ಸಾಮಾಜಿಕ ಜಾಲತಾಣ ಪೋಸ್ಟ್‌ಗಳಿಗೆ 45 ವರ್ಷ ಜೈಲು ಶಿಕ್ಷೆಗೊಳಗಾದ ಸೌದಿ ಮಹಿಳೆ..!

By BK Ashwin  |  First Published Aug 30, 2022, 10:07 PM IST

ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗೆ ಮಹಿಳೆಯೊಬ್ಬರಿಗೆ 45 ವರ್ಷ ಶಿಕ್ಷೆ ನೀಡಲಾಗಿದೆ. ಈ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದ್ದು, ಅಲ್ಲಿನ ನ್ಯಾಯಾಲಯ ಈ ಶಿಕ್ಷೆ ನೀಡಿದೆ. 


ಸೌದಿ ಮಹಿಳೆಯೊಬ್ಬರು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗಾಗಿ 45 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ ಎಂದು ನ್ಯಾಯಾಲಯದ ದಾಖಲೆಗಳನ್ನು ಉಲ್ಲೇಖಿಸಿ ಮಾನವ ಹಕ್ಕುಗಳ ಗುಂಪೊಂದು ಹೇಳಿಕೆ ನೀಡಿದೆ. ಅಲ್ಲದೆ, ಒಂದೇ ವಾರದಲ್ಲಿ ಈ ರೀತಿಯ ಎರಡು ಪ್ರಕರಣಗಳು ನಡೆದಿರುವ ಬಗ್ಗೆಯೂ ವರದಿಯಾಗಿದೆ. ನೌರಾ ಅಲ್-ಕಹ್ತಾನಿ ಅವರು ಸಾಮಾಜಿಕ ಮಾಧ್ಯಮದ ಮೂಲಕ "(ದೇಶದ) ಸಾಮಾಜಿಕ ರಚನೆಯನ್ನು ಹರಿಯಲು ಅಂತರ್ಜಾಲವನ್ನು ಬಳಸಿದ್ದಾರೆ" ಮತ್ತು "ಸಾರ್ವಜನಿಕ ಸುವ್ಯವಸ್ಥೆಯನ್ನು ಉಲ್ಲಂಘಿಸಿದ್ದಾರೆ" ಎಂದು ತಪ್ಪಿತಸ್ಥರೆಂದು ಸಾಬೀತಾದ ನಂತರ ಮೇಲ್ಮನವಿಯ ಮೇಲೆ ಭಾರಿ ಪ್ರಮಾಣದ ಶಿಕ್ಷೆಯನ್ನು ಪಡೆದಿದ್ದಾರೆ ಎಂದು ಡೆಮಾಕ್ರಸಿ ಫಾರ್ ದಿ ಅರಬ್ ವರ್ಲ್ಡ್ ನೌ (DAWN) ಹೇಳಿದೆ. ಸೌದಿ ಸಾಮ್ರಾಜ್ಯದ ಭಯೋತ್ಪಾದನೆ ನಿಗ್ರಹ ಮತ್ತು ಸೈಬರ್ ಅಪರಾಧ ವಿರೋಧಿ ಕಾನೂನಿನ ಅಡಿಯಲ್ಲಿ ಮಹಿಳೆಗೆ ಶಿಕ್ಷೆ ವಿಧಿಸಲಾಗಿದೆ ಎಂದು DAWN ವರದಿ ಮಾಡಿದೆ.

