ಪಾಕಿಸ್ತಾನಕ್ಕೂ ಭಾರತದ ಕೊರೋನಾ ಲಸಿಕೆ!

By Kannadaprabha NewsFirst Published Mar 10, 2021, 7:32 AM IST
Highlights

ಪಾಕ್‌ಗೆ ಭಾರತದ ಕೊರೋನಾ ಲಸಿಕೆ| ಗಡಿಯಲ್ಲಿ ಶಾಂತಿ ನಿರ್ಧಾರದ ಬೆನ್ನಲ್ಲೇ ಮೋದಿ ಶಾಂತಿ ಮಂತ್ರ| 4.5 ಕೋಟಿ ಡೋಸ್‌ನಷ್ಟುಕೋವಿಶೀಲ್ಡ್‌ ಲಸಿಕೆ ಪೂರೈಕೆ ನಿರ್ಧಾರ

ನವದೆಹಲಿ(ಮಾ.10): ಕೊರೋನಾ ಸಮಯದಲ್ಲಿ ಇಡೀ ವಿಶ್ವಕ್ಕೆ ನೆರವಾಗಿದ್ದ ಭಾರತ, ಇದೀಗ ನೆರೆಯ ಪಾಕಿಸ್ತಾನಕ್ಕೂ ಕೊರೋನಾ ಲಸಿಕೆ ರವಾನಿಸಲಿದೆ. ಆದರೆ ಇದು ಎರಡು ದೇಶಗಳ ನಡುವಿನ ನೇರ ಖರೀದಿ- ಪೂರೈಕೆ ಪ್ರಕ್ರಿಯೆ ಆಗಿರುವುದಿಲ್ಲ. ಬದಲಾಗಿ ಬಡ ದೇಶಗಳಿಗೆ ಆದ್ಯತೆಯ ಮೇಲೆ ಲಸಿಕೆ ಪೂರೈಸಲು ಜಾಗತಿಕ ಮಟ್ಟದಲ್ಲಿ ರಚಿಸಲಾಗಿರುವ ‘ಗವಿ’ (ಗ್ಲೋಬಲ್‌ ಅಲಯನ್ಸ್‌ ಫಾರ್‌ ವ್ಯಾಕ್ಸಿನೇಷನ್‌ ಆ್ಯಂಡ್‌ ಇಮ್ಯುನೈಜೇಷನ್‌) ಯೋಜನೆಯಡಿ ಲಸಿಕೆ ಪೂರೈಕೆಯಾಗಲಿದೆ. ವಿಶ್ವ ಆರೋಗ್ಯ ಸಂಸ್ಥೆಯ ನೇತೃತ್ವದಲ್ಲಿ ಈ ಸಂಸ್ಥೆಯನ್ನು ರಚಿಸಲಾಗಿದೆ.

ಈ ಯೋಜನೆಯಡಿ ಭಾರತವು 4.5 ಕೋಟಿ ಡೋಸ್‌ನಷ್ಟು ಲಸಿಕೆಯನ್ನು ಪಾಕಿಸ್ತಾನಕ್ಕೆ ಪೂರೈಸಲಿದೆ. ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ ಉತ್ಪಾದಿಸುತ್ತಿರುವ ಕೋವಿಶೀಲ್ಡ್‌ ಲಸಿಕೆಯನ್ನು ಭಾರತ ಪೂರೈಸಲಿದೆ. ಈ ಯೋಜನೆಯ ಮೂಲಕ ಈಗಾಗಲೇ ನೆರೆಹೊರೆಯ ಮತ್ತು ದೂರದ ಮಿತ್ರದೇಶಗಳಿಗೆ 56 ಲಕ್ಷ ಡೋಸ್‌ನಷ್ಟು ಲಸಿಕೆಯನ್ನು ಉಚಿತವಾಗಿ ವಿತರಿಸಿದ್ದ ಭಾರತ, ಇದೀಗ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೂ ನೆರವಾದಂತೆ ಆಗಲಿದೆ.

ಪಾಕಿಸ್ತಾನ ಸರ್ಕಾರ ಇತ್ತೀಚೆಗಷ್ಟೇ ಸಾರ್ವಜನಿಕರಿಗೆ ಕೊರೋನಾ ಲಸಿಕಾ ಅಭಿಯಾನ ಆರಂಭಿಸಿತ್ತು. ಆದರೆ ಪಾಕಿಸ್ತಾನ ಸರ್ಕಾರವು ಲಸಿಕೆಗಾಗಿ ಪೂರ್ಣವಾಗಿ ಚೀನಾವನ್ನೇ ಅವಲಂಬಿಸಿದೆ. ಆದರೆ ಚೀನಾಕ್ಕಿಂತ ಭಾರತದ ಲಸಿಕೆಯೇ ಹೆಚ್ಚು ವಿಶ್ವಾಸಾರ್ಹ ಎಂದು ಜನರು ಅಭಿಪ್ರಾಯ ಹೊಂದಿದ್ದಾರೆ ಎಂದು ಸ್ವತಃ ಪಾಕ್‌ ಮಾಧ್ಯಮಗಳೇ ವರದಿ ಮಾಡಿದ್ದವು. ಜೊತೆಗೆ ಅದು ಯಾವುದೆ ದೇಶದಿಂದ ಲಸಿಕೆ ಖರೀದಿಸುವ ಬದಲು ಕೇವಲ ದಾನವಾಗಿ ಬಂದ ಲಸಿಕೆಯನ್ನು ಮಾತ್ರವೇ ಬಳಸುತ್ತಿದೆ.

ಉಭಯ ದೇಶಗಳು ಗಡಿಯಲ್ಲಿ ಕದನವಿರಾಮ ಉಲ್ಲಂಘನೆ ಮಾಡದೇ ಇರುವ ತಮ್ಮ ನಡುವಿನ ಹಳೆಯ ಒಪ್ಪಂದವನ್ನು ಕಟ್ಟುನಿಟ್ಟಾಗಿ ಪಾಲಿಸುವ ಸಂಬಂಧ ಇತ್ತೀಚೆಗೆ ಘೋಷಣೆ ಮಾಡಿದ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿದೆ.

click me!