ಕ್ಯಾನ್ಸರ್ ಚಿಕಿತ್ಸೆ ಮುಗಿದ ಬಳಿಕವೂ ಏಕೆ ಗಂಟೆ ಬಾರಿಸಲಿಲ್ಲ? ರಾಜಕುಮಾರಿ ಕೇಟ್ ಕೊಟ್ಟ ಉತ್ತರವೇನು?

Published : Nov 22, 2026, 03:50 PM IST
Princess Kate

ಸಾರಾಂಶ

ವೇಲ್ಸ್ ರಾಜಕುಮಾರಿ ಕೇಟ್ ಮಿಡ್ಲ್‌ಟನ್ ಅವರು ಕ್ಯಾನ್ಸರ್ ಚಿಕಿತ್ಸೆ ಮತ್ತು ಚೇತರಿಕೆಯ ಕಠಿಣ ದಿನಗಳ ಅನುಭವವನ್ನು 'ಹೀಲ್' ಎಂಬ ಹೊಸ ಡಾಕ್ಯುಮೆಂಟರಿಯಲ್ಲಿ ಹಂಚಿಕೊಂಡಿದ್ದಾರೆ. ನವೆಂಬರ್ 30ರಂದು ಎನ್‌ಬಿಸಿಯಲ್ಲಿ..

ವೇಲ್ಸ್ ರಾಜಕುಮಾರಿ ಕ್ಯಾಥರೀನ್ ತಮ್ಮ ಕ್ಯಾನ್ಸರ್ ಚಿಕಿತ್ಸೆಯ ದಿನಗಳನ್ನು 'ಹೀಲ್' ಡಾಕ್ಯುಮೆಂಟರಿಯಲ್ಲಿ ಹಂಚಿಕೊಂಡಿದ್ದಾರೆ. ನವೆಂಬರ್ 30ರಂದು ಇದು ಪ್ರಸಾರವಾಗಲಿದ್ದು, ಅವರ ದಿಟ್ಟ ಹೋರಾಟ ಹಾಗೂ ರಾಯಲ್ ಮಾರ್ಸ್ಡೆನ್ ಚಾರಿಟಿ ಬೆಂಬಲಾರ್ಥವಾಗಿ ಮಾಡಿದ 'ನ್ಯಾಷನಲ್ ತ್ರೀ ಪೀಕ್ಸ್ ಚಾಲೆಂಜ್' ಬಗ್ಗೆ ಬೆಳಕು ಚೆಲ್ಲಲಾಗಿದೆ.

ಕ್ಯಾನ್ಸರ್ ವಿರುದ್ಧದ ಹೋರಾಟದ ಕಥೆ ಬಿಚ್ಚಿಟ್ಟ ವೇಲ್ಸ್ ರಾಜಕುಮಾರಿ

ವೇಲ್ಸ್ ರಾಜಕುಮಾರಿ ಕ್ಯಾಥರೀನ್ ತಮ್ಮ ಕ್ಯಾನ್ಸರ್ ಚಿಕಿತ್ಸೆ ಮತ್ತು ಚೇತರಿಕೆಯ ಕಠಿಣ ದಿನಗಳನ್ನು 'ಹೀಲ್' ಎಂಬ ಹೊಸ ಡಾಕ್ಯುಮೆಂಟರಿಯಲ್ಲಿ ಬಿಚ್ಚಿಟ್ಟಿದ್ದಾರೆ. ನವೆಂಬರ್ 21ರಂದು ಇದರ ಟ್ರೇಲರ್ ರಿಲೀಸ್ ಆಗಿದೆ. ಕ್ಯಾನ್ಸರ್ ಅವರ ಬದುಕನ್ನು ಹೇಗೆ ಬದಲಿಸಿತು ಹಾಗೂ ದೈಹಿಕ, ಮಾನಸಿಕ ಸವಾಲುಗಳನ್ನು ಅವರು ಹೇಗೆ ಎದುರಿಸಿದರು ಎಂಬುದನ್ನು ಈ ಸಾಕ್ಷ್ಯಚಿತ್ರ ಕಟ್ಟಿಕೊಡಲಿದೆ ಎಂದು ಪೀಪಲ್ ಮ್ಯಾಗಜೀನ್ ವರದಿ ಮಾಡಿದೆ.

