ಗಂಡನ ಸಮಾಧಿ ಮೇಲೆಯೇ 8 ತಿಂಗಳು ಮಲಗುತ್ತಿದ್ದ ಪತ್ನಿ! ಆಮೇಲೆ ಆಗಿದ್ದೇನು? ನೀವೇ ನೋಡಿ

Published : Feb 03, 2026, 09:07 AM IST
grave

ಸಾರಾಂಶ

ಪತಿ ತೀರಿಕೊಂಡ ನಂತರ ಖಿನ್ನತೆಯಿಂದ ಮನೆ ಕಳೆದುಕೊಂಡ 55 ವರ್ಷದ ರಿಯಾ ಹೋಮ್ಸ್, ಸುಮಾರು 8 ತಿಂಗಳು ಗಂಡನ ಸಮಾಧಿ ಪಕ್ಕದಲ್ಲೇ ವಾಸವಿದ್ದರು. ಪೊಲೀಸ್ ಅಧಿಕಾರಿ ಜಾಮಿ ಅವರ ಸಹಾಯ ಮತ್ತು ದೇಣಿಗೆ ಸಂಗ್ರಹ ಅಭಿಯಾನದಿಂದಾಗಿ, ರಿಯಾ ಮತ್ತೆ ಹೊಸ ಸುಸಜ್ಜಿತ ಮನೆಯನ್ನು ಪಡೆದು ಹೊಸ ಜೀವನ ಆರಂಭಿಸಿದರು.

ನ್ಯೂಯಾರ್ಕ್‌: ಜೀವನದಲ್ಲಿ ಒಮ್ಮೊಮ್ಮೆ ಸಂಭವಿಸುವ ಒಂದು ದುರ್ಘಟನೆಗಳು ಒಂದು ಸುಂದರ ಕುಟುಂಬವನ್ನೇ ನುಚ್ಚುನೂರು ಮಾಡಿಬಿಡುತ್ತವೆ. ಇದಷ್ಟೇ ಅಲ್ಲದೇ ಎಷ್ಟೋ ಜನರ ಬದುಕು ಬೀದಿಗೆ ಬೀಳುವಂತೆ ಮಾಡಿ ಬಿಡುತ್ತದೆ. ಅಂತಹದ್ದೇ ಒಂದು ಘಟನೆ ನ್ಯೂಯಾರ್ಕ್‌ನ ಸಿರಾಕ್ಯೂಸ್‌ನಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ತೋರಿದ ಸಣ್ಣ ಕರುಣೆ, ಒಬ್ಬ ಮಹಿಳೆಯ ಬದುಕನ್ನೇ ಬದಲಿಸಿದೆ. ಸುಮಾರು 8 ತಿಂಗಳ ಕಾಲ ತನ್ನ ಗಂಡನ ಸಮಾಧಿ ಪಕ್ಕದಲ್ಲೇ ವಾಸವಿದ್ದ 55 ವರ್ಷದ ರಿಯಾ ಹೋಮ್ಸ್, ಪೊಲೀಸ್ ಅಧಿಕಾರಿಯೊಬ್ಬರ ಸಹಾಯದಿಂದ ಮತ್ತೆ ಹೊಸ ಜೀವನ ಆರಂಭಿಸಿದ್ದಾರೆ.

