
ಪಿಟಿಐ ಮಾಲೆ (ಮಾಲ್ಡೀವ್ಸ್): ಭಾರತದ ವಿರುದ್ಧ ತಮ್ಮ ಸಮರ ಮುಂದುವರಿಸಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು, ಮೇ 10 ರ ನಂತರ ಯಾವುದೇ ಭಾರತೀಯ ಮಿಲಿಟರಿ ಸಿಬ್ಬಂದಿ ದೇಶದಲ್ಲಿ ಇರಕೂಡದು. ಮಾತ್ರವಲ್ಲ ನಾಗರಿಕ ಉಡುಪಿನಲ್ಲಿರುವ ಭಾರತೀಯ ಅಧಿಕಾರಿಗಳೂ ನಮ್ಮ ದೇಶದಲ್ಲಿ ಇರತಕ್ಕದ್ದಲ್ಲ ಎಂದು ಆದೇಶ ಹೊರಡಿಸಿದ್ದಾರೆ. ಚೀನಾದಿಂದ ಮಾಲ್ಡೀವ್ಸ್ ಸೋಮವಾರವಷ್ಟೇ ಉಚಿತ ಸೇನಾ ನೆರವು ಪಡೆದುಕೊಂಡಿತ್ತು. ಇದರ ಬೆನ್ನಲ್ಲೇ ಅದು ಹೊಸ ವರಸೆ ತೆಗೆದಿದೆ. ಭಾರತ ವಿರೋಧಿ ಚೀನಾ ಆಪ್ತರಾಗಿರುವ ಮುಯಿಜು ಅವರ ಈ ಸೂಚನೆಯು ಮೋದಿ ಸರ್ಕಾರ ಹಾಗೂ ದ್ವೀಪ ರಾಷ್ಟ್ರದ ಸಂಬಂಧವನ್ನು ಸಂಪೂರ್ಣ ಹದಗೆಡಿಸುವ ಸಾಧ್ಯತೆ ಇದೆ.
ಮಾಲ್ಡೀವ್ಸ್ ಭದ್ರತಾ ಸಿಬ್ಬಂದಿಗೆ ಸಹಾಯ ಮಾಡಲೆಂದು ದಶಕಗಳಿಂದ ಇರುವ 88 ಭಾರತೀಯ ಸೇನಾ ಸಿಬ್ಬಂದಿಯು ಮಾಲ್ಡೀವ್ಸ್‌ನಿಂದ ಮಾರ್ಚ್ 10ರೊಳಗೆ ನಿರ್ಗಮಿಸಬೇಕು ಎಂದು ಕೆಲವು ದಿನಗಳ ಹಿಂದೆ ಮುಯಿಜು ಸೂಚಿಸಿದ್ದರು. ಪ್ರವಾಸೋದ್ಯಮ ವಿಷಯದಲ್ಲಿ ಭಾರತದೊಂದಿಗೆ ಮಾಲ್ಡೀವ್ಸ್ ಸಂಘರ್ಷಕ್ಕಿಳಿದ ತರುವಾಯ ಈ ಸೂಚನೆ ಹೊರಬಿದ್ದಿತ್ತು. ಇದಾದ ನಂತರ ಭಾರತವು ತನ್ನ ಸೇನಾ ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳಲು ಒಪ್ಪಿತ್ತು. ಆದರೆ ಅದರ ಬದಲು ಸೇನೆಯಲ್ಲಿನ ನಾಗರಿಕ ವಿಭಾಗದ ಅಧಿಕಾರಿಗಳನ್ನು 1 ವಾರದ ಹಿಂದೆ ಅಲ್ಲಿಗೆ ಕಳಿಸಿತ್ತು.