ಈ ಡಾಕ್ಯುಮೆಂಟರಿ ನವೆಂಬರ್ 30ರಂದು ರಾತ್ರಿ 8 ಗಂಟೆಗೆ (ET/PT) ಎನ್‌ಬಿಸಿ ವಾಹಿನಿಯಲ್ಲಿ ಪ್ರಸಾರವಾಗಲಿದ್ದು, ಮರುದಿನ ಪೀಕಾಕ್ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿರಲಿದೆ. 'ಹೀಲ್' ಡಾಕ್ಯುಮೆಂಟರಿಯಲ್ಲಿ 44 ವರ್ಷದ ಕೇಟ್, 'ನ್ಯಾಷನಲ್ ತ್ರೀ ಪೀಕ್ಸ್ ಚಾಲೆಂಜ್' ಕೈಗೊಂಡಿರುವುದನ್ನು ನೋಡಬಹುದು. ಜೂನ್ ಅಂತ್ಯದಲ್ಲಿ ಅವರು ಕೇವಲ 24 ಗಂಟೆಗಳಲ್ಲಿ ಸ್ಕಾಟ್ಲೆಂಡ್, ಇಂಗ್ಲೆಂಡ್ ಮತ್ತು ವೇಲ್ಸ್‌ನ ಅತಿ ಎತ್ತರದ ಪರ್ವತಗಳನ್ನು ಏರಿದ್ದರು. ದಿ ರಾಯಲ್ ಮಾರ್ಸ್ಡೆನ್ ಕ್ಯಾನ್ಸರ್ ಚಾರಿಟಿಗೆ ಬೆಂಬಲ ಸೂಚಿಸಲು ಈ ಸಾಹಸ ಮಾಡಲಾಗಿತ್ತು. ಈ ಜರ್ನಿಯಲ್ಲಿ ಅವರು ತಮ್ಮ ಅನುಭವಗಳನ್ನು ಮೆಲುಕು ಹಾಕುತ್ತಲೇ, ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಜನರನ್ನು ಭೇಟಿಯಾಗಿದ್ದಾರೆ.

ಟ್ರೇಲರ್‌ನಲ್ಲಿ ಮಾತನಾಡುವ ಕೇಟ್, “ಕ್ಯಾನ್ಸರ್ ನಿಮ್ಮನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ. ಅದು ನಿಮ್ಮ ದೇಹವನ್ನು, ನಿಮ್ಮನ್ನು ದೈಹಿಕವಾಗಿ ಬದಲಾಯಿಸುತ್ತದೆ. ಆದರೆ ಕ್ಯಾನ್ಸರ್ ಎಂಬುದು ನಿಮ್ಮೊಳಗೆ ತರುವ ಬದಲಾವಣೆ ತುಂಬಾ ಆಳವಾದದ್ದು” ಎಂದಿದ್ದಾರೆ. ಚೇತರಿಕೆಯ ಸಮಯದಲ್ಲಿ ಭರವಸೆ, ಸಂಬಂಧಗಳು ಮತ್ತು ಮಾನಸಿಕ ಸ್ಥೈರ್ಯದ ಪಾತ್ರವನ್ನು ಈ ಸಾಕ್ಷ್ಯಚಿತ್ರ ತೆರೆದಿಡುತ್ತದೆ. “ಚೇತರಿಕೆ ಎಂಬುದು ಒಂದು ಪಯಣ. ನಾವು ಒಮ್ಮೆ ಅರಿತಿದ್ದ ವಿಷಯಗಳೊಂದಿಗೆ ಮರಳಿ ಹೇಗೆ ಬೆರೆಯಬೇಕು ಮತ್ತು ಅನಿಶ್ಚಿತತೆಯ ನಡುವೆಯೂ ಭರವಸೆ ಹಾಗೂ ಖುಷಿಯನ್ನು ಹೇಗೆ ಕಂಡುಕೊಳ್ಳಬೇಕು ಎಂಬುದೇ ಈ ಪಯಣ” ಎಂದು ರಾಜಕುಮಾರಿ ಹೇಳಿದ್ದಾರೆ.