ಪೊಲೀಸ್ ಅಧಿಕಾರಿ ಜಾಮಿ ಸಹಾಯ

2025ರ ಡಿಸೆಂಬರ್ 13ರಂದು, ಸಿಕ್ಕಾಪಟ್ಟೆ ಚಳಿ ಇತ್ತು. ಆಗ ರಿಯಾ, ಕೈಯಲ್ಲಿ ಕೆಲವು ಸಾಮಾನುಗಳನ್ನು ಹಿಡಿದು ಒಂದು ಗುಡ್ಡ ಹತ್ತಲು ಕಷ್ಟಪಡುತ್ತಿದ್ದರು. ಇದನ್ನು ಸಿರಾಕ್ಯೂಸ್ ಪೊಲೀಸ್ ಅಧಿಕಾರಿ ಜಾಮಿ ಪಾಸ್ಟೊರೆಲ್ಲೊ ನೋಡಿದರು. ರಿಯಾಳನ್ನು ನೋಡಿ ಮರುಕಪಟ್ಟ ಜಾಮಿ, ತಮ್ಮ ಪೆಟ್ರೋಲಿಂಗ್ ವಾಹನದಲ್ಲಿ ಆಕೆಯನ್ನು ಸ್ಮಶಾನದವರೆಗೆ ಡ್ರಾಪ್ ಮಾಡಿದರು. ದಾರಿಯಲ್ಲಿ ರಿಯಾ, ತಮ್ಮ 26 ವರ್ಷಗಳ ದಾಂಪತ್ಯ ಮತ್ತು ಪತಿ ಎಡ್ಡಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು. ಆದರೆ, ಆಕೆ ಅಲ್ಲಿಯೇ ವಾಸಿಸುತ್ತಿದ್ದಾರೆ ಎಂಬ ಸತ್ಯ ಜಾಮಿಗೆ ಆಗ ತಿಳಿದಿರಲಿಲ್ಲ.

ಕ್ರಿಸ್‌ಮಸ್‌ಗೂ ಮುನ್ನ, ಪೊಲೀಸ್ ಇಲಾಖೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಜಾಮಿಯ ಜೊತೆಗಿನ ರಿಯಾಳ ಫೋಟೋ ಒಂದನ್ನು ಹಂಚಿಕೊಂಡಿತ್ತು. ಈ ಫೋಟೋ ನೋಡಿದ ಸ್ಮಶಾನದ ಸಿಬ್ಬಂದಿಯೊಬ್ಬರು, ರಿಯಾ ಅಲ್ಲಿಯೇ ವಾಸಿಸುತ್ತಿರುವ ವಿಷಯವನ್ನು ಪೊಲೀಸರಿಗೆ ತಿಳಿಸಿದರು. ನಂತರ ಪೊಲೀಸರು ತನಿಖೆ ನಡೆಸಿದಾಗ ಬೆಚ್ಚಿಬೀಳುವ ಸತ್ಯ ಹೊರಬಂದಿದೆ.

ಗಂಡನ ಸಮಾಧಿ ಮೇಲೆಯೇ ಬದುಕು!

2020ರಲ್ಲಿ ಪತಿ ಎಡ್ಡಿ ತೀರಿಕೊಂಡ ನಂತರ ರಿಯಾ ತೀವ್ರ ಖಿನ್ನತೆಗೆ ಜಾರಿದ್ದರು. ಕೆಲಸ ಕಳೆದುಕೊಂಡು, ಮನೆ ಬಾಡಿಗೆ ಕಟ್ಟಲಾಗದೆ ಮನೆಯಿಂದ ಹೊರಬಿದ್ದರು. ಹೋಗಲು ಬೇರೆ ಜಾಗವಿಲ್ಲದ ಕಾರಣ, ಕೊನೆಗೆ ಪತಿಯ ಸಮಾಧಿಯ ಮೇಲೆಯೇ ಪ್ಲಾಸ್ಟಿಕ್ ಶೀಟ್ ಹಾಸಿ ಮಲಗಲು ಶುರುಮಾಡಿದರು. ಹಗಲಿನಲ್ಲಿ ಚರ್ಚ್‌ ಮತ್ತು ಹೋಟೆಲ್‌ಗಳಲ್ಲಿ ಸ್ವಯಂಸೇವೆ ಮಾಡುತ್ತಿದ್ದ ರಿಯಾ, ರಾತ್ರಿಯಾಗುತ್ತಿದ್ದಂತೆ ಯಾರಿಗೂ ತಿಳಿಯದಂತೆ ಸ್ಮಶಾನಕ್ಕೆ ವಾಪಸ್ ಬರುತ್ತಿದ್ದರು. ಯಾರ ಬಳಿಯೂ ಸಹಾಯ ಕೇಳದೆ, ದೂರು ಹೇಳದೆ ಸುಮಾರು 8 ತಿಂಗಳು ಹೀಗೆಯೇ ಬದುಕು ಸಾಗಿಸಿದ್ದರು.

