ಇಸ್ರೇಲ್‌ ಹಮಾಸ್‌ ಯುದ್ಧಕ್ಕೆ ಮೊದಲ ಭಾರತೀಯ ಬಲಿ: ಕೇರಳದ ಮ್ಯಾಕ್ಸ್‌ವೆಲ್ ಸಾವು

By Anusha KbFirst Published Mar 6, 2024, 9:29 AM IST
Highlights
  • ಹಮಾಸ್‌ ಬೆಂಬಲಿಗ ಹಿಜ್ಬುಲ್ಲಾ ಕ್ಷಿಪಣಿಗೆ ಕೇರಳದ ವ್ಯಕ್ತಿ ಸಾವು
  • ಇನ್ನಿಬ್ಬರು ಕೇರಳಿಗರಿಗೆ ಗಾಯ । ಮೂವರೂ ತೋಟದಲ್ಲಿ ಕೆಲಸಕ್ಕಿದ್ದರು
  • ತೋಟದಲ್ಲಿ ಕೆಲಸ ಮಾಡುವಾಗ ಕ್ಷಿಪಣಿ ಅಪ್ಪಳಿಸಿ ಮೂವರೂ ಸಾವು

ಪಿಟಿಐ ಜೆರುಸಲೇಂ: ಕಳೆದ ವರ್ಷ ಆರಂಭವಾದ ಇಸ್ರೇಲ್‌-ಹಮಾಸ್‌ ಯುದ್ಧ ಇದೇ ಮೊದಲ ಬಾರಿ ಭಾರತೀಯನೊಬ್ಬನ ಬಲಿ ಪಡೆದಿದೆ. ಇಸ್ರೇಲ್‌ ವಿರೋಧಿ ದೇಶವಾದ ಲೆಬನಾನ್‌ನ ಹಿಜ್ಬುಲ್ಲಾ ಉಗ್ರರು ಸಿಡಿಸಿದ ಟ್ಯಾಂಕ್‌ ನಿರೋಧಕ ಕ್ಷಿಪಣಿಗೆ ಕೇರಳ ಮೂಲದ ವ್ಯಕ್ತಿಯೊಬ್ಬ ಸಾವನ್ನಪ್ಪಿ, ಇಬ್ಬರು ಗಾಯಗೊಂಡಿದ್ದಾರೆ. ಕ್ಷಿಪಣಿಯು ಇಸ್ರೇಲ್‌ನ ಉತ್ತರ ಗಡಿ ನಾಗರಿಕ ಪ್ರದೇಶವಾದ ಮಾರ್ಗಲಿಯೊಟ್ ಬಳಿಯ ಹಣ್ಣಿನ ತೋಟಕ್ಕೆ ಸೋಮವಾರ ಅಪ್ಪಳಿಸಿದೆ. ಆಗ ಈ ಘಟನೆ ನಡೆದಿದೆ. ಮೃತ ವ್ಯಕ್ತಿ ಹಾಗೂ ಗಾಯಗೊಂಡ ಇನ್ನಿಬ್ಬರು ಕೇರಳ ರಾಜ್ಯದವರು.

ಆಗಿದ್ದೇನು?:

ಸೋಮವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಇಸ್ರೇಲ್‌ನ ಉತ್ತರದ ಗಲಿಲಿ ಪ್ರದೇಶದಲ್ಲಿ ಮೊಶಾವ್ (ಸಾಮೂಹಿಕ ಕೃಷಿ ತೋಟ) ತೋಟಕ್ಕೆ ಕ್ಷಿಪಣಿ ಅಪ್ಪಳಿಸಿತು ಎಂದು ಇಸ್ರೇಲ್‌ ರಕ್ಷಣಾ ಇಲಾಖೆ ಹೇಳಿದೆ. ದಾಳಿಯಲ್ಲಿ ಕೇರಳದ ಕೊಲ್ಲಂ ಮೂಲದ ಪಟ್ನಿಬಿನ್ ಮ್ಯಾಕ್ಸ್‌ವೆಲ್ (31) ಸಾವನ್ನಪ್ಪಿದ್ದಾರೆ. ಇವರು 2 ವರ್ಷದ ಹಿಂದೆ ಇಸ್ರೇಲ್‌ನಲ್ಲಿ ಕೃಷಿ ಕೆಲಸಕ್ಕೆಂದು ಕೇರಳದಿಂದ ಬಂದಿದ್ದರು. ಪಟ್ನಿಬಿನ್‌, ಪುತ್ರಿ ಹಾಗೂ ಗರ್ಭಿಣಿ ಪತ್ನಿಯನ್ನು ಅಗಲಿದ್ದಾರೆ. ಇದೇ ವೇಳೆ, ಬುಷ್ ಜೋಸೆಫ್ ಜಾರ್ಜ್ ಮತ್ತು ಕೇರಳದ ಇಡುಕ್ಕಿ ಜಿಲ್ಲೆಯ ಪಾಲ್ ಮೆಲ್ವಿನ್ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಭಾರತದಲ್ಲಿನ ತಮ್ಮ ಮನೆಯವರ ಜತೆಗೆ ಅವರಿಗೆ ಸಂಪರ್ಕ ಕಲ್ಪಿಸಲಾಗಿದೆ ಎಂದು ರಕ್ಷಣಾ ಇಲಾಖೆ ಹೇಳಿದೆ.

