ಕರ್ನಾಟಕದ ಚುನಾವಣೆಯ ಬಳಿಕ ಮುಂಬರುವ ತೆಲಂಗಾಣ ಮತ್ತು ಇತರ ರಾಜ್ಯಗಳ ಚುನಾವಣೆಗಳಲ್ಲೂ ಜನ ಬಿಜೆಪಿಯನ್ನು ಸೋಲಿಸುತ್ತಾರೆ. ದ್ವೇಷ ತುಂಬಿದ ಸಿದ್ಧಾಂತ ಗೆಲ್ಲಲು ಜನ ಬಿಡುವುದಿಲ್ಲ ಎಂದು ಅಮೆರಿಕದಲ್ಲಿ ರಾಹುಲ್ ಗಾಂಧಿ ಪುನರುಚ್ಚರಿಸಿದ್ದಾರೆ.
ನ್ಯೂಯಾರ್ಕ್ (ಜೂ.05): ಕರ್ನಾಟಕದ ಚುನಾವಣೆಯ ಬಳಿಕ ಮುಂಬರುವ ತೆಲಂಗಾಣ ಮತ್ತು ಇತರ ರಾಜ್ಯಗಳ ಚುನಾವಣೆಗಳಲ್ಲೂ ಜನ ಬಿಜೆಪಿಯನ್ನು ಸೋಲಿಸುತ್ತಾರೆ. ದ್ವೇಷ ತುಂಬಿದ ಸಿದ್ಧಾಂತ ಗೆಲ್ಲಲು ಜನ ಬಿಡುವುದಿಲ್ಲ ಎಂದು ಅಮೆರಿಕದಲ್ಲಿ ರಾಹುಲ್ ಗಾಂಧಿ ಪುನರುಚ್ಚರಿಸಿದ್ದಾರೆ. ವಾಷಿಂಗ್ಟನ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋಗಳ ಭೇಟಿಯ ಬಳಿಕ ಭಾನುವಾರ ನ್ಯೂಯಾರ್ಕ್ಗೆ ಆಗಮಿಸಿದ ರಾಹುಲ್ ಮಾತನಾಡಿ, ‘ನಾವು ಬಿಜೆಪಿಯನ್ನು ನಿರ್ನಾಮ ಮಾಡುತ್ತೇವೆ ಎಂಬುದನ್ನು ಕರ್ನಾಟಕದಲ್ಲಿ ತೋರಿಸಿದ್ದೇವೆ. ಇಲ್ಲಿ ನಾವು ಬಿಜೆಪಿಯನ್ನು ಕೇವಲ ಸೋಲಿಸಿಲ್ಲ.
ಬಲಿ ತೆಗೆದುಕೊಂಡಿದ್ದೇವೆ, ಧ್ವಂಸಗೊಳಿಸಿದ್ದೇವೆ’ ಎಂದು ಹೇಳಿದರು. ‘ಕರ್ನಾಟಕದಲ್ಲಿ ಗೆಲ್ಲಲು ಬಿಜೆಪಿ ಸರ್ವಪ್ರಯತ್ನ ಮಾಡಿತು. ಬಿಜೆಪಿಯ ಬಳಿ ಮಾಧ್ಯಮವಿತ್ತು, ನಮಗಿಂತ 10 ಪಟ್ಟು ಹೆಚ್ಚು ಹಣವಿತ್ತು, ಸರ್ಕಾರವಿತ್ತು, ಸಂಸ್ಥೆಗಳಿದ್ದವು, ಅವರ ಬಳಿ ಎಲ್ಲವೂ ಇತ್ತು. ಆದರೂ ನಾವು ಅವರನ್ನು ಇಲ್ಲವಾಗಿಸಿದೆವು. ಮುಂದಿನ ದಿನದಲ್ಲಿ ನಾವು ತೆಲಂಗಾಣದಲ್ಲೂ ಅವರನ್ನು ನಿರ್ನಾಮ ಮಾಡುತ್ತೇವೆ’ ಎಂದು ಹೇಳಿದರು. ಈ ವೇಳೆ ನೆರೆದಿದ್ದ ಪ್ರೇಕ್ಷಕರಿಂದ ಭಾರಿ ಕರತಾಡನ ಕೇಳಿಬಂದಿತು.