 

ಹೊಸ ಜೀವನದ ಆರಂಭ

ಸತ್ಯ ತಿಳಿದ ತಕ್ಷಣ ಅಧಿಕಾರಿ ಜಾಮಿ, ಆಕೆಗಾಗಿ ಹೋಟೆಲ್‌ನಲ್ಲಿ ಒಂದು ರೂಮ್ ಬುಕ್ ಮಾಡಿದರು. ನಂತರ, 'GoFundMe' ಮೂಲಕ ದೇಣಿಗೆ ಸಂಗ್ರಹ ಅಭಿಯಾನ ಆರಂಭಿಸಿದರು. ಇದರಲ್ಲಿ ಜನರು 27,000 ಡಾಲರ್‌ಗೂ ಹೆಚ್ಚು (ಸುಮಾರು 22 ಲಕ್ಷ ರೂಪಾಯಿ) ಹಣವನ್ನು ಸಂಗ್ರಹಿಸಿಕೊಟ್ಟರು. ಲೆಮೊಯ್ನ್ ಕಾಲೇಜಿನ ಅಧ್ಯಕ್ಷೆ ಲಿಂಡಾ ಲೆಮುರಾ ಅವರು ರಿಯಾಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಿಕೊಟ್ಟರು.

ಮನೆ ಇಲ್ಲದವರಿಗೆ ಸೂರು ಒದಗಿಸುವ ಸಂಸ್ಥೆಯೊಂದರ ಸಹಾಯದಿಂದ, 2026ರ ಜನವರಿ 5ರಂದು ರಿಯಾ ಸಂಪೂರ್ಣ ಸುಸಜ್ಜಿತವಾದ ತಮ್ಮ ಹೊಸ ಮನೆಗೆ ಕಾಲಿಟ್ಟರು. "ಇದೆಲ್ಲಾ ದೇವರೇ ನಿರ್ಧರಿಸಿದ್ದು. ನನಗೆ ಸಹಾಯ ಬೇಕಾದಾಗ ದೇವರು ಜಾಮಿಯನ್ನು ನನ್ನ ಬಳಿ ಕಳುಹಿಸಿಕೊಟ್ಟರು," ಎಂದು ರಿಯಾ ಕೃತಜ್ಞತೆಯಿಂದ ಹೇಳುತ್ತಾರೆ. ಇಂದು ಅಧಿಕಾರಿ ಜಾಮಿ ಮತ್ತು ರಿಯಾ ಆತ್ಮೀಯ ಸ್ನೇಹಿತರಾಗಿದ್ದಾರೆ.

 

ಬದುಕು ಎನ್ನುವ ನಾವಿಕನಿಲ್ಲದ ನಾವೆಯಂತೆ  ಪರಿಸ್ಥಿತಿ ಎನ್ನುವ ಬಿರುಗಾಳಿಗೆ ಸಿಕ್ಕಿ ದಿಕ್ಕು ಬದಲಾಗಿ ಹೋಗುತ್ತದೆ. ಆದರೆ ಸರಿಯಾದ ಸಮಯಕ್ಕೆ ಸರಿಯಾದ ವ್ಯಕ್ತಿ ಅಥವಾ ನಾಯಕ ಸಿಕ್ಕಿದರೆ ಅದೇ ಹಡಗು ಸರಿಯಾದ ದಿಕ್ಕು ಕಂಡುಕೊಳ್ಳುತ್ತದೆ. ರಿಯಾ ಬದುಕಿನಲ್ಲಿ ಜಾಮಿ ಸೇರಿದಂತೆ ದೇವರಾದ ಕಾಣದ ಕೈಗಳಿಗೆ ಒಂದು ಸೆಲ್ಯೂಟ್ ಹೇಳೋಣ ಅಲ್ವಾ? 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಣ್ವಸ್ತ್ರ ಕ್ಷಿಪಣೀಲಿ ಇಂಧನ ಬದಲು ನೀರು ತುಂಬಿದ್ದ ಅಧ್ಯಕ್ಷ ಕ್ಸಿ ಆಪ್ತ!
Breaking: ಅಮೆರಿಕದ ಜೊತೆಗಿನ ಟ್ರೇಡ್‌ ಡೀಲ್‌ಗೆ ಒಪ್ಪಿದ ಭಾರತ, ಶೇ.25 ರಿಂದ ಶೇ. 18ಕ್ಕೆ ಇಳಿಯಲಿದೆ ತೆರಿಗೆ!