ಇವರು ಮನುಷ್ಯರಲ್ಲ ರಾಕ್ಷಸರು: ಗರ್ಭಿಣಿ ಮಹಿಳೆಗೆ ಒದ್ದ ಪಾಕಿಸ್ತಾನಿ ಸೆಕ್ಯೂರಿಟಿ ಗಾರ್ಡ್‌

By Suvarna NewsFirst Published Aug 10, 2022, 1:57 PM IST
Highlights

ಪಾಕಿಸ್ತಾನದಲ್ಲಿ ಗರ್ಭಿಣಿ ಎಂಬುದನ್ನು ನೋಡದೇ ಸೆಕ್ಯೂರಿಟಿ ಗಾರ್ಡ್‌ಗಳಿಬ್ಬರು ಮಹಿಳೆಯೊಬ್ಬಳೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಆಕೆಯನ್ನು ಕೆಳಗೆ ತಳ್ಳಿ ಕಾಲಿನಿಂದ ಒದ್ದು ಮಾನವೀಯತೆಯನ್ನೇ ಮರೆತಿದ್ದಾರೆ. ಪರಿಣಾಮ ಗರ್ಭಿಣಿ ಪ್ರಜ್ಞಾಶೂನ್ಯಳಾಗುತ್ತಾಳೆ.

ಕರಾಚಿ: ಗರ್ಭಿಣಿಯರನ್ನು ಸಾಮಾನ್ಯವಾಗಿ ತುಸು ಹೆಚ್ಚೇ ಕಾಳಜಿಯಿಂದ ನೋಡಲಾಗುತ್ತದೆ. ಅದು ಕುಟುಂಬಸ್ಥರೇ ಆಗಲಿ ಪರಿಚಿತರೇ ಆಗಲಿ ಅಪರಿಚಿತರೇ ಆಗಲಿ ತಮ್ಮವರಲ್ಲದಿದ್ದರೂ ಒಬ್ಬಳು ಗರ್ಭಿಣಿ ಮಹಿಳೆ ಜೊತೆಯಲ್ಲಿದ್ದರೆ ಬಹುತೇಕರು ಆಕೆಯ ಬಗ್ಗೆ ಕಾಳಜಿ ತೋರಲಾಗದಿದ್ದರೂ ಹಾನಿಯಂತೂ ಮಾಡುವುದಿಲ್ಲ. ಬಸ್‌ಗಳಲ್ಲಿ ಸೀಟುಗಳನ್ನು ಬಿಡುವ ಮೂಲಕ ಮುಂದೆ ಸಾಗಲು ಜಾಗ ಬಿಡುವ ಮೂಲಕ ಕಾಳಜಿ ತೋರುತ್ತಾರೆ. ಆದರೆ ಪಾಕಿಸ್ತಾನದಲ್ಲಿ ಗರ್ಭಿಣಿ ಎಂಬುದನ್ನು ನೋಡದೇ ಸೆಕ್ಯೂರಿಟಿ ಗಾರ್ಡ್‌ಗಳಿಬ್ಬರು ಮಹಿಳೆಯೊಬ್ಬಳೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಆಕೆಯನ್ನು ಕೆಳಗೆ ತಳ್ಳಿ ಕಾಲಿನಿಂದ ಒದ್ದು ಮಾನವೀಯತೆಯನ್ನೇ ಮರೆತಿದ್ದಾರೆ. ಪರಿಣಾಮ ಗರ್ಭಿಣಿ ಪ್ರಜ್ಞಾಶೂನ್ಯಳಾಗುತ್ತಾಳೆ.

