೂ ಗಾಯಾಳುಗಳಲ್ಲಿ ಹೆಚ್ಚಿನವರು 20 ರಿಂದ 25 ವರ್ಷ ವಯಸ್ಸಿನವರಾಗಿದ್ದರು. ಅನೇಕ ಪ್ರತಿಭಟನಾಕಾರರ ಕಣ್ಣಿಗೆ ಗುಂಡು ಹಾರಿಸಲಾಗಿತ್ತು. ಕಣ್ಣಿಗೆ ಗುಂಡು ತಗುಲಿದ ರೋಗಿಯೊಬ್ಬರ ತಲೆಯ ಹಿಂಭಾಗದಿಂದ ಗುಂಡು ಹೊರಹೋಗಿರುವುದನ್ನು ನೋಡಿದ್ದೇನೆ’ ಎಂದರು.

‘ಆಸ್ಪತ್ರೆಗಳಲ್ಲಿ ಗಾಯಗೊಂಡ ರೋಗಿಗಳನ್ನು ಉಪಚರಿಸಲು ಹಾಗೂ ಸರ್ಜರಿ ಮಾಡಲು ಸಾಕಷ್ಟು ಶಸ್ತ್ರಚಿಕಿತ್ಸಕರ ಕೊರತೆಯಿದೆ’ ಎಂದು ವೈದ್ಯರು ಹೇಳಿದ್ದಾರೆ.

ಯಾವುದೇ ಕಾರಣಕ್ಕೂ ಪ್ರತಿಭಟನೆ ಕೈಬಿಡಬೇಡಿ: ಇರಾನ್‌ ಪ್ರಿನ್ಸ್ ಸಂದೇಶ

ನನ್ನ ದೇಶಬಾಂಧವರೇ.. ಯಾವುದೇ ಕಾರಣಕ್ಕೂ ಬೀದಿಗಳಿಂದ ಕದಲಬೇಡಿ, ಶೀಘ್ರದಲ್ಲೇ ನಾನು ನಿಮ್ಮ ಜತೆಗಿರಲಿದ್ದೇನೆ!

ಖಮೇನಿ ಸರ್ಕಾರ ವಿರುದ್ಧ 2 ವಾರಗಳಿಂದ ಹೋರಾಟ ನಡೆಸುತ್ತಿರುವ ನಾಗರಿಕರಿಗೆ, ಸದ್ಯ ಅಮೆರಿಕದ ರಾಜಾಶ್ರಯದಲ್ಲಿರುವ ಇರಾನ್‌ನ ದೇಶಭ್ರಷ್ಟ ರಾಜ ರೆಜಾ ಪಹ್ಲವಿ ಇಂಥದ್ದೊಂದು ಬಹಿರಂಗ ಕರೆ ನೀಡಿದ್ದಾರೆ.

‘ಖಮೇನಿ ಆಡಳಿತ ಈಗ ದುರ್ಬಲಗೊಂಡಿದೆ. ಬೀದಿಗಿಳಿದಿರುವ ಲಕ್ಷಾಂತರ ಜನರನ್ನು ನಿಯಂತ್ರಿಸಲು ಭದ್ರತಾಪಡೆಗಳಿಂದ ಸಹಕಾರ ಸಿಗುತ್ತಿಲ್ಲ. ಹಲವು ಭದ್ರತಾ ಸಿಬ್ಬಂದಿ ಜನರ ಧಮನಕ್ಕೆ ಹಿಂದೇಟು ಹಾಕಿದ್ದಾರೆ. ಅಲ್ಪಸಂಖ್ಯಾತ ಹಿಂಸಾತ್ಮಕ ಕೂಲಿ ಸೈನಿಕರನ್ನು ಮುಂದಿಟ್ಟುಕೊಂಡು ಜನರ ಮೇಲೆ ಖಮೇನಿ ದಬ್ಬಾಳಿಕೆ ಮಾಡುತ್ತಿದ್ದಾರೆ. ಈ ಕೆಲಸಕ್ಕಾಗಿ ಅವರು ಮುಂದೆ ಪರಿಣಾಮ ಎದುರಿಸಲಿದ್ದಾರೆ’ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ಪಹ್ಲವಿ ಎಚ್ಚರಿಸಿದ್ದಾರೆ.

