
ಪಾಕಿಸ್ತಾನ ನಟ ಫವಾದ್ ಖಾನ್ ಮತ್ತೊಮ್ಮೆ ಕಾಂಟ್ರವರ್ಸಿ ಸೃಷ್ಟಿ ಮಾಡಿದ್ದಾರೆ. ಭಾರತದ ಸಿನಿಮಾಗಳಲ್ಲಿ ಮಿಂಚಿದ್ದ ಫವಾದ್ ಖಾನ್ ಈಗ ʼಆಪರೇಶನ್ ಸಿಂಧೂರʼದಲ್ಲಿ ಸತ್ತ ಉಗ್ರರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಇದೀಗ ಇನ್ನೊಂದಿಷ್ಟು ಕಾಂಟ್ರವರ್ಸಿ ಸೃಷ್ಟಿ ಮಾಡಿದೆ.
ಭಾರತದಲ್ಲಿ ಪಾಕಿಸ್ತಾನದ ಕಲಾವಿದರಿಗೆ ಬಹಿಷ್ಕಾರ ಹಾಕಲಾಗುತ್ತಿದೆ. ಅಷ್ಟೇ ಅಲ್ಲದೆ ಪಾಕಿಸ್ತಾನದ ಕಲಾವಿದರ ಸಿನಿಮಾಗಳನ್ನು ಇಲ್ಲಿ ಬ್ಯಾನ್ ಮಾಡಲಾಗಿದೆ. ಈಗ ಭಾರತದ ವೈಮಾನಿಕ ದಾಳಿಯಲ್ಲಿ ಸಾಯಲ್ಪಟ್ಟವರಿಗೆ ಫವಾದ್ ಅವರ ಸಂತಾಪ ಸಂದೇಶವು ಪಾಕಿಸ್ತಾನಿ ಅಭಿಮಾನಿಗಳಲ್ಲಿ ಕೂಡ ಆಕ್ರೋಶವನ್ನು ಹುಟ್ಟುಹಾಕಿದೆ.
ಫವಾದ್ ಖಾನ್ ಹೇಳಿದ್ದೇನು?
ಫವಾದ್ ಇನ್‌ಸ್ಟಾಗ್ರಾಮ್‌ನಲ್ಲಿ ಭಾರತದ ಆಪರೇಷನ್ ಸಿಂಧೂರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. “ಈ ದಾಳಿಯಲ್ಲಿ ಗಾಯಗೊಂಡವರಿಗೆ, ಸತ್ತವರ ಕುಟುಂಬಗಳಿಗೆ ನನ್ನ ಸಂತಾಪಗಳು. ಮೃತರ ಆತ್ಮಕ್ಕೆ ಶಾಂತಿ ಕೋರುತ್ತ, ಮತ್ತು ಅವರ ಪ್ರೀತಿಪಾತ್ರರಿಗೆ ಮುಂಬರುವ ದಿನಗಳಲ್ಲಿ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಜನರನ್ನು ಚುಡಾಯಿಸುವ ಮಾತುಗಳಿಂದ ಜ್ವಾಲೆಯನ್ನು ಕೆರಳಿಸುವುದನ್ನು ನಿಲ್ಲಿಸಿ. ಇದು ನಿರಪರಾಧಿ ಜನರ ಜೀವ, ಜೀವನಕ್ಕೆ ಯೋಗ್ಯವಲ್ಲ. ಒಳ್ಳೆಯ ಬುದ್ಧಿಯು ಮೇಲುಗೈ ಸಾಧಿಸಲಿ. ಇನ್ಶಾಅಲ್ಲಾಹ್. ಪಾಕಿಸ್ತಾನ್ ಜಿಂದಾಬಾದ್!” ಎಂದು ಅವರು ಹೇಳಿದ್ದಾರೆ.
ಫವಾದ್ ಖಾನ್ ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ. ಆದರೆ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ನ ಸ್ಕ್ರೀನ್‌ಶಾಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಈ ಪೋಸ್ಟ್‌ಗೆ ಟೀಕೆ ಬಂದಿದ್ದರಿಂದ ಡಿಲಿಟ್ ಮಾಡಿದ್ದಾರೆ ಎನ್ನಲಾಗಿದೆ.
ಪಾಕಿಸ್ತಾನದವರು ಟೀಕೆ ಮಾಡಿದ್ದು ಯಾಕೆ?
ಫವಾದ್ ಮಾತು ಪಾಕಿಸ್ತಾನದ ಫ್ಯಾನ್ಸ್ ಮನಸ್ಸಿನಲ್ಲಿಯೂ ಆಕ್ರೋಶವನ್ನು ಹುಟ್ಟುಹಾಕಿದೆ. ಈ ಪೋಸ್ಟ್‌ನಲ್ಲಿ ಭಾರತವನ್ನೇ ಉಲ್ಲೇಖಿಸದಿರುವುದಕ್ಕಾಗಿ ಟೀಕಿಸಿದ್ದಾರೆ. ಬಾಲಿವುಡ್ ಸಿನಿಮಾಗಳಲ್ಲಿ ಫವಾದ್ ಖಾನ್ ನಟಿಸುವುದರಿಂದ ಈ ರೀತಿ ಮಾಡಿರಬಹುದು ಎಂದು ಪಾಕ್ ಜನರು ಭಾವಿಸಿದ್ದಾರೆ. ಫವಾದ್ ಖಾನ್ ಅವರು ಬಾಲಿವುಡ್‌ಗೆ ಬಂದಿದ್ದರು. ಅವರ ‘ಅಬೀರ್ ಗುಲಾಲ್’ ಚಿತ್ರವು ಮೇ 9 ರಂದು ಥಿಯೇಟರ್‌ನಲ್ಲಿ ರಿಲೀಸ್ ಆಗಬೇಕಿತ್ತು. ಆದರೆ ಪಹಲ್ಗಾಮ್‌ನಲ್ಲಿ ಪಾಕ್ ಉಗ್ರರು ದಾಳಿ ಮಾಡಿ, ಅಮಾಯಕ ಜನರನ್ನು ಕೊಂದಿದ್ದಕ್ಕೆ ಪಾಕಿಸ್ತಾನಿ ಕಲಾವಿದರ ಸಿನಿಮಾಗಳನ್ನು ಬಾಲಿವುಡ್‌ನಲ್ಲಿ ಬ್ಯಾನ್ ಮಾಡಲಾಗಿದೆ.