ಹಿಜ್ಬುಲ್ಲಾ ಕೃತ್ಯ:

ಈ ದಾಳಿಯನ್ನು ಲೆಬನಾನ್‌ನ ಶಿಯಾ ಹಿಜ್ಬುಲ್ಲಾ ಬಣ ನಡೆಸಿದೆ ಎಂದು ಹೇಳಲಾಗಿದೆ, ಗಾಜಾ ಪಟ್ಟಿಯಲ್ಲಿ ಇಸ್ರೇಲ್ ವಿರುದ್ಧದ ಹಮಾಸ್‌ ನಡೆಸುತ್ತಿರುವ ಯುದ್ಧಕ್ಕೆ ಬೆಂಬಲವಾಗಿ ಕಳೆದ ಅಕ್ಟೋಬರ್‌ನಿಂದ ಲೆಬನಾನ್‌ನಿಂದಲೇ ಹಿಜ್ಬುಲ್ಲಾ ಉಗ್ರರು ನಿತ್ಯ ಉತ್ತರ ಇಸ್ರೇಲ್‌ನಲ್ಲಿ ಪ್ರತಿದಿನ ರಾಕೆಟ್‌ಗಳು, ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಉಡಾಯಿಸುತ್ತಿದ್ದಾರೆ.

ಅಮೆರಿಕ ಸೂಚನೆ ಮೇರೆಗೆ ಇರಾನ್‌ ಮೇಲೆ ಪಾಕ್‌ ದಾಳಿ: ಮಾಧ್ಯಮ ವರದಿಗಳ ಬಗ್ಗೆ ಅಮೆರಿಕಾ ಮೌನ

ಸುರಕ್ಷಿತ ಸ್ಥಳಕ್ಕೆ ಹೋಗಿ: ಭಾರತೀಯರಿಗೆ ಸೂಚನೆ

ನವದೆಹಲಿ: ಹಿಜ್ಬುಲ್ಲಾ ದಾಳಿಗೆ ಇಸ್ರೇಲ್‌ನಲ್ಲಿ ಭಾರತೀಯನೊಬ್ಬ ಬಲಿಯಾದ ಬೆನ್ನಲ್ಲೇ ಭಾರತ ಸರ್ಕಾರವು ಈ ಘಟನೆಯನ್ನು ಹೇಡಿಗಳ ಕೃತ್ಯ ಎಂದು ಖಂಡಿಸಿದೆ. ಇಸ್ರೇಲ್‌ನಲ್ಲಿನ ಭಾರತೀಯರು ಜಾಗರೂಕರಾಗಿರಬೇಕು. ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಬೇಕು. ಏನೇ ತೊಂದರೆ ಇದ್ದರೂ ಸಹಾಯವಾಣಿ ಸಂಪರ್ಕಿಸಬೇಕು ಎಂದು ಸಲಹಾವಳಿ ಬಿಡುಗಡೆ ಮಾಡಿದೆ. ಅಲ್ಲದೆ, ಸಹಾಯವಾಣಿ ಬಿಡುಗಡೆ ಮಾಡಲಾಗಿದೆ. ಸಂಪರ್ಕ ಸಂಖ್ಯೆ +972-35226748 ಮತ್ತು ಹಾಟ್‌ಲೈನ್‌ ಸಂಖ್ಯೆ 1700707889. ಇ-ಮೇಲ್‌ ಐಡಿ consl.telaviv@mea.gov.in

ಪ್ರಚಲಿತ ಭದ್ರತಾ ಪರಿಸ್ಥಿತಿ ಮತ್ತು ಸ್ಥಳೀಯ ಸುರಕ್ಷತಾ ಸಲಹೆಗಳ ದೃಷ್ಟಿಯಿಂದ, ಇಸ್ರೇಲ್‌ನಲ್ಲಿರುವ ಎಲ್ಲಾ ಭಾರತೀಯರು, ವಿಶೇಷವಾಗಿ ಉತ್ತರ ಮತ್ತು ದಕ್ಷಿಣದ ಗಡಿ ಪ್ರದೇಶಗಳಲ್ಲಿ ಕೆಲಸ ಮಾಡುವ ಅಥವಾ ಭೇಟಿ ನೀಡುವವರು, ಇಸ್ರೇಲ್‌ನ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳಲು ಸೂಚಿಸಲಾಗಿದೆ. ರಾಯಭಾರ ಕಚೇರಿಯು ಅಲ್ಲಿನ ಭಾರತೀಯರ ಸಂಪರ್ಕದಲ್ಲಿದೆ. ಇಸ್ರೇಲಿ ಅಧಿಕಾರಿಗಳು ನಮ್ಮ ಎಲ್ಲಾ ಪ್ರಜೆಗಳ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಇಸ್ರೇಲ್‌ನ ಭಾರತೀಯ ರಾಯಭಾರ ಕಚೇರಿ ಹೇಳಿದೆ.

ಮತ್ತೆ ತೀವ್ರಗೊಂಡ ಮಧ್ಯಪ್ರಾಚ್ಯ ಬಿಕ್ಕಟ್ಟು: ಜಗತ್ತಿಗೆ ಮತ್ತೆ ಆರ್ಥಿಕ ಸಂಕಷ್ಟದ ಭೀತಿ?

click me!