ನೀವು ಒಬ್ಬಂಟಿಯಾಗಿಲ್ಲ, ಜಗತ್ತು ಈಗ ನಿಮ್ಮ ಕ್ರಾಂತಿಯ ಜತೆಗೆ ನಿಂತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೂ ನಿಮ್ಮ ಧೈರ್ಯವನ್ನು ಮೆಚ್ಚಿಕೊಂಡಿದ್ದು, ನೆರವಿಗೆ ಸಿದ್ಧ ಎಂದಿದ್ದಾರೆ. ಯಾವುದೇ ಕಾರಣಕ್ಕೂ ಪ್ರತಿಭಟನೆಯಿಂದ ಹಿಂದೆ ಸರಿಯಬೇಡಿ, ನನ್ನ ಹೃದಯ ನಿಮ್ಮ ಜತೆಗಿದೆ ಎಂದು ಪಹಲವಿ ಹೇಳಿಕೊಂಡಿದ್ದಾರೆ.

ಇರಾನ್‌ನ ದಾಳಿ ಎಚ್ಚರಿಕೆ ಬೆನ್ನಲ್ಲೇ ಇಸ್ರೇಲ್‌ನಲ್ಲಿ ಹೈ ಅಲರ್ಟ್‌

‘ಅಮೆರಿಕವೇನಾದರೂ ನಮ್ಮ ಮೇಲೆ ದಾಳಿ ನಡೆಸಿದರೆ ನಾವು ಅಮೆರಿಕ ಮಿತ್ರ ಇಸ್ರೇಲ್‌ ಮೇಲೆ ದಾಳಿ ನಡೆಸಲಿದ್ದೇವೆ’ ಎಂದು ಇರಾನ್‌ ಹೇಳಿರುವ ಹಿನ್ನೆಲೆಯಲ್ಲಿ ಇಸ್ರೇಲ್‌ನಲ್ಲಿ ಹೈಅಲರ್ಟ್‌ ಸಾರಲಾಗಿದೆ. ಸಂಭಾವ್ಯ ಅಮೆರಿಕದ ದಾಳಿ ಬಳಿಕ ಎದುರಾಗಬಹುದಾದ ಭದ್ರತಾ ಬೆದರಿಕೆಗಳನ್ನು ಎದುರಿಸಲು ಈಗಾಗಲೇ ಇಸ್ರೇಲ್‌ ಸಿದ್ಧತೆ ಆರಂಭಿಸಿದೆ.

ಈ ಬಗ್ಗೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಮತ್ತು ಅಮೆರಿಕ ವಿದೇಶಾಂಗ ಸಚಿವ ಮಾರ್ಕೋ ರುಬಿಯೋ ಅವರು ದೂರವಾಣಿ ಕರೆ ಮೂಲಕ ಇರಾನ್‌ನಲ್ಲಿ ಅಮೆರಿಕದ ಮಧ್ಯಪ್ರವೇಶ ಸಾಧ್ಯತೆ ಕುರಿತು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕ ಕೂಡ ಇಸ್ರೇಲ್‌ ಜತೆಗಿನ ಮಾತುಕತೆಯನ್ನು ಖಚಿತಪಡಿಸಿದ್ದರೂ ಯಾವ ವಿಚಾರವಾಗಿ ಚರ್ಚೆ ನಡೆಸಿವೆ ಎಂದು ಸ್ಪಷ್ಟಪಡಿಸಿಲ್ಲ. ಕೆಲ ತಿಂಗಳ ಹಿಂದಷ್ಟೇ ಇಸ್ರೇಲ್‌ ಮತ್ತು ಇರಾನ್‌ ಮಧ್ಯೆ 12 ದಿನಗಳ ಸಂಘರ್ಷ ನಡೆದಿತ್ತು.

