2018 ರಿಂದ ಪೋರ್ಚುಗಲ್ ಆರೋಗ್ಯ ಸಚಿವೆಯಾಗಿದ್ದ ಡಾ. ಮಾರ್ಟಾ ಟೆಮಿಡೋ ಈಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಭಾರತೀಯ ಗರ್ಭೀಣಿಯ ಸಾವು ಅವರ ರಾಜೀನಾಮೆಗೆ ಕಾರಣವಾಗಿದೆ ಎಂದು ವರದಿಯಾಗಿದೆ.
ಭಾರತ (India) ಮೂಲದ ಮಹಿಳೆಯ ಸಾವು ಪೋರ್ಚುಗಲ್ ಆರೋಗ್ಯ ಸಚಿವೆಯನ್ನೇ (Portugal Health Minister) ರಾಜೀನಾಮೆ (Resign) ನೀಡುವಂತೆ ಮಾಡಿದೆ. ಗರ್ಭಿಣಿ (Pregnant) ಪ್ರವಾಸಿಯೊಬ್ಬರಿಗೆ (Tourist) ಸಂಪೂರ್ಣ ಹೆರಿಗೆ ವಾರ್ಡ್‌ನಲ್ಲಿ ಅವಕಾಶ ನೀಡದ ಕಾರಣದಿಂದ ಭಾರತೀಯ ಮೂಲದ ಆ ಪ್ರವಾಸಿ ಮಹಿಳೆ ಮೃತಪಟ್ಟಿದ್ದಾರೆ ಎಂಬ ವರದಿಗಳು ಹೊರಬಂದ ಕೆಲವೇ ಗಂಟೆಗಳ ನಂತರ ಪೋರ್ಚುಗಲ್ ಆರೋಗ್ಯ ಸಚಿವೆ ಡಾ. ಮಾರ್ಟಾ ಟೆಮಿಡೋ ರಾಜೀನಾಮೆ ನೀಡಿದ್ದಾರೆ. 34 ವರ್ಷದ ಭಾರತೀಯ ಮಹಿಳೆಯನ್ನು ಲಿಸ್ಬನ್ ಆಸ್ಪತ್ರೆಗಳ ನಡುವೆ ವರ್ಗಾವಣೆ ಮಾಡುವಾಗ ಆಕೆ ಹೃದಯ ಸ್ತಂಭನಕ್ಕೆ (Cardiac Arrest) ಒಳಗಾದರು ಎಂದು ವರದಿಯಾಗಿದೆ. ಪೋರ್ಚುಗೀಸ್ ಮಾತೃತ್ವ ಘಟಕಗಳಾದ್ಯಂತ ಸಿಬ್ಬಂದಿ ಕೊರತೆಯ ಆರೋಪಗಳ ಬೆನ್ನಲ್ಲೇ ಈ ಘಟನೆ ನಡೆದಿದೆ.
ಡಾ. ಮಾರ್ಟಾ ಟೆಮಿಡೋ ಅವರು 2018 ರಿಂದ ಆರೋಗ್ಯ ಸಚಿವರಾಗಿದ್ದರು ಮತ್ತು ಕೋವಿಡ್ (COVID - 19) ಸಮಯದಲ್ಲಿ ಸಹ ಪೋರ್ಚುಗಲ್ ಅನ್ನು ಮುನ್ನಡೆಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದರೆ ಮಂಗಳವಾರ, ಡಾ. ಟೆಮಿಡೊ ಅವರು "ಇನ್ನು ಮುಂದೆ ಕಚೇರಿಯಲ್ಲಿ ಉಳಿಯಲು ಪರಿಸ್ಥಿತಿಗಳನ್ನು ಹೊಂದಿಲ್ಲ ಎಂದು ಅರಿತುಕೊಂಡಿದ್ದಾರೆ" ಎಂದು ಪೋರ್ಚುಗೀಸ್ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ. ಭಾರತೀಯ ಮೂಲದ ಮಹಿಳೆಯ ಸಾವು ಆರೋಗ್ಯ ಸಚಿವೆಗಿದ್ದ ಕೊನೆ ಹುಲ್ಲುಕಡ್ಡಿಯ ಆಸರೆ ಎಂಬ ರೀತಿಯಲ್ಲಿ ಪೋರ್ಚುಗಲ್ ಪ್ರಧಾನ ಮಂತ್ರಿ ಆಂಟೋನಿಯೊ ಕೋಸ್ಟಾ ಅವರು ಅಭಿಪ್ರಾಯಪಟ್ಟಿದ್ದಾರೆ. ಹಾಗೂ, ಇದು ಡಾ. ಮಾರ್ಟಾ ಟೆಮಿಡೋ ಅವರ ರಾಜೀನಾಮೆಗೆ ಕಾರಣವಾಯಿತು ಎಂದು ಪೋರ್ಚುಗಲ್‌ನ ಲೂಸಾ ಸುದ್ದಿ ಸಂಸ್ಥೆ (Lusa News Agency) ತಿಳಿಸಿದೆ.