ಬಾಲಿವುಡ್ ಹಾಗೂ ಮರಾಠಿ ಚಿತ್ರರಂಗದ ಹಿರಿಯ ನಟಿ ಸುಲೋಚನಾ ಲಾತ್ಕರ್ ನಿಧನ!
‘ತೆಲಂಗಾಣ ಅಷ್ಟೇ ಅಲ್ಲದೇ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲೂ ನಾವು ಕರ್ನಾಟಕದಲ್ಲಿ ಮಾಡಿದ್ದನ್ನೇ ಮಾಡುತ್ತೇವೆ. ಬಿಜೆಪಿಯನ್ನು ಸೋಲಿಸುತ್ತಿರುವುದು ಕಾಂಗ್ರೆಸ್ ಪಕ್ಷವಲ್ಲ. ಬದಲಾಗಿ ದೇಶದ ಜನ. ದೇಶದಲ್ಲಿ ದ್ವೇಷವನ್ನ ಹರಡುವುದನ್ನು ಜನ ಹೆಚ್ಚು ದಿನ ಸಹಿಸುವುದಿಲ್ಲ. ಇದನ್ನೇ ನಾವು 2024ರ ಲೋಕಸಭೆ ಚುನಾವಣೆಯಲ್ಲೂ ಮಾಡುತ್ತೇವೆ. ವಿಪಕ್ಷಗಳು ಒಂದಾಗಿವೆ, ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಇದೊಂದು ಸಿದ್ಧಾಂತದ ಯುದ್ಧ’ ಎಂದು ಅವರು ಹೇಳಿದರು.
ಮುಸ್ಲಿಂ ಲೀಗ್ ಜಾತ್ಯತೀತ ಪಾರ್ಟಿ: ಕೇರಳದಲ್ಲಿ ಮುಸ್ಲಿಂ ಲೀಗ್ ಜತೆ ತಮ್ಮ ಪಕ್ಷ ಮಾಡಿಕೊಂಡಿರುವ ಮೈತ್ರಿಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ‘ಮುಸ್ಲಿಂ ಲೀಗ್ ಎಂಬುದು ಸಂಪೂರ್ಣ ಜಾತ್ಯತೀತ ಪಕ್ಷ’ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಬಿಜೆಪಿ ಮುಗಿಬಿದ್ದು ತರಾಟೆಗೆ ತೆಗೆದುಕೊಂಡಿದೆ.
ವಾಷಿಂಗ್ಟನ್‌ನಲ್ಲಿ ನಡೆದ ಸಂವಾದವೊಂದರ ಸಂದರ್ಭದಲ್ಲಿ ‘ನೀವು ಜಾತ್ಯತೀತತೆ, ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತೀರಿ. ಆದರೆ ಹಿಂದು ಪಕ್ಷವಾಗಿರುವ ಬಿಜೆಪಿಯನ್ನು ವಿರೋಧಿಸುತ್ತೀರಿ. ಕೇರಳದಲ್ಲಿ ನಿಮ್ಮದೇ ಪಕ್ಷ ಮುಸ್ಲಿಂ ಲೀಗ್ ಜತೆ ಒಪ್ಪಂದ ಮಾಡಿಕೊಂಡಿದೆ. ಅದೇ ರಾಜ್ಯದಿಂದ ನೀವು ಸಂಸದ ಕೂಡ ಆಗಿದ್ದಿರಿ’ ಎಂದು ವ್ಯಕ್ತಿಯೊಬ್ಬರು ರಾಹುಲ್ ಅವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ರಾಹುಲ್, ‘ಮುಸ್ಲಿಂ ಲೀಗ್ ಸಂಪೂರ್ಣ ಜಾತ್ಯತೀತ ಪಕ್ಷ. ಜಾತ್ಯತೀತ ಅಲ್ಲ ಅನ್ನುವಂತಹದ್ದು ಅದರಲ್ಲಿ ಏನೂ ಇಲ್ಲ’ ಎಂದು ಹೇಳಿದರು.
