ಕೊರೋನಾ ಅಟ್ಟಹಾಸ: ತುರ್ತು ಬಳಕೆಗೆ ಅನುಮತಿ ಕೋರಿದ ವಿಶ್ವದ ಮೊದಲ ಲಸಿಕೆ!

By Kannadaprabha NewsFirst Published Nov 22, 2020, 8:48 AM IST
Highlights

ಲಸಿಕೆ ತುರ್ತು ಬಳಕೆಗೆ ಅನುಮತಿ ಕೇಳಿದ ಫೈಝರ್‌| ತುರ್ತು ಬಳಕೆಗೆ ಅನುಮತಿ ಕೋರಿದ ವಿಶ್ವದ ಮೊದಲ ಲಸಿಕೆ| ಮುಂದಿನ ತಿಂಗಳೇ ಅಮೆರಿಕದಲ್ಲಿ ಲಸಿಕೆ ಸಿಗುವ ಸಾಧ್ಯತೆ

ವಾಷಿಂಗ್ಟನ್(ನ.22): ಜಗತ್ತೇ ತುದಿಗಾಲಿನಲ್ಲಿ ನಿಂತು ಕಾಯುತ್ತಿರುವ ಕೊರೋನಾ ಲಸಿಕೆ ಕೊನೆಗೂ ಜನರಿಗೆ ಸಿಗುವ ಕ್ಷಣ ಸನ್ನಿಹಿತವಾಗುತ್ತಿದ್ದು, ಅಮೆರಿಕದ ಫೈಝರ್‌ ಕಂಪನಿ ತನ್ನ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಅಮೆರಿಕದ ಸರ್ಕಾರಕ್ಕೆ ಔಪಚಾರಿಕ ಮನವಿ ಸಲ್ಲಿಸಿದೆ. ಇಂಥ ಒಪ್ಪಿಗೆ ಕೋರಿ ಅರ್ಜಿ ಸಲ್ಲಿಸಿದ ವಿಶ್ವದ ಮೊದಲ ಕಂಪನಿ ಇದಾಗಿದೆ. ಹೀಗಾಗಿ ಸರ್ಕಾರ ಒಪ್ಪಿದರೆ ಮುಂದಿನ ತಿಂಗಳಿನಿಂದಲೇ ಅಮೆರಿಕದಲ್ಲಿ ಸೀಮಿತ ಪ್ರಮಾಣದಲ್ಲಿ ಈ ಲಸಿಕೆ ಲಭ್ಯವಾಗಲಿದೆ.

"

ಅಮೆರಿಕದ ಆಹಾರ ಮತ್ತು ಔಷಧ ಇಲಾಖೆ (ಎಫ್‌ಡಿಎ)ಗೆ ಫೈಝರ್‌ ಮತ್ತು ಜರ್ಮನಿಯ ಬಯೋನ್‌ಟೆಕ್‌ ಕಂಪನಿಗಳು ತಾವು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೋವಿಡ್‌-19 ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೇಳಿ ಶುಕ್ರವಾರ ಅರ್ಜಿ ಸಲ್ಲಿಸಿವೆ. ಈಗಾಗಲೇ ಈ ಕಂಪನಿಗಳು ತಮ್ಮ ಲಸಿಕೆ ಶೇ.95ರಷ್ಟುಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂದು ಹೇಳಿಕೊಂಡಿರುವುದರಿಂದ ಈ ಲಸಿಕೆಯ ಬಗ್ಗೆ ಜಗತ್ತಿನಾದ್ಯಂತ ಕುತೂಹಲವಿದೆ. ತುರ್ತು ಬಳಕೆಗೆ ಅನುಮತಿ ಸಿಕ್ಕರೂ ಲಸಿಕೆಗೆ ಎಲ್ಲರಿಗೂ ಮುಕ್ತವಾಗಿ ಸಿಗುವುದಿಲ್ಲ. ಸೀಮಿತವಾಗಿ ಮತ್ತು ಅತ್ಯಂತ ತುರ್ತು ಅಗತ್ಯವಿರುವವರಿಗೆ ಮಾತ್ರ ಸಿಗಲಿದೆ.

ಇದೇ ವೇಳೆ ಯುರೋಪ್‌ ಮತ್ತು ಬ್ರಿಟನ್ನಿನಲ್ಲೂ ಲಸಿಕೆಯ ತುರ್ತು ಬಳಕೆಗೆ ಫೈಜರ್‌ ಕಂಪನಿ ಅನುಮತಿ ಕೋರಲಿದೆ. ಜಾಗತಿಕವಾಗಿ ಈ ವರ್ಷಾಂತ್ಯಕ್ಕೆ ಫೈಝರ್‌ ಕಂಪನಿ 5 ಕೋಟಿ ಡೋಸ್‌ ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧರಿಸಿದ್ದು, ಡಿಸೆಂಬರ್‌ನಲ್ಲಿ ಅಮೆರಿಕದಲ್ಲಿ 2.5 ಕೋಟಿ ಡೋಸ್‌ ಸಿಗಲಿದೆ.

ಮಾಡೆರ್ನಾ ಕಂಪನಿ ಕೂಡ ತನ್ನ ಲಸಿಕೆ ಶೇ.95ರಷ್ಟುಪರಿಣಾಮಕಾರಿಯಾಗಿದೆ ಎಂದು ಇತ್ತೀಚೆಗೆ ಹೇಳಿಕೊಂಡಿದ್ದು, ಇವೆರಡೂ ಲಸಿಕೆಗಳ ಮೌಲ್ಯಮಾಪನವನ್ನು ಡಿ.10ರಂದು ಅಮೆರಿಕದ ಎಫ್‌ಡಿಎ ವಿಜ್ಞಾನಿಗಳು ನಡೆಸಲಿದ್ದಾರೆ. ಇಲ್ಲಿಯವರೆಗೆ ಈ ಎರಡೂ ಕಂಪನಿಯ ಲಸಿಕೆಗಳ ಬಗ್ಗೆ ಲಭ್ಯವಿರುವ ಅಂಕಿಅಂಶಗಳು ಆಯಾ ಕಂಪನಿಗಳು ನೀಡಿರುವ ಅಂಕಿಅಂಶಗಳಷ್ಟೇ ಆಗಿವೆ. ಫೈಝರ್‌ ಕಂಪನಿ ಸದ್ಯ 3ನೇ ಹಂತದಲ್ಲಿ ತನ್ನ ಲಸಿಕೆಯನ್ನು 44,000 ಜನರ ಮೇಲೆ ಪ್ರಯೋಗಿಸುತ್ತಿದೆ. ಅದು ಪೂರ್ಣಗೊಳ್ಳಲು ಇನ್ನೂ ಸಾಕಷ್ಟುಸಮಯ ಹಿಡಿಯುತ್ತದೆ.

click me!