ಬೆದರಿಸುವ ದೇಶ ಸಂಕಷ್ಟದ ಸಮಯದಲ್ಲಿ $4.5 ಬಿಲಿಯನ್ ನೆರವು ನೀಡುವುದಿಲ್ಲ; ಮಾಲ್ಡೀವ್ಸ್‌ಗೆ ಭಾರತ ತಿರುಗೇಟು
ಇದರ ವಿರುದ್ಧ ಮಂಗಳವಾರ ಭಾಷಣವೊಂದರಲ್ಲಿ ಗುಡುಗಿರುವ ಮುಯಿಜು, ಭಾರತೀಯರು ನಮ್ಮ ಸೂಚನೆ ಹೊರತಾಗಿಯೂ ನಿರ್ಗಮಿಸಲು ಸಿದ್ಧರಿಲ್ಲ. ತಮ್ಮ ಸೇನಾ ಸಮವಸ್ತ್ರ ಬಿಚ್ಚಿಟ್ಟು ನಾಗರಿಕ ಉಡುಪು ಹಾಕಿಕೊಂಡು ಮಾರು ವೇಷದಲ್ಲಿ ಬರುತ್ತಿದ್ದಾರೆ. ಆದರೆ ಇದಕ್ಕೆ ನಾನು ಅವಕಾಶ ನೀಡುವುದಿಲ್ಲ. ಮೇ 10ರಿಂದ ದೇಶದಲ್ಲಿ ಯಾವುದೇ ಭಾರತೀಯ ಪಡೆಗಳು ಇರಕೂಡದು. ಅದು ಸಮವಸ್ತ್ರಧಾರಿ ಭಾರತೀಯ ಸೇನಾ ಸಿಬ್ಬಂದಿಯೇ ಇರಲಿ. ಅಥವಾ ನಾಗರಿಕ ಉಡುಪಿನಲ್ಲಿನ ಭಾರತೀಯ ಸಿಬ್ಬಂದಿಯೇ ಇರಲಿ. ಅವರಾರೂ ಮಾಲ್ಡೀವ್ಸ್‌ನಲ್ಲಿ ನೆಲೆಸುವುದಿಲ್ಲ ಎಂದು ವಿಶ್ವಾಸದಿಂದ ಹೇಳುತ್ತೇನೆ ಎಂದರು.
ಮಾಲ್ಡೀವ್ಸ್‌ಗೆ ಚೀನಾ ಉಚಿತ ಸೇನಾ ನೆರವು
ಮಾಲೆ: ಭಾರತದ ವಿರುದ್ಧ ಮಾಲ್ಡೀವ್ಸ್ ದೇಶವನ್ನು ಎತ್ತಿಕಟ್ಟುವಲ್ಲಿ ಸಫಲವಾದ ಚೀನಾ, ಇದೀಗ ದ್ವೀಪ ದೇಶಕ್ಕೆ ಉಚಿತ ಸೇನಾ ನೆರವಿನ ಘೋಷಣೆ ಮಾಡಿದೆ. ತನ್ನ ದೇಶದಲ್ಲಿನ ಭಾರತೀಯ ಯೋಧರ ತೆರವಿಗೆ ಮಾಲ್ಡೀವ್ಸ್ ಗಡುವು ನೀಡಿದ ಬೆನ್ನಲ್ಲೇ, ಆ ದೇಶಕ್ಕೆ ಸೇನಾ ನೆರವು ನೀಡುವ ಭರವಸೆಯನ್ನು ಚೀನಾ ನೀಡಿದೆ. ಈ ಕುರಿತು ಉಭಯ ದೇಶಗಳು ಸೋಮವಾರ ಒಪ್ಪಂದಕ್ಕೆ ಸಹಿ ಹಾಕಿವೆ. ಆದರೆ ಈ ನೆರವು ಯಾವ ಮಾದರಿಯದ್ದು ಎನ್ನುವುದನ್ನು ಉಭಯ ದೇಶಗಳು ಬಹಿರಂಗಪಡಿಸಿಲ್ಲ. ಭಾರತ ಮತ್ತು ಶ್ರೀಲಂಕಾ ಜೊತೆಗೆ ಜಂಟಿ ನೌಕಾ ಕವಾಯತು ನಡೆಸಿದ ಬೆನ್ನಲ್ಲೇ ಚೀನಾ ಜೊತೆ ಮಾಲ್ಡೀವ್ಸ್ ಈ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಭಾರತಕ್ಕೆ ಸಡ್ಡು ಹೊಡೆಯುವ ಯತ್ನ ಮಾಡಿದೆ.
ಮಾಲ್ಡೀವ್ಸ್‌ನ ಹತ್ತಿರ ತಲುಪಿದ ಚೀನಾ ಬೇಹುಗಾರಿಕಾ ಹಡಗು: ಸಮರಾಭ್ಯಾಸ ಆರಂಭಿಸಿದ ಭಾರತ, ಶ್ರೀಲಂಕಾ, ಮಾಲ್ಡೀವ್ಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