ಬಿಜೆಪಿ ತರಾಟೆ: ಇದಕ್ಕೆ ಬಿಜೆಪಿ ತೀವ್ರ ತರಾಟೆಗೆ ತೆಗೆದುಕೊಂಡಿದೆ. ‘ಮೊಹಮ್ಮದ್ ಆಲಿ ಜಿನ್ನಾ ನೇತೃತ್ವದ ಆಲ್ ಇಂಡಿಯಾ ಮುಸ್ಲಿಂ ಲೀಗ್‌ನಂತಹ ಮನಸ್ಥಿತಿಯಿಂದಲೇ ಕೇರಳದ ಮುಸ್ಲಿಂ ಲೀಗ್ ನಡೆಯುತ್ತಿದೆ. ಆ ಪಕ್ಷದಲ್ಲಿರುವವರು ದೇಶ ವಿಭಜನೆ ಬಳಿಕ ಭಾರತದಲ್ಲೇ ಉಳಿದವರು. ಮುಸ್ಲಿಂ ಲೀಗ್ ಸ್ಥಾಪಿಸಿಕೊಂಡು, ಸಂಸದರಾದವರು. ಆದರೆ ಆ ಪಕ್ಷವನ್ನು ರಾಹುಲ್ ಜಾತ್ಯತೀತ ಎನ್ನುತ್ತಿದ್ದಾರೆ’ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಕಿಡಿಕಾರಿದ್ದಾರೆ.
ಕಾಡು ಪ್ರಾಣಿಗಳ ದಾಳಿ ತಡೆಗೆ ಶಾಶ್ವತ ಪರಿಹಾರ ಕಲ್ಪಿಸಿ: ಎಚ್.ಡಿ.ಕುಮಾರಸ್ವಾಮಿ
‘ಜಿನ್ನಾ ಪಕ್ಷಕ್ಕೂ, ಕೇರಳದ ಮುಸ್ಲಿಂ ಲೀಗ್‌ಗೂ ನಂಟಿದೆ. ಕಾಂಗ್ರೆಸ್ಸಿಗೆ ಎಂಐಎಂ, ಮುಸ್ಲಿಂ ಲೀಗ್‌ಗಳು ಜಾತ್ಯತೀತ ಪಕ್ಷ. ಪಿಎಫ್‌ಐ ಸಾಂಸ್ಕೃತಿಕ ಸಂಘಟನೆಯಾಗಿದೆ. ರಾಹುಲ್ ಗಾಂಧಿ ಹೇಳಿಕೆ ಅವರ ಬುದ್ಧಿವಂತಿಕೆಯ ಬಗ್ಗೆಯೇ ಪ್ರಶ್ನೆ ಸೃಷ್ಟಿಸುತ್ತದೆ’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಟೀಕಿಸಿದ್ದಾರೆ. ಈ ನಡುವೆ, ‘ರಾಹುಲ್ ಗಾಂಧಿ ಅವರ ಬೌದ್ಧಿಕ ಸಾಮರ್ಥ್ಯ ಸೀಮಿತವಾಗಿರುವುದರಿಂದ ಅವರ ಮಾತನ್ನು ಕ್ಷಮಿಸಿಬಿಡಿ’ ಎಂದು ಕೇರಳ ಬಿಜೆಪಿ ನಾಯಕ ಕೆ.ಜೆ. ಆಲ್ಫೋನ್ಸ್ ವ್ಯಂಗ್ಯವಾಡಿದ್ದಾರೆ.