ಈ ಸಾಕ್ಷ್ಯಚಿತ್ರದ ಅತ್ಯಂತ ಭಾವುಕ ಕ್ಷಣಗಳಲ್ಲಿ ಕೇಟ್ ಅವರ ಕಿರಿಯ ಸಹೋದರ ಜೇಮ್ಸ್ ಮಿಡಲ್ಟನ್ ಕಾಣಿಸಿಕೊಂಡಿದ್ದಾರೆ. ಪರ್ವತಾರೋಹಣದ ಕೆಲವು ಭಾಗಗಳಲ್ಲಿ ಅವರು ಸಹೋದರಿಗೆ ಸಾಥ್ ನೀಡಿದ್ದಾರೆ. ಈ ವೇಳೆ ರಾಯಲ್ ಮಾರ್ಸ್ಡೆನ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸೆ ಮುಗಿದ ನಂತರ ಗಂಟೆ ಬಾರಿಸುವ ಸಂಪ್ರದಾಯದ ಬಗ್ಗೆ ಜೇಮ್ಸ್ ನೆನಪಿಸುತ್ತಾರೆ. “ರಾಯಲ್ ಮಾರ್ಸ್ಡೆನ್‌ನಿಂದ ಹೊರಡುವಾಗ ಗಂಟೆ ಬಾರಿಸುತ್ತಾರಲ್ಲವೇ?” ಎಂದು ಜೇಮ್ಸ್ ಕೇಳುತ್ತಾರೆ. ಇದಕ್ಕೆ ಕೇಟ್, “ಹೌದು, ಆದರೆ ನಾನು ಗಂಟೆ ಬಾರಿಸಲಿಲ್ಲ” ಎನ್ನುತ್ತಾರೆ. ಆಗ ಜೇಮ್ಸ್, “ಹಾಗಾದರೆ ಬಹುಶಃ ಇದೇ ನಿನ್ನ ಪಾಲಿನ ಗಂಟೆ ಬಾರಿಸುವ ಕ್ಷಣ” ಎಂದು ಭಾವುಕರಾಗುತ್ತಾರೆ.

ಸಂಪೂರ್ಣ ಗುಣಮುಖ

ಕಠಿಣ ಸವಾಲಿನ ನಂತರ ಕೇಟ್ ತಮ್ಮ ಕುಟುಂಬದೊಂದಿಗೆ ಮತ್ತೆ ಸೇರುವ ದೃಶ್ಯಗಳೂ ಟ್ರೇಲರ್‌ನಲ್ಲಿವೆ. ತಮ್ಮ ಮೂವರು ಮಕ್ಕಳಾದ ಪ್ರಿನ್ಸ್ ಜಾರ್ಜ್, ಪ್ರಿನ್ಸೆಸ್ ಚಾರ್ಲೊಟ್ ಮತ್ತು ಪ್ರಿನ್ಸ್ ಲೂಯಿಸ್ ಅವರನ್ನು ಅವರು ಪ್ರೀತಿಯಿಂದ ಅಪ್ಪಿಕೊಳ್ಳುತ್ತಾರೆ. ಬಳಿಕ ಪತಿ ಪ್ರಿನ್ಸ್ ವಿಲಿಯಂ ಜೊತೆಗಿನ ಸುಂದರ ಕ್ಷಣಗಳೂ ಇವೆ. ಮಾರ್ಚ್ 2024ರಲ್ಲಿ ಹೊಟ್ಟೆಯ ಶಸ್ತ್ರಚಿಕಿತ್ಸೆಯ ನಂತರ ತಾನು ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವುದಾಗಿ ಕೇಟ್ ಬಹಿರಂಗಪಡಿಸಿದ್ದರು. ಸೆಪ್ಟೆಂಬರ್ 2024ರಲ್ಲಿ ತಮ್ಮ ಕೀಮೋಥೆರಪಿ ಮುಗಿದಿದೆ ಎಂದು ತಿಳಿಸಿದ್ದರು. ಬಳಿಕ ಜನವರಿ 2025ರಲ್ಲಿ ಕ್ಯಾನ್ಸರ್‌ನಿಂದ ಸಂಪೂರ್ಣ ಗುಣಮುಖರಾಗಿರುವುದಾಗಿ ಘೋಷಿಸಿದ್ದರು.

ಪ್ರಕೃತಿಯ ಜೊತೆಗಿನ ಕೇಟ್ ಅವರ ಬಾಂಧವ್ಯವನ್ನು 'ಹೀಲ್' ಡಾಕ್ಯುಮೆಂಟರಿ ತೋರಿಸುತ್ತದೆ. ನವೆಂಬರ್ 17ರಂದು ಎರ್ತ್‌ಶಾಟ್ ಪ್ರೈಸ್ ಅವಾರ್ಡ್ಸ್‌ಗಾಗಿ ಪತಿ ವಿಲಿಯಂ ಜೊತೆ ಭಾರತಕ್ಕೆ ಭೇಟಿ ನೀಡಿದ್ದಾಗಲೂ ಅವರು ಪ್ರಕೃತಿಯ ಮಹತ್ವದ ಬಗ್ಗೆ ಮಾತನಾಡಿದ್ದರು. “ಪ್ರಕೃತಿ ನಮ್ಮ ದೈನಂದಿನ ಜೀವನವನ್ನು ಹೇಗೆ ಗುಣಪಡಿಸುತ್ತದೆ ಮತ್ತು ಶ್ರೀಮಂತಗೊಳಿಸುತ್ತದೆ ಎಂಬುದನ್ನು ನಾನು ಸ್ವತಃ ಕಂಡಿದ್ದೇನೆ” ಎಂದು ಅವರು ಹೇಳಿದ್ದರು.

