
ನ್ಯೂಯಾರ್ಕ್(ಜೂ.20): ಪ್ರಧಾನಿ ನರೇಂದ್ರ ಮೋದಿ 4 ದಿನಗಳ ಅಮೆರಿಕ ಪ್ರವಾಸಆರಂಭಗೊಂಡಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅಹ್ವಾನದ ಮೇರೆ ಅಮೆರಿಕ ಪ್ರವಾಸ ಕೈಗೊಂಡಿರುವ ಮೋದಿ ಇದೀಗ ನ್ಯೂಯಾರ್ಕ್‌ನ ಜಾನ್ ಆಫ್ ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದ್ದಾರೆ. ಮೋದಿಗೆ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ಕೋರಲಾಗಿದೆ. ದೆಹಲಿಯಿಂದ ಸತತ 14 ಗಂಟೆ 37 ನಿಮಿಷದ ಪ್ರಯಾಣ ಮಾಡಿದ ಮೋದಿ ನ್ಯೂಯಾರ್ಕ್ ನಿಲ್ದಾಣದಲ್ಲಿ ಲ್ಯಾಂಡ್ ಆಗಿದ್ದಾರೆ.
ಅಮೆರಿಕ ಪ್ರಯಾಣಕ್ಕೂ ಮೊದಲು ಪ್ರಧಾನಿ ಕಾರ್ಯಾಲಯ ಮೋದಿ ನಿರ್ಗಮನ ಹೇಳಿಕೆ ಬಿಡುಗಡೆ ಮಾಡಿತ್ತು. ಬೈಡೆನ್ ಮತ್ತು ಪ್ರಥಮ ಮಹಿಳೆ ಡಾ. ಜಿಲ್ ಬೈಡೆನ್ ಅವರ ಆಹ್ವಾನದ ಮೇರೆಗೆ ನಾನು ರಾಷ್ಟ್ರೀಯ ಭೇಟಿಗಾಗಿ ಅಮೆರಿಕಕ್ಕೆ ಪ್ರಯಾಣಿಸುತ್ತಿದ್ದೇನೆ. ಈ ವಿಶೇಷ ಆಹ್ವಾನವು ನಮ್ಮ ಪ್ರಜಾಪ್ರಭುತ್ವಗಳ ನಡುವಿನ ಪಾಲುದಾರಿಕೆಯ ಚೈತನ್ಯ ಮತ್ತು ಹುರುಪಿನ ಪ್ರತಿಬಿಂಬವಾಗಿದೆ ಎಂದು ಮೋದಿ ಹೇಳಿದ್ದರು.
ಬಿಡುವಿರದ ಅಮೆರಿಕ ಕಾರ್ಯಕ್ರಮದಲ್ಲಿ ಡಜನ್ ಲೀಡರ್ಸ್ ಭೇಟಿಯಾಗ್ತಾರೆ ಮೋದಿ
ನಾನು ನ್ಯೂಯಾರ್ಕ್‌ನಿಂದ ಪ್ರವಾಸ ಆರಂಭಿಸುತ್ತೇನೆ. ಅಲ್ಲಿ ನಾನು ಜೂನ್ 21ರಂದು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ವಿಶ್ವಸಂಸ್ಥೆ ನಾಯಕತ್ವ ಮತ್ತು ಅಂತಾರಾಷ್ಟ್ರೀಯ ಸಮುದಾಯದ ಸದಸ್ಯರೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುತ್ತೇನೆ. 2014 ಡಿಸೆಂಬರ್ ನಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಗುರುತಿಸುವ ಭಾರತದ ಪ್ರಸ್ತಾಪವನ್ನು ಬೆಂಬಲಿಸಿದ ಸ್ಥಳದಲ್ಲೇ ನಾನು ಈ ವಿಶೇಷ ಆಚರಣೆಯನ್ನು ಎದುರು ನೋಡುತ್ತಿದ್ದೇನೆ ಎಂದರು. ಯೋಗ ದಿನಾಚರಣೆ ಬಳಿಕ ಬೈಡೆನ್ ಭೇಟಿಗಾಗಿ ಮೋದಿ ವಾಷಿಂಗ್ಟನ್ ಡಿಸಿಗೆ ಪ್ರಯಾಣಿಸಲಿದ್ದಾರೆ