ಇದನ್ನು ನೋಡಿ ಪಾಕಿಸ್ತಾನದವರು, “ಫವಾದ್ ಸಂತಾಪವು ನರಕಕ್ಕೆ ಹೋಗಲಿ, ಇದೇನಿದು ಭಾರತ ಮಾಡಿದ ಎಲ್ಲವನ್ನೂ ‘ಜನರನ್ನು ಚುಡಾಯಿಸುವ ಮಾತುಗಳ’ ಮೇಲೆ ಆರೋಪಿಸುವುದು? ಭಾರತದ ವಿರುದ್ಧ ಫವಾದ್ ಏನೂ ಮಾತನಾಡಿಲ್ಲ. ಎಲ್ಲಿ ಭಾರತವನ್ನು ಉಲ್ಲೇಖಿಸಿದ್ದಾರೆ? ನಿಮ್ಮ ಸಂತಾಪದ ಅಗತ್ಯವೇ ಇಲ್ಲ. ನಮ್ಮ ಚಿತ್ರರಂಗ ಇವರನ್ನು ಬ್ಯಾನ್ ಮಾಡೋ ಟೈಮ್ ಬಂದಿದೆ” ಎಂದು ಕಾಮೆಂಟ್ ಮಾಡಿದ್ದಾರೆ.
ನಿಜಕ್ಕೂ ಏನಾಯ್ತು?
ಭಾರತೀಯ ಸೇನಾಪಡೆಗಳು ಆಪರೇಷನ್ ಸಿಂಧೂರದ ಹೆಸರಿನಲ್ಲಿ ಪಾಕಿಸ್ತಾನ ಮತ್ತು (ಪಾಕಿಸ್ತಾನ ಆಕ್ರಮಿತ ಕಾಶ್ಮೀರ) PoK ನಲ್ಲಿರುವ ಭಯೋತ್ಪಾದಕ ಮೂಲಸೌಕರ್ಯವನ್ನು ಧ್ವಂಸಮಾಡಲು ಗುರಿಯಿಟ್ಟ ದಾಳಿಯಾಗಿತ್ತು. ಇಲ್ಲಿ ಪಾಕಿಸ್ತಾನದ ಮಿಲಿಟರಿ ಪಡೆಗೆ ಯಾವುದೇ ಧ್ವಂಸ ಆಗಿಲ್ಲ, ಅಲ್ಲಿ ಗುರಿಯನ್ನು ಕೂಡ ಇಟ್ಟಿಲ್ಲ ಎಂದು ಭಾರತೀಯ ಸೇನೆ ಹೇಳಿದೆ.
ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರು ಒಟ್ಟು 9 ಭಯೋತ್ಪಾದಕ ತಾಣಗಳನ್ನು ಗುರಿ ಮಾಡಿ, ಯಶಸ್ವಿಯಾಗಿ ಧ್ವಂಸ ಮಾಡಲಾಗಿದೆ ಎಂದಿದ್ದಾರೆ. ಪಾಕಿಸ್ತಾನದಲ್ಲಿ ಉಗ್ರರ ಸ್ಥಳಗಳನ್ನು ಆಯ್ಕೆಮಾಡಿ, ಅಲ್ಲಿನ ನಾಗರಿಕರಿಗೆ ಮತ್ತು ಅವರ ಮೂಲಸೌಕರ್ಯಕ್ಕೆ ಯಾವುದೇ ಹಾನಿ ಆಗೋದಿಲ್ಲ ಎಂದು ದೃಢಪಡಿಸಿಕೊಂಡು ಈ ರೀತಿ ಮಾಡಲಾಗಿತ್ತು.
ಫವಾದ್ ಖಾನ್ ಅವರು ಪಹಲ್ಗಾಮ್‌ನಲ್ಲಿ ಭಾರತೀಯರ ಹತ್ಯಾಕಾಂಡದ ಬಗ್ಗೆಯೂ ಸೋಶಿಯಲ್ ಮೀಡಿಯಾದಲ್ಲಿ ದುಃಖ ಹೊರಹಾಕಿದ್ದರು. "ಪಹಲ್ಗಾಮ್‌ನಲ್ಲಿ ನಡೆದ ಭೀಕರ ದಾಳಿಯ ಬಗ್ಗೆ ಕೇಳಿ ನಿಜಕ್ಕೂ ದುಃಖವಾಯಿತು. ಈ ಭಯಾನಕತೆಯಿಂದ ಜೀವ ಕಳೆದುಕೊಂಡವರಿಗೆ ನಮ್ಮ ಸಂತಾಪಗಳು. ಈ ಕಷ್ಟದ ಸಮಯದಲ್ಲಿ ಜೀವ ಕಳೆದುಕೊಂಡ ಕುಟುಂಬಗಳಿಗೆ ಶಕ್ತಿ ಸಿಗಲಿ, ದುಃಖದಿಂದ ಹೊರಬರಲಿ ಎಂದು ನಾವು ಪ್ರಾರ್ಥಿಸುತ್ತೇವೆ" ಎಂದು ಫವಾದ್ ಖಾನ್ ಹೇಳಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