
ಕಾಠ್ಮಂಡು: ವಿಶ್ವದ ಅತಿ ಎತ್ತರದ ಪರ್ವತವಾಗಿರುವ ಮೌಂಟ್ ಎವರೆಸ್ಟ್‌ನ ತುದಿಯನ್ನು 32ನೇ ಬಾರಿ ತಲುಪುವ ಮೂಲಕ ನೇಪಾಳದ ಕಾಮೀ ರೀತಾ ಶೆರ್ಪಾ(56), ತಮ್ಮದೇ ಹೆಸರಲ್ಲಿದ್ದ ‘ಅತಿಹೆಚ್ಚು ಬಾರಿ ಎವರೆಸ್ಟ್ ಹತ್ತಿದವರು’ ಎಂಬ ದಾಖಲೆ ಮುರಿದಿದ್ದಾರೆ.
ಎವರೆಸ್ಟ್ ಮ್ಯಾನ್ ಎಂದೇ ಖ್ಯಾತರಾಗಿರುವ ಇವರು 14 ಪೀಕ್ಸ್ ಎಕ್ಸ್‌ಪೆಡಿಷನ್ ಎಂಬ ಕಂಪನಿ ಆಯೋಜಿಸಿದ್ದ ಪರ್ವತಾರೋಹಣದ ತಂಡದ ನಾಯಕರಾಗಿದ್ದು, ಭಾನುವಾರ ಬೆಳಗ್ಗೆ 10.12ರ ಹೊತ್ತಿಗೆ 29,032 ಅಡಿ ಎತ್ತರದ ಶಿಖರವನ್ನೇರಿದ್ದಾರೆಂದು ಪ್ರವಾಸೋದ್ಯಮ ಇಲಾಖೆ ಮಾಹಿತಿ ನೀಡಿದೆ.
ಕೋಶಿ ಪ್ರಾಂತ್ಯದ ಸೋಲುಖುಂಬು ಜಿಲ್ಲೆಯವರಾದ ಕಾಮೀ ರೀತಾ, 1992ರಲ್ಲಿ ಪರ್ವತಾರೋಹಿಯಾಗಿ ವೃತ್ತಿಯನ್ನು ಆರಂಭಿಸಿದರು. 1994ರಲ್ಲಿ ಮೊದಲ ಬಾರಿ ಎವರೆಸ್ಟ್ ಹತ್ತಿದರು. 2025ರ ಮೇ 27ರಂದು ಇವರು 31ನೇ ಬಾರಿ ಈ ಪರ್ವತವನ್ನು ಏರಿದ್ದರು.
ಇದನ್ನು ಹೊರತುಪಡಿಸಿ ಕೆ2 ಮತ್ತು ಮೌಂಟ್ ಲೋತ್ಸೆಯನ್ನು ಒಂದು ಬಾರಿ, ಮನಸ್ಲುವನ್ನು 3 ಬಾರಿ, ಚೋ ಓಯುವನ್ನು 8 ಬಾರಿ ಹತ್ತಿದ್ದಾರೆ. ಪ್ರತಿ ಬಾರಿಯೂ 8000 ಮೀಟರ್‌ಗಿಂತ ಎತ್ತರಕ್ಕೇರಿದ್ದರು ಎಂಬುದು ಗಮನಾರ್ಹ.
ಮೌಂಟ್ ಎವರೆಸ್ಟ್ ಏರಿದ ಮೊದಲ ನೇಪಾಳಿ ಮಹಿಳೆ ಎಂದು ಗುರುತಿಸಿಕೊಂಡು ‘ಪರ್ವತರಾಣಿ’ ಎಂಬ ಹೆಸರು ಪಡೆದಿರುವ ಲಕ್ಪಾ ಶೆರ್ಪಾ ಕೂಡ 11ನೇ ಬಾರಿ ಈ ಪರ್ವತವನ್ನೇರುವ ಮೂಲಕ ತಮ್ಮ ಈ ಹಿಂದಿನ ದಾಖಲೆಯನ್ನೇ ಮುರಿದಿದ್ದಾರೆ. ಈಕೆ ಭಾನುವಾರ ಬೆಳಗ್ಗೆ 9.30ಕ್ಕೆ ಶಿಖರವನ್ನೇರಿದರು ಎಂದು ಪ್ರವಾಸೋದ್ಯಮ ಇಲಾಖೆ ಖಚಿತಪಡಿಸಿದೆ.
ರೀತಾ ಮತ್ತು ಲಕ್ಪಾ ಅವರನ್ನು ನೇಪಾಳ ಪ್ರಧಾನಿ ಬಾಲೇಂದ್ರ ಶಾ ಅವರು ಅಭಿನಂದಿಸಿದ್ದು, ‘ಅಚಲ ಧೈರ್ಯ, ಕಠಿಣ ಸ್ವಯಂ ಶಿಸ್ತು ಮತ್ತು ಕೆಲಸದ ಪ್ರತಿ ಸಮರ್ಪಣೆಯಿಂದ ಮಾತ್ರ ಇಂತಹ ಸಾಧನೆ ಸಾಧ್ಯ’ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