ಮೃತ ಸೌದಿ ಪತ್ರಕರ್ತ ಜಮಾಲ್ ಖಶೋಗಿ ಸ್ಥಾಪಿಸಿದ್ದ ವಾಷಿಂಗ್ಟನ್ ಮೂಲದ ಗುಂಪು ನ್ಯಾಯಾಲಯದ ದಾಖಲೆಯ ಪ್ರತಿಯನ್ನು ಹಂಚಿಕೊಂಡಿದೆ. ಆದರೆ, ಈ ಪ್ರಕರಣದ ಬಗ್ಗೆ ಸೌದಿ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಳೆದ ತಿಂಗಳು ತೈಲ-ಸಮೃದ್ಧ ಗಲ್ಫ್ ರಾಜಪ್ರಭುತ್ವ ರಾಷ್ಟ್ರಕ್ಕೆ ಯುಎಸ್ ಅಧ್ಯಕ್ಷ ಜೋ ಬೈಡೆನ್‌ ಭೇಟಿ ನೀಡಿದ ನಂತರ ಸೌದಿ ಅರೇಬಿಯಾದೊಂದಿಗೆ ಪಾಶ್ಚಿಮಾತ್ಯ ಮಾತುಕತೆ ಬಗ್ಗೆ ಚರ್ಚೆ ತೀವ್ರಗೊಳ್ಳುತ್ತಿದ್ದಂತೆ ಈ ಪ್ರಕರಣ ವರದಿಯಾಗಿದೆ. ಇಸ್ತಾನ್‌ಬುಲ್‌ನಲ್ಲಿರುವ ಸೌದಿ ಕಾನ್ಸುಲೇಟ್‌ನಲ್ಲಿ 2018 ರಲ್ಲಿ ಖಶೋಗಿ ಹತ್ಯೆಯ ಬಗ್ಗೆ ಸೌದಿ ಅರೇಬಿಯಾವನ್ನು "ಪರಿಯಾ" (ಅಂತಾರಾಷ್ಟ್ರೀಯ ಪ್ರತ್ಯೇಕತೆ, ನಿರ್ಬಂಧ)  ಮಾಡುವುದಾಗಿ ಬೈಡೆನ್ ಈ ಹಿಂದೆ ಬೆದರಿಕೆ ಹಾಕಿದ್ದರು. ಆದರೆ ಉಕ್ರೇನ್‌ ಮೇಲೆ ರಷ್ಯಾದ ಆಕ್ರಮಣದಿಂದ ಉಂಟಾದ ಇಂಧನ ಬಿಕ್ಕಟ್ಟಿನಿಂದ ಅಮೆರಿಕ ಯೂ ಟರ್ನ್‌ ತೆಗೆದುಕೊಂಡಿದೆ.

Tap to resize

Latest Videos

Saudi Arabia: ವಾಟ್ಸಾಪ್‌ನಲ್ಲಿ Red Heart Emoji ಕಳುಹಿಸಿದರೆ ₹20 ಲಕ್ಷ ದಂಡ, 5ವರ್ಷ ಜೈಲು!

ಸಕ್ರಿಯ ಟ್ವಿಟ್ಟರ್‌ ಖಾತೆಯನ್ನು ಹೊಂದಿರದ ಕಹ್ತಾನಿ ಬಗ್ಗೆ ಕೆಲವು ವಿವರಗಳು ಮಾತ್ರ  ಲಭ್ಯವಿವೆ. ಆಕೆಯನ್ನು ಜುಲೈ 2021 ರಲ್ಲಿ ಬಂಧಿಸಲಾಯಿತು ಮತ್ತು ವಿಶೇಷ ಕ್ರಿಮಿನಲ್ ನ್ಯಾಯಾಲಯವು ತಪ್ಪಿತಸ್ಥೆ ಎಂದು ಘೋಷಿಸಿತು. ಅಲ್ಲದೆ, ಆಕೆಯ ಮೇಲ್ಮನವಿ ವಿಚಾರಣೆ ಈ ತಿಂಗಳ ಆರಂಭದಲ್ಲಿತ್ತು ಎಂದು DAWN ಹೇಳಿದೆ. "ಈ ತಿಂಗಳಲ್ಲೇ ಸಲ್ಮಾ ಅಲ್-ಶೆಹಾಬ್‌ಗೆ ನೀಡಿದ್ದ ಆಘಾತಕಾರಿ 34 ವರ್ಷಗಳ ಶಿಕ್ಷೆ ನೀಡಿದ ನಂತರ ಕೆಲವೇ ವಾರಗಳ ನಂತರ, ಕಹ್ತಾನಿಗೆ 45 ವರ್ಷಗಳ ಶಿಕ್ಷೆ ನೀಡಲಾಗಿದೆ. ಇದು ಸೌದಿ ಅಧಿಕಾರಿಗಳು ತನ್ನ ನಾಗರಿಕರಿಂದ ಸೌಮ್ಯವಾದ ಟೀಕೆಗಳಿಗೂ ಸಹ ಶಿಕ್ಷಿಸಲು ಎಷ್ಟು ಧೈರ್ಯಶಾಲಿಯಾಗಿದ್ದಾರೆಂದು ತೋರಿಸುತ್ತದೆ" ಎಂದು ಗಲ್ಫ್ ಪ್ರದೇಶದ DAWN ನ ಸಂಶೋಧನಾ ನಿರ್ದೇಶಕ ಅಬ್ದುಲ್ಲಾ ಅಲಾವುದ್ ಹೇಳಿದರು.

