
ವಾಷಿಂಗ್ಟನ್ : ಭಾರತದ ಶತ್ರು ದೇಶವಾಗಿರುವ ಪಾಕಿಸ್ತಾನ ಸದ್ದಿಲ್ಲದೆ ಅಣ್ವಸ್ತ್ರ ಪರೀಕ್ಷೆ ನಡೆಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಬಾಂಬ್’ ಸ್ಫೋಟಿಸಿದ್ದಾರೆ.
34 ವರ್ಷಗಳಿಂದ ಹೇರಿಕೊಂಡಿರುವ ಸ್ವಯಂ ನಿರ್ಬಂಧವನ್ನು ತೆರವುಗೊಳಿಸಿ, ಮತ್ತೆ ಅಣ್ವಸ್ತ್ರ ಪರೀಕ್ಷೆ ನಡೆಸಲು ಅಮೆರಿಕ ಅಧಿಕಾರಿಗಳಿಗೆ ಕಳೆದ ವಾರವಷ್ಟೇ ಟ್ರಂಪ್ ಸೂಚಿಸಿದ್ದರು. ಇದರ ಬೆನ್ನಲ್ಲೇ ಮತ್ತೊಂದು ಹೇಳಿಕೆ ನೀಡಿರುವ ಅವರು, ‘ಪಾಕಿಸ್ತಾನ ಸೇರಿ ಕೆಲ ದೇಶಗಳು ಸಕ್ರಿಯವಾಗಿ ಅಣ್ವಸ್ತ್ರಗಳ ಪರೀಕ್ಷೆ ನಡೆಸುತ್ತಲೇ ಇವೆ. ಹೀಗಾಗಿ ನಾವೂ ಪರೀಕ್ಷೆಗೆ ಅಣಿಯಾಗಿದ್ದೇವೆ’ ಎಂದಿದ್ದಾರೆ. ಈ ಬಗ್ಗೆ ಪಾಕಿಸ್ತಾನದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಸಿಬಿಎಸ್ ನ್ಯೂಸ್ ಎಂಬ ಖಾಸಗಿ ಸುದ್ದಿವಾಹಿನಿಗೆ ಸಂದರ್ಶನ ನೀಡಿದ ಟ್ರಂಪ್, ‘ರಷ್ಯಾ, ಚೀನಾ, ಉತ್ತರ ಕೊರಿಯಾ ಮತ್ತು ಪಾಕಿಸ್ತಾನದಂಥ ದೇಶಗಳು ಸಕ್ರಿಯವಾಗಿ ಅಣ್ವಸ್ತ್ರ ಪರೀಕ್ಷೆ ನಡೆಸುತ್ತಿವೆ. ಹೀಗಾಗಿ ಇದೀಗ ಅಣ್ವಸ್ತ್ರ ಪರೀಕ್ಷೆ ನಡೆಸುವ ಅಮೆರಿಕದ ನಿರ್ಧಾರ ಕೂಡ ಸರಿಯಾಗಿಯೇ ಇದೆ’ ಎಂದು ಹೇಳಿದರು.
ಪಾಕಿಸ್ತಾನ ಅಣ್ವಸ್ತ್ರ ಪರೀಕ್ಷೆ ನಡೆಸಿತ್ತಿದೆ ಎಂಬ ಟ್ರಂಪ್ ಹೇಳಿಕೆ ನಿಜವೇ ಆಗಿದ್ದರೆ ಅದು ಭಾರತದ ಮಟ್ಟಿಗೆ ಎಚ್ಚರಿಕೆ ಗಂಟೆಯಾಗಿದೆ. ಹೀಗಾಗಿ ಅವರ ಹೇಳಿಕೆಗೆ ಮಹತ್ವ ಬಂದಿದೆ.
‘ರಷ್ಯಾ, ಚೀನಾ, ಮತ್ತಿತರ ದೇಶಗಳು ಅಣ್ವಸ್ತ್ರ ಪರೀಕ್ಷೆ ನಡೆಸುತ್ತಿದ್ದರೂ ಆ ಬಗ್ಗೆ ಅವರು ಮಾತನಾಡುವುದಿಲ್ಲ. ಆದರೆ, ನಮ್ಮದು ಮುಕ್ತ ಸಮಾಜ, ಹೀಗಾಗಿ ನಾವು ಆ ಕುರಿತು ಮಾತನಾಡುತ್ತೇವೆ. ಒಂದು ವೇಳೆ ನಾವು ಮಾತನಾಡದೆ ಹೋದರೂ ನೀವು ಅದರ ಬಗ್ಗೆ ವರದಿ ಮಾಡುತ್ತೀರಿ. ಇದರಿಂದಾಗಿ ನಾವು ಮಾತನಾಡುವುದು ಅನಿವಾರ್ಯವಾಗಿ ಬಿಡುತ್ತದೆ. ಆದರೆ, ಆ ದೇಶಗಳಲ್ಲಿ ಅಣ್ವಸ್ತ್ರ ಪರೀಕ್ಷೆ ಕುರಿತು ವರದಿ ಮಾಡುವ ವರದಿಗಾರರೇ ಇಲ್ಲ’ ಎಂದು ಟ್ರಂಪ್ ಕುಟುಕಿದರು.
