Covid 19 Variant: ಬ್ರಿಟನ್‌ನಲ್ಲಿ ನಿತ್ಯ 2 ಲಕ್ಷ ಜನರಿಗೆ ಒಮಿಕ್ರೋನ್‌ ಸೋಂಕು ಭೀತಿ!

By Kannadaprabha NewsFirst Published Dec 15, 2021, 4:30 AM IST
Highlights

*2-3 ದಿನಕ್ಕೆ ಸೋಂಕಿತರ ಸಂಖ್ಯೆ ದ್ವಿಗುಣ
*ಒಮಿಕ್ರೋನ್‌ : 2 ಡೋಸ್‌ ಪರಿಣಾಮಕಾರಿ ಅಲ್ಲ
*6 ತಿಂಗಳಲ್ಲಿ ಮಕ್ಕಳ ಲಸಿಕೆ ಬಿಡುಗಡೆ; 3 ವರ್ಷ ರಕ್ಷಣೆ

ಲಂಡನ್‌ (ಡಿ 15): ಭಾರೀ ಆತಂಕ ಹುಟ್ಟುಹಾಕಿರುವ ಒಮಿಕ್ರೋನ್‌ ಸೋಂಕಿತರ ಸಂಖ್ಯೆ (Omicron Variant) ಬ್ರಿಟನ್‌ನಲ್ಲಿ 2-3 ದಿನಕ್ಕೊಮ್ಮೆ ದ್ವಿಗುಣವಾಗುತ್ತಿದೆ. ಮಾದರಿ ಅಧ್ಯಯನಗಳ ಅನ್ವಯ ಈಗಾಗಲೇ ದೇಶದಲ್ಲಿ ನಿತ್ಯವೂ 2 ಲಕ್ಷ ಜನರಿಗೆ ಹೊಸ ವೈರಸ್‌ ಅಂಟುತ್ತಿರುವ ಭೀತಿ ಇದೆ ಎಂದು ಬ್ರಿಟನ್‌ (Britain) ಆರೋಗ್ಯ ಇಲಾಖೆ ಅಂದಾಜು ಮಾಡಿದೆ.
ಸೋಮವಾರ ಬ್ರಿಟನ್‌ನಲ್ಲಿ ಒಂದು ಒಮಿಕ್ರೋನ್‌ ಪೀಡಿತನ ಸಾವು ಸಂಭವಿಸಿತ್ತು. ಇದರ ಬೆನ್ನಲ್ಲೇ ಮಾತನಾಡಿರುವ ಬ್ರಿಟನ್‌ ಆರೋಗ್ಯ ಕಾರ್ಯದರ್ಶಿ ಸಾಜಿದ್‌ ವಾಜಿದ್‌, ‘ಈಗಾಗಲೇ 2 ವಾರಗಳಿಂದ ದೇಶದಲ್ಲಿ ಸೋಂಕಿನ ಏರಿಕೆ ದಾಖಲಾಗುತ್ತಿದೆ. 

ಹಾಲಿ ಇಂಗ್ಲೆಂಡ್‌ನಲ್ಲಿ ದಾಖಲಾಗುತ್ತಿರುವ ಕೇಸಲ್ಲಿ ಒಮಿಕ್ರೋನ್‌ ಪಾಲು ಶೇ.20 ತಲುಪಿದೆ, ಲಂಡನ್‌ನಲ್ಲಿ ಈಗಾಗಲೇ ಇದು ಶೇ.44ಕ್ಕೇರಿದೆ. ಇನ್ನು 48 ಗಂಟೆಗಳಲ್ಲಿ ಒಮಿಕ್ರೋನ್‌ ಕೇಸುಗಳು ಇನ್ನಷ್ಟುಹೆಚ್ಚಳ ಆಗಬಹುದು. ಸೌಮ್ಯ ಸೋಂಕಿನ ಲಕ್ಷಣ ಇರುವ, ಯಾವುದೇ ಲಕ್ಷಣ ಇರದ, ಪರೀಕ್ಷೆ ಮಾಡಿಸದೇ ಇರುವವರ ಲೆಕ್ಕವನ್ನು ಆಧರಿಸಿ ನಡೆದ ಮಾದರಿ ಅಧ್ಯಯನದ ಅನ್ವಯ ನಿತ್ಯವೂ 2 ಲಕ್ಷ ಜನರಿಗೆ ಹೊಸ ಸೋಂಕು ತಗುಲುತ್ತಿರುವ ಆತಂಕ ಇದೆ. ಈಗ ಬ್ರಿಟನ್‌ನಲ್ಲಿ ಖಚಿತಪಟ್ಟ4713 ಒಮಿಕ್ರೋನ್‌ ಕೇಸುಗಳಿವೆ. ಈ ಪೈಕಿ 250 ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಒಮಿಕ್ರೋನ್‌ ಮೇಲೆ 2 ಡೋಸ್‌ ಲಸಿಕೆ ಅಷ್ಟುಪರಿಣಾಮಕಾರಿ ಅಲ್ಲ

