
ನ್ಯೂಯಾರ್ಕ್: ಅಮೆರಿಕ ಮತ್ತು ಇರಾನ್ ನಡುವಿನ ಕದನವಿರಾಮಕ್ಕೆ ತಾನೇ ಕಾರಣ, ಈಗ ಸಂಧಾನ ಮಾತುಕತೆ ನಡೆಯುತ್ತಿರುವುದೂ ತನ್ನ ದೇಶದಲ್ಲೇ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಪಾಕಿಸ್ತಾನಕ್ಕೆ ಘೋರ ಮುಖಭಂಗವಾಗಿದೆ. ಪಾಕ್ ಬಳಿ ಸಂಧಾನದ ನಾಟಕ ಆಡಿಸಿದ್ದು ಸ್ವತಃ ಅಮೆರಿಕ ಎಂದು ಬ್ರಿಟನ್ ಪತ್ರಿಕೆ ಫೈನಾನ್ಷಿಯಲ್ ಟೈಮ್ಸ್ ವರದಿ ಬೆನ್ನಲ್ಲೇ, ಭಾರೀ ಚರ್ಚೆಗೆ ಗ್ರಾಸವಾಗಿದ್ದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರ ಸಾಮಾಜಿಕ ಮಾಧ್ಯಮಗಳಲ್ಲಿನ ಪೋಸ್ಟ್‌ಗಳ ರಚನೆಯಲ್ಲಿ ಅಮೆರಿಕ ಅಧ್ಯಕ್ಷರ ಗೃಹಕಚೇರಿ ಶ್ವೇತಭವನ ನೇರವಾಗಿ ಹಸ್ತಕ್ಷೇಪ ಮಾಡಿತ್ತು. ಸಂದೇಶವನ್ನು ಬರೆದುಕೊಟ್ಟಿತ್ತು ಎಂದು ಅಮೆರಿಕದ ಪ್ರತಿಷ್ಠಿತ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ ಸ್ಫೋಟಕ ವರದಿ ಪ್ರಕಟಿಸಿದೆ. ಇದರೊಂದಿಗೆ ಸಂಧಾನದ ಖ್ಯಾತಿ ತೆಗೆದುಕೊಳ್ಳಲು ಮುಂದಾಗಿದ್ದ ಪಾಕಿಸ್ತಾನದ ಮಾನ ಜಾಗತಿಕ ಮಟ್ಟದಲ್ಲಿ ಹರಾಜಾಗಿದೆ.
ಇದು, ಅಮೆರಿಕ ಅಧ್ಯಕ್ಷ ಟ್ರಂಪ್ ತಾವು ನೇರವಾಗಿ ಹೇಳಲಾಗದ್ದನ್ನು ಪಾಕಿಸ್ತಾನದ ಮೂಲಕ ಹೇಳಿಸಿದ ಬಗೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ. ಅಮೆರಿಕ ಮತ್ತು ಇರಾನ್ ನಡುವೆ ಕದನವಿರಾಮ ಘೋಷಣೆಯಾದ ಬೆನ್ನಲ್ಲೇ, ಇಂಥದ್ದೊಂದು ಮಹತ್ಸಾಧನೆಗೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್‌ಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕು ಎಂದು ಪಾಕ್ ಮಾಧ್ಯಮಗಳು ಆಗ್ರಹ ಮಾಡಿದ್ದವು. ಮತ್ತೊಂದೆಡೆ ಭಾರತದಲ್ಲಿನ ಹಲವು ರಾಜಕೀಯ ಪಕ್ಷಗಳು ಕೂಡ ಸಂಧಾನದ ವಿಷಯದಲ್ಲಿ ಪಾಕಿಸ್ತಾನದ ಸರ್ಕಾರ ರಾಜಕೀಯ ಗೆಲುವು ಸಾಧಿಸಿದೆ. ಜಾಗತಿಕ ಮಟ್ಟದಲ್ಲಿ ಪಾಕ್ ಗೌರವ ಹೆಚ್ಚಾಗಿದೆ. ಈ ವಿಷಯದಲ್ಲಿ ಭಾರತ ಸೋಲುಕಂಡಿದೆ ಎಂದೆಲ್ಲಾ ಟೀಕಿಸಿದ್ದವು. ಅದರ ಬೆನ್ನಲ್ಲೇ ಪಾಕಿಸ್ತಾನದ ಸಂಧಾನ ಸಾಮರ್ಥ್ಯ ಬಯಸಲಾಗಿದೆ.
‘ಮಧ್ಯಪ್ರಾಚ್ಯ ಯುದ್ಧವನ್ನು ಶಾಂತಿಯುತವಾಗಿ ಇತ್ಯರ್ಥಪಡಿಸುವ ರಾಜತಾಂತ್ರಿಕ ಪ್ರಯತ್ನಗಳು ಸ್ಥಿರವಾಗಿ ಮುಂದುವರೆದಿದ್ದು, ಮುಂದಿನ ದಿನಗಳಲ್ಲಿ ಗಣನೀಯ ಫಲಿತಾಂಶಗಳಿಗೆ ಕಾರಣವಾಗುವ ಸಾಮರ್ಥ್ಯವನ್ನು ಹೊಂದಿದೆ. ರಾಜತಾಂತ್ರಿಕ ಮಾತುಕತೆಯ ಗಡುವನ್ನು 2 ವಾರಗಳ ಕಾಲ ವಿಸ್ತರಿಸುವಂತೆ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಬಳಿ ಮನವಿ ಮಾಡುತ್ತೇನೆ. ಜತೆಗೆ ಈ ಅವಧಿಯಲ್ಲಿ ಹೋರ್ಮುಜ್ ಜಲಸಂಧಿಯನ್ನು ಇರಾನ್ ತೆರೆಯಬೇಕು’ ಎಂದು ಷರೀಫ್ ಪೋಸ್ಟ್ ಮಾಡಿದ್ದರು. ಆದರೆ ಇದು ಶ್ವೇತಭವನ ಒಪ್ಪಿಗೆ ಪಡೆದು ಮಾಡಲಾದ ಪೋಸ್ಟ್ ಎಂದು ವರದಿ ಆಗಿದೆ. ಜತೆಗೆ ಆ ಪೋಸ್ಟ್‌ನ ಪೂರ್ವ ಆವೃತ್ತಿಯಲ್ಲಿ ‘ಡ್ರಾಫ್ಟ್- ಪಾಕ್ ಪಿಎಂ ಸಂದೇಶ’ ಎಂದು ಬರೆದಿದ್ದುದು ಕೂಡ, ಯಾರೋ ಬರೆದುಕೊಟ್ಟದ್ದನ್ನು ಷರೀಫ್ ಪೋಸ್ಟ್ ಮಾಡಿದ್ದಾರೆ ಎಂಬ ಚರ್ಚೆಯನ್ನು ಹುಟ್ಟುಹಾಕಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