ಪಾಕಿಸ್ತಾನದ ಅಪಾರ್ಟ್‌ಮೆಂಟ್ ಒಂದರ ಕಟ್ಟಡದ ಮುಂದೆ ಈ ಘಟನೆ ನಡೆದಿದ್ದು, ಈ ಆಘಾತಕಾರಿ ದೃಶ್ಯ ಅಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ನಂತರ ವೈರಲ್ ಆಗುತ್ತಿದ್ದಂತೆ, ನೆರೆಯ ದೇಶಗಳು ಸೇರಿದಂತೆ ಎಲ್ಲೆಡೆ ಪಾಕಿಸ್ತಾನದ ಈ ಸೆಕ್ಯೂರಿಟಿ ಗಾರ್ಡ್‌ಗಳ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಘಟನೆಯ ಬಳಿಕ ಪಾಕಿಸ್ತಾನದ ಪೊಲೀಸರು, ಮಹಿಳೆಯ ಮೇಲೆ ಹಲ್ಲೆ ಮಾಡಿದ ಸೆಕ್ಯೂರಿಟಿ ಗಾರ್ಡ್‌ಗಳನ್ನು ಬಂಧಿಸಿದ್ದಾರೆ. ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಈ ಹಲ್ಲೆಗೂ ಮೊದಲು ಭದ್ರತಾ ಸಿಬ್ಬಂದಿ ಮಹಿಳೆಯೊಂದಿಗೆ ವಾಗ್ವಾದದಲ್ಲಿ ತೊಡಗಿರುವುದನ್ನು ಕಾಣಬಹುದು. ಮಾತಿನ ಚಕಮಕಿ ನಂತರ ವಿಕೋಪಕ್ಕೆ ತಿರುಗಿದ್ದು, ತಾಳ್ಮೆಗೆಟ್ಟ ಸೆಕ್ಯೂರಿಟಿ ಗಾರ್ಡ್‌ ಆಕೆಗೆ ಕೆನ್ನೆಗೆ ಬಾರಿಸಿದ್ದಲ್ಲದೇ, ಈ ವೇಳೆ ಕೆಳಗೆ ಬಿದ್ದ ಆಕೆಗೆ ಬೂಟು ಗಾಲಿನಿಂದ ಹಲ್ಲೆ ಮಾಡಿದ್ದಾರೆ. 

ಮಹಿಳೆ ಮೇಲೆ ಹಲ್ಲೆ ಪ್ರಕರಣ: ಬಿಜೆಪಿಯ ಶ್ರೀಕಾಂತ್‌ ತ್ಯಾಗಿ ಬಂಧಿಸಿದ ಪೊಲೀಸರು

ಘಟನೆಯ ಬಳಿಕ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಹಲ್ಲೆಗೊಳಗಾದ ಮಹಿಳೆಯನ್ನು ಸನಾ ಎಂದು ಗುರುತಿಸಲಾಗಿದೆ. ಈಕೆ ಕರಾಚಿಯ ಗುಲಿಸ್ತಾನ್‌ ಇ ಜೌಹರ್ ಬ್ಲಾಕ್‌ 17ರಲ್ಲಿರುವ ನೋಮನ್‌ ಗ್ರ್ಯಾಂಡ್‌ ಸಿಟಿಯ ಅಪಾರ್ಟ್‌ಮೆಂಟ್‌ನ ಮನೆಯೊಂದರಲ್ಲಿ ಮನೆ ಕೆಲಸ ಮಾಡುತ್ತಿದ್ದಳು. ಆಕೆ ಹೇಳುವ ಪ್ರಕಾರ, ಆಗಸ್ಟ್‌ 5ರಂದು ಮುಂಜಾನೆ ಮೂರು ಗಂಟೆ ಸುಮಾರಿಗೆ ಆಕೆ ತನಗೆ ಆಹಾರ ತಲುಪಿಸುವಂತೆ ತನ್ನ ಪುತ್ರ ಸೊಹೈಲ್‌ಗೆ ಹೇಳಿದ್ದಾರೆ. ಹಾಗೆಯೇ ಆಕೆಯ ಪುತ್ರ ಆಹಾರ ತೆಗೆದುಕೊಂಡು ಅಪಾರ್ಟ್‌ಮೆಂಟ್‌ನ ಸಮೀಪ ಬಂದಿದ್ದು, ಅಲ್ಲಿದ್ದ ಭದ್ರತಾ ಸಿಬ್ಬಂದಿಯಾದ ಅಬ್ದುಲ್ ನಾಸಿರ್, ಅದಿಲ್ ಖಾನ್ ಹಾಗೂ ಮೊಹಮ್ಮದ್‌ ಖಲೀಲ್‌, ಮಹಿಳೆಯ ಪುತ್ರ ಸೊಹೈಲ್‌ಗೆ ಪ್ರವೇಶ ನಿರಾಕರಿಸಿದ್ದಾರೆ. 