ಫೈಜರ್‌ (Pfizer Vaccine) ಹಾಗೂ ಬ್ರಿಟನ್‌ನ ಆಸ್ಟ್ರಾಜೆನೆಕಾದ (ಭಾರತದಲ್ಲಿನ ಕೋವಿಶೀಲ್ಡ್‌) 2 ಡೋಸ್‌ ಲಸಿಕೆಗಳು ಹೊಸದಾಗಿ ಪಸರಿಸುತ್ತಿರುವ ಕೊರೋನಾದ ಒಮಿಕ್ರೋನ್‌ ರೂಪಾಂತರಿ ವಿರುದ್ಧ ನಿರೀಕ್ಷಿತ ಪ್ರಮಾಣದಲ್ಲಿ ಪ್ರತಿಕಾಯ ಸೃಷ್ಟಿಸುವುದಿಲ್ಲ ಎಂದು ಆಕ್ಸ್‌ಫರ್ಡ್‌ ವಿವಿ ಅಧ್ಯಯನದಿಂದ ತಿಳಿದುಬಂದಿದೆ. ಹೀಗಾಗಿ ಈ ಲಸಿಕೆ ಪಡೆದವರು ಹಾಗೂ ಈ ಹಿಂದೆ ಸೋಂಕಿನಿಂದ ಗುಣಮುಖರಾದವರು ಮತ್ತೆ ಮರುಸೋಂಕಿನ ಅಪಾಯದಲ್ಲಿರುತ್ತಾರೆ ಎಂದು ಅದು ಎಚ್ಚರಿಸಿದೆ.

ಆಕ್ಸ್‌ಫರ್ಡ್‌ ವಿವಿ ತಜ್ಞರು ಒಮಿಕ್ರೋನ್‌ ರೂಪಾಂತರಿಯು ಆಸ್ಟ್ರಾಜೆನೆಕಾ ಹಾಗೂ ಫೈಜರ್‌ ಲಸಿಕೆ ಪಡೆದವರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ಅಧ್ಯಯನ ನಡೆಸಿದ್ದರು. ಆಗ ಸೋಂಕನ್ನು ನಿಷ್ಕಿ್ರಯಗೊಳಿಸುವ ದೇಹದಲ್ಲಿನ ಪ್ರತಿಕಾಯ ಶಕ್ತಿ ಒಮಿಕ್ರೋನ್‌ ಮೇಲೆ ತುಂಬಾ ಕಡಿಮೆ ಪರಿಣಾಮ ಬೀರುತ್ತದೆ ಎಂದು ವ್ಯಕ್ತವಾಗಿದೆ. ಹೀಗಾಗಿ ಒಮಿಕ್ರೋನ್‌ ರೂಪಾಂತರಿ ಮುಂದಿನ ದಿನಗಳಲ್ಲಿ ಇನ್ನೊಂದು ಸೋಂಕಿನ ಅಲೆ ಸೃಷ್ಟಿಸಬಹುದು. ಲಸಿಕೆ ಪಡೆದವರೂ ಬಾಧಿತರಾಗಬಹುದು ಎಂದು ಕಂಡುಬಂದಿದೆ. ಆದರೆ ಮೂರನೇ ಡೋಸ್‌ ಪಡೆದರೆ ಪರಿಣಾಮ ಹೆಚ್ಚಬಹುದು ಎಂದೂ ಅದು ಹೇಳಿದೆ.