ಪ್ರತಿಭಟನಾಕಾರರ ಜತೆ ಮಾತುಕತೆಗೆ ಸಿದ್ಧ: ಇರಾನ್ ಅಧ್ಯಕ್ಷ

ಇರಾನ್‌ನಲ್ಲಿ ಖಮೇನಿ ಸರ್ಕಾರದ ವಿರುದ್ಧ ದಂಗೆ ಭುಗಿಲೆದ್ದಿರುವ ನಡುವೆಯೇ ಪ್ರತಿಭಟನಾಕಾರರ ಜತೆ ಮಾತುಕತೆಗೆ ಸಿದ್ಧ ಎಂದು ಇರಾನ್‌ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಹೇಳಿದ್ದಾರೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಜನರಿಗೆ ಕಳವಳವಿದೆ. ನಾವು ಅವರೊಂದಿಗೆ ಕುಳಿತು ಮಾತನಾಡಬೇಕು. ಅದು ನಮ್ಮ ಕರ್ತವ್ಯ. ಅವರ ಸಮಸ್ಯೆಯನ್ನು ಬಗೆಹರಿಸಬೇಕಿದೆ’ ಎಂದರು. ಆದರೆ, ಇದೇ ವೇಳೆ, ‘ಪ್ರತಿಭಟನಾಕಾರರು ಇಡೀ ಸಮಾಜವನ್ನು ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಗಲಭೆಕೋರರು ಆ ರೀತಿ ಮಾಡುವುದಕ್ಕೆ ಅವಕಾಶ ನೀಡಬಾರದು’ ಎಂದೂ ಕರೆ ನೀಡಿದರು.

ಇರಾನ್‌ನಲ್ಲಿ 2 ದಿನದಲ್ಲಿ 2000 ದಂಗೆಕೋರರ ಹತ್ಯೆ?

ಇರಾನ್ ದಂಗೆಯಲ್ಲಿ ಸಾವನ್ನಪ್ಪಿದವರ ಬಗ್ಗೆ ಅಲ್ಲಿನ ಸರ್ಕಾರ ಅಧಿಕೃತ ಮಾಹಿತಿ ನೀಡುತ್ತಿಲ್ಲ. ಮಾನವ ಹಕ್ಕು ಸಂಸ್ಥೆಯೊಂದರ ಪ್ರಕಾರ 14 ದಿನಗಳ ದಂಗೆಯಲ್ಲಿ ಬಲಿಯಾದವರ ಸಂಖ್ಯೆ ಭಾನುವಾರ 203ಕ್ಕೇರಿದೆ. ಇವರಲ್ಲಿ 162 ಜನರು ಹಾಗೂ 41 ಜನ ಭದ್ರತಾ ಸಿಬ್ಬಂದಿ ಇದ್ದಾರೆ. ಆದರೆ ಕೆಲವು ವರದಿಗಳ ಪ್ರಕಾರ ಕಳೆದ 2 ದಿನದಲ್ಲಿ ದೇಶಾದ್ಯಂತ ಭಾರಿ ಹಿಂಸೆ ನಡೆದಿದ್ದು, ಸೇನೆಯ ಗುಂಡಿಗೆ 2000 ಜನರು ಬಲಿಯಾಗಿದ್ದಾರೆ ಎಂದು ಇಸ್ರೇಲ್‌ನ ‘ಜೆರುಸಲೇಂ ಪೋಸ್ಟ್‌’ ವರದಿ ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವೆನಿಜುವೆಲಾ ಆಯ್ತ ಈಗ ಪರ್ಷಿಯಾ ಮೇಲೆ ಕಣ್ಣು: ಡೊನಾಲ್ಡ್ ಟ್ರಂಪ್ ರಹಸ್ಯ ಯೋಜನೆ
ಭಾರತದ ಮೇಲೆ ದಾಳಿಗಾಗಿ 1000 ಉಗ್ರರು ರೆಡಿ: ಅಜರ್‌ - ನಿಜ ಸಂಖ್ಯೆ ಹೇಳಿದರೆ ವಿಶ್ವ ಬೆಚ್ಚಿ ಬೀಳುತ್ತೆ -