ಗಂಭೀರ ಕಾಯಿಲೆಗಳನ್ನು ಎದುರಿಸುವಾಗ ಬೆಂಬಲ ಮತ್ತು ಸಂಬಂಧಗಳ ಪ್ರಾಮುಖ್ಯತೆಯ ಬಗ್ಗೆ ಈ ಸಾಕ್ಷ್ಯಚಿತ್ರ ದೊಡ್ಡ ಸಂದೇಶ ಸಾರುತ್ತದೆ. “ಜೀವನದ ಸವಾಲುಗಳನ್ನು ನಾವು ಒಬ್ಬಂಟಿಯಾಗಿ ಎದುರಿಸಲು ಸಾಧ್ಯವಿಲ್ಲ ಎಂಬುದು ಸ್ಪಷ್ಟ. ನೋವಿನ ಮೂಲಕವೇ ಅದರ ಆಚೆಗಿನ ಅದ್ಭುತ ಸೌಂದರ್ಯ ನಮಗೆ ಅರಿವಾಗುತ್ತದೆ” ಎಂದು ಕೇಟ್ ಟ್ರೇಲರ್‌ನಲ್ಲಿ ಹೇಳಿದ್ದಾರೆ.

ಡೀಟೈಲ್ ಫಿಲ್ಮ್ಸ್ ನಿರ್ಮಿಸಿರುವ ಮತ್ತು ಬೆಂಜಿ ಜಾಕ್ಸನ್ ನಿರ್ದೇಶಿಸಿರುವ ಈ ಸಾಕ್ಷ್ಯಚಿತ್ರಕ್ಕೆ ವಿಲ್ ವಾರ್ ಕ್ಯಾಮೆರಾ ಕೈಚಳಕವಿದೆ. ಈ ಚಿತ್ರದ ವಿತರಣೆಯಿಂದ ಬರುವ ಎಲ್ಲ ಹಣವನ್ನು ದಿ ರಾಯಲ್ ಮಾರ್ಸ್ಡೆನ್ ಕ್ಯಾನ್ಸರ್ ಚಾರಿಟಿಗೆ ನೀಡಲಾಗುತ್ತದೆ ಎಂದು ಪೀಪಲ್ ಮ್ಯಾಗಜೀನ್ ವರದಿ ಮಾಡಿದೆ. ಜನವರಿ 2025ರಲ್ಲಿ ಕೇಟ್ ಮತ್ತು ವಿಲಿಯಂ ಈ ಚಾರಿಟಿಯ ಜಂಟಿ ಪೋಷಕರಾಗಿದ್ದಾರೆ.

ಈ ಡಾಕ್ಯುಮೆಂಟರಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರಸಾರವಾಗಲಿದೆ. ಯುಕೆ ಯಲ್ಲಿ ನವೆಂಬರ್ 29ರಂದು ಬಿಬಿಸಿಯಲ್ಲಿ, ಆಸ್ಟ್ರೇಲಿಯಾದಲ್ಲಿ ಡಿಸೆಂಬರ್ 1ರಂದು ಚಾನೆಲ್ 9ರಲ್ಲಿ ಹಾಗೂ ಕೆನಡಾದಲ್ಲಿ ಡಿಸೆಂಬರ್ 7ರಂದು ಸಿಟಿವಿ ಯಲ್ಲಿ ಪ್ರಸಾರವಾಗಲಿದೆ. ಭಾರತದಲ್ಲಿ ಇದರ ಪ್ರಸಾರದ ಸಮಯ ಅಥವಾ ಒಟಿಟಿ ಪ್ಲಾಟ್‌ಫಾರ್ಮ್ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

24 ಗಂಟೆಯಲ್ಲಿ ಭೂಮಿ ಹೇಗೆ ತಿರುಗುತ್ತೆ? ನಿಮ್ಮ ಅನುಭವಕ್ಕೆ ಬರುವಂತೆ ನದಿಯಲ್ಲಿ ಕ್ಯಾಮೆರಾ ಇಟ್ಟು ದೃಶ್ಯ ಸೆರೆ
ಭಾರತ vs ಚೀನಾ ರೈಲ್ವೆ: ಎರಡೂ ದೇಶಗಳಲ್ಲಿ ರೈಲು ಪ್ರಯಾಣ ಮಾಡಿದ ವ್ಯಕ್ತಿಗೆ ಅಚ್ಚರಿ ಮೂಡಿಸಿದ ಆ ಸಂಗತಿ ಏನು ಗೊತ್ತಾ?