ಭಾರತ-ಅಮೆರಿಕ ಬಾಂಧವ್ಯಗಳು ಬಹುಮುಖಿಯಾಗಿದ್ದು, ವಿವಿಧ ವಲಯಗಳಲ್ಲಿ ಗಾಢವಾದ ತೊಡಗಿಸಿಕೊಳ್ಳುವಿಕೆಗಳನ್ನು ಹೊಂದಿವೆ. ಅಮೆರಿಕ ಸರಕು ಮತ್ತು ಸೇವೆಗಳಲ್ಲಿ ಭಾರತವು ಅತಿದೊಡ್ಡ ವ್ಯಾಪಾರ ಪಾಲುದಾರನಾಗಿದೆ. ನಾವು ವಿಜ್ಞಾನ ಮತ್ತು ತಂತ್ರಜ್ಞಾನ, ಶಿಕ್ಷಣ, ಆರೋಗ್ಯ, ರಕ್ಷಣೆ ಮತ್ತು ಭದ್ರತಾ ಕ್ಷೇತ್ರಗಳಲ್ಲಿ ನಿಕಟ ಸಹಕಾರ ಹೊಂದಿದ್ದೇವೆ. ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಉಪಕ್ರಮವು ರಕ್ಷಣೆ, ಕೈಗಾರಿಕಾ ಸಹಕಾರ, ಬಾಹ್ಯಾಕಾಶ, ಟೆಲಿಕಾಂ, ಕ್ವಾಂಟಮ್, ಕೃತಕ ಬುದ್ಧಿಮತ್ತೆ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಿಗೆ ಹೊಸ ಆಯಾಮಗಳನ್ನು ರೂಪಿಸಿದೆ ಮತ್ತು ಸಹಭಾಗಿತ್ವವನ್ನು ವಿಸ್ತರಿಸಿದೆ. ಮುಕ್ತ, ತೆರೆದ ಮತ್ತು ಎಲ್ಲರನ್ನೂ ಒಳಗೊಂಡ ಇಂಡೋ-ಪೆಸಿಫಿಕ್ ವಲಯದ ನಮ್ಮ ಹಂಚಿತ ದೃಷ್ಟಿಕೋನವನ್ನು ಹೆಚ್ಚಿಸಲು ನಮ್ಮ 2 ದೇಶಗಳು ಸಹ ಸಹಕರಿಸುತ್ತಿವೆ ಎಂದು ಮೋದಿ ಹೇಳಿದ್ದಾರೆ.
ವಿಪತ್ತು ನಿರ್ವಹಣೆಯಲ್ಲಿ ಭಾರತ ವಿಶ್ವಕ್ಕೆ ಮಾದರಿ; ಬಿಪೊರ್‌ಜಾಯ್ ಎದುರಿಸಿದ ರೀತಿಗೆ ಮೋದಿ ಮೆಚ್ಚುಗೆ!
ಅಧ್ಯಕ್ಷ ಬೈಡೆನ್ ಮತ್ತು ಇತರೆ ಹಿರಿಯ ಅಮೆರಿಕ ನಾಯಕರೊಂದಿಗಿನ ನನ್ನ ಚರ್ಚೆಗಳು ನಮ್ಮ ದ್ವಿಪಕ್ಷೀಯ ಸಹಕಾರ, ಜಿ-20, ಕ್ವಾಡ್ ಮತ್ತು ಐಪಿಇಎಫ್ ನಂತಹ ಬಹುಪಕ್ಷೀಯ ವೇದಿಕೆಗಳಲ್ಲಿ ಕ್ರೋಢೀಕರಿಸಲು ಅವಕಾಶ ಒದಗಿಸುತ್ತದೆ.ಭಾರತ-ಅಮೆರಿಕ ಬಾಂಧವ್ಯಕ್ಕೆ ಅಮೆರಿಕ ಸಂಸತ್ತು ಯಾವಾಗಲೂ ಬಲವಾದ ದ್ವಿಪಕ್ಷೀಯ ಬೆಂಬಲ ನೀಡಿದೆ. ನನ್ನ ಭೇಟಿಯ ಸಮಯದಲ್ಲಿ ಸಂಸತ್ತಿನ ನಾಯಕತ್ವದ ಆಹ್ವಾನದ ಮೇರೆಗೆ ನಾನು ಅಮೆರಿಕ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದೇನೆ. ನಮ್ಮ ದೇಶಗಳ ನಡುವಿನ ನಂಬಿಕೆ ಮತ್ತು ವಿಶ್ವಾಸ ಹೆಚ್ಚಿಸುವಲ್ಲಿ ಜನರಿಂದ ಜನರ ಸಂಪರ್ಕಗಳು ಪ್ರಮುಖವಾಗಿವೆ. ನಮ್ಮ ಅತ್ಯುತ್ತಮ ಸಮಾಜಗಳನ್ನು ಪ್ರತಿನಿಧಿಸುವ ರೋಮಾಂಚಕ ಅನಿವಾಸಿ ಭಾರತೀಯ ಸಮುದಾಯವನ್ನು ಭೇಟಿಯಾಗಲು ನಾನು ಎದುರು ನೋಡುತ್ತಿದ್ದೇನೆ. ನಮ್ಮ ವ್ಯಾಪಾರ ಮತ್ತು ಹೂಡಿಕೆ ಸಂಬಂಧವನ್ನು ಉನ್ನತೀಕರಿಸಲು ಮತ್ತು ಚೇತರಿಸಿಕೊಳ್ಳುವ ಜಾಗತಿಕ ಪೂರೈಕೆ ಸರಪಳಿಗಳನ್ನು ನಿರ್ಮಿಸುವ ಅವಕಾಶಗಳನ್ನು ಚರ್ಚಿಸಲು ನಾನು ಕೆಲವು ಪ್ರಮುಖ ಸಿಇಒಗಳನ್ನು ಭೇಟಿ ಮಾಡುತ್ತೇನೆ ಎಂದು ಮೋದಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