ತಮ್ಮ ಪೋಸ್ಟ್‌ಗಳನ್ನು ರೀಟ್ವೀಟ್‌ ಮಾಡುವ ಮೂಲಕ "ಸಾರ್ವಜನಿಕ ಸುವ್ಯವಸ್ಥೆಯನ್ನು ಅಡ್ಡಿಪಡಿಸಲು" ಪ್ರಯತ್ನಿಸುವ ಭಿನ್ನಮತೀಯರಿಗೆ ಸಹಾಯ ಮಾಡಿದ್ದಕ್ಕಾಗಿ ಎರಡು ಮಕ್ಕಳ ತಾಯಿಯಾದ ಶೆಹಾಬ್‌ಗೆ ಈ ತಿಂಗಳು ಆಕೆಯ ಮೇಲ್ಮನವಿ ವಿಚಾರಣೆಯ ಬಳಿಕ ಸುದೀರ್ಘ ಜೈಲು ಶಿಕ್ಷೆ ಪಡೆದಿದ್ದರು. ಈ ಬಗ್ಗೆ ನ್ಯಾಯಾಲಯದ ದಾಖಲೆಗಳನ್ನು ಅಂತಾರಾಷ್ಟ್ರೀಯ ಸುದ್ದಿಸಂಸ್ಥೆ ಎಎಫ್‌ಪಿ ವರದಿ ಮಾಡಿತ್ತು.  ಅಲ್ಲದೆ, ಬ್ರಿಟನ್‌ನ ಲೀಡ್ಸ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಅಭ್ಯರ್ಥಿಯಾಗಿರುವ ಈಕೆಗೆ ತನ್ನ ಶಿಕ್ಷೆಯ ಭಾಗವಾಗಿ ಇನ್ನೂ 34 ವರ್ಷಗಳ ಕಾಲ ವಿದೇಶ ಪ್ರವಾಸ ಮಾಡುವುದನ್ನು ನಿಷೇಧಿಸಲಾಗಿದೆ.

Saudi Arabia: ಸೌದಿಯಲ್ಲಿ ಒಂದೇ ದಿನ 81 ಮಂದಿಗೆ ಗಲ್ಲು ಶಿಕ್ಷೆ

"2,000 ಕ್ಕಿಂತ ಕಡಿಮೆ ಅನುಯಾಯಿಗಳನ್ನು ಹೊಂದಿರುವ ಯಾರ ಮೇಲಾದರೂ ಅಧಿಕಾರಿಗಳು ಆಸಕ್ತಿ ವಹಿಸುತ್ತಾರೆ ಎಂದು ಆಕೆ ಭಾವಿಸಿರಲಿಲ್ಲ, ಬೆದರಿಕೆಗಳನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ" ಎಂದು ಸ್ನೇಹಿತೆ ಹೇಳಿದರು. ತೈಲ-ಸಮೃದ್ಧ ಗಲ್ಫ್ ಸಾಮ್ರಾಜ್ಯದಲ್ಲಿ ಮಾನವ ಹಕ್ಕುಗಳ ಕಾರ್ಯಕರ್ತರ ಮೇಲೆ ದಮನದ ಭಾಗವಾಗಿ ಈ ಶಿಕ್ಷೆಗಳು ಪ್ರಕಟವಾಗಿವೆ, ಅವರಲ್ಲಿ ಅನೇಕರಿಗೆ ಜೈಲು ಶಿಕ್ಷೆ ಮತ್ತು ಪ್ರಯಾಣ ನಿಷೇಧವನ್ನು ಸಹ ನೀಡಲಾಗಿದೆ.

click me!