
ನವದೆಹಲಿ: ಭಾರತ-ಪಾಕ್ ನಡುವಿನ ಸಂಘರ್ಷವನ್ನು ನಿಲ್ಲಿಸಿದ್ದು ತಾನೇ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರಂತರವಾಗಿ ಸುಳ್ಳು ಹೇಳುತ್ತಿರುವ ನಡುವೆಯೇ, ‘ಏ.22ರಂದು ನಡೆದ ಪಹಲ್ಗಾಂ ದಾಳಿ ಭಾರತದೊಳಗಿನ ಬಂಡಾಯದಿಂದ ನಡೆದದ್ದು ಮತ್ತು ಬಳಿಕ ಉಭಯ ದೇಶಗಳ ನಡುವೆ ಯುದ್ಧದಲ್ಲಿ ಪಾಕಿಸ್ತಾನವೇ ಮೇಲುಗೈ ಸಾಧಿಸಿತ್ತು’ ಎಂದು ಅಮೆರಿಕ ಆಘಾತಕಾರಿ ವರದಿಯೊಂದನ್ನು ಬಿಡುಗಡೆ ಮಾಡಿದೆ.
ಅದರ ಬೆನ್ನಲ್ಲೇ ವರದಿ ಕುರಿತು ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್, ಇದು ಪ್ರಧಾನಿ ನರೇಂದ್ರ ಮೋದಿ ಅವರ ರಾಜತಾಂತ್ರಿಕತೆ ವೈಫಲ್ಯ ಎಂದು ಕಿಡಿಕಾರಿದೆ.
ಅಮೆರಿಕ-ಚೀನಾ ಆರ್ಥಿಕ ಮತ್ತು ಭದ್ರತಾ ಪರಿಶೀಲನಾ ಆಯೋಗವು ಅಮೆರಿಕ ಸಂಸತ್ತಿಗೆ ತನ್ನ ವಾರ್ಷಿಕ ವರದಿ ಸಲ್ಲಿಸಿದೆ. ಅದರಲ್ಲಿ, ‘2025ರ ಮೇ 7-10ರಂದು ಪಾಕಿಸ್ತಾನ ಮತ್ತು ಭಾರತದ ನಡುವಿನ ಸಂಘರ್ಷದಲ್ಲಿ ಚೀನಾದ ಪಾತ್ರವು ಜಾಗತಿಕ ಗಮನ ಸೆಳೆಯಿತು. ಏಕೆಂದರೆ ಪಾಕಿಸ್ತಾನಿ ಸೇನೆಯು ಚೀನಾದ ಶಸ್ತ್ರಾಸ್ತ್ರಗಳನ್ನು ಅವಲಂಬಿಸಿತ್ತು. 26 ನಾಗರಿಕರನ್ನು ಬಲಿಪಡೆದ ಪಹಲ್ಗಾಂ ಬಂಡಾಯ ದಾಳಿಗೆ ಭಾರತ ಪ್ರತಿಕ್ರಿಯಿಸಿದ್ದರಿಂದ ಯುದ್ಧ ಆರಂಭವಾಯಿತು. 4 ದಿನಗಳ ಸಂಘರ್ಷದಲ್ಲಿ ಭಾರತದ ಮೇಲೆ ಪಾಕಿಸ್ತಾನ ಯಶಸ್ಸು ಸಾಧಿಸಿತು’ ಎಂದು ವಿವರಿಸಲಾಗಿದೆ.
ಅಮೆರಿಕ ವರದಿಯ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ಒಂದೆಡೆ ಯುದ್ಧ ನಿಲ್ಲಿಸಿದ್ದು ತಾನೇ ಎಂದು ಟ್ರಂಪ್ ಹೇಳುತ್ತಿದ್ದರೆ, ಇನ್ನೊಂದೆಡೆ ಅಮೆರಿಕ ವರದಿಯಲ್ಲಿ, ಪಹಲ್ಗಾಂ ದಾಳಿಯನ್ನು ಬಂಡಾಯ ಎಂದು ಉಲ್ಲೇಖಿಸಿ, ಪಾಕಿಸ್ತಾನವೇ ಗೆದ್ದಿದ್ದಾಗಿ ತಿಳಿಸಲಾಗಿದೆ. ಪ್ರಧಾನಿ ಮೋದಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜತಾಂತ್ರಿಕತೆ ಮತ್ತೊಂದು ತೀವ್ರ ಹಿನ್ನಡೆಯನ್ನು ಅನುಭವಿಸಿದೆ’ ಎಂದು ಆಕ್ರೋಶ ಹೊರಹಾಕಿದ್ದಾರೆ.
ಏನಿದು ಹೊಸ ಆಟ?
- ಅಮೆರಿಕ- ಚೀನಾ ಆರ್ಥಿಕ, ಭದ್ರತಾ ಪರಿಶೀಲನಾ ಆಯೋಗದಿಂದ ಸಂಸತ್ತಿಗೆ ವಾರ್ಷಿಕ ವರದಿ ಸಲ್ಲಿಕೆ
- ಪಹಲ್ಗಾಂನಲ್ಲಿ ಆಗಿದ್ದು ಬಂಡಾಯ ದಾಳಿ. ಅದಕ್ಕೆ ಭಾರತ ಪ್ರತಿಕ್ರಿಯಿಸಿದ್ದರಿಂದ ಪಾಕ್ ಜೊತೆಗೆ ಯುದ್ಧ
- ಈ ಯುದ್ಧದಲ್ಲಿ ಚೀನಾದ ಪಾತ್ರ ಜಾಗತಿಕವಾಗಿ ಗಮನ ಸೆಳೆದಿದೆ. ಚೀನಾದ ಅಸ್ತ್ರಗಳನ್ನು ಪಾಕ್ ಬಳಸಿದೆ
- ಅಮೆರಿಕದ ವರದಿಗೆ ಕಾಂಗ್ರೆಸ್‌ನಿಂದ ಆಕ್ರೋಶ. ಇದು ರಾಜತಾಂತ್ರಿಕ ಹಿನ್ನಡೆ ಎಂದು ಟೀಕಾಪ್ರಹಾರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