ಬೊಗಳಿತೆಂದು ನಾಯಿ ಹಾಗೂ ಮಾಲೀಕನ ಮೇಲೆ ಅಮಾನುಷ ಹಲ್ಲೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಈ ವಿಚಾರವನ್ನು ಕೇಳುವ ಸಲುವಾಗಿ ಮಹಿಳೆ ಭದ್ರತಾ ಸಿಬ್ಬಂದಿ ಬಳಿ ಬಂದಿದ್ದು, ಆ ವೇಳೆ ನನ್ನ ಮೇಲೆ ಅವರು ಹಲ್ಲೆ ಮಾಡಿ ದೌರ್ಜನ್ಯವೆಸಗಿದ್ದಾರೆ. ನಾನು 5-6 ತಿಂಗಳ ಗರ್ಭಿಣಿಯಾಗಿದ್ದು, ಅವರು ಹೊಡೆದಾಗ ನಾನು ಪ್ರಜ್ಞೆ ತಪ್ಪಿ ಕೆಳಗೆ ಬಿದ್ದೆ ಎಂದು ಮಹಿಳೆ ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಸೆಕ್ಷನ್ 354 (ಮಹಿಳೆಗೆ ಆಕೆಯ ನಮ್ರತೆಯನ್ನು ಆಕ್ರೋಶಗೊಳಿಸುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲ), 337 (ಯಾವುದೇ ವ್ಯಕ್ತಿಗೆ ನೋವುಂಟು ಮಾಡುವ ಉದ್ದೇಶದಿಂದ ಯಾವುದೇ ಕೃತ್ಯದಲ್ಲಿ ತೊಡಗುವುದು), ಮತ್ತು 354 (ದಾಳಿ ಅಥವಾ ಕ್ರಿಮಿನಲ್ ಬಲದ ಅಡಿಯಲ್ಲಿ  ನಮ್ರತೆಯನ್ನು ಕೆರಳಿಸುವ ಉದ್ದೇಶದಿಂದ ಹಲ್ಲೆ) ಅಡಿ ಪ್ರಕರಣ ದಾಖಲಿಸಲಾಗಿದೆ. 

کراچی گلستان جوہر بلاک 17 میں اپارٹمنٹ کے سیکیورٹی گارڈ نے پہلے خاتون کی تذلیل کی پھر تھپڑ اور لات مار کر بے ہوش کردیا، بے غیرتی کی انتہا کہ پاس بیٹھے لوگ بجائے بیچ بچاو کروانے کے معاملہ دیکھ کر کھسکنے لگے، کہاں ہیں انسانی حقوق والے؟ pic.twitter.com/WVOIG0TeYr

— Nazir Shah (@SsyedHhussain)

 

ಈ ವಿಡಿಯೋ ವೈರಲ್ ಆದ ಬಳಿಕ ಸಿಂಧ್ ಮುಖ್ಯಮಂತ್ರಿ ಮುರಾದ್ ಅಲಿ ಶಾ, ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಕಾವಲುಗಾರನಿಗೆ ಮಹಿಳೆಯ ಮೇಲೆ ಕೈ ಎತ್ತುವ ಮತ್ತು ಹಿಂಸಿಸುವ ಧೈರ್ಯ ಹೇಗೆ ಬಂತು ಎಂದು ಸಿಂಧ್ ಸಿಎಂ ಪ್ರಶ್ನಿಸಿದ್ದಾರೆ. ವಿಚಾರಣೆ ಆರಂಭಿಸಲಾಗಿದ್ದು, ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಗಿದೆ.
 

click me!