ಟೆಕ್ಸಾಸ್‌ನಲ್ಲಿ ಭಾರತೀಯ ಮಹಿಳೆಯ ಮೇಲೆ ಜನಾಂಗೀಯ ನಿಂದನೆ, ಕಪಾಳಕ್ಕೆ ಬಾರಿಸಿ ಹಲ್ಲೆ!
ಪೋರ್ಚುಗೀಸ್ ಸರ್ಕಾರವು ಮಾತೃತ್ವ ಘಟಕಗಳಲ್ಲಿನ ಸಿಬ್ಬಂದಿ ಕೊರತೆಯನ್ನು ನಿಭಾಯಿಸುವ ಬಗ್ಗೆ ತೀವ್ರ ಟೀಕೆಗಳನ್ನು ಎದುರಿಸಿದೆ. ಸಿಬ್ಬಂದಿ ಕೊರತೆಯಿಂದ ಕೆಲ ಆಸ್ಪತ್ರೆಗಳನ್ನು ತಾತ್ಕಾಲಿಕವಾಗಿ ಮುಚ್ಚುವ ಮೂಲಕ ಮತ್ತು ಗರ್ಭಿಣಿಯರನ್ನು ಆಸ್ಪತ್ರೆಗಳ ನಡುವೆ ಅಪಾಯಕಾರಿ ವರ್ಗಾವಣೆಗೆ ಒಳಗಾಗುವಂತೆ ಒತ್ತಾಯಿಸುತ್ತದೆ. ಇಂತಹ ಒಂದು ಘಟನೆಯಲ್ಲಿ ಭಾರತೀಯ ಮೂಲದ ಗರ್ಭಿಣಿ ಮೃತಪಟ್ಟಿದ್ದಾರೆ.
ಪೋರ್ಚುಗಲ್‌ನ ಅತಿದೊಡ್ಡ ಆಸ್ಪತ್ರೆಯಾದ ಲಿಸ್ಬನ್‌ನ ಸಾಂಟಾ ಮಾರಿಯಾ ಆಸ್ಪತ್ರೆಯಿಂದ ಸ್ಥಳಾಂತರಿಸುವಾಗ ಭಾರತೀಯ ಮೂಲದ ಗರ್ಭಿಣಿ ಪ್ರವಾಸಿಗರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆ ಆಸ್ಪತ್ರೆಯ ಮಾತೃತ್ವ ಘಟಕವು ತುಂಬಿದ್ದ ಕಾರಣ ಬೇರೆ ಆಸ್ಪತ್ರೆಗೆ ವರ್ಗಾಯಿಸಲಾಗುತ್ತಿತ್ತು. ಇನ್ನು, ಮಹಿಳೆ ಮೃತಪಟ್ಟಿದ್ದರೂ, ತುರ್ತು ಸಿಸೇರಿಯನ್ ಮಾಡಿ ನಂತರ ಆಕೆಯ ಮಗುವನ್ನು ತಾಯಿಯ ಗರ್ಭದಿಂದ ಹೊರ ತೆಗೆದಿದ್ದು, ಮಗು ಜೀವಂತವಾಗಿದೆ. ಹಾಗೂ, ಮಹಿಳೆಯ ಸಾವಿನ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೊಂದೆಡೆ, ಇತ್ತೀಚಿನ ತಿಂಗಳುಗಳಲ್ಲಿ ಎರಡು ಶಿಶುಗಳ ಪ್ರತ್ಯೇಕ ಸಾವುಗಳು ಸೇರಿದಂತೆ ಅವರ ತಾಯಂದಿರನ್ನು ಆಸ್ಪತ್ರೆಗಳ ನಡುವೆ ವರ್ಗಾಯಿಸಲಾಗಿರುವುದು ಮತ್ತು ಇತರೆ ಕಾರಣಗಳು ಸೇರಿ ಪೋರ್ಚುಗಲ್‌ನಾದ್ಯಂತ ಇದೇ ರೀತಿಯ ಘಟನೆಗಳು ನಡೆದಿವೆ. ಈ ಮಧ್ಯೆ,