‘ಅವರು ಎಲ್ಲಿ ಅಣ್ವಸ್ತ್ರಗಳನ್ನು ಪರೀಕ್ಷೆ ಮಾಡುತ್ತಿದ್ದಾರೆ ಎಂಬುದು ಅಮೆರಿಕಕ್ಕೆ ಗೊತ್ತಿಲ್ಲ. ಆದರೆ, ಅವರು ಪರೀಕ್ಷೆಯನ್ನಂತೂ ಮಾಡುತ್ತಿದ್ದಾರೆ. ಆ ಪರೀಕ್ಷೆ ಭೂಮಿಯೊಳಗೂ ನಡೆಯುತ್ತಿರಬಹುದು. ಹೀಗಾಗಿ ಜನರಿಗೆ ಏನಾಗುತ್ತಿದೆ ಎಂಬ ಅರಿವಾಗಲಿಕ್ಕಿಲ್ಲ. ಹೀಗಾಗಿ ನಾವೂ ಅಣ್ವಸ್ತ್ರ ಪರೀಕ್ಷೆ ಮಾಡಬೇಕಿದೆ’ ಎಂದು ಸಮರ್ಥಿಸಿಕೊಂಡರು.
‘ರಷ್ಯಾದವರು ತಾವು ಅಣ್ವಸ್ತ್ರ ಪರೀಕ್ಷೆ ಮಾಡುವುದಾಗಿ ಘೋಷಿಸಿದ್ದಾರೆ. ಉತ್ತರ ಕೊರಿಯಾ ಕೂಡ ನಿರಂತರವಾಗಿ ಪರೀಕ್ಷೆಗಳನ್ನು ನಡೆಸುತ್ತಲೇ ಬಂದಿದೆ. ಇತರೆ ದೇಶಗಳು ಕೂಡ ಪರೀಕ್ಷೆಗಳನ್ನು ಮಾಡುತ್ತಿವೆ. ನಮ್ಮ ದೇಶ ಮಾತ್ರ ಅಂಥ ಯಾವುದೇ ಪರೀಕ್ಷೆ ನಡೆಸುತ್ತಿಲ್ಲ. ಹೀಗಾಗಿ ಅಮೆರಿಕವೊಂದೇ ಈ ರೀತಿಯ ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸದ ಏಕೈಕ ದೇಶ ಆಗುವುದು ನನಗಿಷ್ಟವಿಲ್ಲ’ ಎಂದು ಅವರು ಇದೇ ವೇಳೆ ಹೇಳಿದರು.
‘ಅಮೆರಿಕವು ವಿಶ್ವದಲ್ಲೇ ಅತಿ ಹೆಚ್ಚು ಅಣ್ವಸ್ತ್ರಗಳನ್ನು ಹೊಂದಿದೆ. ನಮ್ಮ ಬಳಿ ವಿಶ್ವವನ್ನು 150 ಬಾರಿ ಸ್ಫೋಟ ಮಾಡುವಷ್ಟು ಅಣ್ವಸ್ತ್ರಗಳಿವೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಭೂಮಿ ಒಳಗೆ ಟೆಸ್ಟ್
ನಡೆಸುತ್ತಿರಬಹುದು
ರಷ್ಯಾ, ಚೀನಾ, ಉತ್ತರ ಕೊರಿಯಾ, ಪಾಕಿಸ್ತಾನದಂಥ ದೇಶಗಳು ಸಕ್ರಿಯವಾಗಿ ಅಣ್ವಸ್ತ್ರ ಪರೀಕ್ಷೆ ನಡೆಸುತ್ತಿವೆ. ಎಲ್ಲಿ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಭೂಮಿಯೊಳಗೂ ನಡೆಯುತ್ತಿರಬಹುದು.- ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ
98ರ ಬಳಿಕ ಭಾರತದಲ್ಲಿ
ಅಣ್ವಸ್ತ್ರ ಪರೀಕ್ಷೆ ನಡೆದಿಲ್ಲ
1998ರಲ್ಲಿ ಭಾರತ ಅಣ್ವಸ್ತ್ರ ಪರೀಕ್ಷೆ ನಡೆಸಿತ್ತು. ಅದೇ ಸಂದರ್ಭದಲ್ಲಿ ಪಾಕಿಸ್ತಾನವೂ ಅಣುಬಾಂಬ್ ಪರೀಕ್ಷೆ ಮಾಡಿತ್ತು. ಆನಂತರ ಭಾರತದಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆದಿಲ್ಲ. ಈ ಶತಮಾನದಲ್ಲಿ ಉತ್ತರ ಕೊರಿಯಾ ಬಿಟ್ಟರೆ ಬೇರೆ ದೇಶ ಅಣುಬಾಂಬ್ ಪರೀಕ್ಷೆ ನಡೆಸಿಲ್ಲ ಎಂದು ಅಂತಾರಾಷ್ಟ್ರೀಯ ತಜ್ಞರೂ ಹೇಳಿದ್ದರು. ಆದರೆ ಈಗ ಟ್ರಂಪ್ ಹೇಳಿಕೆ ಎಲ್ಲರನ್ನೂ ಚಕಿತಗೊಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