6 ತಿಂಗಳಲ್ಲಿ ಮಕ್ಕಳ ಲಸಿಕೆ ಬಿಡುಗಡೆ; 3 ವರ್ಷ ರಕ್ಷಣೆ: ಸೀರಂ

ನವದೆಹಲಿ: ಇನ್ನು ಆರು ತಿಂಗಳಲ್ಲಿ ಮಕ್ಕಳಿಗಾಗಿ ಕೋವಿಡ್‌ ಲಸಿಕೆಯನ್ನು ಬಿಡುಗಡೆಗೊಳಿಸುವುದಾಗಿ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಸಿಇಒ ಅದಾರ್‌ ಪೂನಾವಾಲಾ ಮಂಗಳವಾರ ಹೇಳಿದ್ದಾರೆ. ಎಸ್‌ಇಇ ಬಿಡುಗಡೆಗೊಳಿಸುತ್ತಿರುವ ಕೊವೊವ್ಯಾಕ್ಸ್‌ ಲಸಿಕೆಯಿನ್ನೂ ವೈದ್ಯಕೀಯ ಪರೀಕ್ಷೆಯ ಹಂತದಲ್ಲಿದೆ. ಲಸಿಕೆ ಸಂಪೂರ್ಣ ಸುರಕ್ಷಿತವಾಗಿದ್ದು, ಮಕ್ಕಳಿಗೆ ಮೂರು ವರ್ಷಗಳ ಕಾಲ ಕೋವಿಡ್‌ ಸೋಂಕಿನಿಂದ ರಕ್ಷಣೆ ನೀಡಲಿದೆ ಎಂದರು.

ಅರ್ಜುನ್‌ ಸರ್ಜಾಗೆ ಕೋವಿಡ್‌ ಪಾಸಿಟಿವ್‌

ಚೆನ್ನೈ: ನಟ ಅರ್ಜುನ್‌ ಸರ್ಜಾಗೂ ಕೊರೋನಾ ಸೋಂಕು ತಗುಲಿದೆ. ಇತ್ತೀಚೆಗೆ ಸರ್ಜಾ ರಿಯಾಲಿಟಿ ಶೋನ ಫೈನಲ್‌ನಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಕಡ್ಡಾಯವಾಗಿದ್ದ ಕೊರೋನಾ ಪರೀಕ್ಷೆಯಲ್ಲಿ ಅವರಿಗೆ ಪಾಸಿಟಿವ್‌ ಬಂದಿದೆ. ಈ ಕುರಿತು ಮಂಗಳವಾರ ಇನ್ಸಾ$್ಟಗ್ರಾಂ ಖಾತೆಯಲ್ಲಿ ಮಾಹಿತಿ ಹಂಚಿಕೊಂಡ ಸರ್ಜಾ, ತನ್ನ ಆರೋಗ್ಯ ಸ್ಥಿರವಾಗಿದ್ದು ಕೋವಿಡ್‌ ಪಾಸಿಟಿವ್‌ ಇರುವ ಹಿನ್ನೆಲೆ ಐಸೋಲೇಶನ್‌ನಲ್ಲಿ ಇರುವುದಾಗಿ ಹೇಳಿದ್ದಾರೆ. ತಮ್ಮ ನಿಕಟ ಸಂಪರ್ಕದಲ್ಲಿದ್ದವರಿಗೂ ಕೋವಿಡ್‌ ಪರೀಕ್ಷೆಗೆ ಒಳಗಾಗಲು ವಿನಂತಿಸಿ ಕೊಂಡಿದ್ದಾರೆ.

ಇದನ್ನೂ ಓದಿ:

1) Omicron Variant ಕಂಡು ಕೇಳರಿಯದ ವೇಗದಲ್ಲಿ ಹಬ್ಬುತ್ತಿದೆ ಓಮಿಕ್ರಾನ್, ತಪ್ಪು ಅಭಿಪ್ರಾಯ ಬೇಡ, WHO ಎಚ್ಚರಿಕೆ!

2) Coronavirus Alert ಕರ್ನಾಟಕದಲ್ಲಿ ಕೋವಿಡ್ ಅಲರ್ಟ್, ಕಳೆದೆರಡು ದಿನದಿಂದ ಮರಣ ದರ ಏರಿಕೆ!

3) Covid-19 Vaccine Certificate: 2 ಡೋಸ್‌ ಪಡೆದಿದ್ರೂ ಸಿಗ್ತಿಲ್ಲ ಪ್ರಮಾಣಪತ್ರ..!

click me!