ಪೋರ್ಚುಗಲ್‌ನ ಆರೋಗ್ಯ ಸಿಬ್ಬಂದಿಯ ಕೊರತೆ, ವಿಶೇಷವಾಗಿ ಸ್ತ್ರೀರೋಗ ಶಾಸ್ತ್ರ ಮತ್ತು ಪ್ರಸೂತಿಶಾಸ್ತ್ರದಲ್ಲಿ ಪರಿಣತಿ ಹೊಂದಿರುವವರ ಕೊರತೆ ಇದೆ. ಈ ಹಿನ್ನೆಲೆ, ವಿದೇಶದಿಂದ ನೇಮಕ ಮಾಡಿಕೊಳ್ಳಲು ಸರ್ಕಾರ ಪರಿಗಣಿಸಿದೆ ಎಂದು ತಿಳಿದುಬಂದಿದೆ. ಕೆಲವು ಪ್ರಸೂತಿ ಘಟಕಗಳ ಮುಚ್ಚುವಿಕೆಯಂತಹ ಘಟನೆಗಳಿಗೆ ವಿರೋಧ ಪಕ್ಷಗಳು, ವೈದ್ಯರು ಮತ್ತು ದಾದಿಯರು ಮಾಜಿ ಆರೋಗ್ಯ ಸಚಿವೆಯ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದೂ ವರದಿಯಾಗಿದೆ.
ಡ್ರಗ್ಸ್ ಸೇವಿಸಿರಲಿಲ್ವಂತೆ ಫಿನ್ಲೆಂಡ್ ಪ್ರಧಾನಿ: ಪರೀಕ್ಷೆಯಲ್ಲಿ ಸಾಬೀತು..!
ಡಾ. ಮಾರ್ಟಾ ಟೆಮಿಡೋ ಅವರು ಪ್ರಸ್ತುತ ಬಿಕ್ಕಟ್ಟನ್ನು ಪರಿಹರಿಸಲು ಯಾವುದೇ ಮಾರ್ಗವನ್ನು ಹೊಂದಿಲ್ಲದ ಕಾರಣ ರಾಜೀನಾಮೆ ನೀಡಿದ್ದಾರೆ ಎಂದು ಪೋರ್ಚುಗೀಸ್ ವೈದ್ಯರ ಸಂಘದ ಅಧ್ಯಕ್ಷ ಮಿಗುಯೆಲ್ ಗೈಮಾರೆಸ್ ಹೇಳಿದ್ದಾರೆ. ಆದರೆ, ಪೋರ್ಚುಗಲ್‌ನ ಸಾರ್ವಜನಿಕ ಆರೋಗ್ಯ ಸಂಘದ ಅಧ್ಯಕ್ಷ ಗುಸ್ಟಾವೊ ಟಾಟೊ ಬೋರ್ಗೆಸ್ ಅವರು, ಡಾ. ಮಾರ್ಟಾ ಟೆಮಿಡೋ ರಾಜೀನಾಮೆಯನ್ನು ನಿರೀಕ್ಷಿಸಿರಲಿಲ್ಲ ಮತ್ತು ಆರೋಗ್ಯ ಕ್ಷೇತ್ರದಲ್ಲಿ ತೀವ್ರ ಸಮಸ್ಯೆಗಳು ಇರುವಾಗ ಅವರು ಕೆಳಗಿಳಿದಿರುವುದು ಆಶ್ಚರ್ಯ ತಂದಿದೆ ಎಂದು ಹೇಳಿದರು. ಕೋವಿಡ್ -19 ಸಾಂಕ್ರಾಮಿಕ (Pandemic) ಸಮಯದಲ್ಲಿ ದೇಶದ ಜನರಿಗೆ ಲಸಿಕೆ ನೀಡುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ ಕೀರ್ತಿ ಡಾ. ಮಾರ್ಟಾ ಟೆಮಿಡೋ ಅವರಿಗೆ ವ್ಯಾಪಕವಾಗಿ ಸಲ್ಲುತ್ತದೆ.